'ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ನಾಟಿ ಔಷಧ ಬಳಕೆ'
ಕ.ಪ್ರ.ವಾರ್ತೆ ಚನ್ನಪಟ್ಟಣ ಜ.21
ಮತ್ತೆ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ನಮ್ಮ ಒಕ್ಕೂಟ ನಾಟಿ ಔಷದ ಮತ್ತು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿ ಕೊಳ್ಳಲು ಚಿಂತನೆ ನಡೆಸಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ತಿಳಿಸಿದರು.
ಇಲ್ಲಿನ ಬಮೂಲ್ ಶಿಬಿರದ ಕಚೇರಿಯಲ್ಲಿ ಬೆಂಗಳೂರು ಒಕ್ಕೂಟದ ವತಿಯಿಂದ ಮೃತ ಸದಸ್ಯರು ಮತ್ತು ರಾಸುಗಳಿಗೆ ಪರಿಹಾರದ ಚೆಕ್ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಿ ಮಾತನಾಡಿ, ಕಾಲುಬಾಯಿ ಜ್ವರದಿಂದ ಕಳೆದ ಬಾರಿ ರೈತರು ಕಂಗಾಲಾಗಿದ್ದು ಈ ಬಾರಿ ಈ ಜ್ವರದ ತೀವ್ರತೆ ಕಾಣಿಸಿ ಕೊಳ್ಳದಂತೆ ಎಚ್ಚರವಹಿಸಲಾಗಿದೆ ಎಂದರು.
ಆರೋಗ್ಯ ತಪಾಸಣಾ ಶಿಬಿರ: ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.9 ರಂದು ನಡೆಸಲು ಉದ್ದೇಶಿಸಿದ್ದು ಈ ಶಿಬಿರಕ್ಕೆ ಹೆಚ್ಚಿನ ರೈತರು ಆಗಮಿಸುವಂತೆ ಕಾರ್ಯದರ್ಶಿಗಳು ಶ್ರಮಿಸಬೇಕೆಂದು ಮನವಿ ಮಾಡಿದರು.
ಬ್ಯಾಂಕ್ ಖಾತೆ ಆರಂಭಿಸಿ: ಸರ್ಕಾರದಿಂದ ರೈತರಿಗೆ ಪ್ರತಿಲೀಟರ್ಗೆ 4 ರು.ನಂತೆ ಸಿಗುತ್ತಿರುವ ಸಹಾಯಧನವನ್ನು ಇನ್ನು ಮುಂದೆ ರೈತರ ಖಾತೆಗೆ ವರ್ಗಾಯಿಸುವಂತೆ ಸರ್ಕಾರ ಸೂಚಿಸಿದ್ದು ಪ್ರತಿಯೊಂದು ಹಾಲು ಉತ್ಪಾದಕರ ಒಕ್ಕೂಟದ ಕಾರ್ಯದರ್ಶಿಗಳು ಕೂಡಲೇ ಹಾಲು ಉತ್ಪಾದಕರಿಗೆ ಖಾತೆ ತೆರೆಯಲು ಸೂಚಿಸಿ ಅವರ ಖಾತೆ ಸಂಖ್ಯೆಯನ್ನು ಒಕ್ಕೂಟಕ್ಕೆ ನೀಡಬೇಕೆಂದು ಅವರು ತಿಳಿಸಿದರು.
ಗುಣಮಟ್ಟ ಕಾಪಾಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಹಾರ ಸುರಕ್ಷತಾ ಕಾಯಿದೆ ಫೆ.4 ರಿಂದ ಜಾರಿಗೆ ಬರಲಿದ್ದು ಈ ಕಾಯಿದೆ ಅನ್ವಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಂಬಂಧಿಸಿದ ಅಧಿಕಾರಿಗಳಿಂದ ನೋಂದಣಿ ಮಾಡಿಸಿ ಕೊಳ್ಳಬೇಕಿದೆ. ನೋಂದಣಿ ಮಾಡಿಸಿ ಕೊಳ್ಳದಿದ್ದಲ್ಲಿ ದಂಡ ಮತ್ತು ಶಿಕ್ಷೆ ವಿದಿಸುವ ಸಾಧ್ಯತೆ ಇರುವುದರಿಂದ ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರತಿಯೊಬ್ಬ ರೈತರು ಸಂಘಕ್ಕೆ ಹಾಕುವ ಹಾಲನ್ನು ಪರಿಶೀಲಿಸಿ ಗುಣಮಟ್ಟ ಆಧಾರದ ಮೇಲೆ ಹಣ ಪಾವತಿ ಮಾಡಬೇಕು. ಕಡಿಮೆ ಗುಣಮಟ್ಟದ ಹಾಲು ಪೂರೈಕೆ ಮಾಡಿದವರಿಗೆ, ಮಾಡದವರಿಗೆ ಒಂದೇ ಬೆಲೆ ನೀಡುವುದು ಸರಿಯಲ್ಲ ಎಂದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ರನ್ನು ಕಾರ್ಯದರ್ಶಿಗಳು ಸನ್ಮಾನಿಸಿದರು. ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಶಿಬಿರದ ಉಪವ್ಯವಸ್ಥಾಪಕ ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಮಹದೇವೇಗೌಡ, ಶಿವಪ್ರಸನ್ನ, ಅಮಿತಾ ಹೆಗಡೆ, ಪರ್ಹಾಜಬೀನ್, ಅರುಣ್ಕುಮಾರ್, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ದೇವರಾಜು ತಗಚಗೆರೆ, ಡೈರಿ ರೇವಣ್ಣ, ಸೋಗಾಲ ತಮ್ಮಯ್ಯ, ಹೊಂಗನೂರು ಪುಟ್ಟರಾಜು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

