ಸಂಕ್ರಾಂತಿ ಬೇಡ, ಸುಗ್ಗಿ ಹಬ್ಬ ಇರಲಿ...
ದೊಡ್ಡಬಳ್ಳಾಪುರ: ವೈದಿಕ ಸಂಸ್ಕೃತಿಯ ಹಿಡಿತ ನಮ್ಮ ದೇಸೀಯತೆಯನ್ನು ನಾಶಮಾಡುತ್ತಿದೆ. ಉತ್ತರದ ಪಾರಮ್ಯದಲ್ಲಿ ದಕ್ಷಿಣದ ಮೂಲ ಆಶಯಗಳಿಗೆ ಧಕ್ಕೆಯಾಗಿದೆ. ವೈದಿಕಶಾಹಿ ಅವೈದಿಕರನ್ನೂ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಕುತಂತ್ರದಲ್ಲಿ ಯಶಸ್ವಿಯಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಡಾ.ಎನ್. ವೆಂಕಟರೆಡ್ಡಿ ಗ್ರಂಥಾಲಯ ನೇತೃತ್ವದಲ್ಲಿ ನಡೆದ ಕೃಷಿ ಸಂಸ್ಕೃತಿ ಮತ್ತು ಸಂಕ್ರಾಂತಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಕ್ರಾಂತಿ ಎಂಬ ಪದಕ್ಕಿಂತ ಸುಗ್ಗಿ ಹಬ್ಬ ಎಂದು ಬಳಕೆ ಮಾಡುವುದು ಸರಿ ಎಂದ ಅವರು, ಉತ್ತರಾಯಣ ಪುಣ್ಯಕಾಲವೇ ಯಾಕಾಗಬೇಕು, ದಕ್ಷಿಣಾಯಣ ಯಾಕಾಗದು, ದಕ್ಷಿಣಕ್ಕೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವೇ ಎಂಬ ತರ್ಕ ಮುಂದಿಟ್ಟರು. ಆರ್ಯ ವೈದಿಕ ಕೇಂದ್ರಿತವಾದ ಉತ್ತರಕ್ಕೆ ಪ್ರಬಲ ವೈರುಧ್ಯ ಮತ್ತು ಸಾಂಸ್ಕೃತಿಕ ಪ್ರತಿರೋಧ ಒಡ್ಡಿದ್ದು ದಕ್ಷಿಣ. ಹೀಗಾಗಿಯೇ ಇಂದಿಗೂ ಉತ್ತರ-ದಕ್ಷಿಣದ ನಡುವೆ ಅನೇಕ ವೈರುಧ್ಯಗಳು ಕಾಣಬಹುದು. ಯಜಮಾನ್ಯ ಸಂಸ್ಕೃತಿಯನ್ನು ಮೆಟ್ಟಿನಿಂತ ಜನ ನಾವು. ಆದರೆ ಸಾಂಸ್ಕೃತಿಕ ರಾಜಕಾರಣ ನೈಜ ಪರಂಪರೆಯನ್ನು ಮರೆಮಾಚಿದೆ ಎಂದರು.
ಸುಗ್ಗಿಯ ಹಬ್ಬದ ವೇಳೆ ನಡೆಯುವ ಕಿಚ್ಚಾಯಿಸುವ ಪ್ರಕ್ರಿಯೆ ಸೇರಿದಂತೆ ಹಲವು ಆಚರಣೆಗಳು ಯಜ್ಞ ವಿರೋಧಿಯಾದ ಶಿವ ಸಂಸ್ಕೃತಿಯ ಆರಾಧನೆಯಾಗಿದೆ. ಈ ಹಂತದಲ್ಲಿ ಭಾರತೀಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರಾಮಾಯಣ-ಮಹಾಭಾರತಕ್ಕಿಂತ ಮುಖ್ಯವಾದ ಘಟನಾವಳಿಯೊಂದು ಆಗಿಹೋಗಿರಬಹುದು. ಆದರೆ ಅವೈದಿಕ ಘಟನಾವಳಿಯನ್ನು ಪುರಾಣೀಕರಿಸುವ ಕೆಲಸ ನಡೆದಿಲ್ಲ. ಯಾಗ-ಯಜ್ಞಗಳ ವಿರೋಧ, ಸ್ಥಳೀಯ ಸಮುದಾಯಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಎದ್ದ ಆಕ್ರೋಶಗಳೇ ಹಲವು ಆಚರಣೆಗಳ ಮೂಲ. ಈ ಹಂತದಲ್ಲಿ ಪುರಾಣಗಳ ಐತಿಹಾಸಿಕ ಅಧ್ಯಯನ ಚಾರಿತ್ರಿಕ ನೆಲೆಗಟ್ಟಿನಲ್ಲಿ ಆಗಬೇಕಾದ ಅನಿವಾರ್ಯತೆ ಇದೆ ಎಂದರು.
ತಡವಾಗಿ: ಶಿವ ಆದಿವಾಸಿಗಳ ನಾಯಕ. ತ್ರಿಮೂರ್ತಿಗಳ ಪರಿಕಲ್ಪನೆಯಲ್ಲಿ ಶಿವನನ್ನು ಸೇರ್ಪಡೆ ಮಾಡಿದ್ದು ತೀರಾ ತಡವಾಗಿಯೇ. ಶಿವನ ತಲೆಯ ಮೇಲಿರುವ ಗಂಗೆ, ಮುಂದಿರುವ ಬಸವ ಎರಡೂ ಕೃಷಿ ಸಂಸ್ಕೃತಿಯ ಪ್ರತೀಕ. ರುದ್ರನನ್ನು ಕೃಷಿಯ ಮೂಲ ಪುರುಷ ಎಂದು ಹೆಸರಿಸಬಹುದು. ವೈದಿಕರು ಶಿವನ ಅನುಯಾಯಿಗಳನ್ನು ರಾಕ್ಷಸರಾಗಿ ಚಿತ್ರಿಸಿದ್ದಾರೆ. ಇದು ಸಾಂಸ್ಕೃತಿಕ ಪಕ್ಷಪಾತಕ್ಕೆ ಸ್ಪಷ್ಟ ಉದಾಹರಣೆ. ತಮ್ಮದಲ್ಲದ ಸಾಂಸ್ಕೃತಿಕ ನಾಯಕತ್ವವನ್ನು ನಿಕೃಷ್ಟವಾಗಿ ನೋಡಿದ ಅವರು, ಶಿವನನ್ನು ಸ್ಮಶಾನವಾಸಿಯಾಗಿಸಿದರು. ಆದರೆ ಮೂಲಭೂತವಾಗಿ ಶಿವ ಹೊಸ ಸಂಸ್ಕೃತಿಯ ಹುಟ್ಟಿಗೆ ಕಾರಣನಾದ ಮಹತ್ವದ ನಾಯಕ. ಕಾಲಾಂತರದಲ್ಲಿ ನಡೆದ ಸಂಘರ್ಷಗಳ ನಂತರ ಸಮನ್ವಯದ ಪರಿಕಲ್ಪನೆಯಲ್ಲಿ ಹರಿಹರ ಸಮನ್ವಯದ ವಾತಾವರಣ ಕಾಣಸಿಕ್ಕಿದೆ. ಕೃಷಿಗೆ ಸರಿಸುಮಾರು 10 ಸಾವಿರ ವರ್ಷ ಇತಿಹಾಸವಿದೆ. ಆದರೆ ಈ ದೇಶದಲ್ಲಿ ಇದುವರೆಗೆ ಒಂದು
ವ್ಯವಸ್ಥಿತ ಕೃಷಿ ನೀತಿಯೇ ಇಲ್ಲ ಎಂಬುದು ವಿಷಾದನೀಯ ಎಂದರು. ಮಂತ್ರವರ್ಗ ಮತ್ತು ತಂತ್ರವರ್ಗಗಳೆರಡೂ ಸೇರಿ ಈ ದೇಶವನ್ನು ದುರ್ಬಲವಾಗಿಸುವ ಹುನ್ನಾರ ನಡೆಸಿವೆ ಎಂದರು.
ಡಾ.ಎನ್. ವೆಂಕಟರೆಡ್ಡಿ ಗ್ರಂಥಾಲಯದ ಮುಖ್ಯಸ್ಥರಾದ ಸುಲೋಚನಮ್ಮ ಡಾ.ವೆಂಕಟರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ರೈತ ಸಂಘ, ಹಸಿರು ಸೇನೆ, ಕನ್ನಡಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಕಾರ್ಯಕರ್ತರು ಮತ್ತು ಮುಖಂಡರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

