ಬೆಂಗಳೂರು ಗ್ರಾಮಾಂತರ

ನೀರಿಗೆ ಪರಮಶಿವಯ್ಯ ವರದಿಯೇ ಪರಿಹಾರ

Published On :

ನೆಲಮಂಗಲ: ತಾಲೂಕಿನಲ್ಲಿ ಅಂತರ್ಜಲ ಮತ್ತು ಶಾಶ್ವತ ಕುಡಿಯುವ ನೀರು ಒದಗಿಸಲು ಜಿ.ಎಸ್. ಪರಮಶಿವಯ್ಯ ಅವರ ವರದಿಯೇ ಅಂತಿಮ ಪರಿಹಾರ ಎಂದು ನೀರಾವರಿ ಹೋರಾಟಗಾರ ಕುಂದರನಹಳ್ಳಿ ರಮೇಶ್ ತಿಳಿಸಿದರು.
ಅವರು ಗುರುವಾರ ದಾಬಸ್‌ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ತಾಲೂಕು ಶಾಶ್ವತ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಮಿತಿ ಏರ್ಪಡಿಸಿದ್ದ ರೈತರ ಬೃಹತ್ ಸಭೆಯಲ್ಲಿ ಮಾತನಾಡುತ್ತಾ ಯಾವುದೇ ಪೂರ್ವ ತಯಾರಿಲ್ಲದ ಅನುಮೋದನೆಯಿಲ್ಲದ ಮತ್ತು ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಚುನಾವಣೆ ದುರುದ್ದೇಶದಿಂದ ಜಾರಿಗೆ ತರುವುದು ಸರಿಯಲ್ಲ. ಈ ಯೋಜನೆಗೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ರೈತರ ಬಾರಿ ವಿರೋಧವಿದೆ ಎಂದರು.
ಸಂಸದ ಹಾಗೂ ಕೇಂದ್ರದ ಪ್ರಭಾವಿ ಸಚಿವ ಎಂ. ವೀರಪ್ಪಮೊಯ್ಲಿ ಪ್ರಚಾರ ಪಡೆಯಲೆಂದೇ ಸರ್.ಎಂ.ವಿ ಜನ್ಮಸ್ಥಳವಾದ ಮುದ್ದೇನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಮುಂದಾಗಿರುವುದು ಹಾಸ್ಯಾಸ್ಪದವಾದ ವಿಚಾರ. ಸಚಿವರಿಗೆ ಜನರ ಮೇಲೆ ಅತೀ ಪ್ರೀತಿ ಇದ್ದರೆ ಎತ್ತಿನ ಹೊಳೆಯಲ್ಲಿಯೇ ಪೂಜಿಸಿ ಯೋಜನೆಗೆ ಚಾಲನೆ ನೀಡಲಿ ಎಂದು ಸವಾಲು ಹಾಕಿದರು.
ಕಡಿಮೆ ವೆಚ್ಚದ ಯೋಜನೆ: ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನೇತ್ರಾವತಿ ಮತ್ತು ಹೇಮಾವತಿ ಸೇರಿದಂತೆ ಇನ್ನು ಹಲವು ನದಿಗಳಿಂದ ಶೇ.10 ರಷ್ಟು ನೀರನ್ನು ಕೊಯ್ಲು ಪದ್ಧತಿಯಲ್ಲಿ ಪಡೆಯುವ ಬಗ್ಗೆ ಜಿ.ಎಸ್.ಪರಮಶಿವಯ್ಯ ಅಮೂಲ್ಯವಾದ ತಂತ್ರಗಾರಿಕೆ ಮತ್ತು ಅತೀ ಕಡಿಮೆ ವೆಚ್ಚದ ಯೋಜನೆಯನ್ನು ನಿರೂಪಿಸಿ ಈಗಾಗಲೇ ಸರ್ಕಾರಕ್ಕೆ ನೀಡಿದ್ದಾರೆ. ಈ ವರದಿಯನ್ನೇ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ತಕ್ಷ ಜಿ.ಎಸ್.ಪರಮಶಿವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಾಲ್ಕು ದಶಕದಿಂದ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನೀರಾವರಿಯನ್ನು ಒದಗಿಸಲು ಭೂಮಿಯ ಸರ್ವೆ ಕಾರ್ಯವನ್ನು ವೈಜ್ಞಾನಿಕವಾಗಿ ಕಡಿಮೆ ವೆಚ್ಚದಲ್ಲಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಈ ವರದಿಯನ್ನು ಅನುಷ್ಠಾನಕ್ಕೆ ತಂದರೆ ರಾಜ್ಯವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ವರದಿಯ ನಕ್ಷೆಯನ್ನು ಪ್ರದರ್ಶಿಸಿದರು.
ಶ್ರಮಜೀವಿಗಳಿಗೆ ಡಾಕ್ಟರೇಟ್ ನೀಡಿ: ಸಾಹಿತಿ ಕವಿತಾಕೃಷ್ಣ ಮಾತನಾಡಿ ಡಾಕ್ಟರೇಟ್ ಪದವಿಗಳು ಶ್ರಮ ಜೀವಿಗಳಿಗೆ ನೀಡುವುದು ಸೂಕ್ತ. ನೀರಾವರಿ ತಜ್ಞ ಪರಮಶಿವಯ್ಯ ಮತ್ತು ಸಾಲು ಮರದ ತಿಮ್ಮಕ್ಕ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿದರೆ ಸೂಕ್ತ ಎಂದರು.
ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಲುಮರದ ತಿಮ್ಮಕ್ಕ, ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿದರು.
ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮತ್ತು ಮುಖ್ಯ ಮಂತ್ರಿಗಳಿಗೆ ತಾಲೂಕು ತಹಸೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.