ಬೆಂಗಳೂರು ಗ್ರಾಮಾಂತರ

ಪೊಲೀಸ್ ವರಿಷ್ಠಾಧಿಕಾರಿ- ದೊರೆಸ್ವಾಮಿ ವಾಕ್ಸಮರ

Published On :

ಚನ್ನಪಟ್ಟಣ/ ರಾಮನಗರ: ಎಲ್ಲ ಅಕ್ರಮಗಳಿಗೂ ಪೊಲೀಸರದ್ದೇ ಕುಮ್ಮಕ್ಕು ಎನ್ನುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿಕೆಯು ಅಪರ ಮತ್ತು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಆಹದ್ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.  
ಅಕ್ರಮ ಮರಳುಗಾರಿಕೆ ವಿರುದ್ಧ ಚನ್ನಪಟ್ಟಣ ತಾಲೂಕು ಕಚೇರಿ ಎದುರು ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ನಿರಶನದಲ್ಲಿ ಪಾಲ್ಗೊಂಡ ದೊರೆಸ್ವಾಮಿ ಅವರು ಪ್ರಭಾರ ಎಸ್ಪಿ ಕಡೆ ಬೊಟ್ಟು ಮಾಡಿ ಪೊಲೀಸ್ ವೈಫಲ್ಯ ಪ್ರಸ್ತಾಪಿಸಿದರು.
10 ಪರ್ಸೆಂಟ್ ಇದ್ದಾರೆ: ಕುರ್ಚಿ ಬಿಟ್ಟು ಎದ್ದು ನಿಂತ ಅಬ್ದುಲ್ ಆಹದ್ ಆಕ್ಷೇಪಿಸಿದರು. ನಿಮ್ಮ ಆರೋಪದಂತೆ 10 ಪರ್ಸೆಂಟ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಮ್ಮಲ್ಲಿದ್ದಾರೆ ನಿಜ. ಹಾಗೆಂದು ಇಡೀ ಪೊಲೀಸ್ ಇಲಾಖೆಯನ್ನೇ  ಸಾರ್ವತ್ರಿಕರಣಗೊಳಿಸಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಅದರಿಂದ ಕೆರಳಿದ ದೊರೆಸ್ವಾಮಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹೊರಟರು. ನನ್ನದೂ ಅದೇ ಧಾಟಿಯ ಮಾತು. ಬಳ್ಳಾರಿ ಗಣಿಗಾರಿಕೆಯಿಂದಿಡಿದು ಚನ್ನಪಟ್ಟಣ ಮರಳುಗಾರಿಕೆವರೆಗೆ ವೈಫಲ್ಯ ಪೊಲೀಸರದ್ದೇ. ಹೌದು ಅಥವಾ ಇಲ್ಲ ಎಂದು ಹೇಳಿ ಎಂದು ಪ್ರಶ್ನೆ ಎಸೆದರು.
ಕಾಸಿಗೆ ಕೈಯ್ಯೊಡ್ಡುತ್ತೀರಿ: ಪೊಲೀಸರು ಮರಳು ಲಾರಿಗಳನ್ನು ತಡೆದು ಕಾಸಿಗೆ ಕೈಯ್ಯೊಡ್ಡುತ್ತಾರೆ. ಇಂತಹ ನಿದರ್ಶನ ಎಷ್ಟೋ ಇವೆ. ಇಂತಹ ಸ್ಥಿತಿ ನಿರ್ನಾಮವಾಗಿ ಕಟ್ಟುನಿಟ್ಟಿನ ಕ್ರಮ ಜಾರಿಯಾದರೆ ಯಾರು ತಾನೆ ಧೈರ್ಯವಾಗಿ ಮರಳು ಲೂಟಿ ಮಾಡಲು ಸಾಧ್ಯ ಎಂದು ದೊರೆಸ್ವಾಮಿ ಏರು ಧ್ವನಿಯಲ್ಲೇ ಪ್ರಶ್ನಿಸಿದರು.
ದೊರೆಸ್ವಾಮಿ ಅವರ ಮಾತಿಗೆ ಧರಣಿನಿರತರು ಕರತಾಡನದೊಂದಿಗೆ ಧ್ವನಿಗೂಡಿಸಿದರು. ಮಾತಿನ ಚಕಮಕಿ ಮುಂದುವರೆಯುವ ಲಕ್ಷಣ ಗೋಚರಿಸಿದಾಗ ಸ್ವತಃ ಅಬ್ದುಲ್ ಆಹಾದ್ ಅವರೇ ಮೌನಕ್ಕೆ ಮೊರೆ ಹೋಗಿ ತಿಳಿ ವಾತಾವರಣ ಮೂಡಿಸಿದರು.
ಚಳ್ಳೆಹಣ್ಣು ತಿನ್ನಿಸಿದರು: ಅಕ್ರಮ ಮರಳುಗಾರಿಕೆ ತಡೆಗಟ್ಟುವ ಭರವಸೆ ನಂತರ ಸಿದ್ದರಾಮ ಹೆಗ್ಗಡೆ ಅವರ ಹೋರಾಟ ಅಂತ್ಯ ಕಾಣುವುದೆನ್ನುವ ಜಿಲ್ಲಾಡಳಿತದ ನಿರೀಕ್ಷೆಯೂ ಹುಸಿಯಾಯ್ತು. ದೊರೆಸ್ವಾಮಿ ಅವರಿಂದ ಪಡೆದ ಬಾಳೆ ಹಣ್ಣು ತಿಂದ ಹೆಗ್ಗಡೆ ಹೋರಾಟ ಮುಂದುವರೆಸುವ ಶಪಥ ಮಾಡಿ ಚಳ್ಳೆ ಹಣ್ಣು ತಿನ್ನಿಸಿದರು.
ಮೊದಲಿಗೆ ನಿರಶನ ಅಂತ್ಯಗೊಳಿಸುವಂತೆ ಹೆಗ್ಗಡೆ ಅವರನ್ನು ಮನವೊಲಿಸಿದ ದೊರೆಸ್ವಾಮಿ, ಕಡೆಗೆ ಆಶೀರ್ವದಿಸಿ ಜಯ ಸಿಗುವತನಕ ಹೋರಾಟ ನಡೆಸು. ನಮ್ಮೆಲ್ಲರ ಬೆಂಬಲ ನಿನಗಿದೆ ಎಂದು ಅಭಯ ನೀಡಿ ನಿರ್ಗಮಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.