ಆಟೋ ಗ್ಯಾಸ್ ದರ ಏರಿಕೆಗೆ ಆಕ್ರೋಶ
ದೊಡ್ಡಬಳ್ಳಾಪುರ: ದಿಢೀರನೇ ಆಟೋ ಗ್ಯಾಸ್ ದರವನ್ನು 11 ರು. ಗಳಷ್ಟು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇಲ್ಲಿನ ಆಟೋ ಚಾಲಕರು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರ ಬಡಜನರ ಮೇಲೆ ಪದೇ ಪದೇ ಒತ್ತಡ ಹೇರುತ್ತಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ದರ ಏರಿಕೆ ಮಾಡುವ ಮೂಲಕ ಮತ್ತೊಮ್ಮೆ ಬಡವರ ಬದುಕಿನ ಮೇಲೆ ಬರೆ ಎಳೆದಿದೆ. 1 ವರ್ಷದಲ್ಲಿ 15 ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುವ ಮೂಲಕ ದಾಖಲೆಯನ್ನೇ ಮಾಡಿರುವ ಕೇಂದ್ರ ಸರ್ಕಾರ ತಾನು ಬಡವರ ವಿರೋಧಿ ಎಂದು ಪದೇ ಪದೇ ಸಾಬೀತು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯ ಶ್ರಮವಹಿಸಿ ದುಡಿದು ಜೀವನ ಸಾಗಿಸಲೂ ಕಷ್ಟಪಡುತ್ತಿರುವ ಆಟೋ ಚಾಲಕರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನ ಕೇಳಿದಷ್ಟು ಹಣ ಕೊಡಲು ಶಕ್ತರಿರುವುದಿಲ್ಲ. ಜೊತೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುವುದು ಪ್ರಯಾಣಿಕರಿಗೂ ಹೊರೆ ಎನಿಸುತ್ತದೆ. ದಿನೇದಿನೇ ಏರಿಕೆಯಾಗುತ್ತಲೇ ಹೋಗುತ್ತಿರುವ ಗ್ಯಾಸ್ದರ ಆಟೋ ಚಾಲಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಬಡ ಮತ್ತು ಶ್ರಮಿಕ ವರ್ಗದ ಜನರ ಬದುಕಿನೊಂದಿಗೆ ಆಟವಾಡುತ್ತಿರುವ ಸರ್ಕಾರ ಕೂಡಲೇ ಏರಿಕೆ ಮಾಡಿರುವ ಆಟೋ ಗ್ಯಾಸ್ ದರವನ್ನು ಇಳಿಸಬೇಕು. ತಪ್ಪಿದಲ್ಲಿ ದೇಶಾದ್ಯಂತ ಆಟೋ ಚಾಲಕರು ಮುಷ್ಕರ ನಡೆಸಬೇಕಾದೀತು. ಇಂದು ಸಾರ್ವಜನಿಕ ಸಂಪರ್ಕ ಸಾರಿಗೆ ಕ್ಷೇತ್ರದಲ್ಲಿ ಆಟೋಗಳು ಪ್ರಮುಖ ಅಂಗವಾಗಿವೆ. ಜನರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಸೇವೆ ಒದಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಬಿಸಿಯನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ. ಒಂದೆಡೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮತ್ತೊಂದೆಡೆ ಬದುಕು ದುಸ್ತರವಾಗಿದ್ದು, ಲಕ್ಷಾಂತರ ಕುಟುಂಬಗಳು ಪರಿತಪಿಸುವಂತಾಗಿದೆ. ಕೇಂದ್ರ ಇಂಧನ ಸಚಿವರು ಕೂಡಲೇ ಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹತ್ತಾರು ಆಟೋ ಚಾಲಕರು, ಯೂನಿಯನ್ನ ಮುಖಂಡರು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

