ಬೆಂಗಳೂರು ಗ್ರಾಮಾಂತರ

'ಹದ್ದು' ಮೀರಿದ ಮರಳು ದಂಧೆಕೋರರು

Published On :

ರಾಮನಗರ: ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಮದ್ದೂರು ತಹಸೀಲ್ದಾರ್ ನೇತೃತ್ವದ ತಂಡದಿಂದ ಮುಂದುವರೆದ ಕಾರ್ಯಾಚರಣೆಗೆ ಸರಹದ್ದಿನ ವಿಷಯವಾಗಿ ಕ್ಯಾತೆ ತೆಗೆದ ದಂಧೆಕೋರರು ಅಡ್ಡಿಪಡಿಸಿದ್ದಾರೆ. ಅದಕ್ಕೆ ಕುಮ್ಮಕ್ಕು ನೀಡಿದ ಕಾಣದ ಕೈಗಳು ಯಾವವು?
ಈ ಪ್ರಶ್ನೆಯು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮದ್ದೂರು ತಾಲೂಕು ಆಡಳಿತ ಮತ್ತು ಇಡೀ ಕಾರ್ಯಾಚರಣೆಯನ್ನು ಸನಿಹದಿಂದಲೇ ವೀಕ್ಷಿಸಿ, ರಂಪ-ರಾದ್ಧಾಂತಕ್ಕೆ ಸಾಕ್ಷಿಯಾದ ಸಾರ್ವಜನಿಕರನ್ನು ಕಾಡುತ್ತಿದೆ.
ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಶಿಂಷಾ ನದಿ ಪಾತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಉಭಯ ಜಿಲ್ಲಾಡಳಿತದಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಮರಳು ಮಾಫಿಯಾ ಪರವಾದ ಅಧಿಕಾರಿಗಳ ಬಣ್ಣ ಬಯಲಾಗಿದೆ.
ಸಹಕರಿಸಲೇ ಇಲ್ಲ: ಜಂಟಿ ಕಾರ್ಯಾಚರಣೆ ಅದಾದರೂ ಶ್ರಮವೆಲ್ಲ ಮದ್ದೂರು ತಾಲೂಕಿನ ತಂಡದ್ದೇ. ಚನ್ನಪಟ್ಟಣ ಅಧಿಕಾರಿಗಳು ಕೈಕಟ್ಟಿ ನಿಂತಿದ್ದರು. ವಶಪಡಿಸಿಕೊಂಡ ಸಾಮಗ್ರಿಗಳಲ್ಲಿ ಪಾಲು ಕೇಳಿ ಹೊರಟೇಬಿಟ್ಟರು. ಚನ್ನಪಟ್ಟಣ ತಹಸೀಲ್ದಾರ್ ಶಿವರುದ್ರಯ್ಯ ಆಗಮನ ವಿಳಂಬವಾದರೂ ಸ್ಥಳದಲ್ಲಿ ಹೆಚ್ಚು ಹೊತ್ತು ಇರಲಿಲ್ಲ.
ಚನ್ನಪಟ್ಟಣ ಅಧಿಕಾರಿಗಳೂ ತಹಸೀಲ್ದಾರ್ ಅವರನ್ನೇ ಹಿಂಬಾಲಿಸಿದರು. ಆ ವೇಳೆ ಚನ್ನಪಟ್ಟಣ ಸರಹದ್ದಿನಲ್ಲೇ 5 ಕೊಪ್ಪರಿಕೆಗಳನ್ನು ನೀರಿನಲ್ಲಿ ಮುಳುಗಿಸಿರುವುದು ಕಂಡರೂ ಹೊರ ತೆಗೆಯುವ ಪ್ರಯತ್ನಕ್ಕೆ ಮುಂದಾಗಲೇ ಇಲ್ಲ. ಹೀಗೆ ಯಾವ ಹಂತದಲ್ಲೂ ಈ ತಂಡ ಕಾರ್ಯಾಚರಣೆಗೆ ಸಹಕರಿಸಲಿಲ್ಲ.
ಮುನ್ನುಗ್ಗಿದ ತಂಡ: ಜಂಟಿ ಕಾರ್ಯಾಚರಣೆಯಲ್ಲಿ ಎಲ್ಲ 15 ಕೊಪ್ಪರಿಕೆಗಳನ್ನು ಹೊರ ತೆಗೆದಿದ್ದೂ ಮದ್ದೂರಿನ ತಂಡವೇ. ಚನ್ನಪಟ್ಟಣದ ಅಧಿಕಾರಿಗಳ ತಂಡ ನಿರ್ಗಮಿಸಿದ ಬಳಿಕವೂ ಮದ್ದೂರು ತಾಲೂಕು ಆಡಳಿತ ತನ್ನ ಕಾರ್ಯಾಚರಣೆ ಮುಂದುವರೆಸಿತು. ಆಗ ಅವರಿಗೆ ಮರಳು ದಂಧೆಕೋರರು ಅಡ್ಡಿಪಡಿಸಿದರು.
ನದಿಯ ಅರ್ಧ ಭಾಗವಷ್ಟೇ ಮದ್ದೂರು ತಾಲೂಕು. ಉಳಿದರ್ಧ ಚನ್ನಪಟ್ಟಣಕ್ಕೆ ಸೇರುತ್ತದೆ. ಹೀಗಾಗಿ ನೀವು ಸರಹದ್ದು ದಾಟಿ ಬರಕೂಡದು ಎಂದು ಸ್ವತಃ ಅಕ್ರಮದಲ್ಲಿ ತೊಡಗಿರುವ ಮರಳು ಮಾಫಿಯಾ ಗುಂಪು ಮದ್ದೂರು ತಹಸೀಲ್ದಾರ್ ಮತ್ತು ತಂಡಕ್ಕೆ ತಪಾರಕಿ ಹಾಕಿ ಉಪದೇಶ ನೀಡಿತು.
ಕರೆ ಸ್ವೀಕರಿಸಲಿಲ್ಲ: ಚನ್ನಪಟ್ಟಣದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರೆ ಸರಹದ್ದಿನ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ. ಆದರೆ, ಅವರು ಜಾಗ ಖಾಲಿ ಮಾಡಿದ್ದರಿಂದ ಮದ್ದೂರು ತಹಸೀಲ್ದಾರ್ ಮತ್ತು ತಂಡ ಕಾನೂನು ತೊಡಕಿನ ಕಾರಣಕ್ಕೆ ಹಿಂದು ಮುಂದು ನೋಡುವಂತಾಯಿತು.
ಈ ವೇಳೆ ಮದ್ದೂರು ತಹಸೀಲ್ದಾರ್ ಅವರು ಚನ್ನಪಟ್ಟಣದ ಅಧಿಕಾರಿಗಳ ತಂಡಕ್ಕೆ ಸಾಕಷ್ಟು ಬಾರಿ ಕರೆ ಮಾಡಿದರಾದರೂ ಪ್ರತಿಕ್ರಿಯೆ ಇರಲಿಲ್ಲ. ಅದೇ ವೇಳೆಗೆ ಮರಳು ಮಾಫಿಯಾದವರ ಉಪಟಳವೂ ಹೆಚ್ಚಾಗಿತ್ತು. ಕಡೆಗೆ, ಮದ್ದೂರು ತಂಡ ಒಲ್ಲದ ಮನಸ್ಸಿನಿಂದಲೇ ಕಾರ್ಯಾಚರಣೆ ಮೊಟಕುಗೊಳಿಸಿತು.
ಆರೋಪಗಳ ಸುರಿಮಳೆ: ಜಂಟಿ ಕಾರ್ಯಾಚರಣೆಯಲ್ಲಿ ಮದ್ದೂರು ತಾಲೂಕಿನ ಅಧಿಕಾರಿಗಳಿಗೆ ಸಹಕಾರ ನೀಡದೆ, ಮರಳು ಮಾಫಿಯಾಕ್ಕೆ ಅನುಕೂಲವಾಗುವಂತೆ ನಡೆದುಕೊಂಡ ಚನ್ನಪಟ್ಟಣ ತಾಲೂಕಿನ ಅಧಿಕಾರಿಗಳ ವರ್ತನೆ ಬಗ್ಗೆ ನೆರೆದಿದ್ದ ಸಾರ್ವಜನಿಕರಿಂದ ಟೀಕಾರೋಪ ವ್ಯಕ್ತವಾಯಿತು.
ರಾಮನಗರ ಜಿಲ್ಲೆಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಇಲ್ಲಿನ ಅಧಿಕಾರಿಗಳು ಹರಾಜಾಗಿದ್ದಾರೆ. ಇಂತಹವರಿಂದ ಇನ್ನೇನು ತಾನೆ ನಿರೀಕ್ಷಿಸಬಹುದು ಎಂದು ಹತಾಶೆಯ ಮಾತುಗಳೊಂದಿಗೆ ಜನರೂ ಅಲ್ಲಿಂದ ನಿರ್ಗಮಿಸಿದರು.
ದಟ್ಟವಾದ ಅನುಮಾನ: ಕಾರ್ಯಾಚರಣೆಯುದ್ದಕ್ಕೂ ಚನ್ನಪಟ್ಟಣ ತಾಲೂಕಿನ ಅಧಿಕಾರಿಗಳ ವರ್ತನೆ ಮತ್ತು ಧೋರಣೆ, ತಹಸೀಲ್ದಾರ್ ವಿಳಂಬ ಆಗಮನ, ತುರ್ತು ನಿರ್ಗಮನ, ಕರೆ ಸ್ವೀಕರಿಸದ ಅಂಶಗಳು ಒಂದಿಷ್ಟು ಅನುಮಾನಗಳನ್ನು ಸಹಜವಾಗಿಯೇ ಮೂಡಿಸುತ್ತವೆ.  
ಒಟ್ಟಾರೆ, ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಸರ್ಕಾರಿ ಅಧಿಕಾರಿಗಳ ಬೆಂಗಾವಲಿನಲ್ಲೇ ನಡೆಯುತ್ತಿರುವುದು ಜಗಜ್ಜಾಹೀರ. ಇದೀಗ ಜಂಟಿ ಕಾರ್ಯಾಚರಣೆ ಹೆಸರಿನಲ್ಲಿ ದಂಧೆಗೆ ಕಡಿವಾಣ ಬೀಳುವ ಬದಲು ಉಭಯ ಜಿಲ್ಲಾಡಳಿತದ ನಡುವೆ ಸಂಘರ್ಷವಂತೂ ತಲೆ ಎತ್ತಿದೆ.  
ಬೆಂದ ಮನೆಯಲ್ಲಿ ಗಳ ಇರಿದರು ಎನ್ನುವಂತೆ ಅಧಿಕಾರಿಗಳ ಈ ಕಚ್ಚಾಟವನ್ನು ಮರಳು ದಂಧೆಕೋರರು ಲಾಭವಾಗಿಸಿಕೊಂಡು, ಪ್ರಾಕೃತಿಕ ಸಂಪತ್ತಿನ ಲೂಟಿಗೆ ಇಳಿದಿದ್ದಾರೆ. ಈಗಾಗಲೇ ಅಂತರ್ಜಲ ಕುಸಿತದಿಂದ ಜಲಕ್ಷಾಮಕ್ಕೆ ಗುರಿಯಾದ ಈ ಜಿಲ್ಲೆ ಭವಿಷ್ಯ ಮಸುಕಾಗಿದೆ.
ಕಠಿಣ ಕ್ರಮ ಜರುಗಿಸುವೆ
ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಕೊನೆಗಾಣಿಸುವುದು ಸವಾಲಿನ ಕೆಲಸವಾಗಿದೆ. ಈ ಸಂಬಂಧ ಶೀಘ್ರ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು, ಖುದ್ದು ಪರಿಶೀಲಿಸಲಾಗುವುದು. ಮರಳುಗಾರಿಕೆಗೆ ಸಹರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  
- ಡಾ.ಡಿ.ಎಸ್.ವಿಶ್ವನಾಥ್, ಜಿಲ್ಲಾಧಿಕಾರಿ, ರಾಮನಗರ.



-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.