ಬೆಂಗಳೂರು ಗ್ರಾಮಾಂತರ

ಬಿಪಿ, ಶುಗರ್‌ಗೆ ಒತ್ತಡ ಜೀವನ ಶೈಲಿ ಕಾರಣ

Published On :

ರಾಮನಗರ: ಯಾವುದೇ ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ಜನರ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಜನರನ್ನು ಸದೃಢ ಹಾಗೂ ಆರೋಗ್ಯವಂತರನ್ನಾಗಿಸಲು ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ರೋಟರಿ ಬಿಡದಿ ಸೆಂಟ್ರಲ್ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.
ಬಿಡದಿ ರೋಟರಿ ಸಂಸ್ಥೆಯು ಬೆಂಗಳೂರಿನ ಅಕ್ಷಯ ನೇತ್ರಾಲಯದ ಸಹಯೋಗದೊಂದಿಗೆ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಹೆಜ್ಜಾಲದ ಚೊಕ್ಕಲಿಂಗ ಶಾಲೆಯಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ 7ನೇ ಉಚಿತ ನೇತ್ರ ತಪಾಸಣೆ, ಸಕ್ಕರೆ ಕಾಯಿಲೆ (ಮೆಧುಮೇಹ), ರಕ್ತದೊತ್ತಡ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಆಧುನಿಕ ಜೀವನಶೈಲಿಗೆ ಮಾರುಹೋಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹ ತಡೆಗಟ್ಟಲು 30 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧುಮೇಹ ಇರುವುದು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳು ಇರದ ಕಾರಣ ಅಲ್ಲಿನ ಜನರು ತಮ್ಮ ಆರೋಗ್ಯ ಪರೀಕ್ಷೆಗೆ ಹೆಚ್ಚು ಗಮನ ನೀಡುತ್ತಿಲ್ಲ. ನಗರ, ಪಟ್ಟಣಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾದರೆ ಸಾವಿರಾರು ರುಪಾಯಿ ಖರ್ಚಾಗುತ್ತದೆ. ಇದನ್ನು ಮನಗಂಡ ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ನಟರಾಜ್ ವಿವರಿಸಿದರು.
ಒತ್ತಡದಲ್ಲಿ ಜೀವನ: ಆಧುನಿಕ ಜೀವನ ಶೈಲಿಯಿಂದ ಜನರು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಜೊತೆಗೆ ಆರೋಗ್ಯಕರ ಮತ್ತು ಮಿತ ಆಹಾರಾಭ್ಯಾಸ ರೂಢಿಸಿಕೊಳ್ಳಬೇಕು. ದೇಹದ ತೂಕದಲ್ಲಿ ಏರಿಕೆಯಾಗದಂತೆ ನಿಗಾ ವಹಿಸಿ, ಪೋಷಕಾಂಶಗಳಿಂದ ಕೂಡಿದ ಆಹಾರ ಸೇವಿಸುವುದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ತಿಳಿಸಿದರು.
ಬಿಡದಿ ರೋಟರಿ ಸಂಸ್ಥೆಯು 2013-14ನೇ ಸಾಲಿನಲ್ಲಿ ಹಮ್ಮಿಕೊಂಡಿರುವ 7ನೇ ಶಿಬಿರವಾಗಿದೆ. ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ, ಕನ್ನಡಕಗಳನ್ನೂ ನೀಡಲಾಗುತ್ತಿದೆ ಎಂದರು.
ಆಧುನೀಕರಣ, ಕೈಗಾರೀಕರಣದಿಂದ ನಾನಾ ರೋಗ-ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದು ಗ್ರಾಮೀಣ ಜನರಿಗೆ ಮಾರಕವಾಗಿದೆ. ಸರ್ಕಾರ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಮಂಚನಾಯ್ಕನಹಳ್ಳಿ ಗ್ರಾಪಂ ಸದಸ್ಯ ಶಾಂತರಾಜು ಹೇಳಿದರು.
ಒಟ್ಟು 255 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಪೈಕಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದ 54 ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು. ಕಣ್ಣಿನ ದೋಷ ಕಂಡುಬಂದ 87 ಮಂದಿಗೆ ಕನ್ನಡಕಗಳ ವಿತರಣೆಗೆ ನೋಂದಾಯಿಸಿಕೊಳ್ಳಲಾಯಿತು.
ಶಿಬಿರದಲ್ಲಿ ಕೆಂಗೇರಿ ರೋಟರಿ ಸಂಸ್ಥೆ ಅಧ್ಯಕ್ಷ ಗಂಗಾಧರ್, ಪದಾಧಿಕಾರಿಗಳಾದ ಮುನಿಸ್ವಾಮಿ, ಅಜ್ಗರ್ ಉಲ್ಲಾ, ಗೋವಿಂದಪ್ಪ, ಪ್ರತಾಪ್, ಸೋಮಣ್ಣ, ರಮೇಶ್, ಲೋಕೇಶ್, ಶಿವಣ್ಣ, ಶಂಕರ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.