ಬೆಂಗಳೂರು ಗ್ರಾಮಾಂತರ

ಬುಡಕಟ್ಟು ವಸ್ತು ಸಂಗ್ರಹಾಲಯಕ್ಕೆ ರಾಘವೇಂದ್ರ ರಾಜ್‌ಕುಮಾರ್ ಭೇಟಿ

Published On :

ರಾಮನಗರ: ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಸ್ಥಾಪನೆಯಾಗಿರುವ ಬುಡಕಟ್ಟು ವಸ್ತು ಸಂಗ್ರಹಾಲಯಕ್ಕೆ ಖ್ಯಾತ ಚಿತ್ರನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮನರಂಜನಾ ಕ್ಷೇತ್ರದಲ್ಲಿ ತನ್ನದೇ  ಛಾಪು ಮೂಡಿಸಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ದೇಶದ ಐಕ್ಯತೆ ಮತ್ತು ಸಾಮರಸ್ಯದ ಪ್ರತೀಕವಾಗಿರುವ ವಿವಿಧ ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆಗೆ ಮುಂದಾಗಿರುವ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ಮನರಂಜನೆಗಾಗಿ ಆಗಮಿಸುವ ಜನರಿಗೆ ದೇಶದ ವಿವಿಧ ಬುಡಕಟ್ಟು ಜನಾಂಗದ ನಾಗರಿಕತೆಯನ್ನು ಪರಿಚಯಿಸುವುದು ಈ ಬುಡಕಟ್ಟು ವಸ್ತು ಸಂಗ್ರಹಾಲಯದ ಪ್ರಮುಖ ಉದ್ದೇಶವಾಗಿದೆ. ದಕ್ಷಿಣ ಭಾರದಲ್ಲೇ ಪ್ರಥಮ ಬಾರಿಗೆ ಇಂತಹ ವಿನೂತನ ವಸ್ತು ಸಂಗ್ರಹಾಲಯವನ್ನು ಭಾರತ ಸರ್ಕಾರದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ ಎಂದು ಭಾರತ ಸರ್ಕಾರದ ಕೇಂದ್ರ ಟ್ರೈಫೈಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕೇಂದ್ರ ಕಾರ್ಯದರ್ಶಿ ಅಶೋಕ್‌ಕುಮಾರ್ ಅನ್ಗುರಾಣ ತಿಳಿಸಿದರು.
ಬುಡಕಟ್ಟು ಜನಾಂಗ ಮತ್ತು ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕೆ ಪ್ರಮುಖ ಪಾತ್ರ ವಹಿಸಿವೆ. ಇಂತಹ ಅಮೂಲ್ಯ ಕಲೆಗಳು ನಮ್ಮ ದೇಶದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಂತಹ ಅಪರೂಪದ ಕಲೆಗಳ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇದು ಕೇವಲ ವಸ್ತು ಸಂಗ್ರಹಾಲಯ ಮಾತ್ರವಲ್ಲ. ಇಲ್ಲಿಗೆ ಆಗಮಿಸುವ ಜನರಿಗೆ ಮಾಹಿತಿ ಕಣಜವಾಗಿದೆ. ನಮ್ಮ ಪೂರ್ವಜರ ಆಚಾರ-ವಿಚಾರ, ಉಡುಗೆ-ತೊಡುಗೆ, ಸಂಸ್ಕೃತಿಯನ್ನು ಪರಿಚಯಿಸಲಿದೆ. ಇಂತಹ ವಿನೂತನ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಿರುವ ಇನ್ನೋವೇಟಿವ್ ಫಿಲ್ಮ್‌ಸಿಟಿ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾದುದು ಎಂದು ಅಶೋಕ್‌ಕುಮಾರ್ ಹೇಳಿದರು.
ಕರ್ನಾಟಕ ಫಿಲ್ಮ್  ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಚ್.ಡಿ. ಗಂಗರಾಜು, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಐಎಎಸ್ ಹಾಗೂ ಡಿಎಸ್‌ಕೆ ಲೀಗ್‌ನ ಪಾಲುದಾರ ಅಜೇಶ್‌ಕುಮಾರ್, ಫಿಲ್ಮ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸರವಣ ಪ್ರಸಾದ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.