ಬೆಂಗಳೂರು ಗ್ರಾಮಾಂತರ

1500 ಕ್ಕೂ ಹೆಚ್ಚು ನಿವೇಶನಗಳಿಗೆ ಅಕ್ರಮ ಖಾತೆ

Published On :

ರಾಮನಗರ : ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ರಚಿತವಾಗಿರುವ ಅನಧಿಕೃತ ಬಡಾವಣೆಗಳ 1500ಕ್ಕೂ ಹೆಚ್ಚು ನಿವೇಶನಗಳಿಗೆ ನಗರಸಭೆಯಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಬಯಲಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತನಿಖೆಗೆ ಆದೇಶಿಸಿದ್ದಾರೆ.
ಇದೇ ತಿಂಗಳ ಮೊದಲ ವಾರ ಅಧಿಕಾರ ವಹಿಸಿಕೊಂಡ ಜಮಾದಾರ್ ಅವರಿಗೆ ಪುರಪಿತೃಗಳ ತಂಡವೊಂದು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದು, ರಾಮನಗರ ನಗರಸಭೆಯೂ ಅಕ್ರಮ ಖಾತೆಗಳ ಕೂಪವಾಗಿರುವುದು ಬೆಳಕಿಗೆ ಬಂದಿದೆ.
ಆಯುಕ್ತರ ಸಹಿ ನಕಲು: ಜಿಲ್ಲಾಧಿಕಾರಿ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ನಗರಸಭೆ ಆಯುಕ್ತ ಯಶವಂತ್ ಕುಮಾರ್ ಅವರು ಕಡತಗಳ ಪರಿಶೀಲನೆಗೆ ಇಳಿದಾಗ ತಮ್ಮ ಅಧೀನ ಅಧಿಕಾರಿಗಳು, ಸಿಬ್ಬಂದಿ ನಡೆಸಿರುವ ಅಕ್ರಮಗಳಿಂದ ಸ್ವತಃ ಬೆಚ್ಚಿ ಬಿದ್ದಿದ್ದಾರೆ.
ಕೆಲವು ಕಡತಗಳಲ್ಲಿ ಹಿಂದಿನ ಆಯುಕ್ತರ ಸಹಿಯನ್ನೇ ನಕಲು ಮಾಡಿದ್ದರೆ, ಮತ್ತೆ ಕೆಲವು ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಯಾವುದೇ ದಾಖಲೆಯನ್ನೂ ಪರಿಗಣಿಸದೆ ಖಾತೆ ಮಾಡಿಕೊಟ್ಟಿರುವುದು ತನಿಖಾ ಹಂತದಲ್ಲಿ ಪತ್ತೆಯಾಗಿದೆ.
ಸಿಬ್ಬಂದಿಯ ಕೈಚಳಕ: ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟರ ಜತೆಗೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು, ಕೆಲ ಸಿಬ್ಬಂದಿ ಶಾಮೀಲಾಗಿ ಅಕ್ರಮ ಖಾತೆಗಳನ್ನು ಮಾಡಿದ್ದಾರೆ. ಈ ಅವ್ಯವಹಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು ರು.50 ಕೋಟಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ.
ಅನಧಿಕೃತ ಬಡಾವಣೆಗಳ ಬಹುತೇಕ ನಿವೇಶನಗಳಿಗೆ ಹಳೆಯ ದಿನಾಂಕ, ಹಿಂದಿನ ಸಿಬ್ಬಂದಿಯ ಷರಾ ಮತ್ತು ಆ ದಿನಾಂಕದಲ್ಲಿದ್ದ ಅಧಿಕಾರಿಯ ಸಹಿಯೊಂದಿಗೆ ಖಾತೆ ಮಾಡಿಕೊಡಲಾಗಿದೆ. ಇನ್ನೊಂದಷ್ಟು ನಿವೇಶನಗಳ ಖಾತೆಗಳಿಗೆ ಸಂಬಂಧಿಸಿದಂತೆ ಕಡತಗಳೇ ಇಲ್ಲ.
ಕಂದಾಯ ಸ್ವತ್ತುಗಳೇ: ರಾಮನಗರದಲ್ಲಿ ಹತ್ತಾರು ಅನಧಿಕೃತವಾಗಿ ಬಡಾವಣೆಗಳನ್ನು ರಚಿಸಿ, ನಿವೇಶನಗಳನ್ನು ಹಂಚಲಾಗಿದೆ. ಅವಕ್ಕೆ ನಗರಸಭೆಯಲ್ಲಿ ಖಾತೆ ಮಾಡಿಕೊಡಲಾಗಿದ್ದರೂ ಕಂದಾಯ ದಾಖಲಾತಿಗಳಲ್ಲಿ ಇನ್ನೂ ಅವೆಲ್ಲವೂ ಕೃಷಿ ಜಮೀನು ಎಂದೇ ಬರುತ್ತಿದೆ.
ಜಮೀನನ್ನು ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆ ಮಾಡಿಸಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಪಾವತಿಸಿ ನಿಯಮಾನುಸಾರ ಸಾರ್ವಜನಿಕ ಉದ್ದೇಶ ಮತ್ತು ರಸ್ತೆಗೆ ಜಾಗ ಬಿಟ್ಟು ಅನುಮೋದಿತ ನಕ್ಷೆ ಪ್ರಕಾರ ನಿವೇಶನಗಳನ್ನು ಹಂಚಬೇಕಿದೆ. ಯಾವೊಂದು ಬಡಾವಣೆಯಲ್ಲೂ ಈ ಪ್ರಕ್ರಿಯೆ ನಡೆದಿಲ್ಲ.  
ಕ್ರಮ ಜರುಗಿಸಿಲ್ಲ: ರಾಮನಗರದಾದ್ಯಂತ ಅನಧಿಕೃತ ಬಡಾವಣೆಗಳ ರಚನೆ ಮತ್ತು ಅಕ್ರಮ ಖಾತೆಗಳ ಕೂಗು ಕೇಳಿ ಬರುತ್ತಿರುವುದು ಇಂದು ನಿನ್ನೆಯ ವಿಷಯವಷ್ಟೇ ಅಲ್ಲ. ಈ ಜಿಲ್ಲೆ ರಚನೆ ಆಗುವ ಮುಂಚಿನಿಂದಲೂ ಅಕ್ರಮಗಳ ಬಗ್ಗೆ ತನಿಖೆಗೆ ಒತ್ತಾಯ ಕೇಳಿ ಬರುತ್ತಲೇ ಇದೆ.
ಪಕ್ಷಾತೀತವಾಗಿ ರಾಜಕೀಯ ಮುಖಂಡರೇ ರಿಯಲ್ ಎಸ್ಟೇಟ್ ಉದ್ಯಮಿಗಳು, ಪಾಲುದಾರರು ಇಲ್ಲವೇ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಪರಿಣಾಮ ಅಕ್ರಮಗಳ ಬಗ್ಗೆ ಯಾವೊಬ್ಬ ಅಧಿಕಾರಿಯೂ ತನಿಖೆ ನಡೆಸುವ ಗೋಜಿಗೆ ಹೋಗಿರಲಿಲ್ಲ ಎನ್ನುವ ಆರೋಪವಿದೆ.
ತೆರಿಗೆ ಪಾವತಿಯಿಲ್ಲ: ಹೀಗೆ ಅನಧಿಕೃತ ಬಡಾವಣೆಗಳ ನಿವೇಶನಗಳನ್ನು ಖಾತೆ ಮಾಡಿಸಿಕೊಂಡವರು ಖಾತೆ ಮಾಡಿಸಿಕೊಂಡಿದ್ದಾರಾದರೂ ನಗರಸಭೆಗೆ ಕಂದಾಯ ಪಾವತಿಸುತ್ತಿಲ್ಲ. ಕೃಷಿ ಜಮೀನೆಂದು ಮೂಲ ಮಾಲೀಕರ ಹೆಸರಲ್ಲಿ ಪಹಣಿ ಬರುತ್ತಿದೆಯಾದರೂ ಕಂದಾಯ ಸಂದಾಯವೂ ಇಲ್ಲ.
ಸರ್ಕಾರ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯ ಬೊಕ್ಕಸಕ್ಕೆ ಸೇರಬೇಕಿರುವ ಕೋಟ್ಯಂತರ ರು. ಹಣ ದಲ್ಲಾಳಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲಾಗಿದೆ. ಅಕ್ರಮ ಖಾತೆಗಳುಳ್ಳ ನಿವೇಶನಗಳು ಈಗಾಗಲೇ 3-4 ಕೈ ಬದಲಾಗಿರುವುದೂ ಉಂಟು.

ಬ್ಲೇಡ್ ಖಾತೆಗಳೂ ಕಮ್ಮಿಯಿಲ್ಲ
ಈ ಹಿಂದೆ ಬ್ಲೇಡ್ ಖಾತೆಗಳ ವಿಷಯದಲ್ಲಿ ಮಂಡ್ಯ ನಗರಸಭೆ ಅಪಖ್ಯಾತಿಗೆ ಗುರಿಯಾಗಿತ್ತು. ಇದೀಗ ಅವಳಿ ನಗರಗಳಾದ ರಾಮನಗರ ಮತ್ತು ಚನ್ನಪಟ್ಟಣದ ಪೌರಾಡಳಿತ ಸಂಸ್ಥೆಗಳಲ್ಲೂ ಬ್ಲೇಡ್ ಖಾತೆಗಳು ಬೆಳಕಿಗೆ ಬರಲಾರಂಭಿಸಿವೆ.
ನಗರಸಭೆಯಲ್ಲಿ ತಮ್ಮ ನಿವೇಶನವಿದೆ ಎಂದು ವರ್ಷಾನುಗಟ್ಟಲೆಯಿಂದ ತೆರಿಗೆ ಪಾವತಿಸಿಕೊಂಡೇ ಬಂದಿರುವ ಅಸಲಿ ಮಾಲೀಕರ ಹೆಸರುಗಳನ್ನು ಬ್ಲೇಡ್ ಮೂಲಕ ಕೆರೆದು, ಅದಕ್ಕೆ ಹೋಲುವ ಇಲ್ಲವೇ ಬೇರೊಂದು ಹೆಸರು ನಮೂದಿಸಿರುವುದೂ ಉಂಟು. ಈ ಬಗ್ಗೆಯೂ ತನಿಖೆ ಆಗಬೇಕಿದೆ.

ಕ್ರಮ ಜರುಗಿಸುವರೇ ಜಿಲ್ಲಾಧಿಕಾರಿ?
ಬಂದ ಹೊಸತರಲ್ಲೇ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ, ಬರಿಗೈಲಿ ವಾಪಸಾದ ನೂತನ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅವರ ಪಾಲಿಗೆ ಅನಧಿಕೃತ ಬಡಾವಣೆಗಳು ಮತ್ತು ಅಕ್ರಮ ಖಾತೆಗಳ ಹಗರಣ ಸಂಬಂಧ ಕ್ರಮ ಜರುಗಿಸುವುದೂ ನಿಜಕ್ಕೂ ಸವಾಲಿನ ವಿಷಯವೇ ಸರಿ.
ಈ ಜಿಲ್ಲಾಡಳಿತದ ಮೇಲೆ ರಾಜಕೀಯ ಕರಿನೆರಳು ಆವರಿಸಿದೆ. ಸಂಸದ, ಸಚಿವ, ಶಾಸಕರಷ್ಟೇ ಅಲ್ಲದೆ ಪುಢಾರಿಗಳ ಹುಕುಂ ಇಲ್ಲದೆ ಈ ಜಿಲ್ಲೆಯಲ್ಲಿ ಒಂದು ಕಡತವೂ ಮುಂದೆ ಸಾಗುವಂತಿಲ್ಲ. ಹೀಗಿರುವಾಗ ಹಗರಣದ ವರದಿ ಕೈ ಸೇರಿದ ತರುವಾಯ ಜಮಾದಾರ್ ಕ್ರಮ ಜರುಗಿಸುವುದೂ ಅನುಮಾನವಾಗಿದೆ.  ಒಂದೊಮ್ಮೆ ಎಲ್ಲ ಅಡೆತಡೆಗಳನ್ನೂ ಮೆಟ್ಟಿ ನಿಂತು ಕ್ರಮ ಜರುಗಿಸಲು ಮುಂದಾಗಿದ್ದೇ ಆದರೆ ಜಿಲ್ಲಾಧಿಕಾರಿ ಹುದ್ದೆಗೆ ಮತ್ತೊಂದು ಬದಲಾವಣೆ ಸನ್ನಿಹಿತವಾಗಲಿದೆ. ಜಮಾದಾರ್ ಅವರಿಗೆ ಬೇರೊಂದು ಜಾಗ ತೋರಿಸುವಷ್ಟು ಬಲಿಷ್ಠರಾಗಿದ್ದಾರೆ ಇಲ್ಲಿನ ದಂಧೆಕೋರರು.

ಹುತ್ತಕ್ಕೆ ಕೈ ಹಾಕಿದರೇ ಯಶವಂತ್?
ನೂತನ ಜಿಲ್ಲಾಧಿಕಾರಿ ಜಮಾದಾರ್ ಅವರೇನೋ ಹಿಂದು ಮುಂದು ನೋಡದೆ ಅಕ್ರಮ ಖಾತೆ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸುತ್ತಿರುವ ನಗರಸಭೆ ಆಯುಕ್ತ ಯಶವಂತ್ ಕುಮಾರ್ ಸ್ಥಿತಿ ನಿಜಕ್ಕೂ ಹುತ್ತಕ್ಕೆ ಕೈ ಹಾಕಿದಂತಾಗಿದೆ.
ತಾವೆಸಗಿರುವ ಅಕ್ರಮಗಳ ಜತೆಗೆ ಮುಖವಾಡ ಕಳಚಿಬೀಳುವ ಭೀತಿಯಲ್ಲಿ ಕೆಲ ರಾಜಕೀಯ ಮುಖಂಡರು, ಪ್ರಭಾವಿ ರಿಯಲ್ ಎಸ್ಟೇಟ್ ಕುಳಗಳು ಮತ್ತು ಕೋಟ್ಯಧಿಪತಿಗಳಾಗಿರುವ ದಲ್ಲಾಳಿಗಳು ಇದೀಗ ಯಶವಂತ್ ಕುಮಾರ್ ಬುಡಕ್ಕೇ ಸಂಚಕಾರ ತಂದೊಡ್ಡಲು ಷಡ್ಯಂತ್ರ ನಡೆಸಿದ್ದಾರೆ.
ಈ ಚಿತಾವಣೆಯಲ್ಲಿ ಕೆಲ ಪುರಪಿತೃಗಳೂ ಶಾಮೀಲಾಗಿರುವ ಗುಮಾನಿ ಇದೆ. ಈ ದುಷ್ಟಕೂಟವು ನಗರಸಭೆ ಆಯುಕ್ತರ ಬದಲಾವಣೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಯಶವಂತ್ ತಲೆದಂಡವಾದರೆ ಅದು ಸರ್ಕಾರದ ಹೊಣೆಗೇಡಿ ನೀತಿಗೆ ಸಾಕ್ಷಿಯಾಗಲಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.