ಕೇಂದ್ರದ ಬೆಲೆ ಏರಿಕೆ ವಿರುದ್ಧ ತೀವ್ರ ಆಕ್ರೋಶ
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಜ.13
ಕೇಂದ್ರದ ಯುಪಿಎ ಸರ್ಕಾರದ ಜನವಿರೋಧಿ ನೀತಿಗಳಿಂದ ದೇಶದಲ್ಲಿ ಜನ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ವರ್ಷದಲ್ಲಿ 12 ಬಾರಿ ಏರಿಕೆ ಮಾಡುವ ಮೂಲಕ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ದೊಡ್ಡಬಳ್ಳಾಪುರ ತಾಲೂಕು-ನಗರ ಬಿಜೆಪಿ ನೇತೃತ್ವದಲ್ಲಿ ಸೋಮವಾರ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಸೋನಿಯಾ ಗಾಂಧಿ ನಿಯಂತ್ರಿತ ಪ್ರಧಾನಿ ಯಾವುದೇ ತೀರ್ಮಾನಗಳನ್ನೂ ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳುವ ಹಾಗಿಲ್ಲ. ಈ ರಿಮೋಟ್ ಕಂಟ್ರೋಲ್ ಸರ್ಕಾರದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಆರ್ಥಿಕ ತಜ್ಞರೇ ತುಂಬಿರುವ ಕೇಂದ್ರ ಸಚಿವ ಸಂಪುಟದಲ್ಲಿ ಯಾರೊಬ್ಬರಿಗೂ ಬೆಲೆ ಏರಿಕೆ ನಿಯಂತ್ರಣ ಮಾಡುವ ಸಾಮರ್ಥ ಇಲ್ಲದಾಗಿರುವುದು ದುರಂತ. ಬಹುರಾಷ್ಟ್ರೀಯ ತೈಲ ಕಂಪನಿಗಳ ಕೈಗೊಂಬೆಯಾಗಿರುವ ಸಚಿವರು ಪದೇ ಪದೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿ ಮಧ್ಯಮವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಇತ್ತೀಚೆಗೆ ಆಟೋ ಗ್ಯಾಸ್ ದರ ಏರಿಕೆ ಮಾಡಿರುವ ಪರಿಣಾಮ ದೇಶದ ಸರಕು ಸಾಗಾಣಿಕೆ, ಪ್ರಯಾಣ ಇತ್ಯಾದಿ ವೆಚ್ಚಗಳು ದುಬಾರಿಯಾಗಿವೆ. ಇದು ಸಾಮಾನ್ಯ ಜನರ ಮೇಲೆ ಹೊರೆಯಾಗುತ್ತಿದೆ. ನಮ್ಮದು ಜನಪರ ಸರ್ಕಾರ, ಜನಸ್ನೇಹಿ ಯೋಜನೆಗಳಿಗೆ ಆದ್ಯತೆ ಎಂದೆಲ್ಲಾ ಪೊಳ್ಳು ಮಾತುಗಳ ಮೂಲಕ ಜನರನ್ನು ನಂಬಿಸುವ ದುಸ್ಸಾಹಸ ಇನ್ನು ಮುಂದೆ ನಡೆಯುವುದಿಲ್ಲ ಎಂದರು.
ರಸ್ತೆಯಲ್ಲೇ ಅಡುಗೆ: ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟ ಮೆರವಣಿಗೆ ತಾಲೂಕು ಕಚೇರಿ ವರೆಗೆ ನಡೆಯಿತು. ತಾಲೂಕು ಕಚೇರಿ ವೃತ್ತದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ರಸ್ತೆಯಲ್ಲೇ ಇಟ್ಟಿಗೆ ಒಲೆ ಇಟ್ಟು ಸೌದೆಗಳಿಂದ ಒಲೆ ಹೊತ್ತಿಸಿ ಅಡುಗೆ ಮಾಡುವ ಮೂಲಕ ಕೇಂದ್ರದ ನೀತಿಗಳನ್ನು ಮಾರ್ಮಿಕವಾಗಿ ಖಂಡಿಸಿದರು. ಕೊನೆಗೆ ಕಾಂಗ್ರೆಸ್ ಈ ದೇಶವನ್ನು ಅರ್ಧ ಶತಮಾನ ಹಿಂದಕ್ಕೆ ಕೊಂಡೊಯ್ಯುವ ಸಾಧನೆ ಮಾಡಿದೆ ಎಂದು ಟೀಕಿಸಿದರು.
ಎತ್ತಿನ ಬಂಡಿ, ಖಾಲಿ ಸಿಲಿಂಡರ್: ಇನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಎತ್ತಿನ ಬಂಡಿಯನ್ನೇರಿ ಬಿಜೆಪಿ ನಾಯಕರು ಪ್ರದರ್ಶನ ನಡೆಸಿದರು. ತಳ್ಳುವ ಗಾಡಿಯಲ್ಲಿ ಖಾಲಿ ಸಿಲಿಂಡರ್ ಇಟ್ಟು ಕೇಂದ್ರ ಸರ್ಕಾರ ಜನತೆಗೆ ಕೊಟ್ಟ ದೊಡ್ಡಕೊಡುಗೆ ಖಾಲಿ ಸಿಲಿಂಡರ್ ಎಂದು ಮಾರ್ಮಿಕವಾಗಿ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಂ. ಹನುಮಂತರಾಯಪ್ಪ, ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಜಿ.ಪಂ ಉಪಾಧ್ಯಕ್ಷ ಎನ್. ಹನುಮಂತಗೌಡ, ತಾ.ಪಂ ಮಾಜಿ ಅಧ್ಯಕ್ಷ ಡಿ.ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಪುಷ್ಫಾಶಿವಶಂಕರ್, ತಾಲೂಕು ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ನಗರಾಧ್ಯಕ್ಷ ಎಚ್.ಎಸ್.ಶಿವಶಂಕರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ಮುಖಂಡರಾದ ನಾಗರಾಜ್, ಗೋಪಿ, ರಾಜಲಕ್ಷ್ಮಿ, ಉಮಾಮಹೇಶ್ವರಿ, ಮಂಜುನಾಥ್, ಸತ್ಯನಾರಾಯಣ್, ಮಹದೇವ್, ರಾಮಕಿಟ್ಟಿ ಮತ್ತಿತರರು ಸೇರಿದಂತೆ ವಿವಿಧ ಮೋರ್ಚಾಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

