ಬೆಂಗಳೂರು ಗ್ರಾಮಾಂತರ

ಪ್ರಕೃತಿ ಮೇಲೆ ಅತ್ಯಾಚಾರದ ಪ್ರಯತ್ನ ವಿರುದ್ಧ ಜನಜಾಗೃತಿ ಮೂಡಲಿ

Published On :

ಚನ್ನಪಟ್ಟಣ: ಪ್ರಾಕೃತಿಕ ಸಂಪನ್ಮೂಲಗಳು ಸ್ಥಳೀಯ ಬಳಕೆಗೆ ಮಾತ್ರ ಸೀಮಿತಿ, ಅದನ್ನು ಮಹಾನಗರಗಳಿಗೆ ಪೂರೈಸಿ ಪ್ರಕೃತಿಯ ಮೇಲೆ ಅತ್ಯಾಚಾರ ಗೈಯುವ ಪ್ರಯತ್ನಗಳ ವಿರುದ್ಧ ಜನಜಾಗೃತಿ ಮೂಡಬೇಕೆಂದು ಬರಹಗಾರ, ವಿಜ್ಞಾನಿ,  ಸಮರೇಂದ್ರ ದಾಸ್ ತಿಳಿಸಿದರು.
ಕಳೆದ 20 ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆ ವಿರೋಧಿಸಿ ತಾ.ಪಂ ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ಹಮ್ಮಿ ಕೊಂಡಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಮಹಾನಗರದಲ್ಲಿ ಭವ್ಯ ಬಂಗಲೆ ಕಟ್ಟಬೇಕೆಂಬ ಧಾವಂತದಲ್ಲಿ ನಮ್ಮ ಹಳ್ಳಿಗಳ ಪ್ರಾಕೃತಿಕ ಸಂಪತ್ತನ್ನು ದೋಚುವುದು ಯಾವ ಅಭಿವೃದ್ಧಿ ಎಂದು ಪ್ರಶ್ನಿಸಿದರು.
ಹಳ್ಳಿಗಳೇ ಮುಖ್ಯ ಗ್ರಾಮಸಭೆಯ ನಿರ್ಣಯವೇ ಪ್ರಧಾನ ಎಂದು ನ್ಯಾಮಗಿರಿ ಹೋರಾಟದಲ್ಲಿ ಸುಪ್ರಿಂ ಕೋರ್ಟ್ ಸಾರಿ ಹೇಳಿದೆ. ಅಧಿಕಾರಿಗಳು ಕಾಯಿದೆಗಳನ್ನು ಜಾರಿಗೆ ತರದೆ ಮೀನಾಮೇಷ ಏಣಿಸುತ್ತಿರುವುದು ಸರಿಯಲ್ಲ ಎಂದು ಆಡಳಿತ ವೈಕರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪರಿಸರ ಇಲ್ಲದೆ ನಾವಿಲ್ಲ: ಅಕ್ರಮ ಮರಳು ಗಣಿಗಾರಿಕೆಯಿಂದ ಅಂತರ ಜಲದ ಮಟ್ಟ ಕುಸಿದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತರ ಜಲ ಬತ್ತಿ ಹೋದಲ್ಲಿ ಸಣ್ಣ ಸಣ್ಣ ಹೂಗಿಡಗಳು ನಾಶವಾಗಿ ಅದರಿಂದ ಜೇನು, ಚಿಟ್ಟೆಯಂತಹ ಜೀವಸಂಕುಲ ನಾಶವಾಗುತ್ತವೆ ಚಿಟ್ಟೆಗಳು ನಾಶವಾದರೆ ಪರಾಗ ಕ್ರಿಯೆ ಸ್ಥಗಿತಗೊಂಡು ಕೆಲವೇ ದಿನಗಳಲ್ಲಿ ಮಾನುಕುಲ ವಿನಾಶದ ಹಾದಿ ಹಿಡಿಯ ಬೇಕಾಗುತ್ತದೆ ಎಂದವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನುಸೂಯಮ್ಮ ಕಳೆದ ಮೂರು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿರುವ ಸಿದ್ದರಾಮಹೆಗ್ಗಡೆಯ ಬದ್ಧ ಚಳವಳಿಗೆ ಇದೀಗ ಉತ್ತಮ ಪ್ರತಿಕ್ರಿಯೆ ದೊರೆತಂತಾಗಿದೆ ಎಂದರು.
ಕಿಶಾನ್ ಪಟ್ನಾಯಕ್ ಒಡನಾಡಿಯಾಗಿರುವ ಸಮರೇಂದ್ರ ದಾಸ್ ಇಲ್ಲಿನ ಸಂಗತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಜನಜಾಗೃತಿ ಮೂಡಿಸುತ್ತಾರೆ ಎಂದರು.
ಸಿದ್ದರಾಮ ಹೆಗ್ಗಡೆ ಚಳವಳಿಯ ಹಿನ್ನೆಲೆ ಮತ್ತು ಮರಳು ಗಣಿಗಾರಿಕೆ ಬಗ್ಗೆ ಸಮರೇಂದ್ರ ದಾಸ್‌ಗೆ ಮಾಹಿತಿ ನೀಡಿದರು. ವಕೀಲೆ, ಸಮಾಜವಾದಿ ಚಿಂತಕಿ ಅಖೀಲಾ ವಿದ್ಯಾಸಂದ್ರ, ಸ್ವರಾಜ್ ನೆಟ್‌ವರ್ಕ್‌ನ ಸುಕನ್ಯಾ, ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತೇಗೌಡ, ರೈತ ಸಂಘದ ಮುಖಂಡ ಕೆ.ಬಿ.ನಾಗರಾಜು ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.