ಕೇಂದ್ರ ಬಜೆಟ್ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ರಾಮನಗರ: ಕೇಂದ್ರದ ಬಜೆಟ್ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರದ ಬಿಜೆಪಿ ಸರ್ಕಾರ, ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಚ್ಚೇ ದಿನ್ ಆನೇ ವಾಲೇ ಹೈ ಎಂದು ನಂಬಿಕೆ ಮೂಡಿಸಿ ಅಧಿಕಾರಕ್ಕೆ ಬಿಜೆಪಿ ಸರ್ಕಾರ ತನ್ನ ಮಂಡಿಸಿರುವ ಚೊಚ್ಚಲ ಬಜೆಟ್ ಖಾಲಿ ಕೊಡದಂತಿದ್ದು, ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗಲಿದೆ. ಈ ಬಜೆಟ್ನಲ್ಲಿ ಹೊಸ ಉಪಕ್ರಮವಾಗಲೀ, ನೂತನ ಯೋಜನೆಗಳಾಗಲೀ ಜಾರಿಯಾಗಿಲ್ಲ. ಈ ಬಜೆಟ್ನಿಂದ ದೇಶದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಅಭಿವೃದ್ಧಿಯಲ್ಲಿ ಹಿಂದೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಪಷ್ಟಪಡಿಸಿಲ್ಲ: ಸರ್ಕಾರ ವಿತ್ತೀಯ ವಿಚಾರದಲ್ಲಿ ದೇಶವನ್ನು ಎತ್ತ ಕೊಂಡೊಯ್ಯಲಿದೆ ಎಂಬ ಉದ್ದೇಶವನ್ನು ಈ ಬಜೆಟ್ ಸ್ಪಷ್ಟಪಡಿಸಿಲ್ಲ. ಅಚ್ಚೇ ದಿನ್ ಆಯೇಗಿ ಎಂದು ಜನರಿಗೆ ಮಂಕು ಬೂದಿ ಎರಚಿ ಪ್ರಚಂಡ ಬಹುಮತದಿಂದ ಸರ್ಕಾರ ರಚಿಸಿರುವ ಬಿಜೆಪಿ ಧೋರಣೆಗಳು ಇದೀಗ ಬಯಲಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶ: ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಪ್ರಮಾಣವನ್ನು ಹೆಚ್ಚಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಬಡವರು, ಕೃಷಿಕರು, ಕಾರ್ಮಿಕರ ಜೀವನವನ್ನು ಸುಧಾರಿಸುವ ಯಾವ ಅಂಶಗಳು ಈ ಬಜೆಟ್ನಲ್ಲಿಲ್ಲ ಎಂದರು. ರೈಲು ದರಗಳನ್ನು ಏರಿಸಿರುವ ಬಗ್ಗೆಯೂ ಅವರು ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಮನಮೋಹನಸಿಂಗ್ ಮಂಡಿಸಿದ ಬಜೆಟ್ನ ಬಹುತೇಕ ಅಂಶಗಳನ್ನೇ ನಕಲು ಮಾಡಿರುವ ವಿತ್ತ ಸಚಿವರು ಮೋದಿ ಬಜೆಟ್ ಎಂದು ಮಂಡಿಸಿದ್ದಾರೆ. ಯುಪಿಎ ಸರ್ಕಾರ ಮಂಡಿಸಿದ್ದ ಬಹುತೇಕ ಅಂಶಗಳನ್ನೇ ಮೋದಿ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿರುವುದರಿಂದ ಯುಪಿಎ ಸರ್ಕಾರದ ಬಜೆಟ್ ಸರ್ವ ಶ್ರೇಷ್ಠ ಎಂಬುದನ್ನು ಎನ್ಡಿಎ ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದರು.
ಜೇಟ್ಲಿ ವಿರುದ್ದ ಕಿಡಿ: ಬಿಜೆಪಿ ಸರ್ಕಾರದ ಬಜೆಟ್ ಮಂಡಿಸುವ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಡವರು, ಶೋಷಿತರು, ಕಾರ್ಮಿಕರು, ಕೃಷಿಕರು ಸೇರಿದಂತೆ ಯಾವ ವರ್ಗಕ್ಕೂ ಅನ್ಯಾಯವಾಗದಂತೆ ಕಾಂಗ್ರೆಸ್ ಆಡಳಿತ ನೀಡಿದೆ. ಭಾರತ ಎಂದೂ ಕಾಂಗ್ರೆಸ್ ಮುಕ್ತವಾಗುವುದಿಲ್ಲ. ದೇಶವಾಸಿಗಳ ಕೃಪೆ ಕಾಂಗ್ರೆಸ್ ಮೇಲಿದೆ ಎಂದು ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

