ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಪ್ರಕ್ರಿಯೆ ಚುರುಕು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಜ.10
ಹೋರಾಟಗಳು ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಕೇಂದ್ರವನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದ ಪೋಡಿಯಂ ಬ್ಲಾಕ್ನಿಂದ ದೊಡ್ಡಬಳ್ಳಾಪುರ ನಗರಕ್ಕೆ ವರ್ಗಾಯಿಸುವ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದೆ ಎಂಬ ಮಾಹಿತಿ ಅಧಿಕಾರಿವಲಯದಿಂದ ಲಭ್ಯವಾಗಿದೆ.
ಸತತವಾಗಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟ ತೀವ್ರ ಸಂಚಲನೆ ಪಡೆದಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆಗಳನ್ನು ಒಳಗೊಂಡಿರುವ ಉಪವಿಭಾಗ ತಾನು ಒಳಗೊಳ್ಳುವ ಕ್ಷೇತ್ರ ವ್ಯಾಪ್ತಿಯಲ್ಲೇ ಇಲ್ಲ ಎಂಬುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇಡೀ ರಾಜ್ಯದಲ್ಲಿ ಈ ರೀತಿಯಾಗಿ ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಾಧಿಕಾರಿ ಕಚೇರಿಯೂ ಇದೊಂದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ದಿನನಿತ್ಯ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಸುಳಿಯಲ್ಲಿ ನರಳುತ್ತಾ ಉಪವಿಭಾಗಾಧಿಕಾರಿ ಕಚೇರಿಗೆ ಅಲೆಯಬೇಕಿದ್ದ ರೈತರು, ನೇಕಾರರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ವಲಯ ಕಚೇರಿ ಸ್ಥಳಾಂತರಕ್ಕೆ ಪದೇ ಪದೇ ಒತ್ತಾಯಿಸುತ್ತಲೇ ಬರುತ್ತಿದೆ. ಇದರಿಂದ ಈಗ ಎಚ್ಚೆತ್ತಂತಿರುವ ಜಿಲ್ಲಾಧಿಕಾರಿಗಳು, ಈ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆ. ಕಂದಾಯ ಇಲಾಖೆಯಲ್ಲಿ ಈ ಬಗ್ಗೆ ಈಗಾಗಲೇ ಸಭೆಗಳು ಮತ್ತು ಪತ್ರವ್ಯವಹಾರ ನಡೆದಿದೆ ಎನ್ನಲಾಗಿದೆ.
ಎಪಿಎಂಸಿಯಲ್ಲಿ ಜಾಗ: ಬಲ್ಲ ಮೂಲಗಳ ಪ್ರಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ವಿಶಾಲ ಅಂಗಳದಲ್ಲಿ ಉಪವಿಭಾಗಾಧಿಕಾರಿ ಕಚೇರಿ ತಾತ್ಕಾಲಿಕವಾಗಿ ಆರಂಭಿಸುವ ಪ್ರಸ್ತಾವನೆ ಇದೆ. ತಾತ್ಕಾಲಿಕವಾಗಿ ಈ ಜಾಗದಲ್ಲಿ ಕಚೇರಿ ಆರಂಭಿಸಿ ತದನಂತರ ಸುಸಜ್ಜಿತ ಜಾಗದಲ್ಲಿ ವ್ಯವಸ್ಥಿತ ಕಟ್ಟಡ ಇತ್ಯಾದಿಗಳನ್ನು ನಿರ್ಮಿಸಿ ಸ್ಥಳಾಂತರಿಸುವ ಕುರಿತು ಜಿಲ್ಲಾಧಿಕಾರಿ ಮಟ್ಟದಲ್ಲಿ ಮಾತಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಸರಿಸುಮಾರು 5 ದಶಕಗಳ ಇತಿಹಾಸವಿರುವ ರಾಜ್ಯ ಹಳೆಯ ಉಪವಿಬಾಗಗಳ ಪೈಕಿ ಒಂದಾದ ದೊಡ್ಡಬಳ್ಳಾಪುರ ಉಪವಿಭಾಗ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಕೆಲ ಪ್ರಭಾವಗಳ ಪರಿಣಾಮವಾಗಿ ಬೆಂಗಳೂರಿನಲ್ಲೇ ಉಳಿದುಕೊಂಡಿದೆ. ಕಳೆದ 20 ವರ್ಷಗಳ ಹಿಂದೆ ದೊಡ್ಡಬಳ್ಳಾಪುರಕ್ಕೆ ವರ್ಗಾವಣೆಯಾಗಿದ್ದರೂ ಕೆಲವೇ ದಿನ ಕಾರ್ಯನಿರ್ವಹಿಸಿ ಬೆಂಗಳೂರಿಗೆ ಮತ್ತೆ ಸ್ಥಳಾಂತರಗೊಂಡಿತ್ತು.
ಪತ್ರ ಚಳವಳಿ ಚುರುಕು: ಈ ಮಧ್ಯೆ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ಉಪವಿಭಾಗಾಧಿಕಾರಿ ಕಚೇರಿ ವರ್ಗಾಯಿಸಿ ಎಂಬ ಆಗ್ರಹದ ಪತ್ರ ಚಳವಳಿ 6ನೇ ದಿನವೂ ಮುಂದುವರೆದಿದೆ. ಈಗಾಗಲೇ ನಗರ ಮತ್ತು ತಾಲೂಕಿನ 15 ಸಾವಿರ ನಾಗರೀಕರಿಂದ ಪತ್ರಗಳನ್ನು ಬರೆಯಿಸಿ ಅಂಚೆ ಮೂಲಕ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳು, ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಮತ್ತು ಕಂದಾಯಮಂತ್ರಿಗಳಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ದಿನನಿತ್ಯ ಪತ್ರಗಳನ್ನು ಕಳುಹಿಸಲಾಗುತ್ತಿದೆ. ನಾಗರೀಕರಿಂದ ಪತ್ರಗಳು ಬರೆಸಿದ ನಂತರ ವಿದ್ಯಾರ್ಥಿಗಳಿಂದ ಪತ್ರ ಚಳವಳಿ ಮುಂದುವರೆಸಲಾಗುವುದು. ಬೇಡಿಕೆ ಈಡೇರುವವರೆಗೆ ಚಳವಳಿ ನಿಲ್ಲದು. ಜನರ ಒಕ್ಕೊರಲ ಬೇಡಿಕೆಗೆ ಸ್ಪಂದಿಸುವವರೆಗೆ ಹೋರಾಟ ನಿರಂತರ ಎಂಬುದು ಕರವೇ ಸ್ಪಷ್ಟನೆ.
ಗಣರಾಜ್ಯೋತ್ಸವ ನಿಮಿತ್ತ: ಈ ಮಧ್ಯೆ ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಯಾವುದೇ ಕಾರಣಕ್ಕೂ ಉಪವಿಭಾಗಾಧಿಕಾರಿಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಘಟನೆಗಳ ಹೋರಾಟದ ಹಿನ್ನಲೆಯಲ್ಲಿ ಪ್ರಕ್ರಿಯೆ ಚುರುಕುಗೊಂಡಿದೆ ಎನ್ನಲಾಗುತ್ತಿದೆ. ಕಳೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲೂ ಇದೇ ರೀತಿ ಚುರುಕುಗೊಂಡಿದ್ದ ಪ್ರಕ್ರಿಯೆ ನಂತರ ತಣ್ಣಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ದೊಡ್ಡಬಳ್ಳಾಪುರಕ್ಕೆ ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಕುರಿತು ಪ್ರಕ್ರಿಯೆ ನಡೆಯುತ್ತಿದೆ. ಕಚೇರಿ ಆರಂಭಿಸಲು ಸೂಕ್ತ ಸ್ಥಳ ಪರಿಶೀಲಿಸಿ ಸೂಚಿಸವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಅದರಂತೆ ಹಲವು ಕಟ್ಟಡಗಳನ್ನು ಪರಿಶೀಲಿಸಲಾಗಿದೆ. ಎಪಿಎಂಸಿ ಆವರಣದಲ್ಲಿ ಕಚೇರಿ ಆರಂಭಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
- ಸಿದ್ಧಲಿಂಗಯ್ಯ, ತಹಸೀಲ್ದಾರ್ ದೊಡ್ಡಬಳ್ಳಾಪುರ
-ಕೆ.ಆರ್.ರವಿಕಿರಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

