ದೊಡ್ಡಬಳ್ಳಾಪುರ ನೇಕಾರರ ಬದುಕು ಮೂರಾಬಟ್ಟೆ
ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ವಿದ್ಯುತ್ ಮಗ್ಗಗಳ ನೇಕಾರಿಕೆ ಉದ್ಯಮದಲ್ಲಿ ಪ್ರತಿಷ್ಠಿತ ಸ್ಥಾನ ಹೊಂದಿರುವ ದೊಡ್ಡಬಳ್ಳಾಪುರ, ರೇಷ್ಮೆ ಮತ್ತು ಆಧುನಿಕ ವಸ್ತ್ರ ಉತ್ಪಾದನೆಯಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಆದರೆ ಸ್ಥಳೀಯವಾಗಿ ಉತ್ಪಾದನೆಯಾಗುವ ಬಟ್ಟೆಗೆ ನಿರ್ದಿಷ್ಟ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ನೇಕಾರರನ್ನು ಕಂಗೆಡಿಸಿದೆ. ವಿದ್ಯುತ್ ಮಗ್ಗಗಳ ನೇಕಾರರ ಹಿತದೃಷ್ಠಿಯಲ್ಲಿ ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಇದೆ.
ವಾಸ್ತವವಾಗಿ ದೊಡ್ಡಬಳ್ಳಾಪುರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯುತ್ ಮಗ್ಗಗಳಿವೆ. ಇಲ್ಲಿನ ಉತ್ಪಾದನೆಯಾಗುವ ಸೀರೆಗಳನ್ನು ಬೆಂಗಳೂರಿನ ಜುಮ್ಮಾ ಮಸೀದಿ ರಸ್ತೆ, ಕಬ್ಬನ್ಪೇಟೆ ಸೇರಿದಂತೆ ವಿವಿಧೆಡೆ ಇರುವ ಜವಳಿ ವ್ಯಾಪಾರಸ್ಥರು ಖರೀದಿಸುತ್ತಾರೆ. ನಂತರ ಅದು ವಿವಿಧ ಹಂತಗಳಲ್ಲಿ ಮಾರ್ಪಾಟಾಗಿ ಜವಳಿ ಅಂಗಡಿಗಳಲ್ಲಿ ಉತ್ತಮ ಬೆಲೆಗೆ ಮಾರಾಟವೂ ಆಗುತ್ತದೆ. ದೊಡ್ಡಬಳ್ಳಾಪುರದ ನೇಕಾರ ನೇಯ್ದ ಸೀರೆಯೊಂದು 1 ಸಾವಿರಕ್ಕೆ ಬಿಕರಿಯಾದರೆ, ಅದು ಮತ್ತೆ ಮಾರುಕಟ್ಟೆಯಲ್ಲಿ ಮಾರಾಟವಾಗುವುದು 3 ಸಾವಿರಕ್ಕೆ. ಆದರೆ ನೇಕಾರರಿಗೆ ಸಿಗುವುದು ಮಾತ್ರ ಪುಡಿಗಾಸು ಎನ್ನುವಂತಾಗಿದೆ. ಸ್ಥಳೀಯ ಮಾರುಕಟ್ಟೆ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಕೆಲ ದಲ್ಲಾಳಿಗಳು ಇಲ್ಲಿನ ನೇಕಾರರಿಂದ ಮಾಲು ಖರೀದಿಸಿ ನಂತರ ಉಂಡೆ ನಾಮ ಹಾಕಿರುವ ಪ್ರಕರಣಗಳೂ ಇತ್ತೀಚೆಗೆ ನಡೆದಿವೆ.
ಹದಗೆಟ್ಟಿದೆ ವ್ಯವಹಾರ: ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರದ ನೇಕಾರಿಕೆಯನ್ನು ವ್ಯವಸ್ಥಿತವಾಗಿ ಹೈಜಾಕ್ ಮಾಡುವ ಕೆಲಸಗಳು ನಡೆಯುತ್ತಿವೆ. ಕೆಲ ವ್ಯಾಪಾರಸ್ಥರು ಹಳೆಯ ಅಂಗಡಿಗಳಲ್ಲಿ ಕೆಲಸಕ್ಕೆ ಬಂದು ಕೆಲ ದಿನಗಳ ನಂತರ ನೇಕಾರರ ಸಂಪರ್ಕ ಸಾಧಿಸಿ ಅವರೇ ಸೀರೆ ವ್ಯಾಪಾರಕ್ಕಿಳಿಯುತ್ತಿದ್ದು, ಲಕ್ಷಾಂತರ ಮೌಲ್ಯದ ಚೆಕ್ಗಳನ್ನು ನೇಕಾರರಿಗೆ ನೀಡಿ ತಮ್ಮ ವ್ಯಾಪಾರವನ್ನೇ ಎತ್ತಂಗಡಿ ಮಾಡಿ ಹೋಗಿರುವ ಘಟನೆಗಳು ನಡೆದಿವೆ. ನೇಕಾರ ಮಾತ್ರ ಅತ್ತ ಹಣವೂ ಇಲ್ಲದೆ, ಇತ್ತ ನೇಯ್ದ ಬಟ್ಟೆಯೂ ಇಲ್ಲದೆ ಪರದಾಡುವ ಪರಿಸ್ಥಿತಿ. ಡ್ಯೂಪ್ಲಿಕೇಟ್ ಹುಂಡಿಗಳನ್ನು ನೀಡಿ ನೇಕಾರರಿಗೆ ಟೋಪಿ ಹಾಕಿರುವ ಘಟನೆ ಇತ್ತೀಚೆಗೆ ಶಿವಂ ಸಿಲ್ಕ್ ಹೆಸರಿನಲ್ಲಿ ನಡೆದಿದೆ.
ಅನಧಿಕೃತ ಮಾರಾಟ: ಬೆಂಗಳೂರಿನ ಹಲವೆಡೆ ದೊಡ್ಡಬಳ್ಳಾಪುರದ ಸೀರೆ ಖರೀದಿಸುವ ಅನಧಿಕೃತ ನೂರಾರು ವ್ಯಾಪಾರಸ್ಥರಿದ್ದಾರೆ. ಅವರಿಗೆ ಯಾವುದೇ ಲೈಸನ್ಸ್ ಇರುವುದಿಲ್ಲ. ಆದಾಯ ತೆರಿಗೆ-ಮಾರಾಟ ಅಥವಾ ವಾಣಿಜ್ಯ ತೆರಿಗೆ ಕಟ್ಟುವುದಿಲ್ಲ. ಮಾಲೀಕರ ಬಗ್ಗೆಯೂ ಸ್ಪಷ್ಟ ಮಾಹಿತಿ ಇರುವುದಿಲ್ಲ. ಅವರು ಒಂದು ವೇಳೆ ನೇಕಾರರಿಗೆ ಮೋಸ ಮಾಡಿ ಓಡಿ ಹೋದರೂ ಅವರ ನೆಲೆ ಬಗ್ಗೆ ಅಧಿಕೃತ ಮಾಹಿತಿ ಸಿಗಲ್ಲ. ಸೀರೆಗಳನ್ನು ಖರೀದಿ ಮಾಡಿದ್ದಕ್ಕಾಗಲೀ, ಹಣ ನೀಡಿದ್ದಕ್ಕಾಗಲೀ ಯಾವುದೇ ಅಧಿಕೃತ ಓಚರ್, ಬಿಲ್ ಅಥವಾ ಇನ್ವಾಯ್ಸ್ ಇರುವುದಿಲ್ಲ. ಕೇವಲ ತುಂಡು ಹಾಳೆಯಲ್ಲೇ ವ್ಯವಹಾರ ಮಾಡುತ್ತಾರೆ. ಇದೊಂದು ರೀತಿಯ ಸಂತೆ ವ್ಯವಹಾರದಂತಾಗಿದೆ. ಇದರಿಂದ ಅನೇಕ ನೇಕಾರರು ಮೋಸ ಹೋಗಿದ್ದಾರೆ. ಮೋಸ ಮಾಡಿದವ ಮತ್ತೊಂದು ಹೆಸರಿನಲ್ಲಿ ಮತ್ತೆ ಉದ್ಯಮ ನಡೆಸುತ್ತಾನೆ. ಪೊಲೀಸರು ಕೂಡ ಕೆಲಮೊಮ್ಮೆ ಇಂಥಹವರೊಂದಿಗೆ ಶಾಮೀಲಾದ ಉದಾಹರಣೆಗಳಿವೆ ಎಂಬುದು ಇಲ್ಲಿನ ನೇಕಾರ ಹೋರಾಟ ಸಮಿತಿಯ ಆರೋಪ.
ಮಾರುಕಟ್ಟೆ ನಿಯಮಾವಳಿ ಬೇಕು: ಈ ಹಂತದಲ್ಲಿ ನೇಕಾರರು ವ್ಯಾಪಾರಸ್ಥರಿಗೆ ಮಾರುವ ಸೀರೆಗಳ ಮಾರಾಟಕ್ಕೆ ಕಟ್ಟುನಿಟ್ಟಾದ ನಿಯಮಾವಳಿ ಜಾರಿಗೆ ಬರಬೇಕು.ಸರ್ಕಾರಿ ದೊಡ್ಡಬಳ್ಳಾಪುರದ ಬಹುದೊಡ್ಡ ಉದ್ದಿಮೆ, ಗುಡಿಕೈಗಾರಿಕೆಯಾದ ವಿದ್ಯುತ್ ಮಗ್ಗ ನೇಕಾರರು ಉತ್ಪಾದಿಸುವ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ವೈಜ್ಞಾನಿಕ ಬೆಲೆಯಲ್ಲಿ ಖರೀದಿಸುವ ಪ್ರಕ್ರಿಯೆ ನಡೆಯಬೇಕು. ವಿದ್ಯುತ್ ಮಗ್ಗ ನೇಕಾರರ ಹಿತ ಕಾಯುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ನೇಕಾರರು ನಿರಂತರವಾಗಿ ವ್ಯಾಪಾರಸ್ಥರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ 4 ನಿರ್ಣಯಗಳನ್ನು ಮಾಡಲಾಗಿದೆ. ಈ ಹಂತದಲ್ಲಿ ದೀರ್ಘಕಾಲದ ಚೆಕ್ಗಳನ್ನು ಕೊಡುವವರಿಗೆ ಮತ್ತು ಹುಂಡಿ ಕೊಡುವವರಿಗೆ ಬಟ್ಟೆ ಕೊಡಬಾರದು. ಸೀರೆ ಹಣದಲ್ಲಿ ಹಬ್ಬದ ಮುಂಗಡ, ಅಂಗಡಿ ಹುಡುಗರ ಮುಂಗಡ, ಬೇರೆ ಬೇರೆ ರೀತಿಯ ಮೊತ್ತದಲ್ಲಿ ಹಣ ಕಡಿತ ಮಾಡುವ ಅಂಗಡಿಗಳಿಗೆ ಸೀರೆ ಕೊಡಬಾರದು. ಸೀರೆ ಕೊಡುವಾಗ ಒಪ್ಪಂದ ವ್ಯವಹಾರದ ಪತ್ರಕ್ಕೆ ಸಹಿ ತೆಗೆದುಕೊಳ್ಳಬೇಕು ಎಂದು ನೇಕಾರರಿಗೆ ಮನವಿ ಮಾಡಿದೆ. ಇದು ಜಾರಿಗೆ ಬರದಿದ್ದರೆ ಇಡೀ ಉದ್ಯಮವನ್ನು ಆಳುತ್ತಿರುವ ದಲ್ಲಾಳಿ ದಂಧೆಕೋರರು ನೇಕಾರರ ಬದುಕನ್ನೇ ಕಸಿದುಕೊಳ್ಳುವ ಅಪಾಯವಿದೆ. ನೇಕಾರರು ಎಚ್ಚರಗೊಳ್ಳಬೇಕಿದೆ.
ಟಿ ಬಿ.ಜಿ.ಹೇಮಂತರಾಜು, ಅಧ್ಯಕ್ಷರು, ನೇಕಾರರ ಹೋರಾಟ ಸಮಿತಿ.
ನೇಕಾರರ ಒತ್ತಾಯಗಳಿವು
1. ಅನಧಿಕೃತ ಅಂಗಡಿಗಳನ್ನು ತೆರೆದು ನೇಕಾರರಿಗೆ ವಂಚನೆ ಮಾಡುವವರಿಗೆ ಕಡಿವಾಣ ಹಾಕಿ.
2. ಮಾಲು ಖರೀದಿಸಿ ವಂಚಿಸಿ ವ್ಯವಹಾರ ಎತ್ತಂಗಡಿ ಮಾರುವವರಿಂದ ನೇಕಾರರಿಗೆ ಭದ್ರತೆ ಒದಗಿಸಬೇಕು.
3. ಸರ್ಕಾರ ಅಧಿಕೃತ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
4. ಅಂಗಡಿ ಮಾಲೀಕರು ವ್ಯವಹಾರದ ಪಾರದರ್ಶಕ ಲೆಕ್ಕ ಸರ್ಕಾರಕ್ಕೆ ಸಲ್ಲಿಸಲಿ.
5. ಮೋಸಕ್ಕೊಳಗಾದ ನೇಕಾರರಿಗೆ ಸಂಬಂಧಪಟ್ಟವರಿಂದ ಪರಿಹಾರ ಕೊಡಿಸಲು ಸೂಕ್ತ ಕಾನೂನು ಜಾರಿ.
6. ದೀರ್ಘಕಾಲೀನ ಚೆಕ್ ಮತ್ತು ಹುಂಡಿ ಕೊಟ್ಟು ವಂಚಿಸುವುದು ನಿಲ್ಲಲಿ.
7. ಒಟ್ಟು ಮೊತ್ತದಲ್ಲಿ ಪರ್ಸೆಂಟೇಜ್ ಹಿಡಿಯುವುದು ನಿಲ್ಲಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

