ನಿರ್ಜನ ಪ್ರದೇಶದಲ್ಲಿ ಪುರುಷನೊಂದಿಗೆ ಮಹಿಳೆ ಚಕ್ಕಂದ
-ಮತ್ತೀಕೆರೆ ಜಯರಾಮ್
ರಾಮನಗರ: ಪ್ರವಾಸಿ ತಾಣದಂಚಿನ ನಿರ್ಜನ ಪ್ರದೇಶದಲ್ಲಿ ಪುರುಷನೊಂದಿಗೆ ಮಹಿಳೆ ಬೆತ್ತಲಾಗಿ ಚಕ್ಕಂದವಾಡುತ್ತಿದ್ದ ವೀಡಿಯೋ ಚಿತ್ರೀಕರಿಸಿ ಮೊಬೈಲ್, ಯುಟ್ಯೂಬ್ಗೆ ಹರಿಯಬಿಟ್ಟ ಹಿಂದೆ ಪೊಲೀಸರದ್ದೇ ಪಾತ್ರವಿರುವ ಬಗ್ಗೆ ಶಂಕೆ ಮೂಡಿದೆ.
ಮುತ್ತತ್ತಿ ಸಮೀಪ ಕಾವೇರಿ ನದಿ ದಡದಲ್ಲಿ ನಗ್ನ ಮಹಿಳೆ ಮತ್ತು ಪುರುಷ ತಮ್ಮದೇ ಲೋಕದಲ್ಲಿ ತೇಲುತ್ತಿದ್ದಾಗ ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಿಸಿದ್ದು, ಅದೀಗ ಯುಟ್ಯೂಬ್ ಮತ್ತು ರಾಮನಗರದ ಪಡ್ಡೆ ಹೈಕ್ಳ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ.
ದೃಶ್ಯಾವಳಿಯಲ್ಲಿ ಲಾಠಿ: ಸರಸ ಸಲ್ಲಾಪದಲ್ಲಿ ತೊಡಗಿದ್ದವರು ಮೊಬೈಲ್ ಹಿಡಿದು ವೀಡಿಯೋ ಚಿತ್ರೀಕರಿಸುತ್ತಾ ಸನಿಹಕ್ಕೆ ಬಂದ ನಿಂತವರನ್ನು ಕಂಡು ಬೆಚ್ಚಿ ಬಿದ್ದಿದ್ದು, ದೃಶ್ಯಾವಳಿಯಲ್ಲಿ ಒಮ್ಮೆ ಪ್ಯಾಂಟ್ ಮತ್ತು ಲಾಠಿಯೂ ಕಾಣಿಸಿಕೊಂಡಿದ್ದನ್ನು ಗಮನಿಸಿದರೆ ಅದು ಪೊಲೀಸರದ್ದೇ ಕೈಚಳಕ ಎನಿಸುತ್ತದೆ.
ಆ ದೃಶ್ಯಾವಳಿಯೊಂದಿಗೆ ಕೇಳಿ ಬರುವ ಸಂಭಾಷಣೆಯಲ್ಲೂ ಧ್ವನಿಯು ಪೊಲೀಸರದ್ದೇ ಎನ್ನುವುದನ್ನು ಖಚಿತಪಡಿಸುತ್ತದೆ. ಚಿತ್ರೀಕರಿಸುತ್ತಿದ್ದವರಿಂದ ದರ್ಪ, ದೌರ್ಜನ್ಯದ ಜತೆಗೆ ಅವಾಚ್ಯ ಶಬ್ದಗಳೇ ಕೇಳಿ ಬಂದರೆ, ಸಿಕ್ಕಿಬಿದ್ದವರ ದೈನೇಸಿ ಸ್ಥಿತಿಯೂ ಅನಾವರಣಗೊಂಡಿದೆ.
ಇದೂ ಅಪರಾಧ: ಸಾರ್ವಜನಿಕವಾಗಿ ನಗ್ನರಾಗಿ ಕಾಮಕೇಳಿಯಲ್ಲಿ ತೊಡಗುವುದು ಅಪರಾಧವೇ. ಆದರೆ, ಅವರು ಸಿಕ್ಕಿಬಿದ್ದಾಗ ವೀಡಿಯೋ ಚಿತ್ರೀಕರಿಸಿಕೊಂಡು ಅದನ್ನು ಸಹೋದ್ಯೋಗಿಗಳ ಮೊಬೈಲ್ ಮೂಲಕ ಇತರರ ಮೊಬೈಲ್ಗಳಿಗೆ ರವಾನಿಸುವುದು, ಯುಟ್ಯೂಬ್ ಹಾಕಿರುವುದೂ ಅಪರಾಧವೇ.
ಸಿಕ್ಕಿಬಿದ್ದವರಿಗೆ ಕೆಲ ಹೊತ್ತು ಬಟ್ಟೆಬರೆಗಳನ್ನು ಹಾಕಿಕೊಳ್ಳುವುದಕ್ಕೂ ಅವಕಾಶ ನೀಡದೆ ವಿವಸ್ತ್ರರನ್ನಾಗಿಯೇ ನಿಲ್ಲಿಸುವ ಪ್ರಯತ್ನವೂ ವೀಡಿಯೋ ಚಿತ್ರೀಕರಿಸಿದವರಿಂದ ನಡೆದಿದೆ. ಕಡೆಗೆ, ಅವರಿಗೆ ಲಾಠಿ ಏಟಿನ ರುಚಿ ತೋರಿಸುವ ಪ್ರಸ್ತಾಪವೂ ನಡೆದಿದೆ.
ಗಡಿಯ ಗೋಜಲು: ಪುರಾಣ ಪ್ರಸಿದ್ಧ ಮುತ್ತತ್ತಿ ಇದೀಗ ಮೋಜು, ಮಸ್ತಿಯ ತಾಣವಾಗಿದೆ. ಮುತ್ತತ್ತಿ ಪ್ರದೇಶವು ನೆರೆಯ ಮಂಡ್ಯ ಜಿಲ್ಲೆಗೆ ಸೇರಿದೆ. ಕೂಗಳತೆ ದೂರದಲ್ಲೇ ರಾಮನಗರ ಜಿಲ್ಲೆ ಗಡಿಯೂ ಇದೆ. ಹೀಗಾಗಿ ಈ ವಿವಾದಿತ ಸ್ಥಳ ಯಾವ ಜಿಲ್ಲಾ ಪೊಲೀಸ್ ಗಡಿ ಎನ್ನುವುದೂ ಗೋಜಲಾಗಿದೆ.
ಘಟನಾ ಸ್ಥಳ ರಾಮನಗರ ಜಿಲ್ಲೆಗೆ ಸೇರಿದ್ದೆನ್ನುವುದಾದರೆ ಅಲ್ಲಿದ್ದ ಪೊಲೀಸರು ಸಾತನೂರು ಠಾಣೆಯವರು.
ಒಂದೊಮ್ಮೆ ಮಂಡ್ಯ ಜಿಲ್ಲೆಯ ಗಡಿಯಲ್ಲಿದ್ದರು ಎಂದರೆ ನಿಯೋಜನೆಗೊಂಡಿದ್ದವರು ಹಲಗೂರು ಠಾಣೆ ಪೊಲೀಸರಾಗಿರುತ್ತಾರೆ.
ತನಿಖೆ ಆಗಬೇಕಿದೆ: ಪೊಲೀಸ್ ಉನ್ನತ ಅಧಿಕಾರಿ ರವೀಂದ್ರನಾಥ್ ಯುವತಿ ಫೋಟೋ ಕ್ಲಿಕ್ಕಿಸಿದರೆನ್ನುವ ಪ್ರಕರಣ ದೊಡ್ಡ ರಂಪಾಟಕ್ಕೆ ಕಾರಣವಾಗಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. ಈ ನಗ್ನ ದೃಶ್ಯಾವಳಿ ಸೆರೆ ಹಿಡಿದ ಪ್ರಕರಣದ ಬಗ್ಗೆಯೂ ತನಿಖೆ ಅಗತ್ಯವೆನ್ನುವುದು ನಾಗರಿಕರ ಆಗ್ರಹ.
ಸಿಕ್ಕಿಬಿದ್ದ ನಿರ್ಲಜ್ಜರ ವಿರುದ್ಧ ಇತ್ತ ರಾಮನಗರದ ಸಾತನೂರು, ಅತ್ತ ಮಂಡ್ಯದ ಹಲಗೂರು ಎರಡೂ ಕಡೆ ಪ್ರಕರಣ ದಾಖಲಾಗಿರುವ ಸುಳಿವಿಲ್ಲ. ಹೀಗಾಗಿ ವೀಡಿಯೋ ಚಿತ್ರೀಕರಿಸಿದವರು ಅದನ್ನೇ ಮುಂದಿಟ್ಟುಕೊಂಡು ಡೀಲ್ ಕುದುರಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಇನ್ನೂ ಮಾಹಿತಿ ಇಲ್ಲವೇ: ರಾಮನಗರದಾದ್ಯಂತ ಪಡ್ಡೆ ಹೈಕ್ಳು ಮಾತ್ರವಲ್ಲದೆ ಹಲವರ ಮೊಬೈಲ್ಗಳಲ್ಲಿ ಕಳೆದೆರಡು ವಾರದಿಂದಲೂ ಹರಿದಾಡುತ್ತಾ ಸುದ್ದಿಯಾಗಿರುವ ಬೆತ್ತಲೆ ಜೋಡಿಯ ಕಾಮಪುರಾಣದ ವೀಡಿಯೋ ದೃಶ್ಯಾವಳಿ ಬಗ್ಗೆ ಪೊಲೀಸರಿಗಿನ್ನೂ ಮಾಹಿತಿ ಇಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ.
ಈ ಜಿಲ್ಲೆಯಲ್ಲಿ ಹಿಂದೆ ಸಿಲ್ಕ್ ಸಿಟಿ ಸೆಕ್ಸ್ ಭಾಗ-1 ಮತ್ತು ಭಾಗ-2, ಮಾಗಡಿ ಮಂದಾರ ಎನ್ನುವ ಇಂಥದ್ದೇ ವೀಡಿಯೋಗಳು ಹರಿದಾಡಿದ್ದವು. ಇದೀಗ ಆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ. ಅದರಲ್ಲಿ ಪೊಲೀಸರೇ ಪಾತ್ರ ವಹಿಸಿರುವ ಸಂದೇಹ ಕಾಡುತ್ತಿರುವುದು ವಿಪರ್ಯಾಸದ ಸಂಗತಿ.
ಚಿತ್ರೀಕರಿಸಿದ್ದೂ ಇಬ್ಬರು
ಇಷ್ಟು ಸಾಲದೆನ್ನುವಂತೆ ಚಿತ್ರೀಕರಿಸಿದವರೂ ಇಬ್ಬರಿದ್ದರೆನ್ನುವುದು ಧ್ವನಿಮುದ್ರಣದಿಂದ ತಿಳಿಯುತ್ತದೆ. ಆ ಪೈಕಿ ಒಬ್ಬ ಸಿಕ್ಕಬಿದ್ದ ನಿರ್ಲಜ್ಜ ಜೋಡಿಯನ್ನುದ್ದೇಶಿಸಿ ನಿಮ್ಮ ಮೇಲೆ ಕೇಸ್ ಹಾಕ್ತೀವಿ, ಯು ಕಮ್ ಕ್ವಾಟ್ರಸ್ ಎಂದು ಹೇಳಿದ್ದರ ಉದ್ದೇಶವೂ ಸಂದೇಹ ಮೂಡಿಸಿದೆ. 4 ನಿಮಿಷ 33 ಸೆಕೆಂಡ್ ಇರುವ ಆ ವೀಡಿಯೋದಲ್ಲಿ ಸಿಕ್ಕಿಬಿದ್ದವರು ಸಾಕಷ್ಟು ಕಾಡಿ ಬೇಡಿದರೂ ಬಟ್ಟೆಗಳನ್ನು ನೀಡಲು ಚಿತ್ರೀಕರಿಸಿದವರು ಸತಾಯಿಸಿದ್ದಾರೆ. ಆ ಸ್ಥಳದತ್ತ ಜನರು ಬರುವುದನ್ನು ಗಮನಿಸಿದ ನಂತರವಷ್ಟೇ ಬಟ್ಟೆ ತೊಡಲು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

