ಅಂಗನವಾಡಿ ಕಾರ್ಯಕರ್ತೆಯರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಶ್ರಮ
ಕ.ಪ್ರ.ವಾರ್ತೆ , ರಾಮನಗರ , ಜ.12
ಅಂಗನವಾಡಿ ಕಾರ್ಯಕರ್ತೆಯರು ಹಡೆದವರಿಗಿಂತ ಹೆಚ್ಚಿನ ರೀತಿಯಲ್ಲಿ ಮಕ್ಕಳ ಪಾಲನೆ, ಪೋಷಣೆ ಮಾಡುವ ಮೂಲಕ ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಒಂದು ದಿನದ ಆಯುಷ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಮಹಿಳೆ ತನ್ನ ಮಕ್ಕಳಿಗೆ ಮಾತ್ರ ತಾಯಿಯಾದರೆ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರದ ಎಲ್ಲಾ ಮಕ್ಕಳಿಗೆ ತಾಯಿಯಾಗಿದ್ದಾರೆ ಎಂದರು.
ಮಹಿಳೆಯರು ಕೇವಲ ಒಂದೆರಡು ಮಕ್ಕಳನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕು. ಎಚ್ಚರವಿರುವ 6 ತಾಸಿಗೂ ಹೆಚ್ಚು ಕಾಲ ಅಂಗನವಾಡಿ ಕೇಂದ್ರಗಳಲ್ಲಿರುವ ಪುಟ್ಟ ಕಂದಮ್ಮಗಳಿಗೆ ತಾಯಿ ಪ್ರೀತಿ ನೀಡುವ ಜತೆಗೆ ಹಾಡಿನೊಂದಿಗೆ ಅಕ್ಷರವನ್ನೂ ಕಲಿಸುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ವೈದ್ಯ ವೃತ್ತಿ ಯಾವುದೋ ಹೈಟೆಕ್ ಆಸ್ಪತ್ರೆಯಲ್ಲಿ ಜನಿಸಿದ್ದಲ್ಲ. ವೈದ್ಯಕೀಯ ಶಾಸ್ತ್ರ ಮೊದಲು ಕಾಡಿನಲ್ಲಿ ಹುಟ್ಟಿ ಶತಶತಮಾನಗಳಿಂದಲೂ ಬೆಳೆದು ಬಂದಿದೆ. ಋಷಿಮುನಿಗಳು ಪರಿಸರದಲ್ಲಿರುವ ರೋಗನಿರೋಧಕ ಗುಣಗಳನ್ನು ಗುರುತಿಸಿದ್ದಾರೆ. ಯಾವ ಕಾಯಿಲೆಗಳಿಗೆ ಅವನ್ನು ಬಳಸಿಕೊಳ್ಳಬೇಕೆಂದು ಸತತ ಅಧ್ಯಯನದ ಮೂಲಕ ಪತ್ತೆ ಹಚ್ಚಿ, ಚಿಕಿತ್ಸೆ ನೀಡಿಕೊಂಡು ಬಂದಿದ್ದಾರೆ ಎಂದರು.
ನಾಟಿ ಔಷಧ ಪದ್ಧತಿಯು ಇಂದಿಗೂ ಕೂಡ ನಡೆದುಕೊಂಡು ಬಂದಿದೆ. ನಾಟಿ ವೈದ್ಯರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಚಿಕಿತ್ಸೆ ನೀಡುವ ಮೂಲಕ ರೋಗ ವಾಸಿ ಮಾಡಿಕೊಂಡು ಬಂದಿದ್ದಾರೆ. ಹಾವು ಕಡಿತಕ್ಕೆ ಎಂಬಿಬಿಎಸ್ ವೈದ್ಯರು ನೀಡುವ ಔಷಧಿಗಿಂತ ನಾಟಿ ವೈದ್ಯರು ನೀಡುವ ಔಷಧಿಯೇ ಮೇಲು ಎಂದು ಹೇಳಿದರು.
ರೋಗಿಯ ಕಾಯಿಲೆಯನ್ನು ಪತ್ತೆ ಹಚ್ಚಿ ಸುಶ್ರೂಷೆ ಮಾಡುವವರೆಲ್ಲರೂ ವೈದ್ಯರೆ. ಎಂಬಿಬಿಎಸ್ ಓದಿದವರು ಮಾತ್ರ ವೈದ್ಯರು, ಓದದವರು ವೈದ್ಯರು ಅಲ್ಲವೇ ಅಲ್ಲ ಎಂಬ ವಾದ ತಪ್ಪು. ನಾನೇ ಮೇಲು ಎನ್ನುವುದನ್ನು ಬಿಟ್ಟು ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು ಎಂದು ವಿಶ್ವನಾಥ್ ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೋಭಾರಾಣಿ, ಡಾ.ರಾಜು, ಡಾ. ಶ್ವೇತಾ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

