ಗ್ರಾಮಾಂತರ ಸಾರಿಗೆ ಸ್ಥಗಿತ: ಸಚಿವ ಬೇಸರ
ರಾಮನಗರ: ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಒಂದೇ ಒಂದು ಷಟಲ್ ಸೌಲಭ್ಯ ಕಲ್ಪಿಸದ ಬಗ್ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಅವಳಿ ಗ್ರಾಮಗಳ ಕುವೆಂಪು ಶತಮಾನೋತ್ಸವ ಶಾಲೆ ಮತ್ತು ಕೇಂದ್ರ ಪುರಸ್ಕೃತ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಷಟಲ್ ಸಮಸ್ಯೆಗೆ ಸ್ಪಂದಿಸಿ ಮಾತನಾಡಿದರು.
ಸಾರ್ವಜನಿಕರ ದೂರು: ಎರಡು ಜಿಲ್ಲೆಗಳಿಗೆ ಕೊಂಡಿಯಾಗಿರುವ ಚನ್ನಪಟ್ಟಣ ಮತ್ತು ಮದ್ದೂರು ನಡುವೆ ಷಟಲ್ ಬಸ್ ಸಂಚಾರ ನಿಂತು ವರ್ಷಗಳೇ ಕಳೆದಿವೆ. ಆಟೋದವರ ಜತೆ ಶಾಮೀಲಾಗಿರುವ ಅಧಿಕಾರಿಗಳು ಇಲ್ಲಿ ಷಟಲ್ ಬಸ್ ಹಾಕಿಲ್ಲ ಎಂದು ಪೋಷಕರು ಮತ್ತು ಗ್ರಾಮಸ್ಥರು ದೂರಿದರು.
ಈ ಮಾರ್ಗದ ಮತ್ತೀಕೆರೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಪ್ರಾರಂಭಿಸಿರುವ ಆದರ್ಶ ವಿದ್ಯಾಲಯ, ಮುದುಗೆರೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧೆಡೆ ಸಾಕಷ್ಟು ಶಿಕ್ಷಣ ಸಂಸ್ಥೆಗಳಿದ್ದರೂ ಬಸ್ ಸಂಚಾರ ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಸಚಿವರ ಸ್ಪಂದನೆ: ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡಿದ್ದಾರಾದರೂ ಆಟೋಗಳಲ್ಲೇ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಇಲ್ಲಿನ ಪ್ರಯಾಣಿಕರು ಆಟೋಗಳಲ್ಲಿ ಜೀವ ಮುಷ್ಟಿಯಲ್ಲಿಟ್ಟುಕೊಂಡು ಹೋಗಬೇಕಿದೆ.
ಇದಕ್ಕೆ ಪರಿಹಾರ ನೀಡಿ ಎಂದು ಸ್ಥಳೀಯರು ಮನವಿ ಮಾಡಿದರು. ಈ ಮಾರ್ಗದಲ್ಲಿ ಕನಿಷ್ಠ 4 ಷಟಲ್ ಬಸ್ ಸಂಚಾರ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ಕೋರಿಕೆಗೆ ಸ್ಪಂದಿಸಿದ ಸಚಿವ ಕಿಮ್ಮನೆ ರತ್ನಾಕರ, ಈ ಕುರಿತು ಸ್ಥಳೀಯ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತ್ವರಿತ ಪೂರ್ಣಕ್ಕೆ ಕ್ರಮ: ರು.4 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಆದರ್ಶ ವಿದ್ಯಾಲಯದ ಕಟ್ಟಡ ಕಾಮಗಾರಿಯನ್ನು ಇನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡುವುದಾಗಿ ಸಚಿವ ರತ್ನಾಕರ ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ಯಾಕೇಜ್ ಟೆಂಡರ್ ನೀಡಿದ್ದರಿಂದಾಗಿ ರಾಜ್ಯದ ವಿವಿಧೆಡೆ ಇರುವ ಎಲ್ಲ ಆದರ್ಶ ವಿದ್ಯಾಲಯಗಳ ಕಟ್ಟಡ ಕಾಮಗಾರಿಗಳೂ ವಿಳಂಬವಾಗಿವೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಹೊಸ ಕಟ್ಟಡದಲ್ಲೇ ಶಾಲೆ ನಡೆಸುವಂತಾಗಲಿದೆ ಎಂದರು.
ಉಭಯ ಶಾಲೆಗಳನ್ನು ಒಂದೇ ಕಟ್ಟಡದಲ್ಲಿ ನಡೆಸುತ್ತಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಅವರಿಗೆ ಸಚಿವ ರತ್ನಾಕರ ಸೂಚಿಸಿದರು.
ಸಚಿವರ ಪರಿಶೀಲನೆ: ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ, ಶಿಕ್ಷಕರ ಹಾಜರಿ ಪುಸ್ತಕ ಮತ್ತು ಶಾಲಾ ವಾರ್ಷಿಕ ವರದಿಯನ್ನು ಪರಿಶೀಲಿಸಿದರು. ನಂತರ ತರಗತಿಗಳಿಗೆ ತೆರಳಿ ಮಕ್ಕಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದರು.
ಒಂದೂವರೆ ತಾಸು ಶಾಲಾವರಣದಲ್ಲೇ ಕಳೆದ ಸಚಿವರು ಅಕ್ಷರ ದಾಸೋಹದಡಿ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಅನುಷ್ಠಾನದ ಪರಿಶೀಲನೆ ನಡೆಸಿದರು. ಶಾಲಾ ಪರಿಸರ ಮತ್ತು ಚಟುವಟಿಕೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಕುವೆಂಪು ಶತಮಾನೋತ್ಸವ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ರಾಜೇಶ್, ಆದರ್ಶ ವಿದ್ಯಾಲಯದ ಪ್ರಭಾರ ಮುಖ್ಯ ಶಿಕ್ಷಕ ಚಾಮರಾಜು, ಗ್ರಾಮಸ್ಥರಾದ ಎಂ.ಶಿವರಾಮಯ್ಯ, ಎಂ.ಬಿ.ಮುಕ್ಕಡೀಗೌಡ, ಟಿ.ರಾಧಾಕೃಷ್ಣ, ದೇವರಾಜ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

