ಬೆಂಗಳೂರು ಗ್ರಾಮಾಂತರ

ತುಮಕೂರಿನಲ್ಲಿ ಜೆಡಿಎಸ್ ಮಹಿಳಾ ಸಮಾವೇಶ

Published On :

ರಾಮನಗರ : ಜ.22ರಂದು ತುಮಕೂರಿನ ಕಾಲೇಜು ಮೈದಾನದಲ್ಲಿ ಜೆಡಿಎಸ್ ಪಕ್ಷದ ವಿಭಾಗ ಮಟ್ಟದ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಕೆ. ರಾಜು ತಿಳಿಸಿದರು.  ಜಿಲ್ಲೆಯಲ್ಲಿ 102 ಗ್ರಾ.ಪಂ.ಗಳಿದ್ದು, ಪ್ರತಿ ಗ್ರಾ.ಪಂ.ನಿಂದ 2ರಂತೆ ಒಟ್ಟು 204 ಬಸ್‌ಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರನ್ನು ಈ ಸಮಾವೇಶಕ್ಕೆ ಕರೆದೊಯ್ಯಲಾಗುವುದು. ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವರು ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.  ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳಾ ಮೀಸಲಾತಿ ತಂದಿದ್ದರು. ಇದರ ಫಲವಾಗಿಯೇ ಇಂದು ಮಹಿಳೆಯರೂ ಕೂಡ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಇದು ಪಕ್ಷವು ಮಹಿಳೆಯರಿಗೆ ನೀಡಿದ ಕಾಣಿಕೆಯಾಗಿದೆ ಎಂದರು.

ಕುಡಿಯುವ ನೀರು, ವಿದ್ಯುತ್ ಪೂರೈಸಿ
ರಾಮನಗರ : ಜಿಲ್ಲೆಯ ನಾಲ್ಕೂ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶವೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಹಾಗೂ ವಿದ್ಯುತ್‌ಗೆ ಅಭಾವ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ವಿಶ್ವನಾಥ್ ಅಧಿಕಾರಿಗಳಿಗೆ ಸೂಚಿಸಿದರು.  ಬರ ನಿರ್ವಹಣೆ ಕುರಿತಂತೆ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಅಭಾವ ಇರುವ ಗ್ರಾಮಗಳು ಅಥವಾ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.  ಜಾನುವಾರುಗಳಿಗೆ ತಗುಲಿರುವ ಕಾಲುಬಾಯಿ ರೋಗ ತಡೆಗಾಗಿ ಶೇ.100 ಲಸಿಕೆ ಹಾಕಬೇಕು, ಈ ಕುರಿತ ಮಾಹಿತಿಯನ್ನು ಪ್ರತಿ ವಾರ ನೀಡುವಂತೆ ತಾಕೀತು ಮಾಡಿದರು.

ಬಾಲಗಂಗಾಧರನಾಥ ಸ್ವಾಮೀಜಿ ಜನ್ಮ ದಿನ
ಕನಕಪುರ: ಕನಕಪುರದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಬಿಜಿಎಸ್ ವಿದ್ಯಾನಿಕೇತನ ವತಿಯಿಂದ ಆದಿಚುಂಚನಗಿರಿ  ಪೀಠಾಧ್ಯಕ್ಷರಾಗಿದ್ದ  ಬಾಲಗಂಗಾಧರನಾಥ ಸ್ವಾಮೀಜಿಯವರ 70ನೇ ಜನ್ಮದಿನ ಬಿಜಿಎಸ್‌ವಿದ್ಯಾನಿಕೇತನ ಆವರಣದಲ್ಲಿ ನಡೆಯಿತು. ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ಡಾ.ಶಿವಬಸವೇಗೌಡ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಮುಖ್ಯಶಿಕ್ಷಕ ದೊಡ್ಡೀರೇಗೌಡ, ಗೋಪಾಲ್ ಪಾಲ್ಗೊಂಡಿದ್ದರು.
ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ಸಮಾಜಮುಖೀ ಸೇವೆ, ಚಿಂತನೆಗಳು, ಬದುಕು, ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕ ವಿವರಿಸಲಾಯಿತು.

ಪೊಲಿಯೋ ಅಭಿಯಾನ ಜಾಥಾ
ಕನಕಪುರ: ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ರೋಟರಿ ಕನಕಪುರ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೊಲಿಯೋ ಅಭಿಯಾನ ಜಾಥಾ ನಡೆಯಿತು.  ಐದುನೂರಕ್ಕೂ ಹೆಚ್ಚು ಮಕ್ಕಳು ಬ್ಯಾಂಡ್‌ಸೆಟ್ ಮೇಳದೊಂದಿಗೆ ಕನಕಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲಿಯೋ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ರೋಟರಿ ಅಧ್ಯಕ್ಷ ಸಿ. ವಿಜಯ್
ಜಾಥಾಕ್ಕೆ ಚಾಲನೆ ನೀಡಿದರು. ತಾ.ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ ಹಾಗೂ ಡಾ.ವಿವೇಕ್ ದೊರೈ ನೇತೃತ್ವ ವಹಿಸಿದ್ದರು. ಪೋಲಿಯೋ ಸಂಯೋಜಕ ಎಸ್.ಗೋಪಾಲ ಮಾತನಾಡಿ ಐದುವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೊಲಿಯೋ ಲಸಿಕೆ ಹಾಕಿಸಲು ಸಂಕಲ್ಪಿಸಬೇಕು ಎಂದು ಹೇಳಿದರು.  ರೋಟರಿ ಕಾರ್ಯದರ್ಶಿ ಮುರಡಿ ಗಿರೀಶ್, ಮಾಜಿ ಅಧ್ಯಕ್ಷರಾದ ಜಿ.ಎನ್.ಸತೀಶ್, ಡಿ.ಎಸ್.ಸತೀಶ್, ಎಂ.ಬಿ.ಚಂದ್ರಪ್ರಭಾ, ಸಿ.ಎಸ್.ನಾಗರಾಜ, ಆರೋಗ್ಯಾಧಿಕಾರಿಗಳಾದ ಮರಿಯಪ್ಪ, ಪಂಚಲಿಂಗೇಗೌಡ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಅಂಗವಿಕಲರ ಪಿಂಚಣಿ ವೇತನ ನೀಡುವಲ್ಲಿ ವಿಫಲ: ಆರೋಪ
ನೆಲಮಂಗಲ:  ಅಂಗವಿಕಲರ ಪಿಂಚಣಿ ವೇತನ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಫಲಾನುಭವಿ ಪುರಂದರ ಆರೋಪಿಸಿದ್ದಾರೆ. ತಾಲೂಕಿನ ಕಸಬಾ ಹೋಬಳಿ ಮೈಲವಹಳ್ಳಿ ಗ್ರಾಮದ ವಾಸಿ ಅಂಧತ್ವದಿಂದ ನರಳುತ್ತಿರುವ ಪುರಂದರ ನನಗೆ ಅಂಚೆ ಇಲಾಖೆ ಹಾಗೂ ತಾಲೂಕು ಖಜಾನೆ ಇಲಾಖೆಗೆ ಕಳೆದ ಮೂರು ತಿಂಗಳಿಂದಲೂ ಅಲೆದರೂ ಅಂಗವಿಕಲರ ಭತ್ಯೆ ಪಡೆಯಲಾಗುತ್ತಿಲ್ಲ ಎಂದರು. ತಾಲೂಕು ಖಜಾನೆ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಅಂಚೆ ಇಲಾಖೆಗೆ ಫಲಾನುಭವಿಗಳ ಮಾಸಿಕ ಭತ್ಯೆ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಅಂಗವಿಕಲರ, ವೃದ್ಧಾಪ್ಯ ವೇತನ ನೀಡಲು ಇಲ್ಲ ಸಲ್ಲದ ಕಿರಿಕಿರಿ ಮಾಡುತ್ತಾರೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ತಾಲೂಕು ಆಡಳಿತ ಗಮನಿಸಿ ಅಂಗವಿಕಲರಿಗೆ ನ್ಯಾಯ ದೊರಕಿಸಬೇಕಿದೆ ಎಂದರು.

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಿಸಲು ಸಿದ್ಧತೆ
ಮಾಗಡಿ: ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆಯೊಂದಿಗೆ  ಸಜ್ಜುಗೊಳ್ಳುವಂತೆ ಶಾಸಕ ಎಚ್.ಸಿ. ಬಾಲಕೃಷ್ಣ ತಹಸೀಲ್ದಾರ್  ಶಿವಕುಮಾರ್  ಅವರಿಗೆ  ಸೂಚಿಸಿದರು.  ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ 65ನೇ ಗಣರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ 2014 ರ ಜ.26 ರಂದು ಇಲ್ಲಿನ ಐತಿಹಾಸಿಕ ಕೆಂಪೇಗೌಡ ಕೋಟೆ ಮೈದಾನದಲ್ಲಿ ಅರ್ಥಪೂರ್ಣ ಗಣರಾಜ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 8 ಗಂಟೆಗೆ ಧ್ವಜರೋಹಣ ನೆರವೇರಿಸಲಾಗುವುದು ಎಂದರು.  ತಹಸೀಲ್ದಾರ್ ಶಿವಕುಮಾರ್  ಕಾರ್ಯಕ್ರಮದ ರೂಪರೇಷೆ ಕುರಿತು ಮಾಹಿತಿ ನೀಡಿದರು. ತಾ.ಪಂ. ಅಧ್ಯಕ್ಷ ಜಿ.ಕೃಷ್ಣ, ನರಸಿಂಹಮೂರ್ತಿ, ಕೆ.ಬಿ. ಅಕ್ಕೋಜಿ, ಜಿ.ಪಂ.ಎಇಇ ರವಿ. ಎಸ್ ಸೂರನ್, ಡಾ.ರಾಜಶೇಖರ್, ಅರಣ್ಯಾಧಿಕಾರಿ ಕೆಂಪರಾಜು, ಬಿಇಓ ರಂಗಸ್ವಾಮಿ, ಇತರೆ ಅಧಿಕಾರಿಗಳು ಹಾಜರಿದ್ದರು.

ಇಂದು ಹೃದಯ ಉಚಿತ ತಪಾಸಣೆ ಶಿಬಿರ
ಮಾಗಡಿ: ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ, ಎಚ್.ಸಿ.ಬಾಲಕೃಷ್ಣ ಅಭಿಮಾನಿಗಳ ಬಳಗ, ಬೆಂಗಳೂರು ಹಾಲು ಒಕ್ಕೂಟದ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಜ.19ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ತಾಲೂಕಿನ ಕುದೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಗಿಗಳಿಗೆ ಒಕ್ಕೂಟದಿಂದ 1 ಲಕ್ಷ ಸಹಾಯಧನ ನೀಡುವುದಾಗಿ ತಿಳಿಸಿದರು. ನಾಗರಿಕರು ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಎಚ್.ಎನ್.ಅಶೋಕ್ ಮಾತನಾಡಿ, ಶಿಬಿರ ಉದ್ಘಾಟನೆಗೆ ಶಾಸಕ ಎಚ್.ಸಿ.ಬಾಲಕೃಷ್ಣ, ಸಿ.ಮಂಜುನಾಥ್, ಸಿ.ರಾಜಣ್ಣ, ಮುದ್ದುರಾಜ ಯಾದವ್, ವಿಜಯಕುಮಾರ್, ಎಂ.ಕೆ.ಧನಂಜಯ, ಹಂಸಕುಮಾರಿ, ಜಿ.ಕೃಷ್ಣ ಭಾಗವಹಿಸಲಿದ್ದಾರೆ ಎಂದರು.

ಆರೋಗ್ಯಕರ ಜೀವನಕ್ಕೆ ಧ್ಯಾನ ಸಹಕಾರಿ: ಡಾ. ಸತ್ಯನಾರಾಯಣ
ಕನಕಪುರ: ಧ್ಯಾನದಿಂದ ಮಾನಸಿಕ ಸ್ಥಿಮಿತತೆ, ಸದೃಢತೆ, ಸಮಚಿತ್ತತೆ, ಏಕಾಗ್ರತೆಗಳು ದೊರೆಯುವುದರೊಂದಿಗೆ ನೆಮ್ಮದಿಯ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಕಿದ್ವಾಯಿ ಗಂಥಿ ಸಂಸ್ಥೆ ಶಾಖಾಧಿಕಾರಿ ಡಾ.ಎ.ಸತ್ಯನಾರಾಯಣ ಹೇಳಿದ್ದಾರೆ. ಕನಕಪುರದ ರೋಟರಿ ಭವನದಲ್ಲಿ ಉತ್ತಮ ಜೀವನಕ್ಕಾಗಿ ಧ್ಯಾನ ಕುರಿತು ಅತಿಥಿ ಉಪನ್ಯಾಸ ನೀಡಿದರು. ಎರಡೂವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧರು ಎಲ್ಲರೂ ಸುಲಭವಾಗಿ ಆಚರಿಸಲು ಅನುಕೂಲವಾಗುವಂತೆ ಉಸಿರಿನ ಮೇಲೆ ಗಮನವಿರಿಸುವ ಸರಳ ವಿಧಾನವಾದ ಆನಾಪಾನಸತೀ ಧ್ಯಾನಪದ್ಧತಿಯನ್ನು ಪರಿಚಯಿಸಿದರು. ರೋಟರಿ ಅಧ್ಯಕ್ಷ ಸಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು ಅರ್ಧಗಂಟೆ ಕಾಲದ ಪ್ರಾಯೋಗಿಕ ಧ್ಯಾನ ತರಬೇತಿಯನ್ನು ರೋಟರಿ ಸದಸ್ಯರಿಗೆ ನೀಡಲಾಯಿತು. ಕಾರ್ಯದರ್ಶಿ ಮುರಡಿ ಗಿರೀಶ್ ಸ್ವಾಗತಿಸಿದರು. ಗೌಡಹಳ್ಳಿ ಪುಟ್ಟಸ್ವಾಮಿ ವಂದಿಸಿದರು.

ಉದಯಕುಮಾರ್ ಸ್ಮರಣಾರ್ಥ ಇಂದಿನಿಂದ ನೃತ್ಯ, ನಾಟಕೋತ್ಸವ
ಕನಕಪುರ: ಬೆಂಗಳೂರಿನ ಉದಯ ಕಲಾನಿಕೇತನ ಸಂಸ್ಥೆ ವತಿಯಿಂದ ಕಲಾಕೇಸರಿ, ಅಭಿಜಾತ ಕಲಾವಿದ ದಿ.ಉದಯಕುಮಾರ್ ಸ್ಮರಣೆ ಅಂಗವಾಗಿ ನೃತ್ಯ ಹಾಗೂ ನಾಟಕೋತ್ಸವ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಕನಕಪುರದ ನಾಡೋಜ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಜ.19 ಮತ್ತು ಜ.20ರಂದು ನಡೆಯಲಿವೆ ಎಂದು ಸಂಚಾಲಕಿ, ನಟಿ ರೇಣುಕಾ ಬಾಲಿ ಉದಯ ಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ 19ರಂದು ಭಾನುವಾರ ಬೆಂಗಳೂರಿನ ನಾಟ್ಯಸರಸ್ವತಿ ತಂಡದವರಿಂದ ಪಳೆಂಕರು ನಾಟಕ ಪ್ರದರ್ಶನ, ಶೃತಿ ತಂಡದವರಿಂದ ಕಥಕ್ ನರ್ತನ, ಗುಜರಾತಿ ಜಾನಪದ ನೃತ್ಯಗಳ ಪ್ರದರ್ಶನ ನಡೆಯಲಿದೆ. 20ರಂದು ಸೋಮವಾರ ರಂಗನಿರ್ದೇಶಕಿ ದಾಕ್ಷಾಯಣಿ ಭಟ್ ನಿರ್ದೇಶನದ ಭಸ್ತಿ ನಾಟಕ ಪ್ರದರ್ಶನ, ಉದಯ ಕಲಾನಿಕೇತನ ಕಲಾವಿದರು ಅಭಿನಯಿಸುವ ಸಿದ್ಧ ಕುಡಿದು ಬಿದ್ದ ಹಾಸ್ಯನಾಟಕ ಹಾಗೂ ನಾಟ್ಯ ಪ್ರದರ್ಶನಗಳು ನಡೆಯಲಿವೆ. ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ನೆರವೇರಿಸಲಿದ್ದು, ಉದ್ಘಾಟನೆಯನ್ನು ಹಾಪ್‌ಕಾಮ್ಸ್ ನಿರ್ದೇಶಕ ಜಯಕುಮಾರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಲತಿ ಸರ್‌ದೇಶಪಾಂಡೆ ಪಾಲ್ಗೋಳ್ಳಲಿದ್ದಾರೆ.

ಸಂಕ್ರಾಂತಿ ನಿಮಿತ್ತ ರಾಮದೇವರ ಉತ್ಸವ
ಕನಕಪುರ: ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ರಾಮದೇವರ ಉತ್ಸವ ಹಾಗೂ ಭಜನಾ ಮೇಳ ಗ್ರಾಮದ ಬೀದಿಗಳಲ್ಲಿ ನಡೆಯಿತು. ಅಲಂಕೃತ ವಾಹನದಲ್ಲಿ ಇಲ್ಲಿನ ರಾಮ ಮಂದಿರದಿಂದ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಸೇವಾ ಮಂಡಳಿ ವತಿಯಿಂದ ಬೀದಿಗಳಲ್ಲಿ ಫಂಡರಿ ಭಜನೆ ನಡೆಯಿತು. ಗ್ರಾಮದ ಸಂಪ್ರದಾಯದಂತೆ ಸಂಕ್ರಾಂತಿಯ ಮರುದಿನ ನಡೆಯುವ ಶ್ರೀರಾಮದೇವರ ಉತ್ಸವದಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆಗಳು ನೆಲೆಸುತ್ತವೆ ಎಂಬ ಪ್ರತೀತಿಯಿದ್ದು ಸಾರ್ವಜನಿಕರು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶ್ರೀರಾಮ ಮಂದಿರ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.

ಪ್ರೇರಕರಿಗೆ ಕಂಪ್ಯೂಟರ್ ವೆಬ್‌ಪೋರ್ಟಲ್ ಕುರಿತು ತರಬೇತಿ
ಮಂಡ್ಯ: ಜಿಲ್ಲೆಯ ಸಾಕ್ಷರ ಭಾರತ್ ಕಾರ್ಯಕ್ರಮದ ತಾಲೂಕು ಸಂಯೋಜಕರು ಹಾಗೂ ಪ್ರೇರಕರಿಗೆ ವಿವಿಧ ಮಾಹಿತಿಗಳನ್ನು ಕಂಪ್ಯೂಟರ್ ವೆಬ್‌ಪೋರ್ಟಲ್‌ಗೆ ಅಳವಡಿಸುವ ಕುರಿತು ತರಬೇತಿ ನೀಡಲಾಯಿತು. ಜಿಲ್ಲಾ ತರಬೇತಿ ಸಂಸ್ಥೆಯ ಕಂಪ್ಯೂಟರ್ ಕೇಂದ್ರದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಅಂತರ್ಜಾಲಕ್ಕೆ ಮಾಹಿತಿಯನ್ನು ಅಳವಡಿಸುವ ಬಗ್ಗೆ ಮಾಹಿತಿ ನೀಡಿದರು. ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಅನುಷ್ಠಾನವಾಗುವ ಮೂಲ ಸಾಕ್ಷರತೆ, ನಿರಂತರ ಶಿಕ್ಷಣ, ಸಮಾನ ಶಿಕ್ಷಣ ಹಾಗೂ ವೃತ್ತಿ ಕೌಶಲ್ಯ ತರಬೇತಿಗಳ ಮಾಹಿತಿಗಳನ್ನು ಕಂಪ್ಯೂಟರ್‌ಗೆ ಅಳವಡಿಸಬೇಕು. ಗ್ರಾಪಂ ಲೋಕ ಶಿಕ್ಷಣ ಕೇಂದ್ರಗಳ ವಿವರಗಳು ಲಭ್ಯವಿರುವ ಸೌಲಭ್ಯಗಳು ಮುಂತಾದವುಗಳನ್ನು ಅಂತರ್ಜಾಲಕ್ಕೆ ಅಳವಡಿಸುವ ಬಗ್ಗೆ ತರಬೇತಿ ನೀಡಲಾಯಿತು.

ಟ್ರಸ್ಟ್ ಸ್ಥಾಪನೆ ಕುರಿತ ಪೂರ್ವಭಾವಿ ಸಭೆ
ಮಂಡ್ಯ: ಭಗವಾನ್ ಗೌತಮ ಬುದ್ಧ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಕುರಿತ ಪೂರ್ವಭಾವಿ ಸಭೆಯು ಬೌದ್ಧ ದರ್ಮಗುರು ಭಂತೇ ಬೋದಿದತ್ತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಪತ್ರಕರ್ತರ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೌದ್ಧ ಧರ್ಮ ಅನುಯಾಯಿಗಳು, ವಿವಿಧ ಸಂಘಟನೆಗಳ ಮುಖಂಡರು ಬೌದ್ಧ ಧರ್ಮ ಅನುಕರೆಣೆ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದರು. ಸಭೆಯಲ್ಲಿ ಬೌದ್ಧ ಅನುಯಾಯಿ ಎಂ.ಬಿ. ಶ್ರೀನಿವಾಸ್ ಮಾತನಾಡಿ, ಭಾರತದ ಅತಿ ಶ್ರೇಷ್ಠವಾದ ಮಾನವೀಯ ಗುಣ ಮತ್ತು ತತ್ವಗಳನ್ನು ಒಳಗೊಂಡಿರುವ ಬೌದ್ಧ ಧರ್ಮದ ಆಚರಣೆ, ಅನುಕರಣೆಗಳ ಬಗ್ಗೆ ತಿಳದುಕೊಳ್ಳಬೇಕು. ಜೀವನದಲ್ಲಿ ಬೌದ್ಧ ತತ್ವಗಳನ್ನು ಅಳವಡಿಸಿಕೊಂಡು ಶ್ರೀ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು.

ಇಂದು ಪೋಲಿಯೊ ಕಾರ್ಯಕ್ರಮಕ್ಕೆ ಡಿಸಿ ಚಾಲನೆ
ಮಂಡ್ಯ; ನಗರದ ರೋಟರಿ ಶಾಲಾ ಆವರಣದಲ್ಲಿ ಜ.19 ರಂದು ಬೆಳಗ್ಗೆ 8 ಗಂಟೆಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಚಾಲನೆ ನೀಡಲಿದ್ದಾರೆ.
ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು, ಜಿಪಂ ಸಿಇಒ ಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ, ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ತಹಸೀಲ್ದಾರ್ ಮಮತಾ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್. ಮರೀಗೌಡ, ಪ್ರಾಂಶುಪಾಲೆ ಡಾ. ಪುಷ್ಪಾಸರ್ಕಾರ್, ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಂ. ಶಿವಕುಮಾರ್, ಪೋಲಿಯೋ ಕಣ್ಗಾವಲು ಅಧಿಕಾರಿ ಎಂ.ಸಿ. ಸೋಮಶೇಖರ್, ರೋಟರಿ ಅಧ್ಯಕ್ಷ ಓಂ ಪ್ರಕಾಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ರಶ್ಮಿ ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹುಲ್ಕೆರೆಕೊಪ್ಪಲು ಯುವಕ ಕಾಣೆ: ಪ್ರಕರಣ ದಾಖಲು
ಮಂಡ್ಯ: ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ತಮ್ಮ ಪುತ್ರ ಸುನಿಲ್‌ಕುಮಾರ್ (23) ಕಾಣೆಯಾಗಿದ್ದಾರೆ ಎಂದು ತಂದೆ ಎಚ್. ವೆಂಕಟೇಗೌಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ವಲ್ಪ ಬುದ್ದಿ ಕಡಿಮೆ ಇರುವ ಸುನೀಲ್‌ಕುಮಾರ್, 2013ರ ಡಿಸೆಂಬರ್ 28 ರಂದು ಮನೆಯಿಂದ ಹೊರಹೋದವನು ವಾಪಸ್ ಬಂದಿಲ್ಲ. ಕಾಣೆಯಾದ ಸುನೀಲ್‌ಕುಮಾರ್ 5.8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಪಾದದ ಬೆರಳುಗಳು ಮತ್ತು ಅಂಗೈನ ಬೆರಳುಗಳು ಸ್ವಲ್ಪ ಉದ್ದ ಇವೆ. ಅರ್ಧತೋಳಿನ ಬಿಳಿ ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾನೆ. ಸುಳಿವು ಸಿಕ್ಕಲ್ಲಿ ತಕ್ಷಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಿದ್ದಾರೆ.

ಬಸ್ ಸಂಚಾರ ಸ್ಥಗಿತ ಖಂಡಿಸಿ ಪ್ರತಿಭಟನೆ
ಕೆ.ಆರ್.ಪೇಟೆ: ತಾಲೂಕಿನ ವಿಠಲಾಪುರ-ಸೋಮನಹಳ್ಳಿ-ಸಂಗಾಪುರ ಮಾರ್ಗದಲ್ಲಿ ಸಾರಿಗೆ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಶಾಲಾ - ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ಸಾರಿಗೆಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೇರಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್‌ಡಿ ಉಂಟಾಗಿತ್ತು. ಈ ಮಾರ್ಗದಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು ಪಟ್ಟಣಕ್ಕೆ ನಿತ್ಯ ಸಂಚಾರ ಮಾಡುತ್ತಾರೆ. ಈಗ ಸಾರಿಗೆ ಬಸ್‌ಗಳು ಇಲ್ಲದ ಕಾರಣ ಹಣ ಖರ್ಚುಮಾಡಿಕೊಂಡು ಬೇರೆ ವಾಹನಗಳಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ ಎಂದು ದೂರಿದರು.

ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ
ಹಲಗೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಪ್ರಯಕ್ತ ಯುವ ಸಪ್ತಾಹ ಮತ್ತು ವರ್ತಮಾನ ಭಾರತಕ್ಕೆ ಸ್ವಾಮಿ ವಿವೇಕಾನಂದರ ಪ್ರಸ್ತುತತೆ ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕ ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಇಡೀ ವಿಶ್ವವೇ ಮೆಚ್ಚಿರುವ ಧೀಮಂತ ವ್ಯಕ್ತಿ. ಮಾನಸಿಕ ಏಕಾಗ್ರತೆ  ಮಕ್ಕಳ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದರು. ಸಂಸ್ಕೃತಿ ಸಮಿತಿ ಸಂಚಾಲಕ ಜೆ. ವಿಶ್ವರಾದ್ಯಾ, ಪ್ರಾದ್ಯಾಪಕ ಪ್ರೊ.ರಶ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ. ಉಮೇಶ್, ಚಿಕ್ಕನಾಗೇಗೌಡ ಮಾತನಾಡಿದರು. ನಂತರ ನಡೆದ ಚರ್ಚಾ ಸ್ಪರ್ಧೆಯಲ್ಲಿ ಮಹಮದ್ ಇಫರ್ ಪ್ರಥಮ ಸ್ಥಾನ ಪಡೆದರೆ ಆರ್. ಸಾಧ್ಯಾ ದ್ವಿತೀಯ ಸ್ಥಾನ, ಮಧು ಕುಮಾರ್ ತೃತೀಯ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.