ಬೆಂಗಳೂರು ಗ್ರಾಮಾಂತರ

ಎಸ್ಸಿಎಸ್ಟಿ ಅನುದಾನ ಸದ್ಬಳಕೆ ಮಾಡದಿದ್ದರೆ ಕ್ರಮ

Published On :

ರಾಮನಗರ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಮೀಸಲಿಟ್ಟಿರುವ ಶೇ. 22.75ರ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಸದರಿ ಅನುದಾನ ಸದ್ಬಳಕೆ ಮಾಡದ ಇಲಾಖೆ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.  
ಕಂದಾಯ ಭವನದಲ್ಲಿ ನಡೆದ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ಉಳಿದಿರುವ ಎರಡು ತಿಂಗಳಲ್ಲಿ ಶೇ. 22.75ರಷ್ಟು ಅನುದಾನ ಕಡ್ಡಾಯ ಸದ್ಬಳಕೆ ಮೂಲಕ ಗುರಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ಮಾಹಿತಿಗೆ ಸೂಚನೆ: ಇದುವರೆಗೆ ಜಿಲ್ಲೆಯಲ್ಲಿ ಶೇ. 22.75ರ ಅನುದಾನದಡಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಇನ್ನು 3 ದಿನದೊಳಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಎಲ್ಲ ಇಲಾಖೆ ಅಧಿಕಾರಿಗಳು ಸಲ್ಲಿಸಬೇಕು. ಕ್ರೋಢೀಕರಿಸಿದ ಮಾಹಿತಿ ವಿವರವನ್ನು ವಾರ್ತಾ ಇಲಾಖೆ ಮೂಲಕ ಮಾಧ್ಯಮಗಳಲ್ಲಿ ಪ್ರಚುರಪಡಿಸಬೇಕು. ವಿಫಲರಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯನ್ನಾಗಿಸಲಾಗುವುದು ಎಂದರು.
ಫಲಾನುಭವಿಗಳಿಗೆ ನೇರ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಹೊಣೆ. ಅನುದಾನ ದುರ್ಬಳಕೆಯ ದೂರುಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ ಸ್ಮಶಾನ ಅವಶ್ಯಕತೆ ಇರುವ ಗ್ರಾಮಗಳನ್ನು ಗುರುತಿಸಿ, ಸ್ಮಶಾನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಜರುಗಿಸುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿರುವ 27 ಅಂಬೇಡ್ಕರ್ ಭವನಗಳ ಸ್ಥಿತಿಗತಿಯ ವಿವರ ಒದಗಿಸಬೇಕು. ಇನ್ನಷ್ಟು ಭವನ ನಿರ್ಮಾಣ ಅಗತ್ಯವಿದ್ದು, ಸೂಕ್ತ ಸ್ಥಳ ಗುರುತಿಸಿ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದರು.
ಎಸ್ಸಿಎಸ್ಟಿಗಳ ಸಮಸ್ಯೆ, ಕುಂದು-ಕೊರತೆ ಆಲಿಸಿದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಆತಂಕ ಬೇಡ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದರು.  
ದೂರುಗಳ ಸುರಿಮಳೆ: 1989ರ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ  ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗುತ್ತಿಲ್ಲ. ಠಾಣೆ ಅಧಿಕಾರಿಗಳು ಪ್ರಕರಣಗಳಲ್ಲಿ ದೂರುಗಳನ್ನೇ ತಿರುಚಿ, ದುರ್ಬಲಗೊಳಿಸುತ್ತಿದ್ದಾರೆ. ಭೂ ವ್ಯಾಜ್ಯದ ಬಗ್ಗೆ ದೌರ್ಜನ್ಯ ನಡೆದಾಗಲೂ ದಲಿತರಿಗೆ ಕಾನೂನಿನ ರಕ್ಷಣೆ ಒದಗಿಸಲಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿ, ಆರೋಪಿಗಳನ್ನು ಬಚಾವು ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಇದರಿಂದ ದೂರುದಾರರಿಗೆ ನ್ಯಾಯ ಸಿಗದಾಗಿದೆ ಎಂದು ದಾಖಲೆ ಸಮೇತ ದೂರಿದರು.  ಈ ವಿಷಯವಾಗಿ ಶೀಘ್ರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆಯಿತ್ತರು. ಎಡಿಸಿ ಬಸವರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ಪ್ರಭಾರ ಎಸ್ಪಿ ಅಬ್ದುಲ್ ಆಹದ್, ಅಪರ ಎಸ್ಪಿ ಕುಲುದೀಪ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.