ಬೆಂಗಳೂರು ಗ್ರಾಮಾಂತರ

ಸಿಬಿಐ ತನಿಖೆ: ಚಿದಾನಂದಗೆ ಮತ್ತೊಂದು ಉರುಳು

Published On :

ರಾಮನಗರ: ರಾಮನಗರ-ಚನ್ನಪಟ್ಟಣ ನಗರಾಭಿವದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳು, ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಾದ ಅವ್ಯವಹಾರವನ್ನೂ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಾಧಿಕಾರದ ಅಮಾನತುಗೊಂಡ ಆಯುಕ್ತ ಚಿದಾನಂದ ಕೊರಳಿಗೆ ಮತ್ತೊಂದು ಉರುಳು ಬಿಗಿದುಕೊಂಡಿದೆ.
ಪ್ರಾಧಿಕಾರಕ್ಕೆ ಸೇರಿದ ರು.19.50 ಕೋಟಿ ಬೃಹತ್ ಮೊತ್ತವನ್ನು ಲಪಟಾಯಿಸಲು ವಂಚಕರ ಜಾಲಕ್ಕೆ ನೆರವಾಗಿ ಸಿಕ್ಕಿಬಿದ್ದಿರುವ ಚಿದಾನಂದ ಉಳಿದ ಆರೋಪಿಗಳೊಟ್ಟಿಗೆ ಈಗಾಗಲೇ ಜೈಲು ವಾಸ ಅನುಭವಿಸುತ್ತಿದ್ದಾರೆ. ಹಣ ವಂಚನೆ ಪ್ರಕರಣವನ್ನು ಸರ್ಕಾರದ ಗೃಹ ಇಲಾಖೆ ಈ ಮೊದಲೇ ಸಿಬಿಐ ತನಿಖೆಗೆ ವಹಿಸಿದೆ.
ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿ ಕಡತ ಪರಿಶೀಲಿಸಿದ್ದರು. ಈ ವೇಳೆ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ನಿರ್ಮಿಸಲಾದ ಜೀಗೇನಹಳ್ಳಿ, ಹೆಲ್ತ್‌ಸಿಟಿ ಮತ್ತು ಸುಣ್ಣಘಟ್ಟ ಬಡಾವಣೆಗಳ ಕಾಮಗಾರಿಗಳನ್ನೂ ಪರಿಶೀಲಿಸಿದ್ದರು.
ಪ್ರಾಧಿಕಾರಕ್ಕೆ ಪತ್ರ: ಬಹುಕೋಟಿ ವಂಚನೆ ಪ್ರಕರಣವಲ್ಲದೆ ಹೊಸ ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲೂ ಹಣ ಲೂಟಿ ಕುರಿತು ಸಿಬಿಐ ತನಿಖೆ ನಡೆಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಂತೆ ನಗರಾಭಿವೃದ್ಧಿ ಇಲಾಖೆಯು ಜಿಲ್ಲಾಡಳಿತ ಹಾಗೂ ರಾ-ಚ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು.
ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಆಯುಕ್ತರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸಂಪುಟ ಸಭೆಯಲ್ಲಿ ಸಿಬಿಐ ತನಿಖೆಗೆ ನಿರ್ಣಯ ಕೈಗೊಂಡು, ಎರಡನೇ ಪತ್ರವನ್ನು ರವಾನಿಸಲಾಗಿದೆ. ಈ ಹಗರಣದಲ್ಲಿ ಹಿಂದಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕೆಲ ಅಧಿಕಾರಿಗಳೂ ಸಿಕ್ಕಿ ಬೀಳುವ ಸಾಧ್ಯತೆ ಇದೆ.
ದೂರು ದಾಖಲು: ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸದಾಗಿ ನಿರ್ಮಿಸಿರುವ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಕುರಿತು ಪ್ರಾಧಿಕಾರದ ನೂತನ ಆಯುಕ್ತರು ಈಗಾಗಲೇ ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸುವುದು ಪೊಲೀಸರ ನಿರ್ಧಾರವಾಗಿದೆ.
ಈ ದೂರಿನಲ್ಲೂ ಚಿದಾನಂದ ಅವರನ್ನೇ ಮೊದಲ ಆರೋಪಿಯನ್ನಾಗಿಸಲಾಗಿದೆ. ಇದರಲ್ಲಿ ಗುತ್ತಿಗೆದಾರರು ಸಹಿತ ಇತರರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹಣ ಲೂಟಿ ಪ್ರಕರಣದಲ್ಲಿ ಚಿದಾನಂದ, ಕೆಬ್ಬಳ್ಳಿ ಆನಂದ, ನಾಗಲಿಂಗಸ್ವಾಮಿ, ಶೇಖರ್ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಈಗಿನ ಪ್ರಕರಣದಲ್ಲಿ ಮತ್ತಷ್ಟು ಮಂದಿ ಕಟಕಟೆ ಏರುವ ಸಾಧ್ಯತೆ ಸನ್ನಿಹಿತವಾಗಿದೆ.
ಸಿಬಿಐ ಆಗಮನವಾಗಿಲ್ಲ: ಬಹುಕೋಟಿ ಹಗರಣದ ತನಿಖೆ ಕೋರಿ ರಾಜ್ಯ ಸರ್ಕಾರದ ಗೃಹ ಇಲಾಖೆಯಿಂದ ಪತ್ರ ರವಾನೆಗೊಂಡು ಎರಡು ತಿಂಗಳು ಕಳೆದಿದ್ದರೂ ಸಿಬಿಐ ಅಧಿಕಾರಿಗಳ ಆಗಮನವಾಗಿಲ್ಲ. ಹಿಂದಿನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಪೊಲೀಸ್ ತನಿಖಾ ತಂಡವು ಕಡತ ಹಸ್ತಾಂತರಿಸಲು ಚಾತಕಪಕ್ಷಿಯಂತೆ ಕಾಯುತ್ತಿದೆ.
ಮಂಡ್ಯದ ಮುಡಾಕ್ಕೆ ರು.5 ಕೋಟಿ ವಂಚಿಸಿದ ಪ್ರಕರಣದಲ್ಲಿ ವಂಚಕರ ಜಾಲದ ಮಾಸ್ಟರ್ ಮೈಂಡ್ ಕಬ್ಬಳ್ಳಿ ಆನಂದ, ಸಹಚರ ನಾಗಲಿಂಗಸ್ವಾಮಿ ಜಾಮೀನು ಪಡೆದಿದ್ದಾರೆ. ರಾ-ಚ ಪ್ರಾಧಿಕಾರದ ಪ್ರಕರಣದಲ್ಲಿನ್ನೂ ಜಾಮೀನು ಸಿಗದೆ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಮುಡಾದ ಅಮಾನತುಗೊಂಡ ಆಯುಕ್ತ ಡಾ.ಶಿವರಾಮ್ ಅವರಿಗೂ ಅಲ್ಲಿ ಜಾಮೀನು ದೊರೆತಿದೆ.
ಎಫ್‌ಐಆರ್ ಆಧರಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಳ್ಳಲು ನಡೆಸಿದ ಹೋರಾಟದಲ್ಲಿ ಚಿದಾನಂದ ಸಹಿತ ಆರೋಪಿಗಳು ವಿಫಲರಾಗಿದ್ದಾರೆ. ಇದೀಗ ಆರೋಪಿಗಳು ದೋಷಾರೋಪಣಾ ಪಟ್ಟಿಯನ್ನು ಮುಂದಿಟ್ಟುಕೊಂಡು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ವೇಳೆ ಸಿಬಿಐ ತನಿಖೆ ನಿರ್ಧಾರ ಅವರಲ್ಲಿ ತಳಮಳ ಮೂಡಿಸಿದೆ.
ಹೆಚ್ಚುವರಿ ದೂರಿನಲ್ಲಿ ಏನಿದೆ ?
ರಾ-ಚ ಪ್ರಾಧಿಕಾರದಿಂದ ಹೊಸ ಬಡಾವಣೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೆಚ್ಚು ಬೆಲೆ ಸಂದಾಯ, ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲಲ್ಮಂಜೂರು, ಬೇಕಾಬಿಟ್ಟಿಯಾಗಿ ನಿವೇಶನ ಹಂಚಿಕೆ, ನೀಲನಕ್ಷೆ, ಅಂದಾಜು ಪಟ್ಟಿ ಮತ್ತು ಯೋಜನಾ ವರದಿ ತಯಾರಿಸಿದ ಸಂಸ್ಥೆಗಳಿಗೆ ಅಧಿಕ ಮೊತ್ತ ಪಾವತಿ ಸೇರಿದಂತೆ ನಾನಾ ಅಕ್ರಮಗಳ ಬಗ್ಗೆ ಹೆಚ್ಚುವರಿ ದೂರಿನಲ್ಲಿ ಪ್ರಸ್ತಾಪವಾಗಿದೆ.
ನೇಮಕಕ್ಕೆ ಸರ್ಕಾರ ಹಿಂದೇಟು
ಹಗರಣಗಳ ಆಗರವಾಗಿರುವ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ, ಆಡಳಿತ ಮಂಡಳಿ ಸದಸ್ಯರನ್ನು ನೇಮಕ ಮಾಡುವುದರಿಂದ ಸಾಕ್ಷ್ಯಾಧಾರಗಳು ನಾಶವಾಗುವ ಸಾಧ್ಯತೆ ಇದೆ. ಹೀಗಾಗಿ ನೇಮಕಾತಿಯನ್ನೇ ಕೈಬಿಡುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.