ಜನಸ್ಪಂದನದಲ್ಲಿ ಮನವಿಗಳ ಮಹಾಪೂರ
ಕ.ಪ್ರ. ವಾರ್ತೆ ರಾಮನಗರ ಜ. 30
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ರಾಮನಗರ ಮತ್ತು ವಿಧಾನಸಭಾ ಕ್ಷೇತ್ರದ ವಿವಿಧೆಡೆ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿಗಳ ಮಹಾಪೂರವೇ ಹರಿದು ಬಂದಿತು.
ನಗರಸಭೆಯ ಹತ್ತಕ್ಕೂ ಹೆಚ್ಚು ವಾರ್ಡ್‌ಗಳು ಮತ್ತು ಹೋಬಳಿ ಕೇಂದ್ರವಾದ ಕೈಲಾಂಚ ಗ್ರಾಮಕ್ಕೆ ತೆರಳಿದ್ದ ಸುರೇಶ್ ಅವರೆದುರು ನಾಗರಿಕರು ಸಮಸ್ಯೆಗಳನ್ನು ಅನಾವರಣಗೊಳಿಸಿ, ಅಧಿಕಾರಿಗಳ ಹೊಣೆಗೇಡಿತನವನ್ನು ಬಹಿರಂಗಪಡಿಸಿದರು.
ಹೋದೆಡೆಯಲ್ಲೆಲ್ಲಾ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿದ್ದವು. ರಸ್ತೆ, ಒಳ ಚರಂಡಿ, ಅನೈರ್ಮಲ್ಯ, ಹಂದಿ ಮತ್ತು ನಾಯಿಗಳ ಕಾಟ, ಪಡಿತರ ಚೀಟಿ ಗೊಂದಲ, ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ಕುರಿತ ದೂರುಗಳ ಸುರಿಮಳೆಯಾಯಿತು.
ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಸುರೇಶ್, ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳ ಬೆವರಿಳಿಸಿದರು. ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅರ್ಜಿದಾರರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
10 ದಿನಕ್ಕೊಮ್ಮೆ ನೀರು: ರಾಮನಗರ ನಗರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ 8-10 ದಿನಕ್ಕೊಮ್ಮೆ ಮಾತ್ರವೇ ಕಾವೇರಿ ಕುಡಿಯುವ ನೀರು ಸರಬರಾಜಾಗುತ್ತಿದೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ದೊರಕುತ್ತಿಲ್ಲ ಎಂದು ಎಲ್ಲೆಡೆ ದೂರುಗಳು ಕೇಳಿ ಬಂದವು.
ಕೊಳಾಯಿಗಳಲ್ಲಿ ನೀರು ರಭಸವಾಗಿ ಹರಿಯುವುದಿಲ್ಲ. ಕೇಳಿದರೆ ಕರೆಂಟ್ ಇಲ್ಲ. ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ ಎನ್ನುವುದು ಸೇರಿದಂತೆ ನಾನಾ ಸಬೂಬು ಹೇಳಿಕೊಂಡು ಅಧಿಕಾರಿಗಳು ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಸಂಸದ ತಾಕೀತು: ರಾಮನಗರದಲ್ಲಿ 1.30 ಲಕ್ಷ ಜನರಿದ್ದಾರೆ. 9 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಸೂಕ್ತ ನಿರ್ವಹಣೆ ಮಾಡಿದಲ್ಲಿ ಪ್ರತಿಯೊಬ್ಬರಿಗೆ 75 ಲೀಟರ್ ನೀರು ಪೂರೈಕೆ ಮಾಡಬಹುದು. ಹೀಗಿದ್ದರೂ 8-10 ದಿನಕ್ಕೆ ನೀರು ನೀಡುತ್ತಿರುವುದನ್ನು ಗಮನಿಸಿದರೆ ಅಧಿಕಾರಿಗಳ ವೈಫಲ್ಯ ಸ್ಪಷ್ಟ ಎಂದು ಸುರೇಶ್ ಕಿಡಿ ಕಾರಿದರು.
ನಗರದಾದ್ಯಂತ ಇರುವ ಅಕ್ರಮ ಸಂಪರ್ಕಗಳನ್ನು ಗುರುತಿಸಿ, ಕಡಿತಗೊಳಿಸಬೇಕು.
ಕುಡಿಯುವ ನೀರಿನ ದುರ್ಬಳಕೆ ಮತ್ತು ಪೋಲು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, 15 ದಿನದ ಗಡುವಿನೊಳಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ನೀರಿನ ಘಟಕ ಉದ್ಘಾಟನೆ: ತಾಲೂಕಿನ ಹೋಬಳಿ ಕೇಂದ್ರವಾದ ಕೈಲಾಂಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸುರೇಶ್ ಉದ್ಘಾಟಿಸಿದರು. ಸಂಸದರ ಪ್ರವಾಸ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್, ನಗರಸಭೆ ಆಯುಕ್ತ ಯಶವಂತ್, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಜಿಯಾವುಲ್ಲಾ, ಮರಿದೇವರು, ಎಲ್. ಚಂದ್ರಶೇಖರ್, ಕೆ.ಶೇಷಾದ್ರಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

