ಬೆಂಗಳೂರು ಗ್ರಾಮಾಂತರ

22ರಂದು ವಿವಿಧ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ

Published On :


ಕ.ಪ್ರ. ವಾರ್ತೆ    ರಾಮನಗರ    ಫೆ.19     ನಂದಿನಿ ಹಾಲು ಉತ್ಪಾದಕರ ಬೃಹತ್ ಸಮಾವೇಶ, ಕಾಲುಬಾಯಿ ಜ್ವರ ನಿಯಂತ್ರಣ ಅರಿವು ಕಾರ್ಯಕ್ರಮ, ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಬಳಿ ನಿರ್ಮಿಸಲು ಉದ್ದೇಶಿಸಿರುವ ಪಶು ಆಹಾರ ಘಟಕದ ಶಂಕುಸ್ಥಾಪನೆ ಹಾಗೂ ನಂದಿನಿ ವಿಶೇಷ ಹಾಲು ಬಿಡುಗಡೆ ಕಾರ್ಯಕ್ರಮ ಫೆ.22ರಂದು ನಡೆಯಲಿದೆ ಎಂದು ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಮಾಹಿತಿ ನೀಡಿದರು.  
ಬೆಂಗಳೂರಿನ ಮಾದಾವರ ನೈಸ್ ಜಂಕ್ಷನ್ ಬಳಿ ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕೇಂದ್ರ ಪೆಟ್ರೋಲಿಯಂ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಪಾಲ್ಗೊಳ್ಳಲಿದ್ದು, ಶಾಸಕ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆ ವಹಿಸುವರು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲುಬಾಯಿ ಜ್ವರದ ನಿಯಂತ್ರಣ ಅರಿವು ಕಾರ್ಯಕ್ರಮಕ್ಕೆ ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಲಿದ್ದು, ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಪರಿಹಾರ ಧನದ ಚೆಕ್ ವಿತರಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಅಂಬರೀಶ್, ದಿನೇಶ್ ಗುಂಡೂರಾವ್, ಕಿಮ್ಮನೆ ರತ್ನಾಕರ, ಕೃಷ್ಣ ಬೈರೇಗೌಡ, ಉಮಾಶ್ರೀ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹಿತ ಜನಪ್ರತಿನಿಧಿಗಳು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ನಂದಿನಿ ಪ್ರಚಾರ ರಾಯಭಾರಿ ಪುನೀತ್ ರಾಜಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸುವರು. ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ಆಡಳಿತ ಮಂಡಳಿ ಸದಸ್ಯರು ಮತ್ತು ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಿದ್ದು ಕೊಡುಗೆ ಅಪಾರ: ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಪ್ರತಿ ಲೀ. ಹಾಲಿಗೆ 2 ಇದ್ದ ಪ್ರೋತ್ಸಾಹ ಧನವನ್ನು 4ಕ್ಕೆ ಹೆಚ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದ ಮೂಲಕ ವಾರ್ಷಿಕ 818 ಕೋಟಿ ಹಣವನ್ನು ರೈತರಿಗೆ ನೇರವಾಗಿ ತಲುಪಿಸಿದ್ದಾರೆ. 10 ಲಕ್ಷ ಕುಟುಂಬಗಳಿಗೆ ನೆರವು ಸಿಕ್ಕಿದೆ ಎಂದು ತಿಳಿಸಿದರು.
ಕ್ಷೀರಭಾಗ್ಯ ಯೋಜನೆ ಮೂಲಕ ಕೆಎಂಎಫ್ ಮತ್ತು ಅಧೀನ ಒಕ್ಕೂಟಗಳಲ್ಲಿ ದಾಸ್ತಾನಿದ್ದ ಸುಮಾರು 8 ಲಕ್ಷ ಲೀಟರ್ನಷ್ಟು ಹಾಲಿನ ಪುಡಿಯನ್ನು ಸರ್ಕಾರ ಖರೀದಿಸಿದ್ದು, 450 ಕೋಟಿ ವಹಿವಾಟು ನಡೆದಿದೆ. ಈಚೆಗೆ ಪ್ರತಿ ಲೀ. ಹಾಲಿಗೆ 2 ಹೆಚ್ಚಳ ಮಾಡುವುದರೊಂದಿಗೆ ರೈತರು ಮತ್ತು ಒಕ್ಕೂಟಗಳ ಅಭ್ಯುದಯಕ್ಕೆ ಸಿದ್ದರಾಮಯ್ಯ ಕಾರಣೀಭೂತರಾಗಿದ್ದಾರೆ. ಹೀಗಾಗಿ ಅವರನ್ನು ಸಮಾವೇಶದಲ್ಲಿ ರಾಮನಗರ ಜಿಲ್ಲೆ ಹೈನುಗಾರರ ಪರವಾಗಿ ಗೌರವಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.