ಬೆಂಗಳೂರು ಗ್ರಾಮಾಂತರ

ಮಾಟ, ವಾಮಾಚಾರ: ಗಾಬರಿಗೊಂಡ ಕುಟುಂಬ

Published On :

ಮಾಗಡಿ: /ರಾಮನಗರ:  ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಮನುಷ್ಯ ಚಂದ್ರಲೋಕಕ್ಕೂ ಕಾಲಿಟ್ಟಾಯ್ತು. ಬೇರೆ ಗ್ರಹವೂ ವಾಸ ಯೋಗ್ಯವೇ ಎನ್ನುವ ಬಗ್ಗೆ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಆದರೆ, ನಮ್ಮ  ಜನರಿನ್ನೂ ಮೌಢ್ಯದ ಕೂಪದಿಂದ ಹೊರಬಂದೇ ಇಲ್ಲ.
ವಿರೋಧಿಗಳಿಗೆ ಕೆಡುಕಾಗಲೆಂದು ವಾಮಾಚಾರ ಈಗಲೂ ಮುಂದುವರೆದಿದೆ. ಮಾಟ, ಮಂತ್ರ ನಂಬಿದವರು ವಿಧಾನಸೌಧದ ಎದುರೂ ವಾಮಾಚಾರ ಮಾಡಿಸಿದ್ದರು. ಇದೀಗ ಇಲ್ಲೊಂದು ಹಳ್ಳಿಯ ಮನೆ ಮುಂದೆ ಮಾಟ ಮಾಡಿ, ಕುಟುಂಬದವರಿಗೆ ಕೇಡು ಬಯಸಲಾಗಿದೆ.
ಮಾಗಡಿ ತಾಲೂಕಿನ ಕಲ್ಯಾ ಗ್ರಾಮದ ಕಂಡಕ್ಟರ್ ರಾಮಣ್ಣ ಎಂಬುವರ ಮನೆ ಮುಂದೆ ವಾಮಾಚಾರ ನಡೆಸಲಾಗಿದೆ. ಮನೆ ಬಾಗಿಲ ಬಳಿ ಮಣ್ಣಿನ ಬೊಂಬೆ, ಕುಡಿಕೆ, ಕೂದಲು, ವಿಭೂತಿ, ಚಟ್ಟ ಮಾಡಿ ನೀನು ಸಾಯಬೇಕು ಎಂದು ರಕ್ತದಲ್ಲಿ ಬರೆದು ವಾಮಾಚಾರ ಮಾಡಲಾಗಿದೆ.  ಮಣ್ಣಿನಲ್ಲಿ ಮಾನವ ಆಕೃತಿ ಮಾಡಿ ತಾಳಿ, ಕರಿಮಣಿ ಹಾಕಿ, ತೆಂಗಿನಗರಿಯಲ್ಲಿ ಚಟ್ಟದ ಆಕೃತಿಯಲ್ಲಿ ಬೊಂಬೆಯನ್ನ ಕೂರಿಸಿ ಹೊಸ ಬಿಳಿ ಬಟ್ಟೆಗಳನ್ನ ಸುಟ್ಟು ಕೂದಲುಗಳನ್ನಿಡಲಾಗಿದೆ. ನೀನು ಸಾಯಬೇಕು ಎನ್ನುವುದನ್ನು ಹಂದಿ ರಕ್ತದಲ್ಲಿ ಬರೆಯಲಾಗಿದೆ.
ವಾಮಾಚಾರಿಗಳ ಪ್ರಯೋಗ ಮಂಗಳವಾರ ರಾತ್ರಿ ನಡೆದಿದ್ದು, ಬುಧವಾರ ಬೆಳಗ್ಗೆ ಎದ್ದು ಬಾಗಿಲು ತೆರೆದಾಗ ರಾಮಣ್ಣ ಕುಟುಂಬ ಆಘಾತಗೊಂಡಿದೆ. ವಾಮಾಚಾರಿಗಳಿಗೆ ಹಿಡಿಶಾಪ ಹಾಕಿರುವ ಕುಟುಂಬವು ಇದೀಗ ವಾಮಾಚಾರದಿಂದ ಕೆಡುಕುಂಟಾಗದಂತೆ ದೈವದ ಮೊರೆ ಹೋಗಿದೆ.   
ರಾಮಣ್ಣ ಮನೆ ಎದುರು ಈ ಹಿಂದೆಯೂ ಎರಡು ಬಾರಿ ವಾಮಾಚಾರ ನಡೆಸಲಾಗಿತ್ತು ಎನ್ನಲಾಗಿದೆ.
ಕಾಕತಾಳೀಯ ಎನ್ನುವಂತೆ ವಾಮಾಚಾರದ ನಂತರ ತಮ್ಮ ಮನೆಯಲ್ಲಿ ಕೆಲವರಿಗೆ ಕೈಕಾಲು ನೋವು, ನಿಶಕ್ತಿ ಕಾಡುತ್ತಿದೆ ಎಂದು ರಾಮಣ್ಣ ಕುಟುಂಬದವರು ಹೇಳಿಕೊಳ್ಳುತ್ತಿದ್ದಾರೆ.   ಘಟನೆ ಸಂಬಂಧ ರಾಮಣ್ಣ ಅವರು ಮಾಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಕೆಲವರು ಹೀಗೆ ಮಾಟ, ಮಂತ್ರದಿಂದ ಬೇರೆಯವರಿಗೆ ಕೆಡುಕುಂಟು ಮಾಡಬೇಕೆನ್ನುವ ವಿಕೃತ ಮನಸ್ಥಿತಿಯನ್ನು ಮುಂದುವರೆಸಿರುವುದು ವಿಪರ್ಯಾಸದ ಸಂಗತಿ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.