ಬೆಂಗಳೂರು ಗ್ರಾಮಾಂತರ

ರಾಷ್ಟ್ರದ ಅಖಂಡತೆ, ಏಕತೆ ಕಾಪಾಡುವುದು ಕರ್ತವ್ಯ

Published On :

ರಾಮನಗರ: ರಾಷ್ಟ್ರದ ಅಖಂಡತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭ್ರಾತೃತ್ವ ಮನೋಭಾವನೆಯನ್ನು ವೃದ್ಧಿಗೊಳಿಸಿ ಶಾಂತಿ, ನೆಮ್ಮದಿ ಕಾಪಾಡಲು ಪಣತೊಡಬೇಕು ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 65ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಭಾರತದ ಸಾರ್ವಭೌಮತ್ವ, ಸಮಾಜವಾದ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪಾಲಿಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಸಾರಥ್ಯದಲ್ಲಿ ರಚಿತವಾದ ನಮ್ಮ ದೇಶದ ಸಂವಿಧಾನವು ಜಗತ್ತಿನಲ್ಲೇ ಶ್ರೇಷ್ಠವಾದುದು. ಅದರ ಆಶಯಗಳನ್ನರಿತು ನಾವು ಚಾಚೂ ತಪ್ಪದೆ ಪಾಲಿಸುವ ಮೂಲಕ ದೇಶವನ್ನು ಆಭ್ಯುದಯದತ್ತ ಕೊಂಡೊಯ್ಯಬೇಕು ಎಂದು ಅವರು ಕಿವಿಮಾತು ತಿಳಿಸಿದರು.
ಪ್ರಗತಿ ಹಾದಿಯಲ್ಲಿ: ಸಂವಿಧಾನದ ಆಶಯಗಳಲ್ಲಿ ಒಳಿತು, ಕೆಟ್ಟದ್ದನ್ನು ಎತ್ತಿ ತೋರುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಸಂವಿಧಾನದಿಂದ ಒಳ್ಳೆಯದು, ಕೆಟ್ಟದ್ದು ಆಗುವುದು ಅದನ್ನು ಜಾರಿಗೆ ತರುವ ವ್ಯಕ್ತಿಗಳಿಂದಷ್ಟೇ ಎಂದು ಶಿವಕುಮಾರ್ ಹೇಳಿದರು.
ಸಂಪದ್ಭರಿತ ಸಂಪನ್ಮೂಲಗಳಿರುವುದೆಂದು ಅರ್ಥಶಾಸ್ತ್ರಜ್ಞರಿಂದ ಕರೆಸಿಕೊಂಡಿರುವ ನಮ್ಮ ದೇಶವು ಕಳೆದ 65 ವರ್ಷಗಳಿಂದ ಹಲಬಗೆಯ ಬದಲಾವಣೆಗಳನ್ನು ಕಂಡಿದೆ. ಕೃಷಿ ಪ್ರಧಾನವಾದ ನಮ್ಮ ದೇಶವೀಗ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು.
ಸರ್ಕಾರ ಕಟಿಬದ್ಧ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಸಮಸ್ತರ ಜನತೆಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅವರ ಹಿತ ಕಾಯುತ್ತಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.  
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆ, ಶಿಕ್ಷಣ, ಶೌಚಾಲಯ ಕಲ್ಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ. ಮಹಿಳೆಯರ ಸುರಕ್ಷತೆ, ದುರ್ಬಲರು ಮತ್ತು ಯುವಜನರ ಸಬಲೀಕರಣಕ್ಕೂ ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಗೆ ಆದ್ಯತೆ: ಅಲ್ಪ ಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರ ಏಳ್ಗೆಗೆ ಪೂರಕವಾದ ಯೋಜನೆಗಳ ಜಾರಿ, ಕೃಷಿ ಪಂಪ್ಸೆಟ್ಗಳಿಗೆ ನಿರಂತರ 7 ತಾಸು ತ್ರೀಫೇಸ್ ವಿದ್ಯುತ್ ಪೂರೈಕೆ, ಗ್ರಾಮೀಣ ಪ್ರದೇಶಕ್ಕೆ ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಬಡಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ಒದಗಿಸಲು ಆಹಾರ ಭದ್ರತಾ ಮಸೂದೆ ಜಾರಿಗೊಳಿಸಲಾಗಿದೆ. ಇದರ ಸೌಲಭ್ಯ 81 ಕೋಟಿ ಜನರಿಗೆ ತಲುಪಲಿದೆ. ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಲು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ರೂಪಿಸಲಾಗಿದೆ ಎಂದರು.
ಜನಪರ ಕಾರ್ಯಕ್ರಮ: ಕೇಂದ್ರ ಸರ್ಕಾರದ ಯೋಜನೆ ಸೌಲಭ್ಯಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವುದಕ್ಕಾಗಿ ನೇರ ನಗದು ವರ್ಗಾವಣೆ ಯೋಜನೆ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಇದರಿಂದ ದುರ್ಬಳಕ್ಕೆ ತಪ್ಪಲಿದೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ 8 ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ನೂತನ ಸರ್ಕಾರವು ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ ಭಾಗ್ಯ, ಹಾಲು ಉತ್ಪಾದಕರಿಗೆ ರು.4 ಪ್ರೋತ್ಸಾಹ ಧನದಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ವಿವರಿಸಿದರು.
ರೈತಪರ ಸರ್ಕಾರ: ರೈತಪರವಾಗಿರುವ ನಮ್ಮ ಸರ್ಕಾರವು ರಾಜ್ಯದಲ್ಲಿ ಇದೇ ಮೊದಲ ಬಾರಿ ಕೃಷಿ ಬೆಲೆ ಆಯೋಗ ರಚನೆ ಮಾಡಿದೆ. ರು.2 ಲಕ್ಷವರೆಗೆ ಬಡ್ಡಿ ರಹಿತ ಕೃಷಿ ಸಾಲ ನೀಡುವ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ರೇಷ್ಮೆನಾಡು ಎಂದೇ ಖ್ಯಾತವಾಗಿರುವ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಪ್ರಾಶಸ್ತ್ಯ ನೀಡಿದೆ.
ಗಣತಂತ್ರ ವ್ಯವಸ್ಥೆಯ ಆಶಯದಂತೆ ಗ್ರಾಮೀಣಾಭಿವೃದ್ಧಿ ಕಲ್ಪನೆಗೆ ಒತ್ತು ನೀಡಿ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಶೀಘ್ರ ಪರಿಹಾರ: ರಾಜ್ಯದಲ್ಲಿ ಕಾಲುಬಾಯಿ ಜ್ವರಬಾಧೆಗೆ 15 ಸಾವಿರಕ್ಕೂ ಹೆಚ್ಚು ರಾಸುಗಳು ಬಲಿಯಾಗಿವೆ. ಈ ಪೈಕಿ ಜಿಲ್ಲೆಯಲ್ಲಿ ಮರಣಿಸಿದ 2176 ರಾಸುಗಳಲ್ಲಿ 461 ರಾಸುಗಳಿಗೆ ರು.52.97 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ ರಾಸುಗಳ ಮಾಲೀಕರಿಗೂ ಶೀಘ್ರ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿರುವ 2.47 ಲಕ್ಷ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಮುಂಜಾಗ್ರತಾ ಕ್ರಮದ ಲಸಿಕೆ ಹಾಕಲಾಗಿದೆ. ಈ ಮೂಲಕ ರೋಗ ಹತೋಟಿಕೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. 1 ಲಕ್ಷ ಕೋಳಿಗೆಗಳಿಗೆ ಕೊಕ್ಕರೆ ರೋಗದ ಲಸಿಕೆ ನೀಡಲಾಗಿದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ: ರಾಮನಗರ ಜಿಲ್ಲೆಯಲ್ಲಿರುವ ಸಂಪನ್ಮೂಲ ಆಧಾರಿತ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಎಲ್ಲ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ, ಸವಲತ್ತುಗಳ ಸದ್ಬಳಕೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಅಭಿವೃದ್ಧಿ ಹೆಸರಲ್ಲಿ ರಾಜಕಾರಣ ಮಾಡುವುದಿಲ್ಲ. ಸರ್ಕಾರದ ಯೋಜನೆಗಳನ್ನು ಪಕ್ಷಭೇದವಿಲ್ಲದೆ ಜನತೆಗೆ  ತಲುಪಿಸುವುದೇ ನನ್ನ ಗುರಿ ಎಂದು ಶಿವಕುಮಾರ್, ಈ ಹಿಂದೆ ರೇಷ್ಮೆ ಬೆಳೆಗಾರರ ಸಂಕಷ್ಟ ನಿವಾರಣೆಗಾಗಿ ದೆಹಲಿಗೆ ನಿಯೋಗ ಕೊಂಡೊಯ್ದು ಹೋರಾಟ ನಡೆಸಿದ್ದನ್ನು ಮೆಲಕು ಹಾಕಿದರು.
 ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಉಪಾಧ್ಯಕ್ಷ ಶಂಕರಯ್ಯ, ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್, ಪ್ರಭಾರ ಎಸ್ಪಿ ಅಬ್ದುಲ್ ಆಹದ್, ಜಿ.ಪಂ. ಸಿಇಒ ಡಾ.ವೆಂಕಟೇಶ್, ಡಿವೈಎಸ್ಪಿ ರಾಮಲಿಂಗಪ್ಪ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.