ಸಂಕಷ್ಟದ ನಡುವೆಯೂ ಸಂಕ್ರಾಂತಿ ಹಬ್ಬ
ಕ.ಪ್ರ. ವಾರ್ತೆ , ರಾಮನಗರ , ಜ.14
ಸತತ ಮೂರನೇ ವರ್ಷವೂ ಈ ಜಿಲ್ಲೆಯನ್ನು ಭೀಕರ ಬರ ಆವರಿಸಿದೆ. ಹಿಂಗಾರಿನಲ್ಲಿ ಸುರಿದ ಸಾಧಾರಣ ಮಳೆಯಿಂದ ಅಷ್ಟಿಷ್ಟು ರಾಗಿ ಫಸಲು ರೈತನ ಕೈಗೆ ಸಿಕ್ಕಿದೆ. ಮಳೆ ಕೊರತೆ ಮತ್ತೆ ಕಾಡಲಾರಂಭಿಸಿದೆ. ಇನ್ನೊಂದೆಡೆ ಕಾಲುಬಾಯಿ ಜ್ವರಬಾಧೆಯಿಂದ ಹೈನೋದ್ಯಮಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಇಷ್ಟೆಲ್ಲ ಬವಣೆಗಳ ನಡುವೆ ಸುಗ್ಗಿಯ ಹಿಗ್ಗಿನ ಸಂಕ್ರಾಂತಿ ಹಬ್ಬ ಅಷ್ಟೇನೂ ಕಳೆಕಟ್ಟದಾಗಿದೆ.
ಒಂದೂವರೆ ದಶಕದ ಹಿಂದೆ ಅಪ್ಪಟ ಸಾಂಪ್ರದಾಯಿಕ ಕೃಷಿ ಪ್ರದೇಶವಾಗಿದ್ದ ಈ ಭಾಗದಲ್ಲಿ ಸಂಕ್ರಾಂತಿಯ ಸಡಗರಕ್ಕೆ ಪಾರವೇ ಇರಲಿಲ್ಲ. ವರ್ಷವಿಡೀ ದುಡಿದು ದಣಿದ ಜೋಡೆತ್ತು ಸಹಿತ ರಾಸುಗಳಿಗೆ ಮೈ ತೊಳೆದು, ಸಿಂಗರಿಸಿ ಪೂಜೆ ಸಲ್ಲಿಸುವುದರೊಂದಿಗೆ ಕಿಚ್ಚು ಹಾಯಿಸುವುದು ಸಂಕ್ರಾಂತಿ ಹಬ್ಬದ ವಿಶೇಷವಾಗಿತ್ತು.
ಇಲ್ಲೀಗ ರೈತಾಪಿ ಸಮುದಾಯ ಕೃಷಿಗೆ ಬೆನ್ನು ತೋರಿ ವರ್ಷಗಳೇ ಉರುಳಿವೆ. ಪ್ರತಿ ಊರಲ್ಲೂ ನೂರಾರು ಸಂಖ್ಯೆಯಲ್ಲಿರುತ್ತಿದ್ದ ಜೋಡಿ ದನಗಳ ಸಂಖ್ಯೆ ಈಗ ಬೆರಳೆಣಿಕೆಯಷ್ಟು ಸಂಖ್ಯೆಗೆ ಕುಸಿದಿದೆ. ಹೈನೋದ್ಯಮ ಅವಲಂಬಿತ ರಾಸುಗಳು, ಮೇಕೆ, ಕುರಿಗಳು ಒಂದಿಷ್ಟಿವೆ. ಇವುಗಳಿಗಷ್ಟೇ ಕಿಚ್ಚು ಹಾಯಿಸಿ ಸಂಪ್ರದಾಯ ಮುಂದುವರೆಸಲಾಗುತ್ತಿದೆ.
ಖರೀದಿ ಭರಾಟೆ ಜೋರು: ರಾಗಿ ಹೊರತಾದ ಬೆಳೆಗಳು ರೈತರನ ಕೈ ಹಿಡಿದಿಲ್ಲ. ಮಾವಿನದ್ದೂ ಮಿಶ್ರಫಲವಾಗಿದೆ. ಹೀಗೆ ನಾನಾ ಸಮಸ್ಯೆಗಳು ಮತ್ತು ಸಂಕಷ್ಟದ ನಡುವೆಯೂ ಸಂಕ್ರಾಂತಿ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿಯೇ ಸಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಖರೀದಿದಾರರ ಹುಮ್ಮಸ್ಸೇನೂ ಕಡಿಮೆಯಾಗಿಲ್ಲ.
ಎಳ್ಳು-ಬೆಲ್ಲ ಬೀರುವುದಕ್ಕಾಗಿ ನಾಲ್ಕೈದು ದಿನದ ಹಿಂದೆಯೇ ಸಾಮಗ್ರಿಗಳ ಖರೀದಿ, ಸಿದ್ಧತೆ ನಡೆದಿದೆ. ಎಳ್ಳು-ಬೆಲ್ಲದೊಂದಿಗೆ ನೀಡಲು ಕಬ್ಬಿನ ಜಲ್ಲೆಗಳು, ರಾಸುಗಳ ಸಿಂಗಾರ ಸಾಮಗ್ರಿಗಳು, ಅವರೆಕಾಯಿ, ತರಕಾರಿ ಪದಾರ್ಥಗಳ ಖರೀದಿ ಬಿರುಸಾಗಿಯೇ ಸಾಗಿತ್ತು. ಕೊಳ್ಳುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟದೇ ಇರಲಿಲ್ಲ.
ಹಬ್ಬದ ವೈಶಿಷ್ಟ್ಯತೆ: ಸಂಕ್ರಾಂತಿ ಹಬ್ಬವು ದನಗಳ ಕಿಚ್ಚು ಹಾಯಿಸುವುದಕ್ಕಷ್ಟೇ ಸೀಮಿತವಲ್ಲ. ಈ ಹಬ್ಬದಂದು ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎನ್ನುವ ಪ್ರತೀತಿ ಇದೆ. ಹೆಣ್ಣು ಮಕ್ಕಳಿಗೆ ಹೊಸ ವಸ್ತ್ರ ತೊಡಿಸಿ, ಅವರಿಂದ ನೆರೆ-ಹೊರೆಯವರು, ಬಂಧುಗಳಿಗೆ ಎಳ್ಳು-ಬೆಲ್ಲವನ್ನು ಬೀರಿ ಶುಭ ಹಾರೈಸಲಾಗುತ್ತದೆ. ಈಚೆಗೆ ಎಳ್ಳು-ಬೆಲ್ಲ ಬೀರುವವರ ಸಂಖ್ಯೆ ಹೆಚ್ಚಿದೆ. ಈ ಹಬ್ಬದಂದು ಮನೆಗಳಲ್ಲಿ ಗೆಣಸು, ಕಡಲೆಕಾಯಿ ಬೇಯಿಸಿ ತಿನ್ನುವುದು ವಾಡಿಕೆ. ಅವರೆಕಾಯಿ ಕರಿದ ಸಾರಿನ ಊಟ ಹಲವೆಡೆ ವಾಡಿಕೆಯಾಗಿದೆ. ಬೆಳಗ್ಗೆ ಪೊಂಗಲ್ ಇಲ್ಲವೇ ಕಿಚಡಿ ಬಹುತೇಕರ ಮನೆಯ ಉಪಹಾರವಾಗಿರುತ್ತದೆ. ರೈತರು ತಮ್ಮ ಮನೆ, ಒಕ್ಕಣೆ ಆಗದ ಮತ್ತು ಆಗಿರುವ ಬಣವೆಗಳಿಗೆ ಮಾವು ಮತ್ತು ಹಲಸಿನ ಸೊಪ್ಪಿನೊಂದಿಗೆ ಉತ್ರಾಣಿ ಕಡ್ಡಿ ಇರಿಸಿ ಪೂಜೆ ಸಲ್ಲಿಸುವುದು ಉಂಟು.
ಕಣ ಸಂಸ್ಕೃತಿ ಮಾಯ: ಸುಗ್ಗಿಯ ಸಡಗರ ನಿಜವಾಗಿ ಕಾಣುತ್ತಿದ್ದದ್ದೇ ಕಣಗಳಲ್ಲಿ. ಆದರೆ, ಈಚೆಗೆ ಕಣ ಸಂಸ್ಕೃತಿಯು ಮಾಯವಾಗಿದೆ. ಕೃಷಿ ಯಾಂತ್ರೀಕರಣದ ಹಾವಳಿ ಒಂದೆಡೆಯಾದರೆ, ರಸ್ತೆಗಳಲ್ಲೇ ಒಕ್ಕಣೆಯ ಪರಿಪಾಠ ಹೆಚ್ಚಿರುವ ಕಾರಣ ಕಣಗಳು ವಿರಳವಾಗಿವೆ. ಕಣಗಳಲ್ಲಿ ಒಕ್ಕಣೆಯೊಂದಿಗೆ ಸುಗ್ಗಿಯ ಹಿಗ್ಗು ಕಾಣುವಂತಹ ನಿದರ್ಶನಗಳನ್ನು ಸೀಮಿತಗಳಲ್ಲಷ್ಟೇ ಕಾಣಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಜೋಡೆತ್ತುಗಳು, ದನಗಳನ್ನು ಸಿಂಗರಿಸಿ ಊರೆಲ್ಲಾ ಮೆರವಣಿಗೆ ಮಾಡುವವರ ಸಂಖ್ಯೆಯೂ ನಶಿಸುತ್ತಾ ಬಂದಿದೆ. ನಗರೀಕರಣಕ್ಕೆ ಮೈಯ್ಯೊಡ್ಡಿ ನಿಂತಿರುವ ಈ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಗತ ವೈಭವ ಮರೆಯಾಗುತ್ತಿದೆ. ಹೀಗೇ ಮುಂದುವರೆದರೆ ಸಂಕ್ರಾಂತಿ ಹಬ್ಬ ತನ್ನ ಮಹತ್ವ ಕಳೆದುಕೊಳ್ಳುವ ಕಾಲ ದೂರವೇನಿಲ್ಲ.
ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ...
ದೊಡ್ಡಬಳ್ಳಾಪುರ: ಸಂಕ್ರಾಂತಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದೊಡ್ಡಬಳ್ಳಾಪುರ ಮಾರುಕಟ್ಟೆಯಲ್ಲಿ ಹಬ್ಬದ ವಹಿವಾಟು ಮಂಗಳವಾರ ಭರದಿಂದ ನಡೆದಿದೆ.
ಬೆಲೆ ಏರಿಕೆಯ ನಡುವೆಯೂ ಸಾರ್ವಜನಿಕರು ಹಬ್ಬಕ್ಕೆ ಭರ್ಜರಿ ಖರೀದಿಯಲ್ಲಿ ತೊಡಗಿದ್ದರು. ಈ ಬಾರಿ ಹೂವು-ಹಣ್ಣ ಬೆಲೆ ತಕ್ಕ ಮಟ್ಟಿಗೆ ಇದ್ದರೂ ಹಬ್ಬದ ಬಹುಮುಖ್ಯ ವಸ್ತುಗಳಾದ ಅವರೆಕಾಯಿ, ಕಡ್ಲೇಕಾಯಿ, ಕಬ್ಬು, ಸಿಹಿಗೆಣಸು ಖರೀದಿ ದುಬಾರಿಯಾಗಿ ಪರಿಣಮಿಸಿದೆ. ಕಳೆದ ವಾರ 25-30ರು.ಗೆ ದೊರೆಯುತ್ತಿದ್ದ 1 ಕೆಜಿ ಅವರೇಕಾಯಿ ಬರೋಬ್ಬರಿ 45 ರಿಂದ 50 ರು.ಗಳಿಗೆ ಏರಿಕೆಯಾಗಿದೆ. ಇನ್ನು ಕಡಲೇಕಾಯಿ ಕೂಡ 40ರ ಗಡಿದಾಟಿದೆ. ಕಬ್ಬು ಜಲ್ಲೆಯೊಂದರಕ್ಕೆ ಕನಿಷ್ಠ 30ರಿಂದ ಗರಿಷ್ಠ 70ರವರೆಗೆ ಹಾಗೂ ಸಿಹಿಗೆಣಸು ಕೆಜಿಗೆ 35 ರು. ಹೀಗಿದ್ದಾಗ್ಯೂ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆದಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರುಕಟ್ಟೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಎಳ್ಳು-ಬೆಲ್ಲ ಕಹಿ: ಇನ್ನು ಹಬ್ಬಕ್ಕೆ ಅನಿವಾರ್ಯವೆನಿಸುವ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಕೂಡ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ಕಳೆದ ವರ್ಷ 50 ರುಗೆ ದೊರೆಯುತ್ತಿದ್ದ ಎಳ್ಳು-ಬೆಲ್ಲದ ಪೊಟ್ಟಣ 80ರಿಂದ 100ರುಗಳಿಗೆ ಏರಿಕೆಯಾಗಿದೆ. ಇನ್ನು ಬೆಲ್ಲದಚ್ಚು, ಸಕ್ಕರೆ ಅಚ್ಚುಗಳ ಬೆಲೆ ಕೂಡ ದುಬಾರಿ. ಬಿಳಿಎಳ್ಳು, ಒಣಕೊಬ್ಬರಿಯ ಬೆಲೆ ಕೂಡ ಶೇ.30ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು. ದೊಡ್ಡಬಳ್ಳಾಪುರ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗಿನಿಂದಲೂ ವ್ಯಾಪಾರದ ಭರಾಟೆ ಜೋರಿತ್ತು.
ಸಿದ್ಧತೆ ಜೋರು: ಒಟ್ಟಾರೆ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ದೊಡ್ಡಬಳ್ಳಾಪುರದ ಜನ ಸಜ್ಜಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬಕ್ಕೆ ಈಗಾಗಲೇ ಜನ ಸಜ್ಜುಗೊಂಡಿದ್ದಾರೆ. ಕೃಷಿ ಪ್ರಧಾನ ಹಳ್ಳಿಗಳಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದು, ಕೆಂಡಹಾಯಿಸುವುದು ಸೇರಿದಂತೆ ಅನೇಕ ಜಾನಪದ ಆಚರಣೆಗಳು ನಡೆಯುತ್ತವೆ. ಎತ್ತುಗಳನ್ನು ಬಣ್ಣಗಳಿಂದ, ಹೂಗಳಿಂದ ಅಲಂಕರಿಸಿ ಪೂಜಿಸುವ ಸಂಪ್ರದಾಯವೂ ನಡೆದುಕೊಂಡು ಬಂದಿದೆ. ದನಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳೂ ನಡೆಯಲಿವೆ. ಇನ್ನು ದೇವಾಲಯಗಳಲ್ಲಿ ಕೂಡ ವಿಶೇಷ ಪೂಜಾ ಏರ್ಪಾಟಾಗುತ್ತವೆ. ಕೆಲವೆಡೆ ಸಂಕ್ರಾಂತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜನೆಗೊಳ್ಳುತ್ತಿವೆ.
ಜಾನಪದ ಲೋಕದಲ್ಲಿ ಸಂಕ್ರಾಂತಿ
ರಾಮನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ನಮ್ಮ ಜಾನಪದ ಕಲೆ, ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜಾನಪದ ಲೋಕದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವುದು, ಜೋಡೆತ್ತುಗಳ ಸ್ಪರ್ಧೆ, ಡೊಳ್ಳು ಕುಣಿತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನೆಲಮಂಗಲದಲ್ಲಿ ಖರೀದಿ ಭರಾಟೆ
ನೆಲಮಂಗಲ: ಹೊಸ ವರ್ಷದ ಮೊದಲ ಹಬ್ಬ ಮಕರಸಂಕ್ರಾತಿ ಸಂಭ್ರಮಾಚರಣೆಗಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ರಾಶಿ ರಾಶಿ ಹಾಕಿರುವ ಕಬ್ಬು , ಕಡಲೆಕಾಯಿ, ಅವರೆಕಾಯಿ, ಗೆಣಸು, ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬ ಆಚರಿಸುವುದಕ್ಕಾಗಿ ಜನ ಅದನ್ನು ಖರೀದಿಸುತ್ತಿದ್ದಾರೆ.
ಮಂಗಳವಾರ ಪಟ್ಟಣದ ಮಾರ್ಕೆಟ್ ಚೌಕ, ಸೊಂಡೆಕೊಪ್ಪ ರಸ್ತೆ, ಬಿ.ಹೆಚ್ ರಸ್ತೆಗಳಲ್ಲಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಹಬ್ಬದ ಆಚರಣೆಗಾಗಿ ಬೇಕಾದ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಆಗಮಿಸಿದರು. ಪಟ್ಟಣದಾದ್ಯಂತ ವಾಹನ ದಟ್ಟನೆಯಿಂದ ಕೂಡಿರುವುದರಿಂದ ಸಂಚಾರ ಕಷ್ಟಕರವಾಯಿತು. ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಸ್ಥರು ಅಂಗಡಿಯ ಮುಂದೆ ಹಾಗೂ ಪಾದಚಾರಿ ರಸ್ತೆಗಳಲ್ಲಿ ರಾಶಿ ರಾಶಿ ಕಬ್ಬು , ಕಡಲೆಕಾಯಿ, ಅವರೆಕಾಯಿ, ಗೆಣಸು, ಹೂವುಗಳನ್ನು ಹಾಕಿರುವುದರಿಂದ ಪಾದಚಾರಿಗಳು ಸಂಚರಿಸುವುದೇ ಸಾಹಸವಾಗಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

