ಸಾಧನೆಗೆ ಬೇಕಿರುವುದು ಗಂಭೀರ ಆಸಕ್ತಿ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಜು.11
ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಹಿಂಭಾಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಣ್ಣು ಮಕ್ಕಳ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹನುಮಂತರಾಯಪ್ಪ ಮಾತನಾಡಿ ಪ್ರತಿಭೆಯ ಅನಾವರಣಕ್ಕೆ ಇಂದು ವಿಭಿನ್ನ ಅವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮುದಾಯದ ಸಹಕಾರವನ್ನು ಪರಿಪೂರ್ಣವಾಗಿ ಪಡೆದು ಶೈಕ್ಷಣಿಕ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.
ಸಾಧನೆಗೆ ಬೇಕಿರುವುದು ಗಂಭೀರ ಆಸಕ್ತಿ. ಸಾಧನೆ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಶೈಕ್ಷಣಿಕವಾಗಿ ಇಂದು ಅನೇಕ ಅವಕಾಶಗಳಿದ್ದು ಪರಿಪೂರ್ಣ ಮಾಹಿತಿಯೊಂದಿಗೆ ಲಭ್ಯ ಅವಕಾಶಗಳನ್ನು ಬಳಸಿಕೊಳ್ಳುವ ಚಿಂತನೆ ವಿದ್ಯಾರ್ಥಿಗಳಲ್ಲಿ ಬರಬೇಕು. ನಿರಂತರ ಪರಿಶ್ರಮ ಮತ್ತು ವಿಭಿನ್ನ ಆರೋಗ್ಯಕರ ಚಿಂತನೆಗಳು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತವೆ. ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಾಧನೆ ಎಲ್ಲರ
ಆದ್ಯತೆಯಾಗಿರಬೇಕು. ಮಹತ್ತನ್ನೇ ಯೋಚಿಸಬೇಕು. ಆಗ ಮಾತ್ರ ಸಣ್ಣ ಪ್ರಮಾಣದ ಸಾಧನೆಯಾದರೂ ಕೈಗೆಟುಕುತ್ತದೆ. ಪರಿಶ್ರಮದ ಬದುಕು ಯಾವಾಗಲೂ ಉತ್ತಮವಾದ ಭವಿಷ್ಯವನ್ನೇ ಕೊಡುತ್ತದೆ. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೈವಿಧ್ಯಮಯ ಆಯ್ಕೆಗಳ ಸಾಧ್ಯಾಸಾಧ್ಯತೆಯನ್ನು ಅರಿತುಕೊಳ್ಳಬೇಕು. ಆ ಮೂಲಕ ಸಾಮಾಜಿಕ ಕ್ಷೇತ್ರದಲ್ಲೂ ಗುರ್ತಿಸಿಕೊಳ್ಳುವಂತಾಗಬೇಕು. ಶೈಕ್ಷಣಿಕ ಸಾಧನೆ ನಿಂತನೀರಾಗ ಬಾರದು. ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ನಟರಾಜ್, ಜಿಲ್ಲಾ ಖಜಾನೆ ಉಪನಿರ್ದೇಶಕಿ ಭಾಗ್ಯಲಕ್ಷ್ಮಿ, ಕಟ್ಟಡ ಗುತ್ತಿಗೆದಾರ ಎಸ್.ವೆಂಕಟಾಚಲಪತಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಡಿ.ಆರ್.ನಟರಾಜ್ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

