ಬೆಂಗಳೂರು ಗ್ರಾಮಾಂತರ

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

Published On :

ಕ.ಪ್ರ.ವಾರ್ತೆ  ರಾಮನಗರ   ಜ.2
ಗಂಡು ಮತ್ತು ಹೆಣ್ಣು ನಡುವೆ ಸಮಾನ ಲಿಂಗಾನುಪಾತ ಕಾಪಾಡುವ ಹಿನ್ನೆಲೆಯಲ್ಲಿ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್ ಕರೆ ನೀಡಿದರು.  ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೈದ್ಯಕೀಯ ಸಂಘ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಂದ ನಗರದಲ್ಲಿ ಗುರುವಾರ ನಡೆದ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗೆ ದಾರಿ: ಕಠಿಣ ಕಾಯ್ದೆ ಜಾರಿಯ ನಂತರವೂ ಹೆಣ್ಣುಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿರುವ ಪರಿಣಾಮ ಲಿಂಗಾನುಪಾತ ಹೆಚ್ಚಿದೆ. ಈ ಪಿಡುಗಿಗೆ ಕೊನೆ ಇಲ್ಲವಾದಲ್ಲಿ ನಾನಾ ರೀತಿಯ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಗರ್ಭಾವಸ್ಥೆಯಲ್ಲಿರುವ ಶಿಶುವಿಗೆ ದೈಹಿಕ ನ್ಯೂನತೆ, ಕಾಯಿಲೆ ಇರುವುದನ್ನು ಪತ್ತೆ ಹಚ್ಚುವುದಕ್ಕಾಗಿಯಷ್ಟೇ ಸ್ಕ್ಯಾನಿಂಗ್ ನಡೆಸಬಹುದು. ಇದರ ಹೊರತಾಗಿ ಭ್ರೂಣಲಿಂಗ ಪತ್ತೆ ಮಾಡುವುದು, ಅದಕ್ಕಾಗಿ ಒತ್ತಾಯಿಸುವುದು ಶಿಕ್ಷಾರ್ಹ ಅಪರಾಧ ಎಂದರು.  
ಜಾಗರೂಕತೆ ಅಗತ್ಯ: ಗಂಡು ಸಂತಾನವಾದರೆ ವಂಶೋದ್ಧಾರಕ ಬಂದ ಎನ್ನುವ ಮನೋಭಾವ ಹೊಂದುವುದು ಸರಿಯಲ್ಲ. ಸಮಾಜದಲ್ಲೀಗ ಗಂಡು- ಹೆಣ್ಣು ಸಮಾನರು. ಅದೆಷ್ಟೋ ಹೆಣ್ಣು ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಗಂಡಸರನ್ನೂ ಮೀರಿ ಬೆಳೆದು ಹೆಸರು ಮಾಡಿದ್ದಾರೆ ಎಂದು ಹೊಸಗೌಡರ್ ತಿಳಿಸಿದರು.
ಹೀಗಾಗಿ ಹೆಣ್ಣನ್ನು ಕೀಳಾಗಿ ಕಾಣುವುದು, ಹೆಣ್ಣು ಭ್ರೂಣ ಹತ್ಯೆ ಮಾಡುವುದು ಸರಿಯಲ್ಲ. ಭ್ರೂಣ ಲಿಂಗ ಪತ್ತೆ ಕಾಯ್ದೆ ವಿಷಯವಾಗಿ ಖಾಸಗಿ ಆಸ್ಪತ್ರೆಗಳು ಜಾಗರೂಕತೆ ವಹಿಸಬೇಕು. ಹೆಣ್ಣಿರಲಿ ಗಂಡಿರಲಿ ಮಕ್ಕಳೆರಡಿರಲಿ ಎನ್ನುವ ಅರಿವನ್ನು ಜನತೆಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಆತಂಕಕಾರಿ ಬೆಳವಣಿಗೆ: ದೇಶದ ಕೆಲ ರಾಜ್ಯಗಳಲ್ಲಿ ಲಿಂಗಾನುಪಾತ ಪ್ರಮಾಣ ಸಾಕಷ್ಟು ಹೆಚ್ಚುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಾಮಾಜಿಕ ವ್ಯವಸ್ಥೆಯೇ ಹದಗೆಡಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.  ಲಿಂಗಾನುಪಾತ ಹೆಚ್ಚಳದಿಂದ ದೇಶದಲ್ಲಿ ಅಶಾಂತಿಯೊಂದಿಗೆ ಕೌಟುಂಬಿಕ ವ್ಯವಸ್ಥೆ ಹದಗೆಡುವ ಸಾಧ್ಯತೆಯೂ ಇದೆ. ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರಿ ವ್ಯವಸ್ಥೆಯೊಂದಿಗೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳೂ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಆರ್.ರಘುನಾಥ್, ವೈದ್ಯರಾದ  ಡಾ.ಸುಲೋಚನ, ಡಾ.ವೆಂಕಟೇಶ್, ಡಾ.ಪದ್ಮ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ನ್ಯಾಯವಾದಿ ರಾಜೇಶ್ವರಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.