ಗಬ್ಬೆದ್ದು ನಾರುವ ರಾಮನಗರ!
ರಾಮನಗರ: ಈ ಜಿಲ್ಲೆಯ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸದ್ದೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಗುತ್ತಿಗೆದಾರರು ಬೇಕಾಬಿಟ್ಟಿ ಕಸ ವಿಲೇವಾರಿ ಮಾಡುತ್ತಿದ್ದಾರೆ.
ಇದರ ಜತೆಗೆ ಬಿಬಿಎಂಪಿ ಕಸಕ್ಕೆ ರಾಮನಗರ ಜಿಲ್ಲೆಯನ್ನು ತೊಟ್ಟಿಯಾಗಿಸುವ ಆತಂಕ ಮುಂದುವರಿದೇ ಇದೆ. ನಿರ್ಮಲ ನಗರ ಯೋಜನೆ ಜಾರಿಯ ಬಳಿಕವೂ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ. ನೆರೆಯ ಚನ್ನಪಟ್ಟಣದಲ್ಲಿ ಪರಿಸ್ಥಿತಿ ಇನ್ನಷ್ಟು ಗಬ್ಬೆದ್ದು ನಾರುತ್ತಿದೆ. ಮತ್ತೆರಡು ತಾಲೂಕು ಕೇಂದ್ರಗಳಾದ ಕನಕಪುರ ಮತ್ತು ಮಾಗಡಿಯಲ್ಲೂ ಸ್ಥಿತಿ ಭಿನ್ನವಾಗಿಲ್ಲ.
ಜಿಲ್ಲೆಯ ನಾಲ್ಕೂ ಪೌರ ಸಂಸ್ಥೆಗಳು ಕಸ ವಿಲೇವಾರಿಯನ್ನು ಟೆಂಡರ್ ಮೂಲಕ ಗುತ್ತಿಗೆಗೆ ವಹಿಸಿದ್ದು, ಗುತ್ತಿಗೆದಾರರು ಯಾವ ನಿಯಮಗಳನ್ನೂ ಪಾಲಿಸುತ್ತಿಲ್ಲ. ದಿನಕ್ಕೊಮ್ಮೆ ಕಸ ಎತ್ತುವ ಬದಲು 2-3 ದಿನವಾದರೂ ತಿರುಗಿ ನೋಡದಂತಹ ನಿದರ್ಶನಗಳಿವೆ.
ರಸ್ತೆಗೆ ಚಾಚಿದ ಕಸ: ಪ್ರಮುಖ ರಸ್ತೆಗಳ ತಿರುವು, ಚರಂಡಿ ಮಗ್ಗುಲಲ್ಲೇ ಕಸ ಹಾಕಲಾಗುತ್ತಿದೆ. ಕಸ ಸಂಗ್ರಹಿಸುವ ತೊಟ್ಟಿಗಳಿಗೆ ನಗರಸಭೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಕಸ ಸಂಗ್ರಹಕ್ಕೆ ಆಟೊ ಮತ್ತು ಕಂಪ್ರೆಷರ್ ವಾಹನಗಳನ್ನು ಖರೀದಿಸಿದೆ. ಆದರೆ, ಅವು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.
ಗುತ್ತಿಗೆದಾರರು ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಪರಿಣಾಮ ರಸ್ತೆ ಮಗ್ಗುಲಲ್ಲಿ ಹಾಕಿದ ಕಸವೆಲ್ಲಾ ರಸ್ತೆಗೆ ಚಾಚಿಕೊಳ್ಳುತ್ತಿದೆ. ಬಹುತೇಕ ಕಡೆ ಚರಂಡಿಯಲ್ಲಿ ಕಸ ತುಂಬಿಕೊಂಡು, ಅಲ್ಲಿ ಹರಿಯಬೇಕಿದ್ದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದೂ ಉಂಟು.
ಚೆಲ್ಲಾಡುವ ಪ್ರಾಣಿಗಳು: ರಾಮನಗರದಲ್ಲಿ ಬಿಡಾಡಿ ದನಗಳು ದಿನ ಬೆಳಗಾಗುವುದರಲ್ಲಿ ಕಸಾಯಿಖಾನೆ ಪಾಲಾಗುತ್ತಿವೆ. ಈಗೇನಿದ್ದರೂ ಬೀದಿ ತುಂಬ ನಾಯಿ, ಹಂದಿಗಳದ್ದೇ ಕಾರುಬಾರು. ಅವು ಆಹಾರ ಹುಡುಕಾಡುತ್ತಾ ಕಸದ ರಾಶಿಯನ್ನು ಹಾದಿ ಬೀದಿಗೆಲ್ಲಾ ಚೆಲ್ಲಾಡುತ್ತವೆ. ನಗರದಂಚಿನಲ್ಲೇ ಹಂದಿ ಸಾಕಣೆ ಕೇಂದ್ರಗಳು ತಲೆ ಎತ್ತಿದ್ದು, ಹಂದಿಗಳು ರಸ್ತೆ, ಗಲ್ಲಿಗಳಲ್ಲೆಲ್ಲ ಮೇವು ಹರಸುವ ಜತೆಗೆ ಚರಂಡಿ ಮತ್ತು ಕೊಚ್ಚೆ ಗುಂಡಿಗಳಲ್ಲಿ ಬಿದ್ದು ಒದ್ದಾಡುತ್ತ ಗಬ್ಬು ವಾಸನೆಯನ್ನು ಎಲ್ಲೆಡೆ ಪಸರಿಸುತ್ತವೆ.
ಎಲ್ಲೆಂದರಲ್ಲಿ ತ್ಯಾಜ್ಯ: ನಗರಸಭೆ ಆಡಳಿತ ಮತ್ತು ಗುತ್ತಿಗೆದಾರರಿಗೇನೋ ನಗರದ ನೈರ್ಮಲ್ಯದ ಬಗ್ಗೆ ಕಾಳಜಿ ಕೊರತೆ ಇರಬಹುದು. ಆದರೆ, ಸಾರ್ವಜನಿಕರಲ್ಲೂ ತಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿಟ್ಟುಕೊಳ್ಳಬೇಕೆನ್ನುವ ಆಸಕ್ತಿಯೂ ಕಾಣದಾಗಿದೆ. ಹಣ್ಣು, ತರಕಾರಿ ಸಹಿತ ತ್ಯಾಜ್ಯವನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಹೇಳಿ ಕೇಳಿ ಮೊದಲೇ ಗಬ್ಬೆದ್ದು ನಾರುತ್ತಿರುವ ಈ ನಗರದಲ್ಲಿ ಸಾರ್ವಜನಿಕರ ಬೇಜವಾಬ್ದಾರಿಯಿಂದ ಪರಿಸರ ಮತ್ತಷ್ಟು ಹಾಳಾಗುತ್ತಿದೆ. ನೈರ್ಮಲ್ಯ ಜಾಗೃತಿ ಇಲ್ಲಿನ ಜನರಿಗೆ ಇಲ್ಲವೆನ್ನುವಂತೆ ಕಾಣುತ್ತಿದೆ.
ಮೂಗುದಾರ ಇಲ್ಲ: ಪೌರ ಸಂಸ್ಥೆಗಳಲ್ಲಿ ಕಸ ವಿಲೇವಾರಿ, ಬೀದಿ ದೀಪ ನಿರ್ವಹಣೆ ಸೇರಿದಂತೆ ಪ್ರಮುಖ ಕೆಲಸಗಳನ್ನು ಗುತ್ತಿಗೆಗೆ ನೀಡಿ ನಗರಸಭೆ ಆಡಳಿತ ಕೈತೊಳೆದುಕೊಂಡಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಮಿಷನ್ ಆಸೆಯಿಂದ ಗುತ್ತಿಗೆದಾರರ ಕಾರ್ಯವೈಖರಿಗೆ ಸೈ ಎನ್ನುತ್ತಿದ್ದಾರೆ. ಹಗ್ಗ, ಮೂಗುದಾರ ಇಲ್ಲದಂತಾಗಿರುವ ಗುತ್ತಿಗೆದಾರರ ಸ್ವೇಚ್ಛೆಗೆ ಕೊನೆಯೇ ಇಲ್ಲದಾಗಿದೆ. ಅವರ ಅಸಡ್ಡೆ, ಹಣ ದೋಚುವ ದುರಾಸೆಯ ಫಲವಾಗಿ ರಾಮನಗರದ ಜನತೆ ಕಸದ ಸಮಸ್ಯೆಯಿಂದ ನಲುಗುವಂತಾಗಿರುವುದು ದುರಂತವೇ ಸರಿ. ಇದೀಗ ನಗರಸಭೆ ಕಸ ವಿಲೇವಾರಿಗೆ ಸೇವಾ ಶುಲ್ಕದ ಜತೆಗೆ ತೆರಿಗೆ ಹೆಚ್ಚಳಕ್ಕೂ ಮುಂದಾಗಿದೆ. ರಾಮನಗರದ ಜನರು ಪ್ರಶ್ನಿಸುವ ಮನೋಭಾವವನ್ನೇ ಮರೆತಿದ್ದಾರೆ. ಅದರ ಲಾಭ ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರ ಜತೆಗೆ ದಲ್ಲಾಳಿಗಳ ಪಾಲಾಗುತ್ತಿದೆ.
ರಾಜ್ಯದ ಬಹುತೇಕ ನಗರಗಳಲ್ಲಿ ನಿರ್ಮಲ ನಗರ ಯೋಜನೆ ಜಾರಿಗೆ ಬಂದಿದ್ದು, ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ. ರಾಮನಗರವಿನ್ನೂ ಕಸದ ಕೂಪವಾಗಿಯೇ ಉಳಿದಿದೆ. ರಾಮನಗರ ನಿರ್ಮಲ ನಗರ ಆಗೋದು ಯಾವಾಗ ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
-ಶಶಿಕುಮಾರ್,
ನಾಗರಿಕ, ರಾಮನಗರ
-ಮತ್ತೀಕೆರೆ ಜಯರಾಮ್
ಹದಗೆಟ್ಟ ಮಾರ್ಗ ದುರಸ್ತಿಗೆ ಆಗ್ರಹ
ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ಶಾರದ ಕ್ರಾಸ್ನಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗಡಿಯವರೆಗೂ ಸುಮಾರು 5 ಕಿ.ಮೀ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದೆ.
ಈ ರಸ್ತೆಯಲ್ಲಿ ಓಡಾಡುವ ಲಾರಿಗಳು ನಿಗದಿಗಿಂತ ಅಧಿಕ ಭಾರದ ವಸ್ತುಗಳನ್ನು ಸಾಗಿಸುವುದರಿಂದ ರಸ್ತೆಗೆ ಈ ದುರವಸ್ಥೆ ಉಂಟಾಗಿದೆ.
ಇದರಿಂದ ರಸ್ತೆಯ ಬದಿಯಲ್ಲಿರುವ ಶಿವಗಂಗೆ, ಶಿವಾನಂದ ನಗರ ಹಾಗೂ ಗಂಗೇನಪುರ ಗ್ರಾಮಸ್ಥರು ಓಡಾಡುವುದೇ ಕಷ್ಟಕರವಾಗಿದೆ. ಈ ರಸ್ತೆಯಲ್ಲಿ ಕುದೂರು, ಹೊನ್ನುಡಿಕೆ, ಮಾಗಡಿಯಿಂದ ದಾಬಸ್ ಪೇಟೆಗೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕ ರಸ್ತೆಯಾಗಿದ್ದು ಸಂಪೂರ್ಣಹಳ್ಳಕೊಳ್ಳಗಳಿಂದ ಕೂಡಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ನಂಜುಂಡಸ್ವಾಮಿ ಪ್ರತಿಕ್ರಿಯಿಸಿ ಈ ರಸ್ತೆ12 ಟನ್ನಷ್ಟು ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಈ ರಸ್ತೆಯಲ್ಲಿ 20 ರಿಂದ 25 ಟನ್ನಷ್ಟು ಮರಳು, ಸಿಮೆಂಟ್, ಕಲ್ಲು, ಲಾರಿಗಳು ದಿನನಿತ್ಯ ಓಡಾಡುವುದರಿಂದ ಈ ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಶಿವಗಂಗೆ ಗ್ರಾಪಂ ಸದಸ್ಯ ಮರಿಯಪ್ಪ, ಈ ರಸ್ತೆಯಲ್ಲಿ ಮರಳು, ಕಲ್ಲು ಹಾಗೂ ಸಿಮೆಂಟ್ ಲಾರಿಗಳು ದಿನನಿತ್ಯ ಸುಮಾರು 100ಕ್ಕೂ ಹೆಚ್ಚು ಲಾರಿಗಳು ಓಡಾಡುವುದರಿಂದ ಹಾಗೂ ಈ ರಸ್ತೆ ಕಾಮಗಾರಿ ಕಳಪೆ ಮಟ್ಟದಲ್ಲಿ ಕೂಡಿರುವುದರಿಂದ ಬೇಗನೆ ಕಿತ್ತುಹೋಗುತ್ತಿದೆ. ಜತೆಗೆ ಜನಪ್ರತಿನಿಧಿಗಳು ಹಾಗೂ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡಿರದ ಕಾರಣ ರಸ್ತೆ ಮತ್ತಷ್ಟು ಹದಗೆಟ್ಟಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

