ಸುಲಿಗೆಕೋರರ ಬಂಧನ: 6 ಜನರ ಸೆರೆ, ಮೂವರು ಪರಾರಿ
ಆನೇಕಲ್ಲು: ಬೆಂಗಳೂರು ದಕ್ಷಿಣ ಜಿಗಣಿ, ಎಲೆಕ್ಟ್ರಾನಿಕ್ಸ್ಸಿಟಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದ 6 ಜನ ಸುಲಿಗೆಕೋರರ ತಂಡವನ್ನು ಜಿಗಣಿ ಠಾಣಾ ಇನ್ಸ್ಪೆಕ್ಟರ್ ಮಲ್ಲೇಶ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಹೊಂಗಸಂದ್ರ ಬಾಲಾಜಿ ಬಡಾವಣೆಯ ಪ್ರತಾಪ್ (20) ರಂಜಿತ್ ಅ. ಬಾಬು(19), ಅಜಯ್ಕುಮಾರ್ (19) ರಾಜೇಂದ್ರ ಪ್ರಸಾದ್(18) ವಿರಾಟ್ನಗರದ ಶಂಕರ್ ಹಾಗೂ ಮಾಸ್ತೇನಹಳ್ಳಿ ದಿಣ್ಣೆಯ ಡ್ರೈವರ್ ಶ್ರೀಕಾಂತ್ (19) ಬಂಧಿತರು. ಚಂದ್ರ, ಜೊಸೆಫ್, ವೆಂಕಟೇಶ್ ತಲೆ ತಪ್ಪಿಸಿಕೊಂಡಿದ್ದು ಮೂವರನ್ನು ಸನಿಹದಲ್ಲೇ ಬಂಧಿಸಲಾಗುವುದು ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೋಟ್ ತಿಳಿಸಿದ್ದಾರೆ. ರಾತ್ರಿ ಪಾಳೆಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಗಳನ್ನು ತಿಂಗಳ ಮೊದಲ ವಾರದಲ್ಲಿ ಬೈಕಿನಲ್ಲಿ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಇವರನ್ನು ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಹೊಂಚು ಹಾಕಿ ಹಿಡಿಯಲಾಗಿದೆ. ಹೆಚ್ಚುವರಿ ಎಸ್ಪಿ ಅಹ್ಮದ್, ಡಿವೈಎಸ್ಪಿ ಬಲರಾಮೇಗೌಡ ಮಾರ್ಗದರ್ಶನದಲ್ಲಿ ಪಿಎಸ್ಸೈ ಫಾರುಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ವಿಷಪೂರಿತ ಆಹಾರ ಸೇವಿಸಿ 7 ಕುರಿಗಳ ಸಾವು
ಚನ್ನಪಟ್ಟಣ: ವಿಷಪೂರಿತ ಆಹಾರ ಸೇವಿಸಿ 7 ಕುರಿಗಳು ಸಾವಿಗೀಡಾಗಿರುವ ಘಟನೆ ತಾಲೂಕಿನ ಆಣಿಗೆರೆ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ್ದ ನಾಲ್ಕು ಕುರಿ ಮತ್ತು ಮೂರು ಮರಿಗಳು ಸಾವಿಗೀಡಾಗಿದ್ದು, ಮಂಗಳವಾರ ಗ್ರಾಮದ ಹೊರವಲಯಲ್ಲಿ ಕುರಿಗಳನ್ನು ಮೇಯಿಸಿ ಕೊಂಡು ಬಂದ ಶ್ರೀನಿವಾಸ್ ಕೊಪ್ಪಲಿನಲ್ಲಿ ಕೂಡಿಹಾಕಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಕುರಿಗಳು ಸಾವಿಗೀಡಾಗಿದ್ದವು. ವಿಷಾಹಾರ ಸೇವನೆ ಕುರಿಗಳ ಸಾವಿಗೆ ಕಾರಣ ಎಂದು ಶಂಕಿಸಿರುವ ಅವರು, ಕುರಿಗಳನ್ನು ಮೇಯಿಸಿ ಜೀವನ ಸಾಗಿಸುತ್ತಿದ್ದ ನಾನು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಕೂಡಲೇ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಆಕ್ಸ್ಫರ್ಡ್ಶಾಲೆಗೆ ಆರ್ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸಬೇಡಿ
ಚನ್ನಪಟ್ಟಣ: ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಬೇರೊಂದು ಸ್ಥಳಕ್ಕ ವರ್ಗಾವಣೆ ಗೊಂಡಿರುವ ಆಕ್ಸ್ಫರ್ಡ್ಶಾಲೆಗೆ ಆರ್ಟಿಇ ಅಡಿಯಲ್ಲಿ ಯಾವುದೇ ಪೋಷಕರು ಅರ್ಜಿಸಲ್ಲಿಸದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲೆ ಎಂದಿನಂತೆ ವಂದಾರ ಗುಪ್ಪೆಯ ಹಳೆಯ ಕಟ್ಟಡಕ್ಕೆ ವರ್ಗಾವಣೆ ಮಾಡಿಕೊಂಡರೆ ಪೂರ್ವ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಶಾಲೆ ಅನಧಿಕೃತವಾಗಿ ಡಿ.ಟಿ.ರಾಮು ಟ್ರಸ್ಟ್ನ ಸ್ಥಳಕ್ಕೆ ವರ್ಗಾವಣೆ ಮಾಡಿಕೊಂಡಿರುವುದರಿಂದ ಗೊಂದಲ ಉಂಟಾಗಿದ್ದು ಯಾವುದೇ ಪೋಷಕರು ಈ ಶಾಲೆ ಆರ್ಟಿಇ ಕಾಯಿದೆಯಡಿ ಮಕ್ಕಳ ಪ್ರವೇಶಕ್ಕೆ ಅರ್ಜಿ ಸಲ್ಲಿಸದಂತೆ ತಿಳಿಸಿದ್ದಾರೆ. ಪಟ್ಟಣದ ಎಲ್ಲಾ ಶಾಲಾ ಆಡಳಿತ ಮಂಡಲಿಯೂ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕದ ಬಗ್ಗೆ ಕಚೇರಿ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಣೆ ನೀಡಬೇಕೆಂದು ತಿಳಿಸಿರುವ ಅವರು ಆರ್ಟಿಇ ಕಾಯಿದೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನವಾದ ಫೆ.19 ರೊಳಗೆ ವಂದಾರಗುಪ್ಪೆಯ ಕಟ್ಟಡಕ್ಕೆ ಹಿಂದಿರುಗಿದ್ದೇ ಆದಲ್ಲಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಯುವಕ ನಾಪತ್ತೆ
ಮಾಗಡಿ: ಪಾಲಕರು ಬುದ್ದಿ ಮಾತು ಹೇಳಿದ್ದರಿಂದ ಮನನೊಂದು ಯುವಕನೊಬ್ಬ ಫೆ.10ರಿಂದು ಕಾಣೆಯಾಗಿದ್ದಾನೆ. ಮಾಗಡಿ ತಾಲೂಕು ಕುದೂರು ಹೋಬಳಿಯ ಕೋಡಿಪಾಳ್ಯದ ರಾಜಣ್ಣ ಎಂಬವರ ಮಗನಾದ ಆನಂದ್ ಕಾಣೆಯಾದ ಯುವಕ. 5.2 ಎಡಿ ಎತ್ತರಿದ್ದು, ಗೋದಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಆನಂದ್, ಮನೆ ಬಿಡುವ ವೇಳೆ ನೀಲಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಸುಳಿವು ಸಿಕ್ಕಲ್ಲಿ ಮೊ. 9964433158, 9663176175 ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಚ್ಚನ್ಯಾಯಾಲಯ ಆದೇಶ ಉಲ್ಲಂಘನೆ ಆರೋಪ
ಕನಕಪುರ: ಕನಕಪುರದ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದಲ್ಲಿರುವ ಪೇಟೆಕೆರೆ ಅಂಗಳದಲ್ಲಿ ಯಾವುದೇ ಕಾಮಗಾರಿ ಪ್ರಾರಂಭಿಸಬಾರದು ಎಂಬ ಉಚ್ಚನ್ಯಾಯಾಲಯದ ಆದೇಶಗಳಿದ್ದರೂ ನಿಯಮಗಳನ್ನು ಗಾಳಿಗೆತೂರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿದ್ದಾರೆ. ಕನಕಪುರದ ಸರ್ವೆ ನಂ.505 ರಲ್ಲಿರುವ 36 ಎಕರೆ ಕೆರೆ ಅಂಗಳದಲ್ಲಿ 20 ಎಕರೆಗಳನ್ನು ಕೆರೆಯನ್ನು ಅಭಿವೃದ್ಧಿ ಪಡಿಸಲು ಮೀಸಲಾಗಿರಿಸಿ ಮಿಕ್ಕ 16 ಎಕರೆಗಳಲ್ಲಿ ಸರ್ಕಾರದ ಕಟ್ಟಡಗಳನ್ನು ಕಟ್ಟಲು ಉಚ್ಚನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಸರ್ವೇ ಕಾರ್ಯ ನಡೆಯುವ ಮುನ್ನವೇ ತಾಲೂಕು ಆಡಳಿತ ಕಟ್ಟಣ ನಿರ್ಮಾಣಕ್ಕೆ ತೊಡಗಿರುವುದು ಖಂಡನೀಯ ಎಂದು ರೈತಮುಖಂಡ ಬೂದಿಗುಪ್ಪೆ ಸಂಪತ್ ಆರೋಪಿಸಿದ್ದಾರೆ. ಖಂಡನಾ ಸಭೆಯಲ್ಲಿ ರೈತ ಮುಖಂಡರುಗಳಾದ ಕೆ.ಬಿ.ನಾಗರಾಜು, ಕುಮಾರಸ್ವಾಮಿ, ಗೋವಿಂದಯ್ಯ ಮೊದಲಾದವರು ಪಾಲ್ಗೊಂಡಿದ್ದರು.
22ರಂದು ಜಿಲ್ಲಾ ಯೋಜನಾ ಸಮಿತಿ ಸಭೆ
ರಾಮನಗರ: ಜಿಲ್ಲಾ ಯೋಜನಾ ಸಮಿತಿ ಸಭೆಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ರಾಜು ಅವರ ಅಧ್ಯಕ್ಷತೆಯಲ್ಲಿ ಫೆ.22ರ ಮಧ್ಯಾಹ್ನ 12.30ಕ್ಕೆ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

