ಧನದಾಹಿಗಳಿಂದ ಜಾನಪದಕ್ಕೆ ಧಕ್ಕೆ : ಸಿಂ.ಲಿಂ.
ಚನ್ನಪಟ್ಟಣ ಕೆಲ ಧನದಾಹಿಗಳು ಜನಪದ ಸಾಹಿತ್ಯಕ್ಕೆ ಅತಿರೇಕದ ಬದಲಾವಣೆಗಳನ್ನು ತುರುಕಿ ಜನಪದ ಗೀತೆಗಳ ಸೌಂದರ್ಯವನ್ನು ಹಾಳು ಗೆಡವುತ್ತಿದ್ದು ಇಂತಹ ಪ್ರಯೋಗಗಳಿಂದಾಗಿ ಜನಪದಕ್ಕೆ ಅಪಾಯ ಎದುರಾಗಿದೆ ಎಂದು ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜು ವಿಷಾದಿಸಿದರು.
ತಾಲೂಕಿನ ರಾಂಪುರ ಗ್ರಾಮದ ಸಿದ್ದಪ್ಪಾಜಿ ಮಠದಲ್ಲಿ ಕರಿಯಪ್ಪನದೊಡ್ಡಿಗ್ರಾಮದ ಗಂಗಮತಸ್ಥರ ಮತ್ತು ಗೊರವರ ಕುಣಿತ ಹಾಗೂ ವಿವಿಧ ಕಲಾವಿದರ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕೆಲ ಆಡಿಯೋಕಂಪನಿಗಳು ಜನಪದದ ಹೆಸರಿನಲ್ಲಿ ಅಶ್ಲೀಲ ಮತ್ತು ಅಸಹ್ಯವಾದ ಸಾಹಿತ್ಯವನ್ನು ಬಿತ್ತರಿಸುವ ಕೆಲಸ ಮಾಡುತ್ತಿದ್ದು ಇಂತಹ ಪ್ರಯತ್ನಗಳ ವಿರುದ್ಧ ನಾವೆಲ್ಲ ಹೋರಾಟ ನಡೆಸ ಬೇಕಿದೆ ಎಂದು ಕರೆ ನೀಡಿದರು.
ಜನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ವಿಜಯ್ ರಾಂಪುರ ಮಾತನಾಡಿ, ದೇವರ ಆರಾಧನೆಯ ಮೂಲಕ ಭಯ, ನಿಸರ್ಗದ ವಿಕೋಪಗಳನ್ನು ಹಿಮ್ಮೆಟ್ಟಿಸುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜಾನಪದ ಗೀತೆಗಳು ಜಗತ್ತಿನ ಸಾಹಿತ್ಯ ಮತ್ತು ಸಂಗೀತಗಳ ಅನಾವರಣಕ್ಕೆ ಪ್ರೇರಕ ಶಕ್ತಿಯಾದವು. ಆಧುನಿಕತೆಯ ಭರಾಟೆಯಲ್ಲಿ ಒತ್ತಡದ ಬದುಕಿಗೆ ಅಂಟಿಕೊಂಡಿರುವ ಜನತೆಗೆ ಇಂತಹ ಸತ್ವಯುತ ಗ್ರಾಮ್ಯ ಗೀತೆಗಳು ಮುದ ನೀಡುತ್ತವೆ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀನಿವಾಸ ರಾಂಪುರ, ಶಾರದಮ್ಮ, ಆರ್.ಕೆ.ಸ್ವಾಮಿ, ಘನನೀಲಿ ಸಿದ್ದಪ್ಪಾಜಿ ಟ್ರಸ್ಟ್ ಅಧ್ಯಕ್ಷೆ ವಸಂತಕುಮಾರಿ, ಗ್ರಾ.ಪಂ.ಸದಸ್ಯ ಜಯಶೀಲಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೊರವರ ಮಲ್ಲಯ್ಯ ಮತ್ತು ತಂಡ, ಸಿದ್ದರಾಜು ರಾಂಪುರ, ನಿರಂಜನ್, ಶಾಂಭವಿ, ಜಯತೀರ್ಥ ಮಂಠೇಸ್ವಾಮಿ ಪದಗಳನ್ನು, ಭಕ್ತಿಗೀತೆಗಳನ್ನು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

