ಬೆಂಗಳೂರು ಗ್ರಾಮಾಂತರ

ಇಸ್ಪೀಟ್ ಅಡ್ಡೆ ಮೇಲೆ ದಾಳಿ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿನ ತಿಪ್ಪಾಪುರ ರಸ್ತೆಯ ವಿವೇಕಾನಂದನಗರದ ಹೊಸ ಲೇಔಟ್‌ಮೊಂದರಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಮಹಿಳೆ ಸೇರಿದಂತೆ 33 ಜನರನ್ನು ಬಂಧಿಸಿದ್ದಾರೆ.
ಭಾನುವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕೋನಪ್ಪ ರೆಡ್ಡಿ ಮತ್ತು ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ ನೇತೃತ್ವದಲ್ಲಿ ದಾಳಿ ಸಂಘಟಿಸಲಾಗಿತ್ತು. ಅನ್ನಪೂರ್ಣೇಶ್ವರಿ ರಿಕ್ರಿಯೇಷನ್ ಸಂಘ ಕ್ಲಬ್ ಹೆಸರಿನಲ್ಲಿ ನೊಂದಾಯಿತವಾಗಿರುವ ಕ್ಲಬ್ ಮುನಿರಾಜು ಮತ್ತು ವಿಜಿ ಎಂಬುವವರ ಮಾಲೀಕತ್ವಕ್ಕೆ ಸೇರಿದ್ದು, ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಸಲು ಅನುಮತಿ ಪಡೆದಿದೆ. ಆದರೆ ಇಲ್ಲಿ ಅಕ್ರಮವಾಗಿ ಅಂದರ್-ಬಾಹರ್ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಪ್ರಕರಣದಲ್ಲಿ ಆರೋಪಿಗಳಿಂದ 1.40 ಲಕ್ಷ ನಗದು ಹಾಗೂ 24 ದ್ವಿಚಕ್ರವಾಹನಗಳು, 2 ಕಾರುಗಳು, 1 ಆಟೋರಿಕ್ಷಾ, 29 ಮೊಬೈಲ್ ಫೋನ್‌ಗಳು ಸೇರಿದಂತೆ ಜೂಜಿಗೆ ಬಳಸುತ್ತಿದ್ದ ಕುರ್ಚಿ-ಟೇಬಲ್, ಕಾರ್ಡ್‌ಗಳು, ಪೀಠೋಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಕೆಲ ಪ್ರತಿಷ್ಠಿತ ಸಂಘಟನೆಗಳ ರಾಜ್ಯ, ಜಿಲ್ಲಾ ಘಟಕಗಳ ಮುಖಂಡರು, ದೊಡ್ಡಬಳ್ಳಾಪುರ ನಗರದ ಕೆಲ ಪ್ರತಿಷ್ಠಿತ ಕುಟುಂಬಗಳ  ಜನರೂ ಭಾಗಿಗಳಾಗಿರುವುದು ವಿಶೇಷ. ಈ ಹಿಂದೆ ಜೂಜು ಪ್ರಕರಣಗಳಲ್ಲಿ ಭಾಗಿಗಳಾಗಿ ಬಂಧನಕ್ಕೊಳಗಾಗಿದ್ದ ಕೆಲವರೂ ಇದರಲ್ಲಿ ಸೇರಿದ್ದಾರೆ. ಕ್ಲಬ್ ಮಾಲೀಕರನ್ನೂ ಬಂಧಿಸಲಾಗಿದೆ.
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಜೂಜು ಅಡ್ಡೆಗಳು ಮಿತಿಮೀರಿ ತಲೆಎತ್ತಿವೆ. ಲಕ್ಷಾಂತರ ರು.ಜೂಜು ವಹಿವಾಟು ದಿನನಿತ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಲವು ಬಾರಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರೂ, ದಂಧೆ ನಿಯಂತ್ರಣಕ್ಕೆ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಪ್ರಕಾರ ದೂರು ದಾಖಲು ಮಾಡಲಾಗುವುದು ಎಂದು ಡಿವೈಎಸ್ಪಿ ಕೋನಪ್ಪ ರೆಡ್ಡಿ ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.