ವಿಕಲಚೇತನರ ಅಭ್ಯುದಯ ಸರ್ಕಾರದ ಹೊಣೆ
ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ,ಜ.1
ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸಂಘಟನೆಗಳು ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ದೈಹಿಕ ವೈಕಲ್ಯ ಸಾಧನೆಗೆ ಅಡ್ಡಿಯಾಗಬಾರದು ಎಂದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ಒಕ್ಕಲಿಗರ ಭವನದಲ್ಲಿ ವಿಕಲಚೇತನರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ನ್ಯೂನತೆಗಳು ಅಡ್ಡವಾದರೂ ಆತ್ಮವಿಶ್ವಾಸಕ್ಕೆ ಅಡ್ಡಿಯಿಲ್ಲ. ಅವರನ್ನು ಸ್ಥೈರ್ಯ ತುಂಬುವ ಕೆಲಸವನ್ನು ಸಮಾಜ ಮಾಡಬೇಕು. ಸರ್ಕಾರ ಕೂಡ ಈ ಹಂತದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ವಿಶೇಷ ಅವಶ್ಯಕತೆಯುಳ್ಳ ಮಕ್ಕಳ ಪೋಷಕರ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಅಂಗವಿಕಲರಿಗೆ ಮಾಸಾಶನ ನೀಡುವುದಕ್ಕೆ ವಿಳಂಬವಾಗದಂತೆ ಸೂಕ್ತ ನಿಗಾ ವಹಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಮಾತನಾಡಿ ವಿಕಲಚೇತನರ ಕಲ್ಯಾಣಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳ ಸಮರ್ಪಕ ಅನುಷ್ಠಾನ ಸಾಧ್ಯವಾಗಬೇಕಿದೆ. ಅಸಾಧಾರಣ ಪ್ರತಿಭೆ ಹೊಂದಿರುವ ವಿಕಲಚೇತನರು ಅದನ್ನು ಸಮಾಜದ ಮುಂದೆ ಪ್ರದರ್ಶಿಸಲು ಅವಕಾಶಗಳು ಲಭ್ಯವಾಗುತ್ತಿಲ್ಲ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸರ್ಕಾರದ ಜೊತೆಗೆ ಸಂಘಟನೆಗಳು ಮತ್ತು ನಾಗರೀಕ ಸಮಾಜ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಅಭಿನಂದನೆ-ಸನ್ಮಾನ: ಇದೇ ಸಂದರ್ಭದಲ್ಲಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಅಂತರ ರಾಷ್ಟ್ರೀಯ ವಿಶೇಷ ಒಲಿಂಪಿಕ್ ಏಷ್ಯಾ ಫೆಸಿಫಿಕ್ ಕ್ರೀಡಾಕೂಟದಲ್ಲಿ ಭಾರತ ತಂಡದಿಂದ ಅಥ್ಲೆಟಿಕ್ಸ್ ಮತ್ತು ಬೋಚಿ ಕ್ರೀಡೆಗಳಲ್ಲಿ(ಬುದ್ಧಿಮಾಂದ್ಯರ ಕ್ರೀಡಾಕೂಟ) ಭಾಗವಹಿಸಿ ಬಹುಮಾನಿತರಾದ ಗ್ರಾಮೀಣ ಅಭ್ಯುದಯ ಸಂಸ್ಥೆಯ ಕ್ರೀಡಾಪಟುಗಳಾದ ನವೀನ್‌ಕುಮಾರ್, ಕಿರಣ್‌ಕುಮಾರ್, ಶಾಂತಲ, ಹಾಜೀರಾ ಮತ್ತಿತರರನ್ನು ಸನ್ಮಾನಿಸಲಾಯಿತು.
ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ನವಜ್ಯೋತಿ ಅಂಗವಿಕಲರ ಸೇವಾ ಟ್ರಸ್ಟ್, ಅಂಗವಿಕಲರ ವಿಮೋಚನಾ ವೇದಿಕೆ, ಆದರ್ಶ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆ, ಸೂರ್ಯೋದಯ ಅಂಗವಿಕಲರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ದೊಡ್ಡಬಳ್ಳಾಪುರ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಅಶ್ವತ್ಥರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ವಿ.ಕುಲಕರ್ಣಿ, ತಾ.ಪಂ ಸದಸ್ಯ ಡಾ. ವಿಜಯಕುಮಾರ್, ನಗರಸಭಾ ಸದಸ್ಯ ನಂಜಪ್ಪ, ಸಿಡಿಪಿಓ ಜಯದೇವಿ, ಜಿಎಎಸ್ ಸಂಸ್ಖೆಯ ಗೋಪಾಲನಾಯಕ್, ಅಮಲಿನಾಯಕ್, ತಾಲೂಕಿನ ವಿವಿಧ ಗ್ರಾಪಂಗಳ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

