ಬೆಂಗಳೂರು ಗ್ರಾಮಾಂತರ

ಬಿದ್ದವನು ಮತ್ತೆ ತಿರುಗಾಡುವ ಸ್ಥಿತಿಗೆ 'ಬರಲೇ' ಇಲ್ಲ

Published On :

ರಾಮನಗರ: ಸದಾ ಲವಲವಿಕೆಯಿಂದ ಇದ್ದ ಮುದ್ದು ಕಂದ ಆಟವಾಡುತ್ತಿದ್ದಾಗ ಬಿದ್ದವನು ಮತ್ತೆ ಮೇಲೆದ್ದು ತಿರುಗಾಡುವ ಸ್ಥಿತಿಗೆ ಮರಳಲೇ ಇಲ್ಲ. ಕೈಕಾಲು ಸ್ವಾಧೀನ ಕಳೆದುಕೊಂಡ ಆತನ ಪೋಷಣೆ, ಚಿಕಿತ್ಸೆಗಾಗಿ ಕಿತ್ತು ತಿನ್ನುವ ಬಡತನದ ನಡುವೆಯೂ ಪೋಷಕರು ಪರದಾಡುತ್ತಿದ್ದಾರೆ.
ರಾಮನಗರ ತಾಲೂಕಿನ ಮಾಯಗಾನಹಳ್ಳಿಯ ಪ್ರಕಾಶ್ ಮತ್ತು ಗಂಗಮ್ಮ ಅವರ 8 ವರ್ಷದ ಪುತ್ರ  ಹರ್ಷ ಎಂಬಾತನೇ ಕೈಕಾಲು ಸ್ವಾಧೀನ ಕಳೆದುಕೊಂಡು ಕಳೆದ ಒಂದೂವರೆ ತಿಂಗಳಿಂದ ಮಲಗಿದಲ್ಲೇ ಮಲಗಿರುವ ಬಾಲಕನಾಗಿದ್ದಾನೆ.
ಕಿತ್ತು ತಿನ್ನುವ ಬಡತನ ಕಾಡುತ್ತಿರುವ ಆ ಮನೆಯಲ್ಲಿ ಒಂದರ ಹಿಂದೊಂದು ಸಂಕಷ್ಟ ಎದುರಾಗುತ್ತಲೇ ಇವೆ. ಪತಿ ಪ್ರಕಾಶ್ ಅನಾರೋಗ್ಯಪೀಡಿತನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮಗ ಹರ್ಷನ ಸ್ಥಿತಿ ಹೀಗಾಗಿದ್ದರಿಂದ ಗಂತಮ್ಮ ನಿಜಕ್ಕೂ ಕಂಗಾಲಾಗಿದ್ದಾರೆ.
ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಹರ್ಷನನ್ನು ಗಂಗಮ್ಮ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹರ್ಷನನ್ನು ಪರೀಕ್ಷಿಸಿದ ವೈದ್ಯರು ಇದೊಂದು ವಿಚಿತ್ರ ಕಾಯಿಲೆ, ಲಕ್ಷದಲ್ಲಿ ಒಬ್ಬರಿಗೆ ಬರುತ್ತದೆ ಎಂದು ಹೇಳಿದಾಗ ಗಂಗಮ್ಮಳಿಗೆ ಆಘಾತವೇ ಆಗಿದೆ.  
ಕಾಯಿಲೆ ಲಕ್ಷಣ: ಹರ್ಷನಿಗೆ ಕಾಡುತ್ತಿರುವುದು ಪೊಲಿಯೋವನ್ನೇ ಹೋಲುವ ಗಿಲ್ವೆನ್ ಬ್ಯಾರೆ ಸಿಂಡ್ರೋಮ್ ಕಾಯಿಲೆಯಾಗಿದೆ. ಅದರಿಂದ  ಇಡೀ ದೇಹವೆ ಸ್ವಾಧೀನ ಕಳೆದುಕೊಂಡಿದ್ದು, ಬೆನ್ನುಲುಬಿಗೂ ಸೋಂಕು ತಗಲುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಅಪರೂಪದ ಕಾಯಿಲೆಗೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ಒಂದೂವರೆ ತಿಂಗಳು ಚಿಕಿತ್ಸೆ ನೀಡಿದ್ದು, ಡಿಸ್ಚಾರ್ಜ್ ನಂತರ ಮಗನಿಗೆ ಮಾಯಗಾನಹಳ್ಳಿಯ ತನ್ನ ಮನೆಯಲ್ಲೇ ಗಂಗಮ್ಮ ಆರೈಕೆ ಮಾಡುತ್ತಿದ್ದಾರೆ. ಚಿಕಿತ್ಸೆ ನಂತರ ಆತ ಕೈಗಳನ್ನು ಆಡಿಸುತ್ತಿದ್ದಾನಾದರೂ ಇನ್ನೂ ಸ್ವಾಧೀನ ಬಂದಿಲ್ಲ.
ದುಬಾರಿ ಚಿಕಿತ್ಸೆ: ಹರ್ಷ ಬಿದ್ದಾಗ ಆತನಿಗೆ ಮಾತೂ ಬರುತ್ತಿರಲಿಲ್ಲ. ಚಿಕಿತ್ಸೆ ನಂತರ ಮಾತು ಬರುತ್ತಿರುವುದೊಂದೇ ಸಮಾಧಾನದ ಸಂಗತಿ. 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಓದಿನಲ್ಲೂ ಮುಂದಿದ್ದನು. ಚಿಕ್ಕಂದಿನಿಂದಲೂ ಆತನಿಗೆ ಬೇರೆ ಯಾವ ಕಾಯಿಲೆಯೂ ಕಾಡಿರಲಿಲ್ಲ ಎಂದು ಗಂಗಮ್ಮ ವಿವರಿಸಿದ್ದಾರೆ.  
ನಾನು ಗಾರ್ಮೆಂಟ್ ಉದ್ಯೋಗಿ. ಬರುವ ಅಲ್ಪಸ್ವಲ್ಪ ಸಂಬಳದಿಂದ ಪತಿಯ ಚಿಕಿತ್ಸೆ, ಕುಟುಂಬದ ನಿರ್ವಹಣೆ ಮಾಡುತ್ತಿದ್ದೆ. ಇದೀಗ ಮಗನ ಸ್ಥಿತಿ ಹೀಗಿರುವ ಪರಿಣಾಮ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಹರ್ಷನ ಚಿಕಿತ್ಸೆಗೆ ಈಗಾಗಲೇ ರು.1.5 ಲಕ್ಷ ವೆಚ್ಚವಾಗಿದೆ ಎಂದು ಅವರು ತಿಳಿಸಿದ್ದಾರೆ.  
ದಾನಿಗಳು ನೆರವಾಗುವರೇ: ಈ ವಿಚಿತ್ರ ರೋಗ ತಗುಲಿದ ಮಕ್ಕಳು ಬದುಕುಳಿಯುವುದೇ ವಿರಳ. ಉತ್ತಮ ಚಿಕಿತ್ಸೆ ನೀಡಿದರೆ ಬದುಕಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ದಾನಿಗಳು ನೆರವಾಗಿ ಹರ್ಷನನ್ನು ಬದುಕಿಸಿದರೆ, ಆ ಬಡ ಕುಟುಂಬದಲ್ಲಿ ಖಂಡಿತ ಹರ್ಷದ ಹೊನಲು ಮೂಡಲಿದೆ. ಹರ್ಷ ಕುಟುಂಬಕ್ಕೆ ಸಾಂತ್ವನದ ಜತೆಗೆ ನೆರವಾಗಲು ಬಯಸುವ ದಾನಿಗಳು  ಮೊ.9035857406 ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.