ದೊಡ್ಡಬಳ್ಳಾಪುರದಲ್ಲಿ ವಿದ್ಯಾರ್ಥಿ ಬಸ್ಪಾಸ್ ಸಿಗಲ್ಲ!
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸಲು ವಿದ್ಯಾರ್ಥಿ ವಾರ್ಷಿಕ ಬಸ್ಪಾಸ್ ಪಡೆಯಬೇಕಾದರೆ ಕಡ್ಡಾಯವಾಗಿ ಬೆಂಗಳೂರಿನಲ್ಲೇ ಪಡೆಯಬೇಕು. ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣ ಅಥವಾ ಅನುಮತಿ ಮೇರೆಗೆ ಯಲಹಂಕದಲ್ಲಿ ಈ ಪಾಸುಗಳನ್ನು ಪಡೆಯಬಹುದಾಗಿದೆ. ಇದು ಸ್ಥಳೀಯವಾಗಿ ಸಂಚರಿಸುವ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಬೆಂಗಳೂರು-ದೊಡ್ಡಬಳ್ಳಾಪುರ ಅಥವಾ ಯಲಹಂಕ-ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಿಂದ ಸಮಸ್ಯೆಯಾಗಲ್ಲ. ಆದರೆ ಬಾಶೆಟ್ಟಿಹಳ್ಳಿ, ಮಾರಸಂದ್ರ, ಶ್ರೀರಾಮನಹಳ್ಳಿ, ರಾಜಾನುಕುಂಟೆ ಸೇರಿದಂತೆ 5 ರಿಂದ 15 ಕಿ.ಮೀ ದೂರದಿಂದ ದೊಡ್ಡಬಳ್ಳಾಪುರದ ವಿವಿಧ ಶಾಲಾ-ಕಾಲೇಜುಗಳಿಗೆ ಬಂದು ಹೋಗುವ ನೂರಾರು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ವಿದ್ಯಾರ್ಥಿಗಳು ತಮ್ಮ ಸಂಚಾರ ವ್ಯಾಪ್ತಿಯಿಂದ 25ರಿಂದ 30 ಕಿ.ಮೀ ದೂರ ಪ್ರಯಾಣ ಮಾಡಿ ಪಾಸುಗಳನ್ನು ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಇದು ವಿದ್ಯಾರ್ಥಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.
ಸಮಸ್ಯೆ ಏನು: ಸಾಮಾನ್ಯವಾಗಿ ವಿದ್ಯಾರ್ಥಿ ಬಸ್ ಪಾಸುಗಳನ್ನು ವಿತರಿಸುವುದು ಕಚೇರಿ ವೇಳೆಯಲ್ಲಿ. ಅಂದರೆ ಶಾಲಾ ವೇಳೆಯಲ್ಲಿ ಸಾರ್ವಜನಿಕ ರಜಾ
ದಿನಗಳಂದು ಬಸ್ ಪಾಸ್ ವಿತರಣೆ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು 1 ದಿನ ಶಾಲೆ-ಕಾಲೇಜಿಗೆ ರಜೆ ಹಾಕಿಯೇ ಬೆಂಗಳೂರಿಗೆ ತೆರಳಿ ಪಾಸ್ ಪಡೆಯಬೇಕಿದೆ. ರಜೆ ಹಾಕಿ ಹೋದರೂ ಸೂಕ್ತ ಸಮಯಕ್ಕೆ ಪಾಸ್ ಸಿಗುವುದೋ ಇಲ್ಲವೋ ಅದೂ ಹೇಳಲಾಗದು.
ಜೊತೆಗೆ ಯಾವುದಾದರೊಂದು ದಾಖಲಾತಿ ಮರೆತರೂ ಮತ್ತೆ ದೊಡ್ಡಬಳ್ಳಾಪುರಕ್ಕೆ ಬಂದು ಹೋಗುವಷ್ಟರಲ್ಲಿ ಹೈರಾಣಾಗಿರುತ್ತಾರೆ. ವಿದ್ಯಾರ್ಥಿ ಬಸ್ಪಾಸುಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿದ್ಯಾರ್ಥಿಗಳೇ ಹೋಗಿ ಪಡೆಯಬೇಕೆಂಬ ನಿಯಮವಿದೆ. ಹೀಗಾಗಿ 1 ದಿನದ ಪಾಠ ಪ್ರವಚನಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ.
ದೊಡ್ಡಬಳ್ಳಾಪುರದಲ್ಲೇ ವಿತರಿಸಿ: ದೊಡ್ಡಬಳ್ಳಾಪುರಕ್ಕೆ ಸುತ್ತಮುತ್ತ ಹಳ್ಳಿಗಳು, ನಗರ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ನೂರಾರು ವಿದ್ಯಾರ್ಥಿಗಳು ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುತ್ತಾರೆ. ಈ ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರ ನಗರ ಬಸ್ ನಿಲ್ದಾಣದಲ್ಲಿ ಪಾಸ್ ವಿತರಣಾ ಕೌಂಟರ್ ಸ್ಥಾಪಿಸಿ ಪಾಸುಗಳನ್ನು ವಿತರಿಸಿದರೆ ಅನುಕೂಲವಾಗುತ್ತದೆ. ಜೊತೆಗೆ ಅನಗತ್ಯ ಪ್ರಯಾಣ ಮತ್ತು ಕಿರಿಕಿರಿ ತಪ್ಪುತ್ತದೆ, ಸಮಯ, ಹಣ ಮತ್ತು ಒತ್ತಡಗಳು ಬಾಧಿಸುವುದಿಲ್ಲ ಎಂಬುದು ವಿದ್ಯಾರ್ಥಿಗಳ ಒತ್ತಾಯ.
ದೊಡ್ಡಬಳ್ಳಾಪುರ-ಬಾಶೆಟ್ಟಿಹಳ್ಳಿ ನಡುವೆ ನಿತ್ಯ ಸಂಚರಿಸುತ್ತೇನೆ. ಬಾಶೆಟ್ಟಿಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಕೇವಲ 4 ಕಿಮೀ ದೂರವಷ್ಟೆ. ಪಾಸ್ ಪಡೆಯಲು 38 ಕಿಮೀ ದೂರದ ಬೆಂಗಳೂರಿಗೆ ಹೋಗಬೇಕಾಯಿತು.ರಜೆ ಹಾಕಿ ಹೋದರೂ ಪಾಸ್ ಪಡೆಯಲು ಆಗಲಿಲ್ಲ.
- ನಯನ, ವಿದ್ಯಾರ್ಥಿನಿ, ಬಾಶೆಟ್ಟಿಹಳ್ಳಿ.
ಕೆ.ಆರ್.ರವಿಕಿರಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

