ಬೆಂಗಳೂರು ಗ್ರಾಮಾಂತರ

ವಿಶ್ವಕರ್ಮರ ಪ್ರತಿಭಟನೆ ವಾಪಸ್

Published On :

ಬೆಂಗಳೂರು: ವಿಶ್ವಕರ್ಮ ಸಮುದಾಯದ ನಾಯಕ ಕೆ.ಪಿ. ನಂಜುಂಡಿ ಅವರ ಮನವಿ ಮೇರೆಗೆ ವಿಶ್ವಕರ್ಮ ಸಮಾಜದ ಮುಖಂಡರು ಪ್ರತಿಭಟನೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ಪರವಾಗಿ ನಿಂತಿರುವ ನಂಜುಂಡಿ ಹಾಗೂ ವಿಶ್ವಕರ್ಮರಿಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅನ್ಯಾಯ ಮಾಡಲಾರರು ಎಂಬ ವಿಶ್ವಾಸವಿದೆ. ನಂಜುಂಡಿ ಅವರನ್ನು ವಿಧಾನ ಪರಿಷತ್ಗೆ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಪ್ರತಿಭಟನೆ ಹಾದಿ ತುಳಿಯದಿರಲು ನಿರ್ಧರಿಸಲಾಗಿದೆ. ಆದಾಗ್ಯೂ ಕಾದು ನೋಡುವ ತಂತ್ರ ಅನುಸರಿಸಲು ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ ಎಂದು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.



ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಚನ್ನಕೇಶವ ನಗರ ನಿವಾಸಿ ವಿಜೇಶ್(30) ನೇಣಿಗೆ ಶರಣಾಗಿದ್ದಾರೆ. ಸಣ್ಣಪುಟ್ಟ ಕೈಸಾಲ ಮಾಡಿದ್ದುದೇ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ. ಕೇರಳ ಮೂಲದ ವಿಜೇಶ್ ಸುಮಾರು 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಬೊಮ್ಮನಹಳ್ಳಿಯಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ಮತ್ತಿಕೆರೆಯ ಗೋಕುಲ ನಿವಾಸಿ ಲಲಿತಮ್ಮ(51) ನೇಣಿಗೆ ಶರಣಾಗಿದ್ದಾರೆ. ಪತಿ ಕೃಷ್ಣೇಗೌಡ ಅವರು ಹಾಪ್ಕಾಮ್ಸ್ನಲ್ಲಿ ಕೆಲಸ ಮಾಡುತ್ತಿದ್ದು ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಪುತ್ರಿ ಕಾಲೇಜಿಗೆ ಹೋಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಕುಸ್ತಿಪಟುವಿಗೆ ಸನ್ಮಾನ
ಬೆಂಗಳೂರು: ಕನ್ನಡಪರ ಹೋರಾಟಗಾರ ಟಿ.ಎ.ನಾರಾಯಣಗೌಡರ 48ನೇ ಜನ್ಮದಿನದ ಅಂಗವಾಗಿ ಕುಸ್ತಿಪಟು ಎಲ್.ಶಿವು ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸನ್ಮಾನಿಸಿದರು. 'ಬಿಎಸ್ಎನ್ಎಲ್ ಶಿವು' ಎಂದೇ ಹೆಸರಾದ ಶಿವು, ವಸಂತನಗರದ ಕರ್ನಾಟಕ ವ್ಯಾಯಾಮ ಶಾಲೆಯ ಹಿರಿಯ ಕುಸ್ತಿಪಟುವಾಗಿದ್ದಾರೆ. ಕರವೇ ಕಾರ್ಯಕರ್ತರಾದ ಗೋ. ಮೂರ್ತಿ ಯಾದವ್, ರೇಖಾ, ಎನ್. ಮಲ್ಲಿಕಾರ್ಜುನ, ನೇ.ಭ. ರಾಮಲಿಂಗಶೆಟ್ಟಿ, ಮುಖಂಡರಾದ ಪೈಲ್ವಾನ್ ಮೀಸೆ ನಾಗರಾಜ್, ಪೊಲೀಸ್ ಸಿದ್ಧಪ್ಪ, ಬಸವನಗುಡಿ ಕೃಷ್ಣಪ್ಪ ಉಪಸ್ಥಿತರಿದ್ದರು.
ವಿವಿಧ ಸೌಲಭ್ಯ: ಅರ್ಜಿ ಆಹ್ವಾನ
ಬೆಂಗಳೂರು: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿ, ಶೈಕ್ಷಣಿಕ ಸಾಲ, ಉದ್ಯೋಗಾವಕಾಶ, ನೀರಾವರಿ ಸೌಲಭ್ಯ ಮೊದಲಾದ ಯೋಜನೆಗಳಿಗೆ ಜೂ.20ರೊಳಗಾಗಿ ಅರ್ಜಿ ಪಡೆದು ದಾಖಲೆಗಳೊಂದಿಗೆ ಜು.19ರೊಳಗೆ ಸಲ್ಲಿಸಬೇಕು. ಒಂದು ಯೋಜನೆಯ ಫಲಾನುಭವಿಗಳಾದವರು ಮತ್ತೊಂದು ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
ಹಿಂದುಳಿದ ವರ್ಗದ ಪ್ರವರ್ಗ-1, 2ಎ, 3ಎ ಹಾಗೂ 3ಬಿಗೆ ಸೇರಿದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.080-23156006.
ಸಾಹಿತ್ಯ ರಚನೆಗೆ ಸಂಘರ್ಷ ಬೇಕಿಲ್ಲ
ಬೆಂಗಳೂರು: ಮನಸ್ಸಿನೊಳಗೆ ಕಾಡುವ ಬರವಣಿಗೆಯ ತುಡಿತವೇ ಸಾಹಿತ್ಯದ ಮೂಲದ್ರವ್ಯ ಎಂದು ವಿಮರ್ಶಕ ಡಾ.ಪಿ.ವಿ.ನಾರಾಯಣ ಅಭಿಪ್ರಾಯಪಟ್ಟರು.ಸುಂದರ ಸಾಹಿತ್ಯ ಪ್ರಕಾಶನವು ಪ್ರಕಟಿಸಿರುವ ಲೇಖಕಿ ಶೋಭಾ ನಾಗರಾಜ್ ಅವರ 'ಅಸ್ತಿತ್ವ ಮತ್ತು ಇತರೆ ಕತೆಗಳು' ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಸಾಹಿತ್ಯ ರಚನೆಗೆ ಸಂಘರ್ಷಗಳು, ಸಂಕ್ರಾಂತಿಗಳು ಬೇಕು ಎನ್ನುವುದರಲ್ಲಿ ಅರ್ಥವೇ ಇಲ್ಲ. ಬರವಣಿಗೆಯ ತುಡಿತ ಮನಸ್ಸಿನೊಳಗೆ ಕಾಡಿದರೆ, ಸಾಹಿತ್ಯ ತಾನಾಗಿಯೇ ಹುಟ್ಟಿಕೊಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.