ಹೊಣೆ ಮರೆತ ಆರೋಗ್ಯ ಸ್ಥಾಯಿ ಸಮಿತಿ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಮಹಾನಗರಿ ಬೆಂಗಳೂರಿನ ಕಸ ಕಾಟಕ್ಕೆ ಸರ್ಕಾರವೇ ಬೆದರಿ ಹೋಗಿದೆ. ಆದರೆ ಕಸ ನಿರ್ವಹಣೆ ಹೊಣೆ ಹೊತ್ತ ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿ ಏನೂ ಮಾಡದೆ ಆಕಳಿಸುತ್ತಿದೆ.
ತಾರಕಕ್ಕೇರಿದ ಕಸದ ಸಮಸ್ಯೆ ನಿತ್ಯ ಪ್ರತಿಭಟನೆ, ನಿಷೇಧಾಜ್ಞೆ, ನಿಂದನೆಗಳಿಗೆ ಕಾರಣವಾಗುತ್ತಿದೆ. ಜನ ಬಿಬಿಎಂಪಿ ಕಡೆ ಕೈ ತೋರಿಸಿ ಛೀಮಾರಿ ಹಾಕುವಂತಾಗಿದೆ. ಆದರೆ ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿ ಏನೂ ಅರಿಯದಂತಿದೆ. ಸಮಿತಿ ಅಧ್ಯಕ್ಷರು, ಸದಸ್ಯರು ಕಸ ಸಮಸ್ಯೆ ಕುರಿತು ಒಂದು ಸಭೆ ನಡೆಸಿಲ್ಲ. ಕಸ ಕುರಿತ ಸಭೆ, ಪ್ರಾತ್ಯಕ್ಷಿಕೆಗಳು, ಪ್ರತಿಭಟನೆಗಳು ನಡೆಯುತ್ತಿದ್ದರೂ ಅತ್ತ ಅಧ್ಯಕ್ಷರು, ಸದಸ್ಯರು ತಲೆ ಹಾಕುತ್ತಿಲ್ಲ.
ನಗರದಲ್ಲಿ ಉತ್ಪತ್ತಿಯಾಗುವ 4,500 ಟನ್ ಕಸದಲ್ಲಿ ಅರ್ಧ ಪಾಲು ವಿಲೇವಾರಿಯಾಗದೆ ನಗರದಲ್ಲೇ ಉಳಿಯುತ್ತಿದೆ. ನಿಷೇಧಾಜ್ಞೆ ಹೇರಿ ಮಂಡೂರು, ಕೂಡ್ಲು, ಬಿಂಗಿಪುರ ಬಳಿ ಕಸ ಹಾಕುವಂತಾಗಿದೆ. ಇಷ್ಟಾದರೂ ಸಮಸ್ಯೆವನ್ನು ಸಮಿತಿ ಗಂಭೀರವಾಗಿ ಪರಿಗಣಿಸಿಲ್ಲ.
ಕೆಎಂಸಿ ಕಾಯ್ದೆ ಪ್ರಕಾರ ಕಸ ಸಮಸ್ಯೆ ಪರಿಹರಿಸುವಲ್ಲಿ ಹೆಚ್ಚಿನ ಹೊಣೆಗಾರಿಕೆ, ಅಧಿಕಾರ ಇರುವುದು ಆರೋಗ್ಯ ಸ್ಥಾಯಿ ಸಮಿತಿಗೆ. ಕಸ ಸಮಸ್ಯೆ ಕುರಿತು ಮೇಯರ್ ಮತ್ತು ಆಯುಕ್ತರು ಅಗತ್ಯ ಆದೇಶ ಹೊರಡಿಸಬಹುದೇ ವಿನಾ ಕಸ ಕುರಿತ ಪ್ರಸ್ತಾಪ, ನೀತಿ, ನಿಯಮಗಳು ಸಮಿತಿ ಮೂಲಕವೇ ಜಾರಿಯಾಗಬೇಕು.
ಸಮಿತಿ ಅಧ್ಯಕ್ಷರು, ಸದಸ್ಯರು ಚರ್ಚಿಸಿ ಕೌನ್ಸಿಲ್ನಲ್ಲಿ ಮಂಡಿಸಬೇಕು. ಆದರೆ, ತ್ಯಾಜ್ಯ ಸಮಸ್ಯೆ ಕುರಿತ 10ಕ್ಕೂ ಹೆಚ್ಚಿನ ಸಭೆ, 5ಕ್ಕೂ ಹೆಚ್ಚಿನ ಪ್ರಾತ್ಯಕ್ಷಿಕೆಗಳಲ್ಲಿ ಸಮಿತಿ ಅಧ್ಯಕ್ಷೆ ಎಸ್.ಶಶಿರೇಖಾ ಜಯರಾಮ್ ಭಾಗವಹಿಸಲೇ ಇಲ್ಲ.
ಸಮಿತಿ ಎಡವಿದ್ದು ಎಲ್ಲಿ ?
ತ್ಯಾಜ್ಯದಲ್ಲಿ ಹೆಚ್ಚಳವಾಗಿರುವುದು ನಿಷೇಧಿತ ಪ್ಲಾಸ್ಟಿಕ್. ಇದರ ನಿಷೇಧವನ್ನು ಸಮಿತಿ ಚುರುಕುಗೊಳಿಸಲಿಲ್ಲ. ಕಸ ಸಮಸ್ಯೆಗಳನ್ನು ವೈದ್ಯಾಧಿಕಾರಿಗಳು ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಿಲ್ಲ.
ಕಸದಿಂದ ವಿದ್ಯುತ್ ಮತ್ತು ಗೊಬ್ಬರ ತಯಾರಿಸಲು ಬಂದಿರುವ ಎಂ.ಕೆ. ಆರೋಮೆಟಿಕ್ಸ್, ಆರ್ಗ್ಯಾನಿಕ್ ವೇಸ್ಟ್ ಇಂಡಿಯಾ ಹಾಗೂ ಸತಾರಾಂ ಸಂಸ್ಥೆಗಳ ಏಕೆ ಕಾರ್ಯಾರಂಭ ಮಾಡಿಲ್ಲ ಎಂದು ನೋಡಲಿಲ್ಲ.ಸದಸ್ಯರು ವಾರ್ಡ್ಗಷ್ಟೇ ಸೀಮಿತ
ತ್ಯಾಜ್ಯ ತಲೆನೋವು ನಿವಾರಣೆಗೆ ಹೊಸ ನಿರ್ಣಯಗಳನ್ನು ಸಮಿತಿ ಕೈಗೊಳ್ಳಬಹುದಿತ್ತು. ಸರ್ಕಾರದ ಮಟ್ಟದಲ್ಲಿ ವಿಳಂಬವಾಗುತ್ತಿದ್ದರೆ ಕೌನ್ಸಿಲ್ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಿಲ್ಲ.
ಮಂಡೂರು ಕಸ ತಾಣವನ್ನು ಇನ್ನೊಂದು ವರ್ಷದಲ್ಲಿ ಮುಚ್ಚಲಾಗುವುದು ಎಂದು ಹಿಂದಿನ ಮೇಯರ್ ಭರವಸೆ ನೀಡಿದ್ದರು. ಮಂಡೂರು ಜನತೆ ನೀಡಿದ್ದ ಗಡುವು ಮುಗಿದು 5 ತಿಂಗಳೇ ಕಳೆದಿತ್ತು. ಈ ಬಗ್ಗೆ ಮಂಡೂರು ಜನತೆಯನ್ನು ಕರೆದು ಮತ್ತೆ ಅವಧಿ ವಿಸ್ತರಿಸುವುದು ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರೆ ಪ್ರತಿಭಟನೆ ಈ ಹಂತಕ್ಕೆ ಬರುತ್ತಿಲಿಲ್ಲ. ಆದರೆ, ಸಮಿತಿ ಅಧ್ಯಕ್ಷರು ಕಚೇರಿಗೆ ಬರುವುದೇ ಅಪರೂಪವಾಯಿತು. ಇನ್ನು ಸದಸ್ಯರು ಅಧ್ಯಕ್ಷರೇ ಇಲ್ಲದೆ ಏನು ಮಾಡುವುದೆಂದೂ ಸಮಿತಿ ಸದಸ್ಯರೂ ತಮ್ಮ ವಾರ್ಡ್ಗಳಿಗೆ ಸೀಮಿತವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

