ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಕೊರತೆ'
ಕನಕಪುರ: ಸ್ವಾತಂತ್ರ್ಯ ಬಂದು ಆರೂವರೆ ದಶಕಗಳಾದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಹೇಳಿದ್ದಾರೆ. ಅವರು ಕನಕಪುರ ತಾಲೂಕಿನ ಕೋಣನಶೆಡ್ಡು ಗ್ರಾಮದಲ್ಲಿ ಗ್ರಾಮಶಾಖೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಬೂದಿಗುಪ್ಪೆ ಸಂಪತ್ ಅಧ್ಯಕ್ಷತೆ ವಹಿಸಿದ್ದರು. ರಾಜಕಾರಣಿಗಳು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತಿಸದೆ ರಾಜಕೀಯ ಮಾಡುತ್ತಿರುವುದರಿಂದ ಪ್ರಗತಿ ಕುಠಿತಗೊಂಡು ಜನರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಇಂದಿಗೂ ರೈತರು ಬಂಡವಾಳ ಶಾಹಿಗಳ, ದಲ್ಲಾಳಿಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ, ಸಮರ್ಪಕ ಬೆಲೆ ದೊರೆಯದೆ ಕಂಗಾಲಾಗಿದ್ದಾರೆ ಎಂದು ಪುಟ್ಟಸ್ವಾಮಿ ನುಡಿದರು. ತಾಲೂಕು ಗೌರವಾಧ್ಯಕ್ಷ ಪುರದಯ್ಯ,ಅಧ್ಯಕ್ಷ ಅನಂತರಾಮ ಪ್ರಸಾದ್, ರೇವಣ್ಣ, ರಾಮಣ್ಣ, ದೊಡ್ಡಸ್ವಾಮಿ, ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ರೇಷ್ಮೆ ಇಲಾಖೆ ವಿಲೀನಕ್ಕೆ ವಿರೋಧ
ಮಾಗಡಿ: ರೇಷ್ಮೆ ಇಲಾಖೆ ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ರೇಷ್ಮೆ ಕೃಷಿಕರಿಗೆ ಮರಣ ಶಾಸವಾಗಿದೆ. ಸರ್ಕಾರ ಕೂಡಲೆ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳದಿದ್ದರೆ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಣಿಕೆದಾರರು ಹಾಗೂ ನಾಗರಿಕರು ಒಗ್ಗಟ್ಟಾಗಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ರೇಷ್ಮೆ ಕೃಷಿಕರ ಜಿಲ್ಲಾ ಹಿತ ರಕ್ಷಣಾ ವೇದಿಕೆ ಸಂಚಾಲಕ ಯಲವಳ್ಳಿ ಸೊಣ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.ಅವರು ಮಾಗಡಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೇ 17 ರಂದು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರೇಷ್ಮೆ, ಕೃಷಿ ಅಭಿವೃದ್ಧಿ ಆಯುಕ್ತರ ನೇತೃತ್ವದ 8 ಮಂದಿ ಸಮಿತಿಯನ್ನು ರಚಿಸಿ ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ರೇಷ್ಮೆ ಕೃಷಿ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2014 ರ ಸಾಲಿಗೆ ರೇಷ್ಮೆ ಶತಮಾನೋತ್ಸವ ಆಚರಿಸಲು ರಾಜ್ಯ ವಿವಿಧ ಭಾಗಗಳ ರೇಷ್ಮೆ ಬೆಳೆಗಾರರ ರೈತರೊಂದಿಗೆ ವಿಕಾಸ ಸೌಧದಲ್ಲಿ ಈಗಾಗಲೇ ಪೂರ್ವಭಾವಿಯಾಗಿ ಸಭೆ ನಡೆಸಲಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಅವರ ಕಾಲದಲ್ಲಿ ಇಂಥ ಘಟನೆ ನಡೆಯಬಾರದು ಎಂದು ಅವರು ಹೇಳಿದರು. ರೇಷ್ಮೆ ಕೃಷಿ ಇಲಾಖೆಯನ್ನು ಯಥಾಸ್ಥಿತಿ ಉಳಿಸುವಂತೆ ಸೊಣ್ಣೇಗೌಡ ಆಗ್ರಹಿಸಿದರು.
ರೈಷ್ಮೆ ಇಲಾಖೆ, ಕೃಷಿ ಇಲಾಖೆಯೊಂದಿಗೆ ವಿಲೀನ ಬೇಡ ಎಂದು ಕೆಂಪೇಗೌಡ ರೇಷ್ಮೆ ಬೆಳಗಾರರ ಮತ್ತು ನೂಲು ಬಿಚ್ಚಣಿಕೆದಾರರ ಕ್ಷೇಮಾಭೃದ್ಧಿ ಸಂಘ ಅಧ್ಯಕ್ಷ ಬಾಳೇಕಟ್ಟೆ ದೊಡ್ಡಯ್ಯ ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಸವನಪಾಳ್ಯದ ಲೋಕೇಶ್ ಬಿ.ಆರ್, ಕುದೂರು ವಿಜಯಲಕ್ಷ್ಮೀ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಜೆ. ಸಂಪತ್, ಗಂಗಯ್ಯ, ದೇವರಾಜು, ಚಲುವಯ್ಯ, ವೆಂಕಟಪ್ಪ, ಯಾಲಕಯ್ಯ, ರಂಗಸ್ವಾಮಯ್ಯ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

