ಜಿಲ್ಲಾ ಕೇಂದ್ರ: ಹುಡುಗಾಟಿಕೆ ಪ್ರದರ್ಶಿಸಿದರೆ ಹುಷಾರ್
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಹುಡುಗಾಟಿಕೆ ಪ್ರದರ್ಶಿಸಿದರೆ ಹುಷಾರ್. ನ್ಯಾಯಬದ್ಧವಾಗಿ ಮತ್ತು ಅಂಕಿ-ಅಂಶಗಳ ಆಧಾರದಲ್ಲಿ ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಈ ಕೂಡಲೇ ಸರ್ಕಾರ ಘೋಷಿಸಬೇಕು ಎಂದು ದಲಿತ ವಿಮೋಚನಾ ಸೇನೆ ಎಚ್ಚರಿಕೆ ನೀಡಿದೆ.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಯ ಅಂಗವಾಗಿ ಸೋಮವಾರ ನಗರದಲ್ಲಿ ದಲಿತ ವಿಮೋಚನಾ ಸೇನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು, ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು.
ಬಯಲುಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂಬ ಹಕ್ಕೊತ್ತಾಯಗಳನ್ನು ರಾಜ್ಯ ಸಮಿತಿ ಕೈಗೊಂಡಿದೆ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಲೂ ಎಲ್ಲ ಬಗೆಯ ಅರ್ಹತೆ, ಮಾನದಂಡಗಳನ್ನು ಹೊಂದಿದ್ದರೂ ಅಧಿಕಾರಶಾಹಿ ಇತ್ತ ಪಾರದರ್ಶಕ ದೃಷ್ಟಿ ಹರಿಸುತ್ತಿಲ್ಲ. ಸರ್ಕಾರ ಜಾಣ ಕುರುಡು ಮತ್ತು ಕಿವುಡುತನ ಪ್ರದರ್ಶಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹೋರಾಟಗಳು ಅನಿವಾರ್ಯವಾಗಿದ್ದು, ಬೇಡಿಕೆ ಈಡೇರುವವರೆಗೆ ಚಳವಳಿ ಮುಂದುವರೆಯಲಿದೆ. ರಾಜ್ಯದಲ್ಲಿ ಈಗಾಗಲೇ ಉಪವಿಭಾಗ ಕೇಂದ್ರಗಳು ಮಾತ್ರ ಜಿಲ್ಲಾ ಕೇಂದ್ರಗಳಾಗಿ ಅರ್ಹತೆ ಗಿಟ್ಟಿಸಿಕೊಂಡ ದೊಡ್ಡ ಇತಿಹಾಸವೇ ಇದೆ. ಇದು ಸ್ಪಷ್ಟ ಮತ್ತು ವೈಜ್ಞಾನಿಕ ಮಾನದಂಡ ಕೂಡ ಆಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಿಕ್ಕುತಪ್ಪಿಸುವ ಯತ್ನ: ಜಿಲ್ಲಾ ಕೇಂದ್ರದ ವಿಚಾರದಲ್ಲಿ ಅವೈಜ್ಞಾನಿಕ ವರದಿಗಳನ್ನು ನೀಡುವುದು, ಕ್ಷುಲ್ಲಕ ವಿಚಾರಗಳಿಗೆ ಒತ್ತು ನೀಡುವುದು ಮತ್ತು ಸರ್ಕಾರವನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ಕೆಲವರಿಂದ ನಡೆಯುತ್ತಿವೆ. ಇದರಲ್ಲಿ ಅಧಿಕಾರಿ ವರ್ಗ ಕೂಡ ಗಣನೀಯ ಪಾತ್ರ ವಹಿಸುತ್ತಿದೆ. ಇದು ಖಂಡನೀಯ. ಯಾರದೋ ಹಿತಾಸಕ್ತಿಗಳಿಗೆ ಅರ್ಹತೆ ಬಲಿಯಾಗಬಾರದು. ಯೋಗ್ಯತೆಗೆ ತಕ್ಕ ಪುರಸ್ಕಾರ ಸಿಗಲೇ ಬೇಕು. ನಮ್ಮದು ಹೋರಾಟಕ್ಕಾಗಿ ಹೋರಾಟವಲ್ಲ, ಇದು ನೈತಿಕ ಹೋರಾಟ.
ಪ್ರಜ್ಞಾವಂತಿಕೆ ಇದ್ದರೆ ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ಈ ಹೋರಾಟ ಬೆಂಬಲಿಸಿ ನ್ಯಾಯ ಒದಗಿಸಿಕೊಡಬೇಕು. ಉಪವಿಭಾಗಕೇಂದ್ರ ಕೂಡಲೇ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿವಿಎಸ್ನ ರಾಜ್ಯ ಮುಖಂಡರಾದ ನಾರಾಯಣಸ್ವಾಮಿ, ದೊಡ್ಡಯ್ಯ, ಚನ್ನಿಗರಾಮಯ್ಯ, ಶ್ರೀನಿವಾಸ್, ವೆಂಕಟೇಶ್, ಪುರುಷೋತ್ತಮ್ಗೌಡ, ದಯಾನಂದ್, ಜಿಲ್ಲಾ ಸಮಿತಿಯ ಕೆ.ಸಿದ್ಧರಾಜು, ಮಂಜುನಾಥ್, ಕೆ.ವಿ.ಮುನಿಯಪ್ಪ, ಮೈಲಾರಪ್ಪ, ನಾಗರಾಜ್, ತಾಲೂಕು ಸಮಿತಿಯ ಮಾರಪ್ಪ, ರಾಮಾಂಜಿನಯ್ಯ, ನಾರಾಯಣಸ್ವಾಮಿ, ಬಸವರಾಜು, ಮಹಿಳಾ ಘಟಕದ ಸರೋಜಮ್ಮ, ಲಕ್ಷ್ಮಮ್ಮ, ಅಶ್ವತ್ಥಮ್ಮ, ನಗರ ಸಮಿತಿಯ ಕೋದಂಡರಾಮ ಸೇರಿದಂತೆ ನೂರಾರು ಕಾರ್ಯಕರ್ತರು, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕರು, ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

