28ರವರೆಗೆ ಗಡುವು
ರಾಮನಗರ: 2010-11 ನೇ ಸಾಲಿನಲ್ಲಿ ಬಸವ ವಸತಿ ಯೋಜನೆ, 2011-12, 2012-13ನೇ ಸಾಲಿನಲ್ಲಿ ಇಂದಿರಾ ಅವಾಸ್ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಫೆ.28ರೊಳಗೆ ಮನೆ ಕಟ್ಟಲು ಪ್ರಾರಂಭಿಸದಿದ್ದರೆ ಸೌಲಭ್ಯ ವಂಚಿತರಾಗುತ್ತಾರೆ ಎಂದು ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ. ಮಂಜೂರು ಮಾಡಿದ 90 ದಿನದಲ್ಲಿ ಮನೆ ನಿರ್ಮಾಣ ಪ್ರಾರಂಭಿಸದ ಫಲಾನುಭವಿಯ ಹೆಸರನ್ನು ಜಿಪಿಎಸ್ ತಂತ್ರಜ್ಞಾನದಲ್ಲಿ ಬ್ಲಾಕ್ ಮಾಡಲಾಗಿತ್ತು. ಇದೀಗ ನಿಯಮ ಸಡಿಲಿಸಿ, ಫೆ.28ರವರೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮನೆ ನಿರ್ಮಾಣದ ಪ್ರಗತಿಯನ್ನು ಗ್ರಾ.ಪಂ. ಮೂಲಕ ಆನ್ಲೈನ್ನಲ್ಲಿ ನಮೂದಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ. ಅಪ್ಲೋಡ್ ಮಾಡಲಾದ ಫಲಾನುಭವಿಯ ಹೆಸರಿಗೆ ಸೌಲಭ್ಯ ಮುಂದುವರೆಸಲಾಗುವುದು. ಹಂತವಾರು ಪರಿಗಣಿಸಿ ಪ್ರೋತ್ಸಾಹ ಧನದ ಕಂತು ಬಿಡುಗಡೆ ಮಾಡಲಾಗುತ್ತದೆ. ಹಂತವಾರು ವಿವರವಿಲ್ಲದೆ ಪೂರ್ಣಗೊಳಿಸಿದ ಮನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ಗೃಹಿಣಿ ಆತ್ಮಹತ್ಯೆ
ರಾಮನಗರ: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬಿಡದಿಯ ಅಬ್ಬನಕುಪ್ಪೆ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಕಾವ್ಯ (22) ಮೃತ ಗೃಹಿಣಿ. ಮಣತ ಕಾವ್ಯ ತನ್ನದೇ ಗ್ರಾಮವಾದ ಅಬ್ಬನಕುಪ್ಪೆಯ ಕಿರಣಕುಮಾರ್ ಎಂಬಾತನನ್ನು ಪ್ರೀತಿಸಿ, 2 ವರ್ಷದ ಹಿಂದಷ್ಟೇ ವಿವಾಹವಾಗಿದ್ದಳು. ಮದುವೆ ನಂತರ ವರದಕ್ಷಿಣೆಗಾಗಿ ಪತಿ ನೀಡಿದ ಕಿರುಕುಳ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಾವ್ಯ ಶುಕ್ರವಾರ ತನ್ನ ತವರು ಮನೆಯಲ್ಲಿದ್ದಳು. ಅಲ್ಲಿಗೆ ಆಗಮಿಸಿದ ಪತಿ ಆಕೆಯೊಂದಿಗೆ ತಗಾದೆ ತೆಗೆದು, ಜಗಳವಾಡಿದ್ದಾನೆ. ಅದರಿಂದ ಮನನೊಂದ ಆಕೆ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಬಿಡದಿ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಮೃತಳ ಕಣ್ಣುಗಳನ್ನು ಬಿಡದಿಯ ಡಾ.ರಾಜಕುಮಾರ್ ನೇತ್ರ ಸಂಗ್ರಹ ಕೇಂದ್ರಕ್ಕೆ ದಾನ ಮಾಡಲಾಗಿದೆ.
ದುಶ್ಚಟಗಳ ದಾಸರಾಗದಿರಿ
ರಾಮನಗರ: ಮಕ್ಕಳು ಬಾಲ್ಯ ಮತ್ತು ಯೌವ್ವನದಲ್ಲಿ ಓದು, ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕೇ ಹೊರತು ದುಶ್ಚಟಗಳ ದಾಸರಾಗಬಾರದು ಎಂದು ರಾಮನಗರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಕರೆ ನೀಡಿದರು. ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದುಶ್ಚಟಗಳು ಭವಿಷ್ಯವನ್ನು ಮಾತ್ರವಲ್ಲದೆ ಬದುಕನ್ನೇ ಬಲಿ ತೆಗೆದುಕೊಳ್ಳುತ್ತವೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ತಿಳಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಚಂದ್ರಶೇಖರ್, ಪ್ರಾಂಶುಪಾಲರಾದ ಅಂಬಿಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನದೊಂದಿಗೆ ಗಣ್ಯರಿಗೆ ಗೌರವ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ಟಡಿ ಅಂಡ್ ಸಕ್ಸೀಡ್ ಉಪಯುಕ್ತ
ರಾಮನಗರ: ಗ್ರಾಮೀಣ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅವರ ಅನುಕೂಲಕ್ಕಾಗಿ ಸ್ಟಡಿ ಅಂಡ್ ಸಕ್ಸೀಡ್ ಎಂಬ ಪೂರಕ ಕೈಪಿಡಿ ರೂಪಿಸಿದ್ದು, ಇದು ಅತ್ಯಂತ ಉಪಯುಕ್ತವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಲಿಂಗರಾಜು ಹೇಳಿದರು. ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಪ್ರಥಮ ಪಿಯುಸಿ ಇಂಗ್ಲಿಷ್ ಪೂರಕ ಕೈಪಿಡಿ ಸ್ಟಡಿ ಅಂಡ್ ಸಕ್ಸೀಡ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿ ಇಂಗ್ಲಿಷ್ ಬಗ್ಗೆ ಇರುವ ಆತಂಕ ನಿವಾರಿಸಲೆಂದೇ ಅನುಭವಿ ಅಧ್ಯಾಪಕರಿಂದ ಈ ಪೂರಕ ಪಠ್ಯ ಪುಸ್ತಕ ತಯಾರಿಸಲಾಗಿದೆ ಎಂದರು. ಪಿಯುಸಿ ಫಲಿತಾಂಶದಲ್ಲಿ ರಾಮನಗರ ಜಿಲ್ಲೆಯು ಅಗ್ರಸ್ಥಾನಿ ಆಗಲು ಇಂಗ್ಲಿಷ್ ಭಾಷೆಯೊಂದೇ ಅಡ್ಡಿಯಾಗಿದೆ. ಅದನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸೌಲಭ್ಯ ಸದ್ಬಳಕೆ ಮಾಡಲು ತಾ.ಪಂ. ಇಒ ವೆಂಕಟೇಶ್ ಕರೆ
ರಾಮನಗರ: ಗ್ರಾಮೀಣ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯ ಕಾಪಾಡಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾ.ಪಂ. ಇಒ ಟಿ.ಎಚ್. ವೆಂಕಟೇಶ್ ಕರೆ ನೀಡಿದರು. ತಾಲೂಕಿನ ಲಕ್ಷ್ಮೀಪುರ ಹಾಗೂ ತಿಮ್ಮಸಂದ್ರ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ ನಡೆದ ಮಾಹಿತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹಿರ್ದೆಸೆ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ ಎಂದರು. ವೈಯಕ್ತಿಕ ಶೌಚಾಲಯ ಕಲ್ಪಿಸಿಕೊಡಲು ಕೇಂದ್ರ ಸರ್ಕಾರವು ಸಾಕಷ್ಟು ಅನುದಾನ ನೀಡುತ್ತಿದೆ. ಶೌಚಾಲಯ ರಹಿತ ಕುಟುಂಬಗಳು ಪ್ರೋತ್ಸಾಹ ಧನ ಪಡೆದು, ಸ್ವಂತ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ರೈತರ ಖಾತೆಗೆ ಸಹಾಯ ಧನ
ರಾಮನಗರ: 2013-14ನೇ ಸಾಲಿನ ಕೃಷಿ ಯಂತ್ರೋಪಕರಣ ಮತ್ತು ಲಘು ನೀರಾವರಿ ಯೋಜನೆಯಡಿ ಸಹಾಯ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುತ್ತಿದ್ದು, ಸೌಲಭ್ಯ ಹೊಂದಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ತಮಗೆ ಅವಶ್ಯಕ ಎನಿಸಿದ ಮತ್ತು ಇಚ್ಛೆಪಟ್ಟ ಯಂತ್ರೋಪಕರಣ, ಕೃಷಿ ಸಂಸ್ಕರಣಾ ಉಪಕರಣ, ಹನಿ ಇಲ್ಲವೇ ತುಂತುರು ನೀರಾವರಿ ಘಟಕಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ರಶೀದಿ ಒದಗಿಸಿದಲ್ಲಿ ಸಹಾಯಧನ ಪಡೆದುಕೊಳ್ಳಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ತಿಳಿಸಿದ್ದಾರೆ. ರು.20ರ ಛಾಪಾ ಕಾಗದದ ಮೇಲೆ ಉಪಕರಣವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ, ಪರಭಾರೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು, ನಿಗದಿತ ಅರ್ಜಿಯೊಂದಿಗೆ ಪಹಣಿ, ಹಿಡುವಳಿ ಪತ್ರ, ಗುರುತಿನ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ ಒಳಗೊಂಡ ವಿವರವನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಖಾತ್ರಿಯ ಲಾಭ ಪಡೆಯಲು ಕರೆ
ರಾಮನಗರ: ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಸಂಬಂಧಿತ ಕಾಮಗಾರಿಗಳು, ಹೈನೋದ್ಯಮಕ್ಕೆ ಕೊಟ್ಟಿಗೆ, ಕುಕ್ಕಟೋದ್ಯಮಕ್ಕೆ ಶೆಡ್, ಕೃಷಿ ಅರಣ್ಯೀಕರಣ ಸಹಿತ ಹತ್ತು ಹಲವು ಅವಕಾಶಗಳನ್ನು ಸರ್ಕಾರ ಒದಗಿಸಿದೆ. ರೈತರು ಅವೆಲ್ಲದರ ಲಾಭ ಪಡೆದುಕೊಳ್ಳಬೇಕು ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ರೀನಿವಾಸರಾವ್ ಕರೆ ನೀಡಿದರು. ಅರಣ್ಯ ಇಲಾಖೆಯಿಂದ ನಗರದ ಹೊರ ವಲಯದಲ್ಲಿರುವ ಯಂಗಯ್ಯನಕೆರೆ ಸಸ್ಯ ಕ್ಷೇತ್ರದಲ್ಲಿ ಆಯೋಜಿಸಿದ್ದ ಗ್ರಾಮ ಅರಣ್ಯ ಸಮಿತಿಗಳ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿಯಡಿ ಜಾರಿಗೆ ತಂದಿರುವ ವಯಕ್ತಿಕ ಕಾಮಗಾರಿಗಳು ಮತ್ತು ಅದರಿಂದಾಗುವ ಅನುಕೂಲತೆಗಳನ್ನು ವಿವರಿಸಿದರು. ಜಾಬ್ಕಾರ್ಡ್ ಹೊಂದಿರುವ ಪ್ರತಿ ರೈತರು ವೈಯಕ್ತಿಕ ಕೆಲಸಗಳನ್ನು ಮಂಜೂರು ಮಾಡಿಸಿಕೊಂಡು, ನಿರ್ವಹಿಸಿ ಕೂಲಿ ಪಡೆದುಕೊಳ್ಳಬಹುದಾಗಿದೆ.
ಇಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮಹತ್ವದ ಸಭೆ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟದ ರೂಪರೇಷೆ ಕುರಿತ ಮಹತ್ವದ ಚರ್ಚೆ ಮತ್ತು ಮುಂದಿನ ಗಂಭೀರ ಸ್ವರೂಪದ ಹೋರಾಟಗಳ ಕುರಿತ ಚರ್ಚೆಗಾಗಿ ಪೂರ್ವಭಾವಿ ಸಭೆ ಫೆ.9ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕನ್ನಡ ಜಾಗೃತ ಭವನದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಕೇಂದ್ರ ರಚನೆ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು, ಹೋರಾಟ ಸಾಗಬೇಕಾದ ಹಾದಿ ಮತ್ತು ಅದರಲ್ಲಿ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ವಹಿಸಬೇಕಾದ ನಿರ್ಣಾಯಕ ಪಾತ್ರದ ಕುರಿತು ಚರ್ಚೆ ನಡೆಸಲಾಗುವುದು. ಅರ್ಹತೆ ಪರಿಗಣಿಸಿ ಮತ್ತು ರಾಜ್ಯದ ಇತಿಹಾಸದಲ್ಲಿ ಜಿಲ್ಲಾ ಕೇಂದ್ರಗಳ ರಚನೆಗೆ ಈ ಹಿಂದೆ ಕೈಗೊಂಡಿದ್ದ ಮಾನದಂಡಗಳನ್ನೇ ಅನುಸರಿಸಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ನ್ಯಾಯಬದ್ಧ ಒತ್ತಾಯಕ್ಕೆ ಸರ್ಕಾರ ಕಿವಿಗೊಡಬೇಕಿದೆ. ಅದನ್ನೂ ಮೀರಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿತವಾಗಬೇಕಿದ್ದು, ಸಭೆಯಲ್ಲಿ ವಿವಿಧ ಕನ್ನಡಪರ, ರೈತಪರ, ಮಹಿಳಾ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರಾಜಕೀಯ ಪಕ್ಷಗಳ ಮುಖಂಡರು, ಹೋರಾಟಗಾರರು ಭಾಗವಹಿಸಿ ಸಲಹೆ ನೀಡುವಂತೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪ್ರಕಟಣೆ ತಿಳಿಸಿದೆ.
ಹಣ್ಣುಗಳ ವೇಷ ಧರಿಸಿ ಗಮನ ಸೆಳೆದ ಪುಟಾಣಿಗಳು
ದೊಡ್ಡಬಳ್ಳಾಪುರ: ಇಲ್ಲಿನ ಸಂಜಯನಗರದಲ್ಲಿರುವ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಣ್ಣುಗಳ ದಿನಾಚರಣೆ ಏರ್ಪಡಿಸಲಾಗಿತ್ತು. ಮುಂಜಾವಿನ ಚಳಿ ಸರಿಯುವ ಮುನ್ನವೇ ಪುಟಾಣಿ ಮಕ್ಕಳಿಗೆ ವಿವಿಧ ಬಗೆಯ ಹಣ್ಣುಗಳ ವೇಷ ತೊಡಿಸಲಾಗಿತ್ತು. ಒಬ್ಬರಿಗಿಂತ ಒಬ್ಬರು ತಮ್ಮ ಮುಗ್ಧ ಭಾವನೆಗಳ ಅಭಿವ್ಯಕ್ತಿಯ ಮೂಲಕ ಗಮನ ಸೆಳೆದರು. ಶಾಲೆಯ ಉದ್ಯಾನವನದಲ್ಲಿ ಗಿಡಮರಗಳ ನಡುವೆ ಆಯೋಜಿತವಾಗಿದ್ದ ಕಾರ್ಯಕ್ರಮ ನೋಡುಗರ ಮನಸ್ಸಿಗೆ ಮುದ ನೀಡಿತು. ಶಾಲೆಯ ಸಂಸ್ಥಾಪಕ ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಿತ್ಯ ಜೀವನದಲ್ಲಿ ಬಳಸುವ ವಿವಿಧ ಜಾತಿಯ ಹಣ್ಣುಗಳ ಬಗ್ಗೆ ಮಾಹಿತಿ ಮತ್ತು ಮಹತ್ವ ತಿಳಿಯುವ ಉದ್ದೇಶದಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಲಾ ಬೋಧಕ ವರ್ಗ ನೇತೃತ್ವ ವಹಿಸಿತ್ತು.
ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ, ಭಜನೆ
ದೇವನಹಳ್ಳಿ: ಇಲ್ಲಿನ ಪತಂಜಲಿ ಯೋಗಶಿಕ್ಷಣ ಸಂಸ್ಥೆಯವರು ರಥಸಪ್ತಮಿ ಅಂಗವಾಗಿ ಡಿವಿಆರ್ ಪ್ಲಾಜ ಸಮುದಾಯ ಭವನದಲ್ಲಿ ಗುರುವಾರ ಬೆಳಗಿನ ಜಾವ ಐದು ಗಂಟೆಯ ನಂತರ ಸೂರ್ಯ ನಮಸ್ಕಾರ ಮತ್ತು ಭಜನೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪತಂಜಲಿ ಸಂಸ್ಥೆಯ ಸುರೇಶ್ ಮಾತನಾಡಿ ಎಲ್ಲ ವಯೋವಾನದ ಪುರುಷ ಮತ್ತು ಮಹಿಳೆಯರಿಗೆ ಉಚಿತವಾಗಿ ಯೋಗ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಪ್ರತಿ ವರ್ಷ ರಥ ಸಪ್ತಮಿ ದಿನದಂದು ಜಗತ್ತಿನ ಶಾಂತಿಗಾಗಿ ಭಜನೆಯೊಂದಿಗೆ ಸೂರ್ಯ ನಮಸ್ಕಾರಗಳನ್ನು ಆಯೋಜಿಸುತ್ತಿದ್ದೆ ಎಂದರು.
ನೀರು ಕೊಡಿಸುವ ಕೆಲಸ ನೆನೆಗುದಿಗೆ
ಚನ್ನಪಟ್ಟಣ: ತಾಲೂಕಿನ ಎಸ್.ಎಂ.ಹಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ ಗೊಂಡಿದ್ದು, ಕೊಳವೆ ಬಾವಿ ಕೊರೆಯಲು ಹೊಂಗನೂರು ಗ್ರಾಮಸ್ಥರು ಅವಕಾಶ ನೀಡದ ಹಿನ್ನೆಲೆಯಲ್ಲಿ ನೀರು ಕೊಡಿಸುವ ಕೆಲಸ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಕುಡಿಯುವ ನೀರಿನ ಕೊಳವೆ ಅಳವಡಿಕೆ ಕಾರ್ಯಕ್ಕೆ ಮುಂದಾದಾಗ ಗ್ರಾ.ಪಂ ಸದಸ್ಯ ಅನಂತಕೃಷ್ಣರಾಜೇ ಅರಸು ಮತ್ತು ಬೆಂಬಲಿಗರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಯನಿರ್ವಹಣಾಧಿಕಾರಿ ಮತ್ತು ತಹಸೀಲ್ದಾರರು ಮೌನಕ್ಕೆ ಶರಣಾದ ಕಾರಣ ಕಾಮಗಾರಿ ನಡೆಸಲು ಅವಕಾಶ ದೊರೆಯಲಿಲ್ಲ. ತೀವ್ರ ವಿವಾದಕ್ಕೆ ಕಾರಣವಾಗಿರುವ ಎಸ್.ಎಂ.ಹಳ್ಳಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರು ಸಭೆ ನಡೆಸಿದ ಹಿನ್ನೆಲೆಯಲ್ಲಿ ಇನ್ನೂ ಪರಿಹಾರ ಸಿಗಲಿದೆ ಎಂದು ಗ್ರಾಮಸ್ಥರು ಭಾವಿಸಿದ್ದರಾದರೂ ಹೊಂಗನೂರು ಗ್ರಾಮಸ್ಥರು ಅಡ್ಡಿಪಡಿಸಿದ್ದರಿಂದ ಸಮಸ್ಯೆ ಹಾಗೇ ಉಳಿದಿದೆ. ಎಸ್.ಎಂ.ಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತನ ತೋರುತ್ತಿದ್ದು ಶುಕ್ರವಾರ ಸ್ಥಳದಲ್ಲೇ ಇದ್ದ ತಹಸೀಲ್ದಾರರು ನಿಷೇಧಾಜ್ಞೆ ಜಾರಿಗೆ ತಂದು ಕೆಲಸ ಮಾಡಲು ಅನುವು ಮಾಡಿ ಕೊಡಬಹುದಿತ್ತು. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಆರೋಪಿಸಿದ್ದಾರೆ.
ತಾಪಂ ಸಾಮಾನ್ಯ ಸಭೆ ಮತ್ತೆ ಮುಂದೂಡಿಕೆ
ಚನ್ನಪಟ್ಟಣ: ತಾಪಂ ಸಾಮಾನ್ಯ ಸಭೆ ಮತ್ತೆ ಮುಂದೂಡಲ್ಪಟ್ಟಿದ್ದು ಇದರೊಂದಿಗೆ ಸಭೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ಜ.29 ರಂದು ಕರೆಯಲಾಗಿದ್ದ ಸಾಮನ್ಯ ಸಭೆಗೆ ಜೆಡಿಎಸ್ ಸದಸ್ಯರು ಗೈರುಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿ ಫೆ.7ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಇಂದು ಕಾರಣಾಂತರಗಳಿಂದ ಮುಂದೂಡಿರು ವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನರೇಗಾ ಯೋಜನೆಯ ಪರಿಶೀಲನೆಗೆ ಸಂಬಂಧಿಸಿದಂತೆ ಕೇಂದ್ರ ತಂಡ ತಾಲೂಕಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ. ಆದರೆ ಎರಡುಬಾರಿ ದಿನಾಂಕ ನಿಗದಿಯಾಗಿ ಸಭೆ ಮುಂದೂಡಲ್ಪಟ್ಟಿದ್ದು, ಅಧ್ಯಕ್ಷೆ ಪವಿತ್ರ ರಾಜಿನಾಮೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಆರಂಭಿಸಿದ ಶೀತಲ ಸಮರದಿಂದಾಗಿ ಸಭೆ ಮುಂದೂಡಬೇಕಾದ ಅನಿವಾರ್ಯತೆ ನಿರ್ಮಾಣ ಗೊಂಡಿದೆ. ಜೆಡಿಎಸ್ ಸದಸ್ಯರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದಾಗಿ ಸಭೆಯಲ್ಲಿ ಅನುಮೋದನೆ ಗೊಳ್ಳ ಬೇಕಾದ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಹಣಕಾಸು ವರ್ಷ ಮುಗಿಯುವುದರೊಳಗೆ ಕೆಲ ಯೋಜನೆಗಳಿಗೆ ಅನುಮೋದನೆ ದೊರೆಯದಿದ್ದರೆ ಹಣ ವ್ಯರ್ಥವಾಗಲಿದೆ ಎಂಬ ಆತಂಕ ಅಧಿಕಾರಿಗಳದ್ದಾಗಿದೆ.
ಕೃಷಿ ಇಲಾಖೆಯ ಕ್ರಮವನ್ನು ಖಂಡಿಸಿ ಪ್ರತಿಭಟನೆ
ಚನ್ನಪಟ್ಟಣ: ಫೆ. 9ರಿಂದ ನಾಗಪುರದಲ್ಲಿ ನಡೆಯಲಿರುವ ಅಂತಾರರಾಷ್ಟೀಯ ಕೃಷಿ ಮೇಳಕ್ಕೆ ತಾಲೂಕಿನಿಂದ ಆಯ್ಕೆ ಮಾಡಿದ ಪ್ರತಿನಿಧಿಗಳನ್ನು ಕೊನೆಕ್ಷಣದಲ್ಲಿ ಕರೆದುಕೊಂಡು ಹೋಗುವುದಿಲ್ಲ ಎಂದು ಖ್ಯಾತೆ ತೆಗೆದಿರುವ ಕೃಷಿ ಇಲಾಖೆಯ ಕ್ರಮವನ್ನು ಖಂಡಿಸಿ ರೈತರು ಜಿಲ್ಲಾ ಕೃಷಿ ಉಪಇಲಾಖೆ ನಿರ್ದೇಶಕ ಅಣ್ಣಯ್ಯಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಕೃಷಿ ಇಲಾಖೆ ಕಚೇರಿಗೆ ಆಗಮಿಸಿದ ಅವರ ಕೊಠಡಿಗೆ ಮುತ್ತಿಗೆ ಹಾಕಿದ ಮಂದಿ ನಮ್ಮನ್ನು ಕೃಷಿ ಮೇಳಕ್ಕೆ ಕರೆದು ಕೊಂಡು ಹೋಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣೇಗೌಡ, ಆತ್ಮ ಯೋಜನೆ ಯಡಿಯಲ್ಲಿ ನಾಗಪುರದಲ್ಲಿ ನಡೆಯಲಿರುವ ಮೂರು ದಿನಗಳ ಕೃಷಿ ಮೇಳಕ್ಕೆ ಜಿಲ್ಲೆಯಿಂದ 70 ಮಂದಿ ತಾಲೂಕಿನಿಂದ 19 ಮಂದಿ ರೈತರನ್ನು ಆಯ್ಕೆ ಮಾಡಲಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳೇ ರೈತರನ್ನು ಆಯ್ಕೆ ಮಾಡಿ ಇದೀಗ ಹಣ ಇಲ್ಲ ಕರೆದು ಕೊಂಡು ಹೋಗಲು ಸಾಧ್ಯವಿಲ್ಲ ಎಂದು ಖ್ಯಾತೆ ತೆಗೆಯುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಾಗಪುರಕ್ಕೆ ರೈಲಿನಲ್ಲಿ ರೈತರನ್ನು ಕರೆದೊಯ್ಯುವ ಉದ್ದೇಶದಿಂದ ಬುಕ್ಕಿಂಗ್ಗೆ ಮುಂದಾದೆವಾದರಬುಕ್ಕಿಂಗ್ ಸಿಗುತ್ತಿಲ್ಲ ಎಂದರು.
ಜನಪದ ಕಲೆ ಉಳಿಸಿ ಬೆಳೆಸಿ: ಸಿದ್ದರಾಜು
ಚನ್ನಪಟ್ಟಣ: ಹಿರಿಯ ತಲೆಮಾರಿನವರು ತಮ್ಮ ಬದುಕು- ಬವಣೆಯನ್ನು ಜನಪದದ ಮೂಲಕ ಕಟ್ಟು ಕೊಟ್ಟಿದ್ದು ನಮ್ಮ ಸಂಸ್ಕೃತಿಯ ಪ್ರತಿ ಬಿಂಬವಾದ ಜಾನಪದ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಬೇಕೆಂದು ಗಾಯಕ ಹೊನ್ನಿಗನಹಳ್ಳಿ ಸಿದ್ದರಾಜು ಕರೆ ನೀಡಿರು. ಇಲ್ಲಿನ ನಿವೇದಿತಾ ಪ್ರೌಢಶಾಲೆಯಲ್ಲಿ ಅಪ್ಪಗೆರೆಯ ಬೆಳ್ಳಿ ಬೆಳದಿಂಗಳು ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಗೀತಗಾಯನ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಪೂರ್ವಿಕರು ಅನಕ್ಷರಸ್ಥರಾದರೂ ಕಾವ್ಯ ಸಂಪನ್ನರಾಗಿದ್ದರು. ಅವರು ಕಟ್ಟು ಕೊಟ್ಟಿರುವ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ನಾವು ನಾಶ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ರಂಜನ್ಕುಮಾರ್, ವಿದ್ಯಾರ್ಥಿಗಳಿಗೆ ಪಠ್ಯದ ಜತೆಯಲ್ಲಿ ಜಾನಪದ ಕಲೆಗಳನ್ನು ಕಲಿಸಲಾಗುತ್ತಿದೆಯಾದರೂ ಇದರ ಜತೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಹೆಚ್ಚಿನ ಜ್ಞಾನ ತುಂಬಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಕಿ ಹೇಮಾವತಿ, ಬ್ಯಾಡರಹಳ್ಳಿ ಶಿವಕುಮಾರ್, ಕೂಡ್ಲೂರು ವಿನೋದ್, ಮಹೇಶ್ ಮೌರ್ಯ ಉಪಸ್ಥಿತರಿದ್ದರು. ಅಪ್ಪಗೆರೆ ಸತೀಶ್, ಬ್ಯಾಡರಹಳ್ಳಿ ಶಿವಕುಮಾರ್, ತಂಡ ಗೀತಗಾಯನ ನಡೆಸಿ ಕೊಟ್ಟರು.
ಕೊಲೆ ಆರೋಪಿ ಬಂಧನ
ಕನಕಪುರ: ಕೊಲೆಯೊಂದರ ಆರೋಪದ ಮೇಲೆ ತಲೆ ತಪ್ಪಿಸಿಕೊಂಡು ತಿಗುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕನಕಪುರದ ಆರಕ್ಷಕ ವೃತ್ತ ನಿರೀಕ್ಷಕ ಸಿದ್ದೇಗೌಡರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ಮಲ್ಲೇಶ್ ಹಾಗೂ ಅಪರಾಧ ವಿಭಾಗದ ಗಣೇಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಂಡ್ಯ ಜಿಲ್ಲೆಯ ಕೊತ್ತತ್ತಿ ಸಿದ್ದಯ್ಯನಕೊಪ್ಪಲು ನಿವಾಸಿ ದೇವರಾಜು(27) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಜೂ.1ರಂದು ಸಾತನೂರು ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಚಂದ್ರಶೇಖರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತಿತ್ತು. ಎಸ್ಪಿ ಅನುಪಮ್ ಅಗರ್ವಾಲ್ ಹಾಗೂ ಕುಲದೀಪ್ಕುಮಾರ್ ಜೈನ್ ಸೂಚನೆಯ ಮೇರೆಗೆ ತನಿಖೆ ನಡೆಸಿದ ಪಿಸಿಐ ಸಿದ್ಧೇಗೌಡರ ನೇತೃತ್ವದ ತಂಡ ಬನ್ನೂರು ರಸ್ತೆಯಲ್ಲಿರುವ ಗೌರೀಶಂಕರ ಕಲ್ಯಾಣ ಮಂಟಪದಲ್ಲಿ ದೇವರಾಜನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ದೇವರಾಜು ಸೋದರಿಯೊಂದಿಗೆ ಮೃತ ಶಿವಾನಂದನ ಮದುವೆ ನಿಶ್ಚಿತವಾಗಿದ್ದು ಸರ್ಕಾರಿ ನೌಕರಿಯಿಲ್ಲದ ಕಾರಣ ಮದುವೆಗೆ ಆರೋಪಿಯ ವಿರೋಧವಿತ್ತು. ಮೇ.31ರಂದು ಶಿವಾನಂದನನ್ನು ಬೈಕಿನಲ್ಲಿ ಕಬ್ಬಾಳಿಗೆ ಕರೆ ತಂದ ದೇವರಾಜ ಅಲ್ಲಿ ಕಂಠಪೂರ್ತಿ ಕುಡಿಸಿ, ಹಗ್ಗ ಬಿಗಿದು ಕೊಂದು ನಂತರ ಕಲ್ಲು ಎತ್ತಿ ಹಾಕಿ ಕೊಂದು ಪರಾರಿಯಾಗಿದ್ದ.
ಬಾಗೂರಿನಲ್ಲಿ ನಂದೀಶ್ವರ ದೇಗುಲ ಕುಂಭಾಭಿಷೇಕ
ಆನೇಕಲ್ಲು: ತಾಲೂಕಿನ ಗಡಿ ಗ್ರಾಮ ಬಿದರಗುಪ್ಪೆ ಬಾಗೂರಿನಲ್ಲಿ ಶ್ರೀ ನಂದೀಶ್ವರ ಸಹಿತ ಗಣಪತಿ, ಸುಬ್ರಹ್ಮಣ್ಯ, ನವಗ್ರಹ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ಫೆ.9, 10ರಂದು ನಡೆಯಲಿದೆ ಎಂದು ದೇಗುಲ ಸಮಿತಿಯವರು ತಿಳಿಸಿದ್ದಾರೆ. ಶನಿವಾರ ಸಂಜೆ ನಂದೀಶ್ವರ ಸ್ವಾಮಿ ಹಾಗೂ ಪರಿವಾರ ದೇವತೆಗಳ ಧಾನ್ಯಾಧಿವಾಸ, ಜಲವಾಸ, ಪುಣ್ಯಾಹ ವಾಚನ, ರಕ್ಷಾ ಬಂಧನ, ಧ್ವಜಾರೋಹಣ ಮತ್ತು ವಾಸ್ತು ಬಲಿ ನೆರವೇರಿತು.
ಫೆ.9ಂದು ಪ್ರಧಾನ ಕಲಶ ಸ್ಥಾಪನೆ, ಬ್ರಹ್ಮ ಕಲಶ, ಬಿಂಬ ಶುದ್ಧಿ, ಶಿಲಾನೃಪನ ಹೋಮ, ಪ್ರತಿಷ್ಠಾ ಹೋಮ ಹಾಗೂ ಅಧಿವಾಸ ಹೋಮ ನಡೆಯಲಿದೆ.
ಫೆ.10ರಂದು ಅಭಿಜನ್ ಮುಹೂರ್ತದಲ್ಲಿ ಅಷ್ಠ ಬಂಧನ ವಿಗ್ರಹ, ಪ್ರತಿಷ್ಠಾಪನೆ, ಗ್ರಾಮ ಪ್ರದಕ್ಷಿಣೆ, ಮಹಾ ಕುಂಭಾಭಿಷೇಕ ಹಾಗೂ ಅನ್ನದಾನ ನಡೆಯಲಿದೆ. ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ನೂತನ ದೇಗುಲದಲ್ಲಿ ಲೋಕ ಕಲ್ಯಾಣಾರ್ಥ ಹೋಮ ಹವನ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

