ಬೆಂಗಳೂರು ಗ್ರಾಮಾಂತರ

20 ನಿಮಿಷ 20 ಸುದ್ದಿ

Published On :

ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ ವಿರುದ್ಧ ಆಕ್ರೋಶ
ರಾಮನಗರ: ಬುಡಕಟ್ಟು ಜನರಿಗೆ ಅರಣ್ಯವೇ ಜೀವಾಳವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅಖಿಲಾ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ಫೂರ್ತಿ ಭವನದಲ್ಲಿ ಇಂಚರ ಸಂಸ್ಥೆಯು ಹಮ್ಮಿಕೊಂಡಿದ್ದ ಅಭೃದ್ಧಿಶೀಲ ದೇಶದಲ್ಲಿ ಆದಿವಾಸಿಗಳು ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನರು ಸಂಘಟಿತರಾಗುವ ಮೂಲಕ ಬದುಕುವ ಹಕ್ಕಿಗಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಒರಿಸ್ಸಾ ರಾಜ್ಯದಲ್ಲಿ ವೇದಾಂತ ಕಂಪನಿಯು ನಡೆಸುತ್ತಿದ್ದ ಗಣಿಗಾರಿಕೆಯ ವಿರುದ್ಧ ಸತತ 12 ವರ್ಷದಿಂದ ನ್ಯಾಮಗಿರಿ ಬುಡಕಟ್ಟು ಜನಾಂಗಗಳು ಹೋರಾಟ ಮಾಡಿದವು. ಅವರ ಹೋರಾಟಕ್ಕೆ ಸ್ಥಳೀಯ ಗ್ರಾ.ಪಂ. ಮತ್ತು ರಾಜ್ಯ ಹೈಕೋರ್ಟ್ ಪರವಾಗಿ ನಿಂತಿದ್ದರಿಂದ ಬಡ ಬುಡಕಟ್ಟು ಜನರಿಗೆ ನ್ಯಾಯ ದೊರಕಿತು ಎಂದರು.

ಮಲೇರಿಯಾ ನಿಯಂತ್ರಣಕ್ಕೆ ಶ್ರೀನಿವಾಸ್ ಕರೆ

ರಾಮನಗರ: ಮಲೇರಿಯ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಕೆ.ಎಂ. ಶ್ರೀನಿವಾಸ್ ಕರೆ ನೀಡಿದರು. ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಮಲೇರಿಯಾ ರೋಗ ಕುರಿತು  ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಮಲೇರಿಯಾ ಅಡ್ವೋಕೆಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣ ಎಲ್ಲರ ಹೊಣೆ ಎಂದರು.
ನಾಗರಿಕರು, ಚುನಾಯಿತ ಪ್ರತಿನಿಧಿಗಳು,  ಗ್ರಾಮಗಳ ಮುಖಂಡರು, ಧಾರ್ಮಿಕ ಮುಖಂಡರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮತ್ತು ಸರ್ಕಾರದ ಇಲಾಖೆಗಳ ಒಟ್ಟಾರೆ ಸಹಕಾರದಲ್ಲಿ ಮಲೇರಿಯಾ ರೋಗ ಹರಡದಂತೆ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು. ನಾಗರಿಕರು ನೀರಿನ ಟ್ಯಾಂಕ್‌ಗಳು, ತೊಟ್ಟಿಗಳನ್ನು ಮುಚ್ಚಿಡಬೇಕುಎಂದು ಅವರು ನಾಗರೀಕರಲ್ಲಿ ಮನವಿ ಮಾಡಿದರು.

ಇಂದಿನಿಂದ 2ನೇ ಸುತ್ತಿನ ಪಲ್ಸ್ ಪೋಲಿಯೊ
ರಾಮನಗರ: 2ನೇ ಸುತ್ತಿನ ರಾಷ್ಟ್ರೀಯ ಪೊಲಿಯೋ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ಫೆ.23ರ ಬೆಳಗ್ಗೆ 8ಕ್ಕೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಘುನಾಥ್ ತಿಳಿಸಿದ್ದಾರೆ. 2ನೇ ಹಂತದ ಪೋಲಿಯೊ ಲಸಿಕಾ ಕಾರ್ಯಕ್ರಮ ಫೆ.23 ರಿಂದ 26ರವರೆಗೆ ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಡೆಯುವುದು. ಮನೆ ಮನೆಗಳಿಗೆ ಭೇಟಿ ನೀಡುವ ಮೂಲಕ ಕೈಬಿಟ್ಟು ಹೋದ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಎಲ್ಲಾ ಬಸ್, ರೈಲು ನಿಲ್ದಾಣ ಹಾಗೂ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 120310 ಮಕ್ಕಳಿರುವ ಅಂದಾಜಿದ್ದು, 541 ಲಸಿಕಾ ಕೇಂದ್ರಗಳನ್ನು ತೆರೆಯುವ ಮೂಲಕ ಲಸಿಕೆ ಹಾಕಲಾಗುವುದು. 2112 ಕಾರ್ಯಕರ್ತರು, 108 ಸೂಪರ್ ವೈಸರ್‌ಗಳು ಕಾರ್ಯನಿರ್ವಹಿಸುವರು. ಅಲ್ಲದೇ 23 ತಾತ್ಕಾಲಿಕ ಲಸಿಕಾ ಘಟಕಗಳಲ್ಲಿ 70 ಸಿಬ್ಬಂದಿಗಳು, 8 ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ. ಅಲೆಮಾರಿ ಕುಟುಂಬಗಳ 461 ಕುಟುಂಬಗಳ ಮಕ್ಕಳಿಗೂ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ರಘುನಾಥ್ ತಿಳಿಸಿದ್ದಾರೆ.

ಮಹಿಳೆಯರಿಗೆ ಉಚಿತಟೈಲರಿಂಗ್ ತರಬೇತಿ

ರಾಮನಗರ: ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎ.ಡಿ.ಪೈ. ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ಸ್ವಉದ್ಯೋಗ ಪ್ರಾರಂಭಿಸಲು ಇಚ್ಛಿಸುವ ನಿರುದ್ಯೋಗಿ ಯುವತಿಯರಿಗೆ ಮಹಿಳೆಯರ ವಸ್ತ್ರ ವಿನ್ಯಾಸದ (ಟೈಲರಿಂಗ್) ಉಚಿತ ತರಬೇತಿ ನೀಡಲಿದೆ. ಕನಿಷ್ಠ 7ನೇ ತರಗತಿ ಪಾಸಾಗಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿಯು ಫೆ.24ರಿಂದ ಪ್ರಾರಂಭವಾಗಲಿದ್ದು, 21 ದಿನದ ತರಬೇತಿಯು ಸಂಸ್ಥೆಯ ಆವರಣದಲ್ಲಿಯೇ ನಡೆಯಲಿದೆ. ತರಬೇತಿ ವೇಳೆ ಶಿಬಿರಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಸೌಕರ್ಯವನ್ನು ಸಂಸ್ಥೆ ಒದಗಿಸಲಿದೆ. ನಿರುದ್ಯೋಗಿ ಯುವತಿಯರು ಸ್ವಂತ ಉದ್ಯೋಗ ಸ್ಥಾಪಿಸಿಕೊಂಡು, ಉದ್ಯಮದ ಅಭಿವೃದ್ಧಿಪಡಿಸುವ ಜತೆಗೆ ಆರ್ಥಿಕವಾಗಿ ಸಬಲರನ್ನಾಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಆಸಕ್ತ ಯುವತಿಯರು ಭರ್ತಿ ಮಾಡಿದ ಅರ್ಜಿಯನ್ನು ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಪಡಿತರ ಚೀಟಿಯ ನಕಲು ಹಾಗೂ ಪರೀಕ್ಷಾ ಅಂಕಪಟ್ಟಿಯ ನಕಲು ಪ್ರತಿಯನ್ನು ಸಂಸ್ಥೆಯ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮುನಿರಾಜು ಅವರ ಮೊ. 9900168985 ಸಂಪರ್ಕಿಸಬಹುದು.

ಶ್ರೀ ಮಾರುತಿ ವ್ಯಾಯಾಮ ಶಾಲೆ ವಾರ್ಷಿಕೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ನೇತೃತ್ವದಲ್ಲಿ 63ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ವ್ಯಾಯಾಮ ಶಾಲೆ ಆವರಣದಲ್ಲಿ ಫೆ.23ರ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ. ಗುರುದೇವ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಟಿ.ವೆಂಕಟರಮಣಯ್ಯ ಬಹುಮಾನಗಳನ್ನು ವಿತರಿಸಲಿದ್ದಾರೆ. ವಿದ್ಯುತ್ ಮಗ್ಗಗಳ ನಿಗಮ ಮಂಡಲಿ ಸದಸ್ಯ ಕೆ.ಜಿ.ಅಶೋಕ್, ನಗರಸಭಾ ಸದಸ್ಯ ತ.ನ.ಪ್ರಭುದೇವ್, ಪಿ.ಸಿ.ಲಕ್ಷ್ಮೀನಾರಾಯಣ್, ಲೋಕೇಶ್‌ಬಾಬು, ಕಸಾಪ ತಾ.ಅಧ್ಯಕ್ಷ ಶ್ರೀಕಾಂತ್ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ದೇಹದಾರ್ಢ್ಯ ಪ್ರದರ್ಶನ ಸ್ಪರ್ಧೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ಹಿರಿಯ ಸದಸ್ಯರುಗಳಾದ ಬಿ.ಜಿ.ಗೋಪಾಲ್, ಎಂ.ಎನ್. ಕೇಶವರಾಜ್, ಕೆ.ಜಿ.ಗೋಪಿನಾಥ್, ಎಚ್.ಡಿ.ರಘುನಾಥ್, ಕೆ.ಆರ್.ಗೋಪಾಲಕೃಷ್ಣ ಮತ್ತಿತರರಿಗೆ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಂ.ಎಸ್. ಸಿದ್ದಲಿಂಗೇಗೌಡ ಮಾಕಳಿ ಗ್ರಾಪಂ ಅಧ್ಯಕ್ಷ
ಚನ್ನಪಟ್ಟಣ:  ಬಹುವಿವಾದಿತ ತಾಲೂಕಿನ ಮಾಕಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಸ್.ಸಿದ್ದಲಿಂಗೇಗೌಡ, ಭಾರತಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಗೊಂಡಿದ್ದಾರೆ.
10 ಮಂದಿ ಸದಸ್ಯ ಬಲದ ಗ್ರಾ.ಪಂನಲ್ಲಿ ಜೆಡಿಎಸ್ 4, ಕಾಂಗ್ರೆಸ್ 3 ಸಮಾಜವಾದಿ ಪಕ್ಷ 3 ಸ್ಥಾನಗಳ ಬಲಾಬಲ ಹೊಂದಿತ್ತು. ಜೆಡಿಎಸ್‌ನಿಂದ ಸಾಕಷ್ಟು ಪೈಪೋಟಿಯ ಮೇಲೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಶಶಿಕಲಾ ಲೋಕೇಶ್‌ರನ್ನು ಅದೇ ಪಕ್ಷದ ಸಿದ್ದಲಿಂಗೇಗೌಡ ಸಹಕಾರದೊಂದಿಗೆ ವಿಪಕ್ಷಗಳು ಕೆಳಗಿಳಿಸಿದ್ದರಿಂದ ಸ್ಥಾನ ತೆರವಾಗಿತ್ತು. ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷಸಿದ್ದಲಿಂಗೇಗೌಡ ಗ್ರಾ.ಪಂ ಅಭಿವೃದ್ಧಿಗಾಗಿ ನಾವು ಹೊಂದಾಣಿಕೆ ಮಾಡಿ ಕೊಂಡಿದ್ದು, ನಾನು ಇಂದಿಗೂ ಜೆಡಿಎಸ್ ಪಕ್ಷದಲ್ಲೇ ಇದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಪ್ರತಿಕ್ರಿಯಿಸಿದರು. ಮುಂದಿನ ಚುನಾವಣೆಗಳಲ್ಲಿ ಪಕ್ಷದ ಅಣತಿಯಂತೆ ದುಡಿಯುತ್ತೇನೆ ಎಂದರು.

ಶಾಶ್ವತ ನೀರಾವರಿ ಯೋಜನೆ ಬಗ್ಗೆ ಜನಪ್ರತಿನಿಧಿಗಳ ಸಭೆ
ಚನ್ನಪಟ್ಟಣ: ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಅವರ ನಿಲುವನ್ನು ಅರಿತು ಕೊಳ್ಳುವ ಹಿನ್ನೆಲೆಯಲ್ಲಿ ಮಾ. 1ರಂದು ರಾಮನಗರದ ಮಂಜುನಾಥ ಕನ್ವೆಷನ್‌ಹಾಲ್‌ನಲ್ಲಿ, ಸಮಿತಿಯ ಅಧ್ಯಕ್ಷ ಸು.ತ.ರಾಮೇಗೌಡ ಅಧ್ಯಕ್ಷತೆಯಲ್ಲಿ  ಜಿಲ್ಲಾ ಮಟ್ಟದ ಹಾಲಿ ಮತ್ತು ಮಾಜಿ ಜನ ಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ತಿಳಿಸಿದ್ದಾರೆ. ನೀರಾವರಿ ಸಮಸ್ಯೆಯನ್ನು ಈ ಜಿಲ್ಲೆ ದಶಕಗಳಿಂದ ಎದುರಿಸುತ್ತಿದ್ದು, ಕೊಳವೆ ಬಾವಿಗಳು ಬರಿದಾಗುವ ಮೂಲಕ ಈಭಾಗದ ರೈತರ ಬದುಕು ಬೀದಿಪಾಲಾಗಿದೆ. ಮಾವು, ತೆಂಗು ಮೊದಲಾದ ಶಾಶ್ವತ ಬೆಳೆಗಳು ಒಣಗಿ ಹೋಗಿದ್ದು  ಬೇಸಾಯಕ್ಕಿರಲಿ ಕುಡಿಯಲೂ ರೈತರಿಗೆ ಶುದ್ಧ ನೀರು ಸಿಗದಂತಾಗಿದೆ   ಇಂತಹ ಸಂದರ್ಭದಲ್ಲಿ ಶಾಶ್ವತ ನೀರಾವರಿಯ ಬಗ್ಗೆ ಗಂಭೀರ ಚಿಂತನೆ ನಡೆಯ ಬೇಕಿದೆ ಎಂದಿದ್ದಾರೆ.

ಶಿವರಾತ್ರಿ ಜಾತ್ರೆ: ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ  
ಕನಕಪುರ: ಕನಕಪುರ ಮಾರ್ಗವಾಗಿ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆಗೆ ತೆರಳುತ್ತಿರುವ ಸಾವಿರಾರು ಭಕ್ತಾದಿಗಳಿಗೆ ಇಲ್ಲಿನ ಜವಳಿ ವರ್ತಕರ ಸಂಘದ ಮೂಲಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಹಲವಾರು ಕಡೆಗಳಲ್ಲಿ ಅರವಟ್ಟಿಗೆಗಳನ್ನು ಏರ್ಪಡಿಸಿ ನೀರು, ಪಾನಕ ವಿತರಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕನಕಪುರ, ಸಂಗಮ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತೀವರ್ಷ 40 ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆ ಮೂಲಕ ತೆರಳುತ್ತಿದ್ದು ಜನರ ಅನುಕೂಲತೆಗಾಗಿ ಜವಳಿ ವರ್ತಕರು ಅನ್ನದಾನದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಚೂಡಾಮಣಿ ಶ್ರೀನಿವಾಸ್ ಹೇಳಿದ್ದಾರೆ. ಜವಳಿ ವರ್ತರುಗಳಾದ ಜುಗಲ್‌ರಾಜ್, ಜಗದೀಶ್, ಮುರಡಿ ಗಿರೀಶ್ ಪಾಲ್ಗೊಂಡಿದ್ದರು.

35ನೇ ದಿನಕ್ಕೆ ಸಿದ್ದರಾಮ ಹೆಗ್ಗಡೆ ಅನಿರ್ದಿಷ್ಟಾವಧಿ ಧರಣಿ

ಚನ್ನಪಟ್ಟಣ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ತಾ.ಪಂ ಮಾಜಿ ಅಧ್ಯಕ್ಷ ಸಿದ್ದರಾಮಹೆಗ್ಗಡೆ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 35ನೇ ದಿನಕ್ಕೆ ಕಾಲಿರಿಸಿದೆ.
 34ದಿನಗಳಿಂದ ನಡೆಸಿ ಕೊಂಡು ಬರುತ್ತಿರುವ ಇವರ ಪ್ರತಿಭಟನೆಗೆ ಜಿಲ್ಲಾಡಳಿತ ಪೂರಕವಾಗಿ ಸ್ಪಂದನೆ ತೋರದಿದ್ದು, ಕಣ್ವ ಮತ್ತು ಶಿಂಷಾ ನದಿ ಕೊಳ್ಳದಲ್ಲಿ ಕಳೆದ 14 ವರ್ಷಗಳಿಂದ ಸರ್ಕಾರಿ ನಿಯಮ ಉಲ್ಲಂಘಿಸಿ ಮರಳು ಲೂಟಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಮೀನಾಮೇಷ ಏಣಿಸುತ್ತಿದೆ. ಪ್ರತಿಭಟನೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ .ದೊರೆಸ್ವಾಮಿ, ಕಡಿದಾಳು ಶಾಮಣ್ಣ, ಪರಿಸರ ತಜ್ಞ ಸಮರೇಂದ್ರ ದಾಸ್ ಸೇರಿದಂತೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದರಾದರೂ  ಆರಂಭದಲ್ಲಿ ಸಭೆ ನಡೆಸಿ ಮರಳು ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ ಜಿಲ್ಲಾಡಳಿತ ನಂತರ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಸಾಕಷ್ಟು ಅಮಾಯಕ ಕೂಲಿ ಕಾರ್ಮಿಕರು ಕೊನೆಯುಸಿರೆಳೆದಿದ್ದು ಈ ಬಗ್ಗೆ ತನಿಖೆ ನಡೆಯಲೇ ಬೇಕೆಂದು ಅವರು ಆಗ್ರಹಿಸಿದ್ದಾರೆ.

ಮಕ್ಕಳು ದಿಕ್ಕುತಪ್ಪದಂತೆ ನೋಡಿಕೊಳ್ಳುವಂತೆ ಸಲಹೆ
ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಮೊಬೈಲ್, ಇಂಟರ್‌ನೆಟ್ ಮತ್ತು ಟಿ.ವಿ ಮಾಧ್ಯಮ  ಮಕ್ಕಳನ್ನು ದಿಕ್ಕುತಪ್ಪಿಸುತ್ತಿದ್ದು, ಇವುಗಳಿಂದ ಅಪಾಯ ಎದುರಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಕನ್ನಡಪರ ಹೋರಾಟಗಾರ ಸಿಂ.ಲಿಂ. ನಾಗರಾಜು ಎಚ್ಚರಿಸಿದರು.
ಪಟ್ಟಣದ ಸೆಂಟ್‌ತೆರೆಸಾ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಸಂವಹನ, ಬೌದ್ಧಿಕ ಪ್ರಗತಿಗೆ ಅನುಕೂಲವಾಗಬೇಕಾದ ಈ ಮಾಧ್ಯಮಗಳು ಅವರನ್ನು ಅಡ್ಡದಾರಿಗೆ ಎಳೆಯುತ್ತಿದೆ. ಅನಗತ್ಯವಾದ ವಿಷಯಗಳತ್ತ ಆಕರ್ಷಿತರಾಗಿ ಭವಿಷ್ಯ ಹೀನರಾಗುತ್ತಿದ್ದಾರೆ. ಇದು ಅತ್ಯಂತ ದುರಂತಕಾರಿ ಸಂಗತಿ ಎಂದರು. ಅಂಧರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಪಡೆದ ರಮೇಶ್ ಜಯರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಚಕ್ಕಲೂರು ಚನ್ನಪ್ಪ, ಚಿ. ಸಂತೋಷ್ ಕುಮಾರ್, ನಗರಸಭಾ ಸದಸ್ಯ ಜೆಸಿಬಿ ಲೋಕೇಶ್, ಸಂಸ್ಥೆಯ ಕಾರ್ಯದರ್ರ್ಶಿ ಮ.ತ.ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

ಅನಧಿಕೃತ ಮರಳು ಕೇಂದ್ರದ ಮೇಲೆ ದಾಳಿ
ಶ್ರೀರಂಗಪಟ್ಟಣ: ತಾಲೂಕಿನ ಮೇಳಾಪುರ ಗ್ರಾಮದ ಕಾವೇರಿ ನದಿ ಪಾತ್ರದ ಬಳಿ ಅನಧಿಕೃತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಕೇಂದ್ರದ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿ 7 ಕೊಪ್ಪರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ಅನಧಿಕೃತವಾಗಿ ಕೆಲ ತಿಂಗಳಿನಿಂದ ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ಕೊಪ್ಪರಿಕೆಗಳ ಮೂಲಕ ಮರಳು ಸಂಗ್ರಹಣೆ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹಿಸುತ್ತಿದ್ದ ಆರೋಪಿಗಳು ಪೊಲೀಸರನ್ನು ಕಂಡ ತಕ್ಷಣವೇ ಪರಾರಿಯಾಗಿದ್ದಾರೆ. ಪೊಲೀಸರು ಮರಳು ಸಂಗ್ರಹಕ್ಕೆ ಬಳಸುತ್ತಿದ್ದ ಏಳು ಕೊಪ್ಪರಿಕೆಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಸಾಪದಿಂದ ಸರ್ವಜ್ಞ ಜಯಂತಿ ಆಚರಣೆ
ವಿಜಯಪುರ: 17ನೇ ಶತಮಾನದಲ್ಲಿನ ದಕ್ಷಿಣ ಭಾರತದ ಕವಿಗಳಲ್ಲಿ ತ್ರಿಮೂರ್ತಿಗಳೆಂದೇ ಹೆಸರಾದ ಕರ್ನಾಟಕದ ಸರ್ವಜ್ಞ, ಆಂಧ್ರದ ವೇಮನ ಹಾಗೂ ತಮಿಳುನಾಡಿನ ತಿರುವಳ್ಳವರ್ ರಚಿಸಿರುವ ಮಹಾನ್ ಕೃತಿಗಳು ಇಂದಿಗೂ ಕೂಡ ಸಾಹಿತ್ಯ ಲೋಕದಲ್ಲಿ  ಮೈಲಿಗಲ್ಲೆಂದರೇ ತಪ್ಪಾಗಲಾರದು ಎಂದು ಬೆಂ.ಗ್ರಾ.ಜಿಲ್ಲಾ ಕಸಾಪ ಉಪಾಧ್ಯಕ್ಷ ರುದ್ರೇಶ್ ಮೂರ್ತಿ ತಿಳಿಸಿದರು. ಅವರು ಇಲ್ಲಿನ ಗಾಂಧೀ ಚೌಕದಲ್ಲಿ ಕಸಾಪ ವತಿಯಿಂದ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  ದೇವನಹಳ್ಳಿ ತಾ.ಕಸಾಪ ಅಧ್ಯಕ್ಷ ರಾಜ್‌ಗೋಪಾಲ್ ಮಾತನಾಡಿ ದರು. ತಾ.ಕಸಾಪ ಪ್ರಧಾನ ಕಾರ್ಯದರ್ಶಿ ವಿ.ಎನ್.ರಮೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ವಿಜಯಕುಮಾರ್, ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಮುನಿರಾಜು, ಗಾಣಿಗರ ಸಂಘದ ಅಧ್ಯಕ್ಷ ಗೋವಿಂದರಾಜು, ವಿಜಯಪುರ ಟೌನ್ ಕಸಾಪ ಅಧ್ಯಕ್ಷ ಮುನಿವೀರಣ್ಣ, ನಿಕಟ ಪೂರ್ವ ಅಧ್ಯಕ್ಷ ನಾರಾಯಣಸ್ವಾಮಿ, ಚಿ.ಮಾ. ಸುಧಾಕರ್, ಶಿಕ್ಷಕ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ

ವಿಜಯಪುರ: ಪಟ್ಟಣದ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಡ ಕಚೇರಿಯ ಉಪತಹಸೀಲ್ದಾರ್  ಶ್ರೀನಿವಾಸ ನಾಯ್ಡು ಮಾತನಾಡಿದ ಮಂಡಿಬೆಲೆ, ವಿಜಯಪುರ , ಬಿಜ್ಜವಾರ, ನಾರಾಯಣಪುರ, ಕೋರಮಂಗಲ, ವೆಂಕಟಗಿರಿಕೋಟೆ ಸೇರಿದಂತೆ ಇಲ್ಲಿನ ಒಟ್ಟು 119 ಫಲಾನುಭವಿಗಳಿಗೆ  ಆದೇಶ ಪ್ರತಿಗಳನ್ನು ನೀಡಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಲಿದ್ದು ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಈ ಸಂಧರ್ಭದಲ್ಲಿ ಭಾರತ ಜನ ಜಾಗೃತಿ ಸೇನೆಯ ಸಿ.ಮುನಿಯಪ್ಪ, ರಾಜಪ್ಪ, ನಿರೀಕ್ಷಕ ಉದಯ್‌ಕುಮಾರ್, ಕಂದಾಯಾಧಿಕಾರಿಗಳಾದ ರಂಗನಾಥ್, ಮಂಜುನಾಥ್, ಲೋಕೇಶ್, ಹನುಮಂತರಾಯಪ್ಪ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿ ಬಂಧನ
ಮಂಡ್ಯ: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದ ಆರೋಪಿಯೊಬ್ಬನನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ಮೂಲದ ಎನ್.ರಮೇಶ್ ಬಂಧಿತ ಆರೋಪಿ. ಈತ ಸಾರಿಗೆ ನಿಗಮದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವಾರು ಅಭ್ಯರ್ಥಿಗಳಿಂದ ಲಕ್ಷಾಂತರ ರುಪಾಯಿ ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶ ನೀಡಿರುವುದು ಬೆಳಕಿಗೆ ಬಂದಿದೆ. ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ರಮೇಶ್ ಮಾರ್ಗದರ್ಶನದಲ್ಲಿ ಭದ್ರತಾ ಮತ್ತು ಜಾಗೃತಾ ದಳದ ಅಧಿಕಾರಿ ಎಂ.ಪಿ. ರಘು ತನಿಖೆ ನಡೆಸಿ ಬಂಧಿಸಿದ್ದಾರೆ. ಈತನ ಬಳಿ ನಿಗಮದ ಸಿಬ್ಬಂದಿಗೆ ಉಚಿತವಾಗಿ ವಿತರಿಸುವ ಪರವಾನಿಗೆ ಪತ್ರವೂ ದೊರಕಿದ್ದು, ವ್ಯವಸ್ಥಾಪಕರ ಸಹಿಗಳು ನಕಲಿಯಾಗಿವೆ. ಆರೋಪಿ ರಮೇಶ್ 9 ವರ್ಷಗಳಿಂದ ನಕಲಿ ಬಸ್‌ಪಾಸ್ ಬಳಸಿಕೊಂಡು ಸಂಸ್ಥೆಗೆ 1,49,985 ರು. ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನಲೆಯಲ್ಲಿ ಪಶ್ಚಿಮ ಪೊಲೀಸ್ ಠಾಮೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆಲ್ಮೆಟ್ ಧರಿಸಿ ವಾಹನ ಚಲಿಸಿ ಜಾಥಾ
ವಿಜಯಪುರ: ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಅಪಘಾತ ಪ್ರಮಾಣ ಹೆಚ್ಚುತ್ತಲಿದ್ದು ಇದನ್ನು ನಿಯಂತ್ರಿಸುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಹೆಲ್ಮೆಟ್ ಧರಿಸುವಂತೆ ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎನ್ನುವ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ  ರಮೇಶ್ ಭಾನೋಟ್ ತಿಳಿಸಿದರು.ಪೊಲೀಸ್ ಇಲಾಖೆ ಮತ್ತು ಪಟ್ಟಣದ ಸಂಘ ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಹೆಲ್ಮೆಟ್ ಧರಿಸಿ ವಾಹನ ಚಲಿಸಿ ಎಂದು ಜನರಲ್ಲಿ ಅರಿವು ಮೂಡಿಸುವ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ ನಂತರ ಮಾತನಾಡಿದರು. ವೃತ್ತ ನಿರೀಕ್ಷಕ ಮಹೇಶ್‌ಕುಮಾರ್ ಮಾತನಾಡಿದರು. ಶಿವಕುಮಾರ್, ರಾಘವೇಂದ್ರ, ಮಧುಕರ್, ಕರವೇ, ನಾಡಪ್ರಭು ಕೆಂಪೇಗೌಡರ ಕನ್ನಡ ಸೇನೆಯ ಪದಾಧಿಕಾರಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.