'ಯುವಜನರಿಗೆ ವಿದ್ಯಾರ್ಥಿ ದೆಸೆಯಲ್ಲೇ ಅರಿವು ಮೂಡಿಸುವುದು ಅಗತ್ಯ'
ರಾಮನಗರ: ಯುವಜನರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೇ ಅರಿವು ಮೂಡಿಸುವ ಅಗತ್ಯವಿದೆ ಎಂದು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ವಿಚಾರದಲ್ಲಿ ವಿಶ್ವದಾದ್ಯಂತ ಮನ್ನಣೆ ಪಡೆದಿರುವ ಡಾ.ಮೈಕಲ್ ಹಾಪ್ಕಿನ್ಸ್ ಅಭಿಪ್ರಾಯಪಟ್ಟರು.
ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ರೋಟರಿ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ, ಮಿತವಾಗಿ ನೀರು ಬಳಸುವುದು ಸೇರಿದಂತೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಯುವಜನರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಮಾಜದಲ್ಲಿ ನಾಗರಿಕರು ಸಹ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ನಿರ್ವಹಿಸಬೇಕಾಗಿದೆ. 29 ವರ್ಷದ ಹಿಂದೆ ಆಫ್ರಿಕಾದಲ್ಲಿ ಕೊಳೆಗೇರಿಯೊಂದಕ್ಕೆ ಸಾಮಾಜಿಕ ಕಾರ್ಯಕರ್ತನೊಬ್ಬ ಭೇಟಿ ಕೊಟ್ಟು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಲ್ಲಿನ ನಿವಾಸಿಗಳಿಗೆ ತಿಳಿಸಿದೆ. ಆದರೆ, ಅವನ ಮನವಿಗೆ ಕಿವಿಗೊಡಲಿಲ್ಲ. ಆಡಲು ಫುಟ್ಬಾಲ್ ತಂದು ಕೊಡುತ್ತೇನೆ, ಕ್ಲೀನ್ ಮಾಡಿ ಎಂದು ವಿಶಾಲವಾದ ಸ್ಥಳವನ್ನು ತೋರಿಸಿದ. ಫುಟ್ಬಾಲ್ನ ಆಸೆಗಾಗಿ ಸ್ಲಂವಾಸಿಗಳು ಆ ಸ್ಥಳವನ್ನು ಸ್ವಚ್ಛಗೊಳಿಸಿದರು ಎಂದರು.
ನಂತರ ಆ ವ್ಯಕ್ತಿ ಫುಟ್ಬಾಲ್ ಆಡುವುದನ್ನು ಅವರಿಗೆ ಕಲಿಸಿಕೊಟ್ಟ. ಇಂದು ಆಫ್ರಿಕಾದಲ್ಲಿ ಫುಟ್ಬಾಲ್ ಆಡುವ 13 ಲೀಗ್ಗಳಿವೆ, 4 ಮಿಲಿಯ ಮಂದಿ ಫುಟ್ಬಾಲ್ ಆಡುತ್ತಿದ್ದಾರೆ. ಸ್ಲಂಗಳು ಪಟ್ಟಣಗಳಾಗಿ ಮಾರ್ಪಟ್ಟಿದೆಎಂದು ಸಾಮಾಜಿಕ ಜವಾಬ್ದಾರಿಯ ಉದಾಹರಣೆ ನೀಡಿದರು. ಸಾಮಾಜಿಕ ಹೊಣೆಗಾರಿಕೆಯ ಜತೆಗೆ ನೆಲದ ಕಾನೂನಿನ ಬಗ್ಗೆ ಅರಿವಿರಲಿ ಎಂದು ಕರೆ ನೀಡಿದರು. ಜಪಾನ್, ಆಸ್ಟೇಲಿಯಾ, ಜರ್ಮನಿ, ಅಮೆರಿಕ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿರುವ ಕಾರ್ಪೋರೇಟ್ ಸೆಕ್ಟರ್ಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುತ್ತಿವೆ. ಬೃಹತ್ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯ ಜತೆಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೊಸ ಹೊಸ ಆಲೋಚನೆಗಳು, ವಿಚಾರಗಳನ್ನು ಅರಸಿ ಬಂದಿರುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ರೋಟರಿ, ರೆಡ್ಕ್ರಾಸ್, ಭಾರತ್ ವಿಕಾಸ್ ಪರಿಷತ್ ಸೇರಿದಂತೆ ಜಿಲ್ಲೆಯ ಪ್ರಮುಖ ಕಾರ್ಖಾನೆಗಳ ಪ್ರತಿನಿಧಿಗಳು ಹಾಜರಿದ್ದು, ತಾವು ಕೈಗೊಂಡಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಎಫ್.ಅರ್.ಜಮಾದಾರ್, ಅಪರ ಜಿಲ್ಲಾಧಿಕಾರಿ ಬಸವರಾಜು, ರೋಟರಿ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ಎರಿನ್ ಫೆಡರೇಷನ್ ಅಧ್ಯಕ್ಷ ಸಾಯಿ ಪ್ರಕಾಶ್, ಜಿಲ್ಲಾಮಟ್ಟದ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

