ಬೆಂಗಳೂರು ಗ್ರಾಮಾಂತರ

'ರೈತರು ಶತ್ರುವಿಲ್ಲದ ಹೊಸ ಸಮರಕ್ಕೆ ಸಜ್ಜಾಗಬೇಕಿದೆ'

Published On :

ಚನ್ನಪಟ್ಟಣ: ಜಾಗತೀಕರಣದ ಕಾಲಘಟ್ಟದಲ್ಲಿ  ರೈತರು ಶತ್ರುವಿಲ್ಲದ ಹೊಸ ಸಮರಕ್ಕೆ ಸಜ್ಜಾಗಬೇಕಿದೆ ವಿಷಯಾಧಾರಿತ ಚಳವಳಿ ಹಾಗೂ  ಸ್ವಾಭಿಮಾನದ ಮೂಲಸೂತ್ರದೊಂದಿಗೆ  ಪ್ರತಿಯೊಬ್ಬ ಕಾರ್ಯಕರ್ತನನ್ನು  ಈ ಸಮರಕ್ಕೆ ಸಜ್ಜುಗೊಳಿಸೋಣ-  ಇದು ರೈತಸಂಘದ ಸಂಕಲ್ಪ.
ತಾಲೂಕಿನ ಭೂಹಳ್ಳಿ ಗ್ರಾಮದ ರೈತಕಾರ್ಯಕರ್ತ ನರಸಿಂಹಯ್ಯರ ಮನೆಯಲ್ಲಿ ರೈತ ಚಳವಳಿ ಹಿಂದು- ಮುಂದು ಅವಲೋಕನಾ ಸಭೆಯಲ್ಲಿ, ತಾಲೂಕಿನಲ್ಲಿ ರೈತಚಳವಳಿಯ ಹುಟ್ಟು- ಬೆಳವಣಿಗೆ ಹಾಗೂ ಮುಂದಿನ ನಡೆಯ ಬಗ್ಗೆ ರೈತ ಸಂಘದ ಕಾರ್ಯಕರ್ತರು ಮತ್ತು ಸಮಾನ ಮನಸ್ಕರೊಂದಿಗೆ ಸಮಗ್ರ ಚರ್ಚೆ ನಡೆಸಿ, ಚಳವಳಿಯ ವಾರಸು ದಾರಿಕೆಯನ್ನು ಕೇವಲ ಪದಾಧಿಕಾರಿಗಳ ಹೆಗಲಿಗೆ ವಹಿಸದೆ  ಪ್ರತಿಯೊಬ್ಬ ಕಾರ್ಯಕರ್ತನೂ ಹೊರುವಂತೆ ನಿರ್ಣಯಿಸಲಾಯಿತು.
ರೈತಚಳವಳಿ ಸೋತಿಲ್ಲ  ಸುಸ್ತಾಗಿದೆ,  ಚಳವಳಿ ಗುಪ್ತ ಗಾಮಿನಿಯಾಗಿ ಹರಿಯುತ್ತಿದ್ದು  ಚಳವಳಿಯನ್ನು  ಸಮರ್ಥವಾಗಿ ಮುನ್ನಡೆಸಲು ಎಲ್ಲಾ ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ಶ್ರಮಿಸಬೇಕಿದೆ.ಇತ್ತೀಚಿನ ದಿನಗಳಲ್ಲಿ ಕೆಲ ಅವಕಾಶವಾದಿಗಳು, ಸಾಂಕೇತಿಕ ಚಳವಳಿಗಾರರು, ಕೇವಲ ದಿನಪತ್ರಿಕೆಯಲ್ಲಿ ಸುದ್ದಿ ಬಂದರೆ ಸಾಕು ಎಂಬ ಮನೋಭಾವನೆಯ ಹೋರಾಟಗಾರರು ಮತ್ತು ಅಂತಹ ಮನೋಭಾವದ ಮಂದಿಯಿಂದ ಕೂಡಿರುವ ಸಂಘಟನೆಗಳು ಹೆಚ್ಚಾಗಿದ್ದು ಇಂತಹ ಸಂಘಟನೆಗಳಿಂದ ನಿಜವಾದ ಹೋರಾಟಗಾರರಿಗೆ ಅನ್ಯಾಯ ವಾಗುತ್ತಿದೆ ಎಂದು ಸಭೆಯು ವಿಷಾದಿಸಿತು.
ಚಳವಳಿ ಹಾದಿ ತಪ್ಪಿಸಿದ ಗ್ರಾ.ಪಂ: ಅಧಿಕಾರ ವಿಕೇಂದ್ರೀಕರಣದ ಹೆಸರಿನಲ್ಲಿ ಕೆಲ ಜಾರಿಗೆ ಬಂದ ಗ್ರಾಮ ಪಂಚಾಯಿತಿಗಳು ರೈತ ಚಳವಳಿಗೆ ಮಾರಕವಾಗಿದೆ. ಪಂಚಾಯತ್‌ರಾಜ್ ವ್ಯವಸ್ಥೆಯಿಂದ ಚಳವಳಿಯು ಅಧೋಗತಿಗಿಳಿದಿದೆ ಎಂದು ರೈತಪರ ಚಿಂತಕ, ಸಾಹಿತಿ ವೀರಭದ್ರಪ್ಪ ಬಿಸಳ್ಳಿ ವಿಷಾದಿಸಿದರು.
ಅಭಿವೃದ್ಧಿ ಎಂಬ ಶಾಪ:  ಇದುವರೆಗೆ ರೈತನ ಅನ್ನಕ್ಕೆ ಕೈಹಾಕುತ್ತಿದ್ದ ಬಂಡವಾಳಶಾಯಿ ವ್ಯವಸ್ಥೆ ಇದೀಗ ರೈತನ ಬದುಕನ್ನು ಸೂರೆಗೊಳ್ಳಲು ಮುಂದಾಗಿದೆ.  ನಮ್ಮ ಪ್ರಭುತ್ವಗಳು ಇಂತಹ ಶಕ್ತಿಗಳಿಗೆ ಮಣೆಹಾಕುತ್ತಿದ್ದು ರೈತರ ಭೂಮಿಯನ್ನು ಕಿತ್ತು  ರೈತನನ್ನು ಬಿಕಾರಿ ಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿದೆ ಇಂದಿನ ದಿನಗಳಲ್ಲಿ ಅಭಿವೃದ್ಧಿ ಎಂಬ ಶಾಪದ ವಿರುದ್ಧ ನಾವೆಲ್ಲ ಹೋರಾಡಲು ಸಜ್ಜಾಗಬೇಕಿದೆ ಎಂದು ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ತಿಳಿಸಿದರು.
ಜಿಲ್ಲಾ ರೈತಸಂಘಕ್ಕೆ ಎ. ಸೋಮಲಿಂಗಯ್ಯರ ವಿಚಾರವೇ ಸಂವಿಧಾನ. ರೈತರು ಸ್ವಾವಲಂಭಿ ಮತ್ತು ಸ್ವಾಭಿಮಾನಿಗಳಾಗಬೇಕೆಂದು ನೀಡಿರುವ ಕರೆಯೇ ಧ್ಯೇಯ ವಾಕ್ಯ. ಚಳವಳಿಗಾರರು ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದರು. ಚಳವಳಿಯ ಮುಂಚೂಣಿ ನಾಯಕರು ಚಂಚಲತೆಗೆ ಬಲಿಯಾಗಿ ಲಂಪಟರಾಗಬಾರದು, ಜಿಲ್ಲೆಯಲ್ಲಿ ಇತರ ಚಳವಳಿಗಳು ದಾರಿ ತಪ್ಪಿವೆಯಾದರೂ ರೈತ ಚಳವಳಿ ಅಂತಹ ಹಾದಿ ಹಿಡಿದಿಲ್ಲ. ಆದರೆ ರೈತ ಹೋರಾಟಗಾರರು ಜೀವನ ಸಂಗ್ರಾಮದಲ್ಲಿ ಹೈರಾಣಾಗಿದ್ದು ನಮ್ಮ ಸಂಘಟನೆ ಕಾರ್ಯಕರ್ತರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸುವ ಬಗ್ಗೆ ಯೋಚಿಸ ಬೇಕಿದೆ. ಈ ಕಾರ್ಯಕ್ರಮವೂ ನ್ಯಾಯಪರ, ಸ್ವಾಭಿಮಾನಿ ನೆಲೆಗಟ್ಟಿನಲ್ಲಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
 ಕಾರ್ಯಕ್ರಮದಲ್ಲಿ ಜಯಕರ್ನಾಟಕ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ರೈತಪರ ಬರಹಗಾರ ಜಿ.ಶಿವಣ್ಣ ಕೊತ್ತೀಪುರ, ಕಸಾಪ ತಾಲೂಕು ಅಧ್ಯಕ್ಷ ಶಿವಮಾದು, ಕನಕಪುರದ ಸಂಪತ್‌ಕುಮಾರ್, ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್, ಉಪನ್ಯಾಸಕ ಅಂಕಯ್ಯ ನಾಗವಾರ, ರಂಗಸ್ವಾಮಿ ನಾಗವಾರ, ಕೂಡ್ಲೂರು ವೆಂಕಟೇಶ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕತಿಲಕ್ ರಾಜ್, ಸು.ನಾ.ನಂದಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.