ಬೆಂಗಳೂರು ಗ್ರಾಮಾಂತರ

ಪಂಚಾಯಿತಿ ಕಚೇರಿ ಪಕ್ಕವೇ ಅನೈರ್ಮಲ್ಯ

Published On :

ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಮೋಟಗಾನಹಳ್ಳಿ ಗ್ರಾ.ಪಂ. ಪಕ್ಕದಲ್ಲಿರುವ ರಸ್ತೆ ಬದಿ ದೊಡ್ಡ ಮೋರಿ ಗಬ್ಬೆದ್ದು ನಾರುತ್ತಿದೆ. ಇಷ್ಟು ಸಾಲದೆನ್ನುವಂತೆ ರಸ್ತೆಯುದ್ದಕ್ಕೂ ತ್ಯಾಜ್ಯದ ರಾಶಿಯೇ ಆವರಿಸಿಕೊಂಡು, ಅನೈರ್ಮಲ್ಯವನ್ನು ಉಂಟು ಮಾಡುತ್ತಿದೆ.  ಈ ಪರಿಣಾಮ ದಾರಿ ಹೋಕರು, ಆಸುಪಾಸಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಲೇ ಇದ್ದಾರೆ. ನೈರ್ಮಲ್ಯದ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಚುನಾಯಿತ ವ್ಯವಸ್ಥೆಯಿಂದ ಕೂಡಿದ ಗ್ರಾ.ಪಂ. ತನ್ನ ಕಚೇರಿ ಮಗ್ಗುಲಲ್ಲೇ ಇರುವ ಅನೈರ್ಮಲ್ಯದ ಕಡೆ ಗಮನ ಹರಿಸಿಲ್ಲ.  ಈ ಬಗ್ಗೆ ಜನರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಕ್ಕಪಕ್ಕದ ಮನೆಗಳಲ್ಲಿ ಸಾಕಿರುವ ನಾಯಿಗಳು, ಕೋಳಿಗಳು ಮೇವಿಗಾಗಿ ರಸ್ತೆ ಬದಿ ಇರುವ ಕಸದ ರಾಶಿಯನ್ನು ಕೆದಕಿ ರಸ್ತೆಗೆಲ್ಲಾ ಹರಡುತ್ತಿವೆ. ಇದರಿಂದ ಮತ್ತಷ್ಟು ತೊಂದರೆ ಉಂಟಾಗುತ್ತಿದೆ.  ತಕ್ಷಣವೇ ಕಸದ ರಾಶಿಯನ್ನು ತೆರವುಗೊಳಿಸುವುದು ಮತ್ತು ಮೋರಿಯನ್ನು ಶುಚೀಕರಿಸುವ ನಿಟ್ಟಿನಲ್ಲಿ ಗ್ರಾ.ಪಂ. ಮುಂದಾಗಬೇಕಿದೆ. ಇಲ್ಲವಾದಲ್ಲಿ ರೋಗ ರುಜಿನಗಳು ಹರಡುವ ಭೀತಿ ಇದೆ. ಅಂತೆಯೇ ಈ ಗ್ರಾ.ಪಂ.ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಮುನ್ಸೂಚನೆ ಇದ್ದು, ಆ ನಿಟ್ಟಿನಲ್ಲೂ ಕ್ರಮ ಜರುಗಿಸಬೇಕು.  
-ರಂಗಸ್ವಾಮಿ, ಮೋಟಗಾನಹಳ್ಳಿ.
ನಮಗೂ ಬೇಕು ಶೌಚಾಲಯ
ಚನ್ನಪಟ್ಟಣದ ತಾ.ಪಂ. ಕಚೇರಿ ಸಮುಚ್ಚಯದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ. ಕಚೇರಿಗೆ ಬರುವ ಸಾರ್ವಜನಿಕರು ಶೌಚಕ್ಕಾಗಿ ಬಯಲನ್ನೇ ಶ್ರಯಿಸುವಂತಾಗಿದೆ. ಹಳೆಯ ಕಟ್ಟಡ ಅಲಂಕಾರ, ದುರಸ್ತಿಗೆಂದು ಪ್ರತಿವರ್ಷ ಲಕ್ಷಾಂತರ  ಹಣ ಖರ್ಚು ಮಾಡುವ ತಾ.ಪಂ. ಸಾರ್ವಜನಿಕ ಶೌಚಾಲಯದ ಕಡೆ ಗಮನ ಹರಿಸಿಲ್ಲ.  ನಿರ್ಮಲ ಗ್ರಾಮ, ಪ್ರತಿ ಮನೆಗೆ ಶೌಚಾಲಯ ಸೇರಿದಂತೆ ನೈರ್ಮಲ್ಯದ ಬಗ್ಗೆ ನಾನಾ ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿರುವ ತಾ.ಪಂ. ಆಡಳಿತವು ತನ್ನದೇ ಕಟ್ಟಡದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಕಲ್ಪಿಸದಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿಯೇ ಸರಿ.  ಕಚೇರಿಯಂಗಳದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯವನ್ನೇನೋ ನಿರ್ಮಿಸಲಾಗಿದೆ. ಆದರೆ,  ಸಮರ್ಪಕ ನಿರ್ವಹಣೆ ಇಲ್ಲದೆ ಈ ಶೌಚಾಲಯ ನಿರುಪಯುಕ್ತವಾಗಿದೆ. ಅದನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಕಾಳಜಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗಿಲ್ಲ.   ಕೆಲಸ ನಿಮಿತ್ತ ತಾ.ಪಂ. ಕಚೇರಿ ಮತ್ತು ತಾಲೂಕು ಕಚೇರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಿದ್ದು, ಇವರೆಲ್ಲ ಶೌಚಕ್ಕಾಗಿ ಪರದಾಡುವಂತಾಗಿದೆ. ಪುರುಷರೇನೋ ಬಯಲನ್ನು ಆಶ್ರಯಿಸುತ್ತಾರೆ. ಮಹಿಳೆಯರ ಪಾಡು ಹೇಳತೀರದು. ಇನ್ನಾದರೂ ದಪ್ಪ ಚರ್ಮದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.  
-ಹರೀಶ್, ಚನ್ನಪಟ್ಟಣ.
ಮಾಹಿತಿಗಳು ಕನ್ನಡದಲ್ಲಿ ಇರಲಿ
ರಾಮನಗರ ಜಿಲ್ಲೆಯು ಅಪ್ಪಟ ಕನ್ನಡದ ನೆಲ ಮಾತ್ರವಲ್ಲದೆ ಬಹುತೇಕ ಗ್ರಾಮೀಣರಿಂದ ಕೂಡಿದೆ. ಇಂತಹ ಕಡೆ ನೂರಾರು ಬ್ಯಾಂಕುಗಳು ಶಾಖೆಗಳನ್ನು ತೆರೆದಿವೆ. ಆದರೆ, ಬಹುತೇಕ ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಫಾರಂ, ಹಣ ಕಟ್ಟುವುದು, ಡ್ರಾ ಮಾಡುವುದು, ಡಿಡಿ, ಹಣ ವರ್ಗಾವಣೆ ಸಹಿತ ಇತರೆ ಚಲನ್ಗಳಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿಲ್ಲ.  ಎಲ್ಲ ಚಲನ್ ಮತ್ತು ಫಾರಂಗಳು ಇಂಗ್ಲೀಷ್, ಹಿಂದಿಯಲ್ಲಷ್ಟೇ ಇರುತ್ತವೆ. ರಾಜ್ಯದ ಆಡಳಿತ ಭಾಷೆಯಾಗಿ ಕನ್ನಡ ಜಾರಿ ನಂತರವೂ ಬ್ಯಾಂಕುಗಳು ತನ್ನ ದಾಖಲೆ, ಚಲನ್, ಫಾರಂಗಳನ್ನು ಕನ್ನಡದಲ್ಲಿ ಮುದ್ರಿಸದೇ ಇರುವುದು ಕನ್ನಡ ಭಾಷೆಗೆ ಮಾತ್ರವಲ್ಲದೆ ಸ್ಥಳೀಯ ಜನತೆಗೆ ಮಾಡಿದ ಅಗೌರವ ಎನ್ನಬಹುದಾಗಿದೆ.  ಕನ್ನಡ ಬಳಕೆ ಇಲ್ಲದ ಕಾರಣ ಇಂಗ್ಲೀಷ್ ಅಥವಾ ಹಿಂದಿ ಬಾರದ ಗ್ರಾಮೀಣರು ಬ್ಯಾಂಕುಗಳಿಗೆ ಬಂದಾದ ಅರ್ಜಿ ಫಾರಂ, ಚಲನ್ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಲು ಬೇರೆಯವರನ್ನು ಆಶ್ರಯಿಸುವ ಸ್ಥಿತಿ  ಎದುರಾಗಿದೆ. ಈ ಸಮಸ್ಯೆ ಸಂಬಂಧ ಕನ್ನಡಪರ ಸಂಘಟನೆಗಳು ಇನ್ನೂ ಮೌನ ವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
- ನಾರಾಯಣಮೂರ್ತಿ, ರಾಮನಗರ.
ಒಬ್ಬರಿಗೊಂದು ಕಾನೂನು ಏಕೆ?
ಚನ್ನಪಟ್ಟಣ ನಗರದ ಚಾನಲ್ ರಸ್ತೆ ಏರಿ ಆಸುಪಾಸಿನಲ್ಲಿ ಸರ್ಕಾರಿ ಜಾಗ ಮತ್ತು ರಸ್ತೆಯನ್ನೇ ಅತಿಕ್ರಮಿಸಿ ಮನೆ, ವಾಣಿಜ್ಯ ಮಳಿಗೆ ನಿರ್ಮಿಸಿರುವವರ ವಿಷಯದಲ್ಲಿ ನಗರಸಭೆ, ಜಿಲ್ಲಾಡಳಿತವು ತಾರತಮ್ಯ ನೀತಿ ಅನುಸರಣೆ ಮಾಡುತ್ತಿದೆ.   ಮೊನ್ನೆಯಷ್ಟೆ ಚಾನಲ್ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅಧಿಕಾರಿಗಳ ತಂಡ ಕ್ಷಣಮಾತ್ರದಲ್ಲೇ ಕೆಡವಿದೆ. ಆದರೆ, ಅಕ್ಕಪಕ್ಕದಲ್ಲಿರುವ ಯಾವೊಂದು ಅಕ್ರಮ ಕಟ್ಟಡವನ್ನೂ ಮುಟ್ಟಿಲ್ಲ.  ಚಾನಲ್ ರಸ್ತೆಯುದ್ದಕ್ಕೂ ಜಾಗ ಅತಿಕ್ರಮಿಸಿ ನಿರ್ಮಿಸಲಾದ ಕಟ್ಟಡಗಳು ಹತ್ತಾರು ಇವೆ. ಪ್ರಭಾವಿಗಳು, ರಾಜಕಾರಣಿಗಳ ಬೆಂಬಲ ಇರುವವರು, ಲಂಚರುಷುವತ್ತು ನೀಡಿದವರ ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ರಕ್ಷಣೆ ನೀಡಿದ್ದಾರೆ. ಈ ತಾರತಮ್ಯ ನೀತಿ ಬಿಟ್ಟು, ತಕ್ಷಣವೇ ರಸ್ತೆ ಅಳತೆ ಮಾಡಿ ಎಲ್ಲ ಅಕ್ರಮ ಕಟ್ಟಡಗಳನ್ನು ಕೆಡವುವ ಕಾರ್ಯಾಚರಣೆ ನಡೆಸಲಿ.
-ರವಿ, ಚನ್ನಪಟ್ಟಣ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.