ಒಂದು ಲಕ್ಷ ಮನೆಗಳಿಗೆ ಶೌಚಾಲಯ ನಿರ್ಮಾಣ ಗುರಿ
ರಾಮನಗರ: ಜಿಲ್ಲೆಯಲ್ಲಿ ಮುಂದಿನ ಆರು ತಿಂಗಳೊಳಗೆ ಒಂದು ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ಹೇಳಿದರು.
ಶೌಚಾಲಯದ ಅಗತ್ಯತೆ ಬಗ್ಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ, ಶೌಚಾಲಯಗಳ ನಿರ್ಮಾಣದ ಗುರಿ ಸಾಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ ರು.9200 ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಹೆಚ್ಚುವರಿಯಾಗಿ ರು.5 ಸಾವಿರ ಸಹಾಯಧನ ಒದಗಿಸುತ್ತಿದೆ ಎಂದು ಅವರು ಹೇಳಿದರು.
ಸಹಾಯಧನ ಹೆಚ್ಚಳದ ನಂತರ ಗ್ರಾಮಗಳ ಶೌಚಾಲಯ ನಿರ್ಮಾಣ ಬೇಡಿಕೆ ಹೆಚ್ಚಿದೆ. ಹೀಗಾಗಿ ಒಂದು ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿ ಸಾಧನೆ ಸವಾಲೇನಲ್ಲ. ಶೇಕಡ 100ರಷ್ಟು ಪ್ರಗತಿ ಸಾಧಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶೇಕಡ 16ರಷ್ಟು ನೋಂದಣಿ: ಕಳೆದ ಐದು ದಿನಗಳಿಂದ ರಾಮನಗರ ತಾಲೂಕಿನ ಆಯ್ದ 12 ಗ್ರಾಮಗಳಲ್ಲಿ ನಡೆದ ನಿರ್ಮಲಲ್ಭಾರತ್ ಅಭಿಯಾನ ಆಂದೋಲನ ಕಾರ್ಯಕ್ರಮದ ವೇಳೆ ಶೇಕಡ 16ರಷ್ಟು ಫಲಾನುಭವಿಗಳು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಹೆಸರು ನೋಂದಾಯಿಸಿದ್ದಾರೆ.
ವೈಯಕ್ತಿಕ ಶೌಚಾಲಯ ನಿರ್ಮಾಣ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಭಿಯಾನ ಹಮ್ಮಿಕೊಂಡಿದ್ದು, ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ ರಾಮನಗರದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಶಿಷ್ಟರೇ ಅಧಿಕ: ಶ್ಯಾನುಭೋಗನಹಳ್ಳಿ ಗ್ರಾ.ಪಂ.ನ ವಡ್ಡರದೊಡ್ಡಿ, ಗೋಪಳ್ಳಿ ಗ್ರಾ.ಪಂ. ಕೇಂದ್ರ ಸ್ಥಾನ, ಲಕ್ಷ್ಮೀಪುರ ಗ್ರಾ.ಪಂ. ಕೇಂದ್ರ ಸ್ಥಾನ ಸಹಿತ ಹನ್ನೆರಡು ಗ್ರಾಮಗಳಲ್ಲಿ ಅಭಿಯಾನ ನಡೆದಿದೆ. ಹೆಸರು ನೋಂದಣಿ ಮಾಡಿಸಿದ ಫಲಾನುಭವಿಗಳು ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದವರೇ ಅಧಿಕ ಎಂದು ಅವರು ವಿವರಿಸಿದರು.
ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಶೌಚಾಲಯ ನಿರ್ಮಾಣ ಸೇರಿದಂತೆ ಆರೋಗ್ಯದ ತಿಳಿವಳಿಕೆ ಕಡಿಮೆ ಇರುವಂತಹ ಗ್ರಾಮಗಳನ್ನೇ ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದರು.
ಶೇಕಡ 46ರಷ್ಟು ಬಳಕೆ: ನಿರ್ಮಲ್ ಭಾರತ್ ಅಭಿಯಾನ ಆಂದೋಲನ ನಡೆದ ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ಹೊಂದಿದ ಕುಟುಂಬಗಳ ಪ್ರಮಾಣ ಶೇಕಡ 46 ರಷ್ಟು ಮಾತ್ರವೇ ಆಗಿತ್ತು. ಗ್ರಾಮಸ್ಥರಿಗೆ ಶೌಚಾಲಯದ ಅಗತ್ಯತೆ, ಅದಿಲ್ಲದಿದ್ದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ವೆಂಕಟೇಶ್ ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸಿರುವ ಪರಿಣಾಮ ನೈಜ ಫಲಾನುಭವಿಗಳಿಗೆ ಕಾರ್ಯಕ್ರಮದ ಪ್ರಯೋಜನ ತಲುಪಲಿದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆಯೂ ಜಾಗೃತಿ ಮೂಡಿಸುವ ಕರಪತ್ರಗಳ ವಿತರಣೆ, ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡಲಾಗಿದೆ ಎಂದು ತಿಳಿಸಿದರು.
ಬಳಕೆ ತೀರಾ ಕಡಿಮೆ: ಮಾಹಿತಿಯ ಕೊರತೆಯೊ ಅಥವಾ ನೈರ್ಮಲ್ಯದ ಬಗೆಗಿನ ನಿರ್ಲಕ್ಷದಿಂದಲೊ ಹನ್ನೆರಡು ಗ್ರಾಮಗಳ ಜನರು ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ವಿರಳ. ಕೆಲವರು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರೂ ಅವುಗಳನ್ನು ಬಳಸಿಕೊಳ್ಳದಿದ್ದು ಕಂಡುಬಂತು ಎಂದು ಅವರು ವಿಷಾದಿಸಿದರು.
ಶೌಚಾಲಯ ನಿರ್ಮಾಣದಿಂದ ಹೆಣ್ಣು ಮಕ್ಕಳ ಆತ್ಮಗೌರವ, ಸ್ವಾಭಿಮಾನಕ್ಕೆ ನೆರವು ಸಿಕ್ಕಂತಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನಷ್ಟು ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಈ ಆಂದೋಲವನ್ನು ಸಂಘಟಿಸಲು ನಿರ್ಧರಿಸಲಾಗಿದೆ ಎಂದು ವೆಂಕಟೇಶ್ ಹೇಳಿದರು.
ಶೇಕಡ 62ಕ್ಕೆ ಹೆಚ್ಚಳ: ಆಂದೋಲನ ನಡೆಸಲಾದ ಗ್ರಾಮಗಳಲ್ಲಿ ಶೌಚಾಲಯ ಹೊಂದಿದ ಕುಟುಂಬಗಳ ಪ್ರಮಾಣ ಶೇಕಡ 46 ಆಗಿದೆ. ಈಗ ನೋಂದಣಿ ಮಾಡಿಸಿರುವ ಶೇಕಡ 16ರಷ್ಟು ಫಲಾನುಭವಿಗಳು ಶೌಚಾಲಯ ನಿರ್ಮಿಸಿಕೊಂಡರೆ, ಸೌಲಭ್ಯ ಹೊಂದಿದವರ ಪ್ರಮಾಣ ಶೇಕಡ 62ಕ್ಕೆ ಹೆಚ್ಚಳವಾಗಲಿದೆ ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮೈಸೂರು ಘಟಕದ ಕ್ಷೇತ್ರ ಪ್ರಚಾರಾಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ವಿವರಿಸಿದರು.
ಗೋಷ್ಠಿಯಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್, ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ನಂಜುಂಡಪ್ಪ, ವಡ್ಡರದೊಡ್ಡಿ ಗ್ರಾಮದ ಫಲಾನುಭವಿ ಲಕ್ಷ್ಮಮ್ಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

