ಮಹಿಳೆ ಅಪಹರಣ: 9 ಆರೋಪಿಗಳ ಸೆರೆ
ಕ.ಪ್ರ. ವಾರ್ತೆ,ಬೆಂಗಳೂರು, ಜು.4
ಹತ್ತು ಕೋಟಿ ರುಪಾಯಿ ಒತ್ತೆಹಣಕ್ಕಾಗಿ ತಾವು ಕೆಲಸ ಮಾಡುತ್ತಿದ್ದ ಮನೆಯ ಒಡತಿಯನ್ನೇ ಅಪಹರಿಸಿದ್ದ ಕಾರು ಚಾಲಕ ಸೇರಿ 9 ಜನರನ್ನು ಬಂಧಿಸಿರುವ ಬೆಂಗಳೂರು ಜಿಲ್ಲೆ ಪೊಲೀಸರು 93 ಲಕ್ಷ ನಗದು ಹಾಗೂ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆನೇಕಲ್ ತಾಲೂಕಿನ ಗಟ್ಟಹಳ್ಳಿ ನಿವಾಸಿ ಎಚ್.ಆರ್.ಅನಸೂಯ (68) ಅಪಹರಣಗೊಂಡಿದ್ದ ವೃದ್ಧೆ.
ಮೈಸೂರು ಜಿಲ್ಲೆ ಶ್ರೀರಂಗಪಟ್ಟಣದ ಸೈಯ್ಯದ್ ಇಮ್ರಾನ್, ಅನಸೂಯ ಅವರ ಕಾರು ಚಾಲಕ ಆನೇಕಲ್ ನಿವಾಸಿ ರಾಜು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಂಜು, ಕೃಷ್ಣಪ್ಪ, ಮಂಜುನಾಥ, ಮೈಸೂರಿನ ಅಮೀರ್, ಸಲೀಂ ಖಾನ್, ಇಮ್ರಾನ್ ಅಲಿಯಾಸ್ ಸಾದಿಕ್, ಎಂ.ಗಣೇಶ್ ಬಂಧಿತರು. ಎಲ್ಲರೂ 25ರಿಂದ 30 ವಯಸ್ಸಿನ ಒಳಗಿನವರು ಎಂದು ಕೇಂದ್ರ ವಲಯ ಐಜಿಪಿ ಉಲ್ಫತ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಘಟನೆಯ ವಿವರ: ಆನೇಕಲ್ನ ಗಟ್ಟಹಳ್ಳಿ ನಿವಾಸಿಯಾಗಿರುವ ಅನಸೂಯ ಅವರು ಆಗಾಗ ಕೋರಮಂಗಲದಲ್ಲಿ ವಾಸವಿರುವ ಮಗ ರಾಮರೆಡ್ಡಿ ಮನೆಗೆ ಬಂದು ಹೋಗುತ್ತಿದ್ದರು. ಜೂನ್ 28ರಂದು ಗಟ್ಟಹಳ್ಳಿಯಿಂದ ಚಾಲಕ ರಾಜು ಜತೆ ಇನ್ನೋವಾ ಕಾರಿನಲ್ಲಿ ಕೋರಮಂಗಲಕ್ಕೆ ಆಗಮಿಸುತ್ತಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಹುಸ್ಕೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಟಾಟಾ ಸುಮೋದಲ್ಲಿ ಬಂದ ಇಬ್ಬರು ಕಾರು ಅಡ್ಡಗಟ್ಟಿ ಚಾಕು ತೋರಿಸಿ ಕಾರಿನ ಒಳಗೆ ನುಗ್ಗಿ ಅಪಹರಿಸಿದ್ದರು. ಅನಸೂಯ ಅವರ ಮೊಬೈಲ್ನಿಂದಲೇ ಮಗ ರಾಮರೆಡ್ಡಿಗೆ ಕರೆ ಮಾಡಿದ ದುಷ್ಕರ್ಮಿಗಳು 10 ಕೋಟಿ ನೀಡಬೇಕು. ಇಲ್ಲದಿದ್ದರೆ ತಾಯಿಯನ್ನು ಕೊಲೆಗೈಯ್ಯುವುದಾಗಿ ಬೆದರಿಸಿದ್ದರು. ಈ ವಿಷಯವನ್ನು ಪೊಲೀಸರಿಗೆ ತಿಳಿಸಬಾರದು ಎಂಬ ಷರತ್ತು ಹಾಕಿದ್ದರು. ಮಾತುಕತೆ ಬಳಿಕ ರಾಮರೆಡ್ಡಿ 10 ಕೋಟಿ ಇಲ್ಲ, 1 ಕೋಟಿ ಹಾಗೂ 1 ಕೆಜಿ ಚಿನ್ನಾಭರಣ ನೀಡುವುದಾಗಿ ಒಪ್ಪಿಕೊಂಡಿದ್ದರು.
ಅದರಂತೆ ಪೊಲೀಸರಿಗೆ ಮಾಹಿತಿ ನೀಡಿದ ರಾಮರೆಡ್ಡಿ, ಮೈಸೂರು ರಸ್ತೆಯಲ್ಲಿ ಅಪಹರಣಕಾರರ ಮತ್ತೊಂದು ತಂಡಕ್ಕೆ 1 ಕೋಟಿ ಹಣ ಹಾಗೂ 30 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದರು.
ಆರೋಪಿಗಳು ಅನಸೂಯ ಅವರನ್ನು ಇಡೀ ದಿನ ಕಾರಿನಲ್ಲೇ ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ ಕಡೆ ಸುತ್ತಾಡಿಸಿ ಅದೇ ದಿನ ರಾತ್ರಿ 12.30ರ ಸುಮಾರಿಗೆ ಮಂಡ್ಯ ಬಳಿ ಚಾಲಕ ಹಾಗೂ ಅನಸೂಯ ಅವರನ್ನು ಬಿಟ್ಟು ಹೋಗಿದ್ದರು.
ಮನೆಗೆ ಬಂದಾಗ ಬಿಡಿಸಿಕೊಳ್ಳಲು ಹಣ ನೀಡಿರುವ ವಿಚಾರವನ್ನು ತಾಯಿಗೆ ಮಗ ರಾಮರೆಡ್ಡಿ ತಿಳಿಸಿದ್ದ. ಕೂಡಲೇ ಅನಸೂಯ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಮೊದಲು ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ರಾಜು ತನ್ನ ಸಹಚರರೊಂದಿಗೆ ಅಪಹರಣದಲ್ಲಿ ತಾನು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದ.
ಆರೋಪಿಗಳೊಂದಿಗೆ ರಾಜು ಮೊಬೈಲ್ ಫೋನ್ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು 8 ಆರೋಪಿಗಳನ್ನು ಜುಲೈ 4ರ ಬೆಳಗಿನ 3 ಗಂಟೆ ಸುಮಾರಿಗೆ ಮಡಿಕೇರಿಯ ಕುಶಾಲನಗರದಲ್ಲಿ ಬಂಧಿಸಿದ್ದಾರೆ.
ಕೇಂದ್ರ ವಲಯ ಐಜಿಪಿ ಉಲ್ಫತ್ ಹುಸೇನ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಮೇಶ್ ಬಾನೋತ್, ಹೆಚ್ಚುವರಿ ಅಧೀಕ್ಷಕ ಅಬ್ದುಲ್ ಅಹದ್ ಅವರೊಂದಿಗೆ ಡಿವೈಎಸ್ಪಿ ಬಲರಾಮೇಗೌಡ, ಅತ್ತಿಬೆಲೆ ಸಿಪಿಐ ಬಿ.ಕೆ.ಕಿಶೋರ್ ಕುಮಾರ್ ಅವರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಒತ್ತೆ ಹಣವನ್ನು ವಶಪಡಿಸಿಕೊಂಡು ಆರೋಪಿಗಳ ಬಂಧಿಸುವಲ್ಲಿ ಉತ್ತಮ ಕಾರ್ಯ ನಡೆಸಿದ ತಂಡಕ್ಕೆ ಐಜಿಪಿ ಉಲ್ಫತ್ ಹುಸೇನ್ 50 ಸಾವಿರ ನಗದು ಬಹುಮಾನ ಘೋಷಿಸಿದರು.
ಆರೋಪಿಯೇ ದೂರು ಕೊಡಲು ಠಾಣೆಗೆ ಬಂದಿದ್ದ...!
ಅನಸೂಯ ಅವರ ಕಾರು ಚಾಲಕ ರಾಜು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಹೇಳಿ ದೂರು ನೀಡಲು ಹೋಗುತ್ತಿರುವ ವಿಚಾರವನ್ನು ರಾಜು, ತನ್ನ ತಂಡಕ್ಕೆ ಮೊಬೈಲ್ನಲ್ಲಿತಿಳಿಸಿದ್ದ. ಹೀಗಾಗಿ ಪೊಲೀಸರು ರಾಜುವಿನ ಮೊಬೈಲ್ನಿಂದ ಹೊರ ಹೋದ ಕರೆಗಳ ಬಗ್ಗೆ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ. 1 ಕೋಟಿ ಪೈಕಿ ಆರೋಪಿಗಳು ಆರೂವರೆ ಲಕ್ಷ ಹಣವನ್ನು ಖರ್ಚು ಮಾಡಿ ಬಿಟ್ಟಿದ್ದರು.
ನಂಬಿಕೆ ದ್ರೋಹ..
ಕಳೆದ ಐದು ವರ್ಷಗಳಿಂದ ಚಾಲಕನಾಗಿದ್ದ ರಾಜು ಅನಸೂಯ ಕುಟುಂಬಕ್ಕೆ ನಂಬಿಕಸ್ಥನಾಗಿದ್ದ. ಅವರ ಕುಟುಂಬದ ಆಸ್ತಿ ಹಣಕಾಸು, ಕೋಟ್ಯಂತರ ರುಪಾಯಿ ವಹಿವಾಟಿನ ಬಗ್ಗೆ ತಿಳಿದಿದ್ದ. ಆನೇಕಲ್ನ ಗಟ್ಟಹಳ್ಳಿ ಗ್ರಾಮದ ಸ್ನೇಹಿತ ಗಣೇಶ್ ಎಂಬಾತನ ಸಂಪರ್ಕಕ್ಕೆ ಬಂದು ಅಪಹರಣದ ಸಂಚು ರೂಪಿಸಿದ್ದ. ರಾಜು, ಗಣೇಶ್ಗೆ, ಸೈಯ್ಯದ್ ಇಮ್ರಾನ್ ಸೇರಿ ಒಂದು ತಂಡ ರೂಪಿಸಿ ಅಪಹರಣ ಸಂಚು ರೂಪಿಸಿದ್ದರು.
ಸೈಯ್ಯದ್ ಇಮ್ರಾನ್ ಎಂಬಾತನೇ ಪ್ರಕರಣದಲ್ಲಿ ಪ್ರಮುಖ ಆರೋಪಿ. ಬಂಧಿತರ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತೇವೆ.
-ಉಲ್ಫತ್ ಹುಸೇನ್, ಐಜಿಪಿ ಕೇಂದ್ರ ವಲಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

