ಬೆಂಗಳೂರು ಗ್ರಾಮಾಂತರ

ಅಕ್ಷರ ಜಾತ್ರೆಗೆ ಬೊಂಬೆನಗರಿ ಸಜ್ಜು

Published On :

ಚನ್ನಪಟ್ಟಣ: ಫೆ.15ರಂದು ನಡೆಯಲಿರುವ ತಾಲೂಕು ಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿ ಕೊಂಡಿದ್ದು, ತಾಲೂಕಿನ ಎಲ್ಲಾ ಸಾಹಿತ್ಯಾಭಿಮಾನಿಗಳ ನೆರವಿನೊಂದಿಗೆ ಅರ್ಥ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಶಿವಮಾದು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ವಿಶಿಷ್ಟ ಪ್ರಯೋಗ ಮಾಡಲಾಗಿದೆ. ಸ್ಥಳೀಯತೆಗೆ ಆದ್ಯತೆ ನೀಡುವ ಜತೆಗೆ, ಜನಸ್ನೇಹಿ ಸಮ್ಮೇಳನ ನಡೆಸಲು ತಾಲೂಕು ಕಸಾಪ ಮುಂದಾಗಿದೆ ಎಂದು ವಿವರಿಸಿದರು.
ನುಡಿ ಸೇವಕನಿಗೆ ಅಧ್ಯಕ್ಷ ಸ್ಥಾನ: ತಾಲೂಕಿನ ತೃತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕನ್ನಡಪರ ಚಳವಳಿಗಾರ ಗೋವಿಂದಹಳ್ಳಿ ದೇವೆಗೌಡರನ್ನು ಆಯ್ಕೆ ಮಾಡಲಾಗಿದೆ. ಗೋಕಾಕ್ ಚಳವಳಿಗೆ ಡಾ.ರಾಜ್‌ಕುಮಾರ್ ಕರೆತರುವಲ್ಲಿ ಇವರ ಪಾತ್ರ ಗಣನೀಯವಾಗಿದ್ದು ಇವರ ಆಯ್ಕೆಯೊಂದಿಗೆ ಸಮ್ಮೇಳನ ಜನಮುಖಿ ಗೊಳಿಸಲಾಗಿದೆ ಎಂದರು.
ಸ್ಥಳೀಯ ಸಾಹಿತಿಗಳ ಸ್ಮರಣೆ: ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳನ್ನು ಸ್ಮರಿಸುವ ಕೆಲಸ ಮಾಡಲಾಗಿದ್ದು, ಪ್ರಧಾನ ವೇದಿಕೆಗೆ ತಾಲೂಕಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಸಿ.ಕೆ. ವೆಂಕಟರಾಮಯ್ಯ ಹೆಸರನ್ನು ಇಡಲಾಗಿದೆ. ಮಹಾದ್ವಾರಕ್ಕೆ ಸಾಹಿತಿಗಳಾದ ಸಿ.ಎನ್.ಜಯಲಕ್ಷ್ಮಿ ದೇವಿ ಮತ್ತು ಟಿ.ಕೆ.ರಾಮರಾವ್ ಹೆಸರನ್ನು ಇಲಾಗಿದ್ದು, ದ್ವಾರಗಳಿಗೆ ಇತ್ತೀಚಿಗೆ ನಮ್ಮನ್ನಗಲಿದ ಸಾಹಿತಿ ಸ್ವಪ್ರಭಾನಂದಶರ್ಮ ಮತ್ತು ಪತ್ರಕರ್ತ, ಗಾಯಕ ಸಿ.ಎ.ಶಾಂತಕುಮಾರ್ ಹೆಸರು ಇಡಲಾಗಿದೆ ಎಂದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ10 ಮಂದಿ ಸಾಧಕರಿಗೆ ಬೊಂಬೆನಾಡು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಕವಿಗೋಷ್ಠಿಯಲ್ಲಿ ಸಹ ಉತ್ತಮ ಕವಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಕನ್ನಡ ಸೇವಕರು, ಸಾಹಿತ್ಯಾಭಿಮಾನಿಗಳನ್ನು ತೊಡಗಿಸಿ ಕೊಳ್ಳುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಸಮ್ಮಿಳಿತ: ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಅವರ ವಿಚಾರಧಾರೆಯನ್ನು ಹೊರತೆಗೆಯುವ ಅಂಗವಾಗಿ ವಿದ್ಯಾರ್ಥಿಗಳು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಾಹಿತ್ಯ ಸಮ್ಮೇಳನದ ಜತೆಗೆ ತಾಲೂಕಿನ ಸಾಹಿತ್ಯಾಭಿಮಾನಿಗಳು ಮತ್ತು ಸಾರ್ವಜನಿಕರನ್ನು ಸಾಂಸ್ಕೃತಿಕವಾಗಿ ಸೆಳೆಯುವ ಹಿನ್ನೆಲೆಯಲ್ಲಿ ರಾತ್ರಿ 8.30 ರಿಂದ 10ಗಂಟೆಯವರೆಗೆ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದ್ದು ಕೋಟೆ ನಾಗರಾಜಜ್ತಂಡದಿಂದ ಹಾಸ್ಯ ಕಾರ್ಯಕ್ರಮ, ಸುಜೇಂದ್ರಬಾಬು ತಂಡದಿಂದ ನೃತ್ಯ, ಬೆಂಗಳೂರಿನ ದತ್ತ ಸುಧಾಕರ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಮಾಜಿ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ, ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು, ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ಮೈಲನಾಯ್ಕನ ಹಳ್ಳಿ ಶಿವರಾಂ, ಎಲೇಕೇರಿ ನಾಗರಾಜು ಚೌಪುಸ್ವಾಮಿ, ರಾಮಕೃಷ್ಣಯ್ಯ, ವಿಜಯ್‌ರಾಂಪುರ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.