ಮತ್ತೆ ವಕ್ಕರಿಸಿದ ಕಾಲುಬಾಯಿ ಜ್ವರ
ಕ.ಪ್ರ.ವಾರ್ತೆ , ರಾಮನಗರ , ಜ. 8
ಕಳೆದ ವರ್ಷ ರಾಮನಗರದಿಂದಲೇ ಕಾಲೂರಿದ ಕಾಲುಬಾಯಿ ಜ್ವರ ರಾಜ್ಯವ್ಯಾಪಿ ಹರಡಿ ಸಹಸ್ರಾರು ರಾಸುಗಳನ್ನು ಬಲಿ ತೆಗೆದುಕೊಂಡಿತ್ತು. ಮಾರಕ ಕಾಯಿಲೆ ಮತ್ತೆ ಇದೇ ಜಿಲ್ಲೆಗೆ ವಕ್ಕರಿಸಿಕೊಂಡಿದ್ದು, 10ಕ್ಕೂ ಹೆಚ್ಚು ರಾಸುಗಳಿಗೆ ರೋಗ ತಗುಲಿರುವುದು ದೃಢಪಟ್ಟಿದೆ.
ಸತತ ಮೂರು ವರ್ಷದಿಂದ ಕಾಡಿರುವ ಭೀಕರ ಬರ, ನಾನಾ ಬವಣೆಗಳ ನಡುವೆ ರಾಸುಗಳಿಗೆ ಭೀಕರ ಕಾಯಿಲೆ ತಲೆದೋರಿದೆ. ಮತ್ತೊಮ್ಮೆ ರೋಗ ವ್ಯಾಪಕವಾಗಿ ಹರಡಿ ರಾಸುಗಳ ಸಾವು, ಹೈನೋದ್ಯಮಕ್ಕೆ ಹಿನ್ನಡೆ ಭೀತಿಯಿಂದ ರೈತ ಸಮುದಾಯ ಕಂಗೆಟ್ಟಿದೆ.
ಸಾವಿನಲ್ಲಿ ಅಗ್ರಸ್ಥಾನಿ: ಕಳೆದ ಜುಲೈ-ನವೆಂಬರ್ ಅವಧಿಯಲ್ಲಿ ಕಾಲುಬಾಯಿ, ಅದರ ಬೆನ್ನಲ್ಲೇ ಗಳಲೇ ರೋಗ ವ್ಯಾಪಿಸಿದ ಪರಿಣಾಮ ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ರಾಸುಗಳು ಸಾವಿಗೀಡಾದವು. ರಾಮನಗರದಲ್ಲೇ ಮೊದಲು ರೋಗ ಕಾಣಿಸಿಕೊಂಡಿತ್ತಲ್ಲದೆ, ರಾಸುಗಳ ಸಾವಿನಲ್ಲೂ ಇದೇ ಜಿಲ್ಲೆ ಅಗ್ರಸ್ಥಾನಿ.
ಬೆಂಗಳೂರು ಹಾಲು ಒಕ್ಕೂಟ (ಬಮೂಲ್ ವ್ಯಾಪ್ತಿಯ) 12 ತಾಲೂಕುಗಳಲ್ಲಿ 3 ಸಾವಿರ ರಾಸುಗಳು ಸಾವನ್ನಪ್ಪಿದ್ದವು. ಈ ಪೈಕಿ ರಾಮನಗರ ಜಿಲ್ಲೆಯಲ್ಲೇ 2200 ರಾಸುಗಳ ಸಾವು ಸಂಭವಿಸಿತ್ತು. ಈಗ ಅಪಾಯಕಾರಿ ರೋಗದ ಪುನರಾವರ್ತನೆ ಇಲ್ಲಿಂದಲೇ ಪತ್ತೆಯಾಗಿರುವುದು ಆತಂಕಕಾರಿ ಸಂಗತಿ.
ವಿಜ್ಞಾನಿಗಳ ಭೇಟಿ: ರಾಮನಗರ ತಾಲೂಕಿನ ಕೈಲಾಂಚ, ವಡೇರಹಳ್ಳಿ, ಚನ್ನಪಟ್ಟಣ ತಾಲೂಕಿನ ದಶವಾರದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿದೆ. ಈ ಗ್ರಾಮಗಳಿಗೆ ವಿಜ್ಞಾನಿಗಳು ಮತ್ತು ಬಮೂಲ್ ಪಶುವೈದ್ಯಕೀಯ ಘಟಕದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ರೋಗಪೀಡಿತ ರಾಸುಗಳ ರಕ್ತದ ಮಾದರಿಯನ್ನು ಪರೀಕ್ಷಿಸಿ ಕಾಲುಬಾಯಿ ಜ್ವರಬಾಧೆ ದೃಢಪಟ್ಟ ಬಳಿಕ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಈ ಹಿಂದೆ ಕಾಲುಬಾಯಿ ಜ್ವರದಿಂದ ಗುಣಮುಖವಾದ ರಾಸುಗಳಿಗೆ ಮತ್ತೆ ರೋಗ ಪುನರಾವರ್ತನೆ ಆದರೆ ಹೆಚ್ಚು ಅಪಾಯವೆನ್ನುವುದು ತಜ್ಞ ವೈದ್ಯರ ಅಭಿಪ್ರಾಯ.
ಮತ್ತೆ ತತ್ತರ: ಈ ಜಿಲ್ಲೆಯಲ್ಲಿ ಕಳೆದ ವರ್ಷ ಜೂನ್- ಜುಲೈನಲ್ಲೇ ರೋಗ ಕಾಣಿಸಿತ್ತು. ಅದನ್ನು ಪತ್ತೆ ಹಚ್ಚುವಲ್ಲಿ ಪಶುಸಂಗೋಪನಾ ಇಲಾಖೆ ವಿಫಲವಾಗಿತ್ತು. ಪರಿಣಾಮ ಇಲ್ಲಿ ರೋಗ ವ್ಯಾಪಕವಾಗಿ ಹರಡಿ ಅತಿ ಹೆಚ್ಚು ರಾಸುಗಳ ಸಾವು-ನೋವು ಸಂಭವಿಸಿದ್ದಲ್ಲದೆ ಹಾಲು ಉತ್ಪಾದನೆಯೂ ಕುಸಿದಿತ್ತು.
ನಂತರದಲ್ಲಿ ವಾಷಿಂಗ್ ಸೋಡಾ ದ್ರಾವಣ ಸಿಂಪಡಣೆ ಮೂಲಕ ಕಾಲುಬಾಯಿ ಜ್ವರ ಮತ್ತು ಗಳಲೇ ರೋಗ ಹರಡುವ ವೈರಾಣುಗಳನ್ನು ನಾಶಪಡಿಸುವ ಬಮೂಲ್ ಪ್ರಯೋಗ ಫಲಪ್ರದವಾಗಿತ್ತು. ಅದರಿಂದ ಕೆಲ ದಿನಗಳ ಮಟ್ಟಿಗೆ ನಿರಾಳರಾಗಿದ್ದ ರೈತರು ಇದೀಗ ಮತ್ತೆ ತತ್ತರಿಸಿದ್ದಾರೆ.
ಲಸಿಕೆಗೆ ನಿರ್ಧಾರ: ಹಿಂದಿನ ವೈಫಲ್ಯದಿಂದ ಎಚ್ಚೆತ್ತಿರುವ ಬಮೂಲ್ ಮೂರು ದಿನಗಳ ಹಿಂದೆಯೇ ಅಧಿಕಾರಿಗಳು ಮತ್ತು ಪಶು ವೈದ್ಯರ ಸಭೆ ನಡೆಸಿದ್ದು, ಪಶು ಸಂಗೋಪನಾ ಇಲಾಖೆಯನ್ನು ನೆಚ್ಚಿಕೊಳ್ಳದೆ ತಾನೇ ಮುಂಜಾಗ್ರತಾ ಲಸಿಕೆ ನೀಡಿಕೆ ಕಾರ್ಯಕ್ರಮ ಪ್ರಾರಂಭಿಸಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಜ.20ಕ್ಕೆ ವಿಜ್ಞಾನಿಗಳು, ಬಮೂಲ್ ವ್ಯಾಪ್ತಿಯ ಪಶು ವೈದ್ಯರು, ನೂರಕ್ಕೂ ಹೆಚ್ಚು ಪಶು ವೈದ್ಯ ವಿದ್ಯಾರ್ಥಿಗಳನ್ನು ಒಳಗೊಂಡ ಕಾರ್ಯಾಗಾರ ಆಯೋಜಿಸಲು ಉದ್ದೇಶಿಸಲಾಗಿದೆ. ಕಾರ್ಯಪಡೆ ರಚಿಸಿಕೊಂಡು ಒಂದು ದಿನದಲ್ಲಿ ಒಂದು ತಾಲೂಕಿನಾದ್ಯಂತ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಪೊಲಿಯೋ ಮಾದರಿ: ಲಸಿಕೆಗಳನ್ನು ಸಾಗಿಸಲು ರು.15 ಲಕ್ಷ ವೆಚ್ಚದಲ್ಲಿ ಇನ್ಸುಲೇಟೆಡ್ ವಾಹನ ಖರೀದಿ ಪ್ರಕ್ರಿಯೆಗೆ ಬಮೂಲ್ ಆಡಳಿತ ಮಂಡಳಿ ಮುಂದಾಗಿದ್ದು, ಕಾಲುಬಾಯಿ ಜ್ವರ ಮತ್ತು ಗಳಲೇ ರೋಗದ ಲಸಿಕೆ ನೀಡಿಕೆಯನ್ನು ಪಲ್ಸ್ ಪೊಲಿಯೋ ಮಾದರಿಯಲ್ಲಿ ನಡೆಸುವ ಇರಾದೆ ಹೊಂದಿದೆ. ಕಾಲುಬಾಯಿ ಜ್ವರದಿಂದ ಸಾವಿರಕ್ಕೂ ಹೆಚ್ಚು ರಾಸು ಸಾವು ಸಂಭವಿಸಿದ್ದ ಚನ್ನಪಟ್ಟಣ ತಾಲೂಕಿನಿಂದಲೇ ಲಸಿಕೆ ನೀಡಿಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಹಾಲಿನ ಇಳುವರಿ ಕುಸಿತ ಮತ್ತು ಗರ್ಭಪಾತದ ಭೀತಿ ಬದಿಗೊತ್ತಿ ರೈತರು ರಾಸುಗಳಿಗೆ ಲಸಿಕೆ ಹಾಕಿಸಿ ರೋಗ ಹತೋಟಿಗೆ ಸಹಕರಿಸಬೇಕಿದೆ.
ಕಾಲುಬಾಯಿ ಜ್ವರದ ಮುಂಜಾಗ್ರತಾ ಲಸಿಕೆ ನೀಡಿಕೆಯನ್ನು ಚನ್ನಪಟ್ಟಣದಿಂದ ಪ್ರಾರಂಭಿಸಿ, ಒಂದು ದಿನಕ್ಕೆ ಒಂದು ತಾಲೂಕನ್ನು ಪೂರ್ಣಗೊಳಿಸಲಾಗುವುದು. ಪಲ್ಸ್ ಪೊಲಿಯೋ ಮಾದರಿ ಕಾರ್ಯಕ್ರಮ ಇದಾಗಿದೆ. ಇದರ ಯಶಸ್ಸಿಗೆ ರೈತರ ಸಹಕಾರ ಅತಿಮುಖ್ಯ.
ಟಿ ಡಾ.ದೇವರಾಜ್, ವ್ಯವಸ್ಥಾಪಕ, ಬಮೂಲ್
ಪ್ರಮಾದದಿಂದ ಕೈ ತಪ್ಪಿದ ಪರಿಹಾರ
ಕಾಲುಬಾಯಿ ಜ್ವರದಿಂದ ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ನಡುವೆ ಸಾವನ್ನಪ್ಪಿದ ರಾಸುಗಳಿಗಷ್ಟೇ ಪರಿಹಾರ ದೊರೆತಿದೆ. ಈ ಅವಧಿಗೆ ಮುನ್ನ ಮತ್ತು ನಂತರದಲ್ಲಿ ಸಾವನ್ನಪ್ಪಿದ ರಾಸುಗಳಿಗೆ ಪರಿಹಾರ ಕೈತಪ್ಪಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಪ್ರಮಾದ ಕಾರಣವೇ ಹೊರತು ತಮ್ಮ ಪಾತ್ರವಿಲ್ಲ ಎಂದು ಕೆಎಂಎಫ್ ಅಧಿಕಾರಿಗಳು ಬೊಟ್ಟು ಮಾಡಿದ್ದಾರೆ. ವಿಶೇಷವಾಗಿ ರಾಮನಗರ ಜಿಲ್ಲೆಯಲ್ಲಿ ಜೂನ್- ಜುಲೈನಲ್ಲೇ ರೋಗ ಹರಡಿತ್ತು. ಅದನ್ನು ಪತ್ತೆ ಹಚ್ಚಿ ವರದಿ ಮಾಡದೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಲೋಪವೆಸಗಿದ್ದಾರೆ. ನವೆಂಬರ್ ಮಾಹೆಯಲ್ಲೂ ಕೆಲ ರಾಸುಗಳು ಸಾವನ್ನಪ್ಪಿವೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿಯೇ ಇಲ್ಲವೆನ್ನುವುದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರ ಮಾತು.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

