ಜಿಲ್ಲಾ ಕೇಂದ್ರಕ್ಕೆ ದೊಡ್ಡಬಳ್ಳಾಪುರವೇ ಸೂಕ್ತ
ದೊಡ್ಡಬಳ್ಳಾಪುರ (ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ವೇದಿಕೆ) ಮಾ. 3
ಬೆಂ.ಗ್ರಾ.ಜಿಲ್ಲೆಗೆ ಜಿಲ್ಲಾ ಕೇಂದ್ರ ರಚನೆಯಾಗಲೇಬೇಕು. ಈ ವಿಚಾರದಲ್ಲಿ ಸಹೋದರ ತಾಲೂಕುಗಳು ಪರಸ್ಪರ ಪ್ರತಿಷ್ಠೆಗಳಿಗೆ ಬೀಳದೆ ಮಾತಿಗೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜಿಲ್ಲಾ ಕೇಂದ್ರದ ಅರ್ಹತೆಗಳನ್ನು ತೂಗಿ ನೋಡಿ ಹೇಳಬೇಕಾದರೆ ದೊಡ್ಡಬಳ್ಳಾಪುರವೇ ಬೇರೆಲ್ಲ ತಾಲೂಕುಗಳಿಗಿಂತ ಸೂಕ್ತ - ಬೆಂ.ಗ್ರಾ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎ.ಓ.ಆವಲಮೂರ್ತಿ ಅವರ ಸ್ಪಷ್ಟ ನುಡಿ ಇದು.
ಸಮ್ಮೇಳನ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ತಮ್ಮ ಮೌಲಿಕ ಸಮ್ಮೇಳನಾಧ್ಯಕ್ಷ ಭಾಷಣ ಓದಿದ ಅವರು, ನಾನು ದೊಡ್ಡಬಳ್ಳಾಪುರದವನು ಎಂಬ ಕಾರಣಕ್ಕೆ ಈ ವಾದ ಮುಂದಿಡುತ್ತಿಲ್ಲ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದಲೂ ಇದೇ ಮಾತನ್ನು ಹೇಳುತ್ತಿದ್ದೇನೆ ಎಂಬ ಸ್ಪಷ್ಟ ಅರಿವು ನನಗಿದೆ. ಈ ವಿಚಾರದಲ್ಲಿ ಇತರ ತಾಲೂಕಿನ ಬಂಧುಗಳು ವೈಚಾರಿಕ ಮರುಚಿಂತನೆ ನಡೆಸಲಿ ಎಂದರು.
ಕನ್ನಡದ ಸ್ಥಿತಿ: ದಿನೇ ದಿನೇ ಇಂಗ್ಲಿಷಿನ ಎದುರಲ್ಲಿ ಕನ್ನಡ ಸೊರಗುತ್ತಿದೆ. ಕನ್ನಡಿಗರ ಉದಾರತೆಯೇ ಇದಕ್ಕೆ ಕಾರಣ. ಇಂಗ್ಲಿಷ್ ಬೇಕು ನಿಜ, ಆದರೆ ಎಲ್ಲಿ ಬೇಕು, ಎಷ್ಟು ಬೇಕು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಎಲ್ಲೆಲ್ಲೂ ಬೇಕು-ಸದಾ ಬೇಕು ಎಂಬ ಅಜ್ಞಾನ ಬೆಳೆಸಿಕೊಂಡಿರುವುದು ದುರಂತ. ಹೃದಯಕ್ಕೆ ಹತ್ತಿರವಾದ ಭಾವನೆಗಳು ಹುಟ್ಟುವುದು ಕನ್ನಡದಲ್ಲೇ ಹೊರತು ಇಂಗ್ಲಿಷಿನಲ್ಲಿ ಅಲ್ಲ. ವೃತ್ತಿ ಮತ್ತು ದೈನಂದಿನ ವ್ಯವಹಾರದ ಭಾಷೆಗಳೆರಡರ ನಡುವೆ ಅಗಾಧ ವ್ಯತ್ಯಾಸವಿದೆ. ಆದರೆ ಸಹಜ ಸಂಭಾಷಣೆಯನ್ನೂ ಪರಭಾಷೆಯಲ್ಲಿ ಮಾಡುವ ಘೀಳು ಬುದ್ಧಿವಂತಿಕೆಯ ಪ್ರದರ್ಶನವೆಂದು ತಿಳಿದಿದ್ದೇವೆ.
ಇದು ಇಂಗ್ಲಿಷಿನ ಪೊಳ್ಳು ಅನಿವಾರ್ಯತೆಗೆ ಸಾಕ್ಷಿ. ಈ ವಿಷಯದಲ್ಲಿ ತಮಿಳರಿಂದ ದೊಡ್ಡ ಪಾಠ ಕಲಿಯಬೇಕಿದೆ ಎಂದರು.
ಶಾಲೆ-ಶಿಕ್ಷಣ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳು ವಿಜೃಂಭಿಸುತ್ತಿವೆ. ಒಂದು ಅರ್ಥದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದು ಎಂದರೆ ಕನ್ನಡವನ್ನು ಉಳಿಸುವುದು ಎಂದೂ ಆಗುತ್ತದೆ. ಶಾಲೆಗಳಿಗೆ ಬಾರದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೂಲಸೌಕರ್ಯಗಳು ಹೆಚ್ಚಬೇಕು. ಭ್ರಮೆಗಳಿಂದ ಮುಕ್ತವಾದ ಶಿಕ್ಷಣ ನಮಗೆ ಅಗತ್ಯವಿದೆ. ನಾವು ನಮ್ಮ ಮಕ್ಕಳಿಗೆ ಶ್ರೇಷ್ಠ ಶಿಕ್ಷಣ ನೀಡಬೇಕು. ಇಂದಿನ ಶೈಕ್ಷಣಿಕ ಸಂದರ್ಭಗಳು ಭಯ ಹುಟ್ಟಿಸುವಂತಿವೆ. ಸುಶಿಕ್ಷಿತ ಸಮಾಜ ಈ ಸಮಾಜದ ಸ್ವಾಸ್ಥ್ಯವನ್ನು ಕದಡುವ ಹುನ್ನಾರಗಳಲ್ಲಿ ತೊಡಗಿದೆ. ಹೀಗಿರುವಾಗ ನಾವು ನೀಡುತ್ತಿರುವ ಶಿಕ್ಷಣದ ಪುನರಾವಲೋಕನ ಆಗಬೇಕಿದೆ. ಪಾಟೀ ಚೀಲದ ಹೊರೆಗೆ ಮಹತ್ವ ನೀಡಿದ್ದೇವೆಯೇ ಹೊರತು ಗುಣಮಟ್ಟಕ್ಕೆ ಅಲ್ಲ. ದುಬಾರಿ ಬೆಲೆ ತೆತ್ತು ಪಡೆಯುವ ಶಿಕ್ಷಣ ಗುಣಮಟ್ಟದ್ದೇ ಆಗಿರುತ್ತದೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಒಟ್ಟಾರೆಯಾಗಿ ಶಿಕ್ಷಣ ಲಾಭ-ನಷ್ಟದ ಪ್ರಶ್ನೆಯಾಗದೆ ಮೌಲಿಕ ವೈಚಾರಿಕತೆಯನ್ನು ಬಿತ್ತುವ ಸಾಗುವಳಿಯಾಗಬೇಕು ಎಂದರು.
ನೀರು: ನೀರಿನ ಸಮಸ್ಯೆ ಈಗ ದೇಶದ ಸಮಸ್ಯೆಯಾಗಿದೆ. ನೀರನ್ನು ಕೊಡುವ ಮತ್ತು ಪಡೆವ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಭೂಮಿಗೆ ನೀರನ್ನು ತುಂಬುವ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕ್ರಮವನ್ನೂ ಕೈಗೊಂಡಿಲ್ಲ. ಜಲಮೂಲಗಳ ರಕ್ಷಣೆ, ಮಳೆಕೊಯ್ಲು ಅಳವಡಿಕೆ ಈ ಹಂತದಲ್ಲಿ ಮುಖ್ಯ. ಇತ್ತೀಚಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಮತ್ತು ನೇತ್ರಾವತಿ ತಿರುವು ಕುರಿತ ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಹಂತದಲ್ಲಿ ವಸ್ತುನಿಷ್ಠ ಅಧ್ಯಯನ, ತಜ್ಞರ ವರದಿ ಆಧರಿಸಿ ಎರಡೂ ಯೋಜನೆಗಳ ಬಗ್ಗೆ ನಿಷ್ಪಕ್ಷಪಾತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ವ್ಯಕ್ತಿ ಕೇಂದ್ರಿತ ಪ್ರತಿಷ್ಠೆಗಳನ್ನು ದೂರ ಇಟ್ಟು ವಸ್ತು ಕೇಂದ್ರಿತ ಆಲೋಚನೆಗೆ ಒತ್ತು ಕೊಡಬೇಕು. ಈ ವಿಚಾರದಲ್ಲಿ ಉಡಾಫೆ ಉತ್ತರ ಪರಿಹಾರವಲ್ಲ ಎಂದರು.
ನೇಕಾರಿಕೆ: ನೇಕಾರಿಕೆ ದೊಡ್ಡಬಳ್ಳಾಪುರದ ಉಸಿರು. ಯಾವುದೇ ಉದ್ಯಮ ಉಳಿಯುವುದು ಬೇಡಿಕೆಯಿಂದ. ಸ್ವದೇಶಿ ಚಳವಳಿ ಆಶಯ ಇಲ್ಲಿ ಮುಖ್ಯ. ನಮ್ಮಲ್ಲಿ ಹತ್ತುಜೊತೆ ಬಟ್ಟೆ ಇದ್ದರೆ ಅದರಲ್ಲಿ ಒಂದು ಜೊತೆ ನಮ್ಮೂರಿನ ಮಗ್ಗದಲ್ಲಿ ನೇಯ್ದ ಬಟ್ಟೆ ಇರಲಿ ಎಂಬ ಚಿಂತನೆ ಬೆಳೆಯಬೇಕು. ಈ ಚಿಂತನೆ ಕ್ರಾಂತಿಯನ್ನೇ ಮಾಡುವ ಶಕ್ತಿ ಹೊಂದಿದೆ. ನಮ್ಮೂರಿನ ಶಾಲಾ ಮಕ್ಕಳ ಸಮವಸ್ತ್ರಕ್ಕೆ ನಮ್ಮೂರಿನ ಬಟ್ಟೆಯೇ ಬಳಕೆಯಾದರೆ ನೇಕಾರ ಉಳಿದುಬಿಡುತ್ತಾನೆ. ಇದಕ್ಕೆ ಸಣ್ಣದೊಂದು ಇಚ್ಛಾಶಕ್ತಿ ಸಾಕು. ಇಂದು ಮಗ್ಗದ ಕೆಲಸ ಮಾಡೋ ಹುಡುಗರಿಗೆ ಹೆಣ್ಣುಕೊಡಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವಿಷಮ ಪರಿಸ್ಥಿತಿ ಸುಧಾರಿಸಲು ಸಣ್ಣ ಪ್ರಯತ್ನವಾದರೂ ಆಗಬೇಕು. ಊರಿನ ಅಭಿವೃದ್ಧಿ ವಿಚಾರದಲ್ಲಿ ಹಲವು ಗೊಂದಲಗಳಿವೆ. ಯಾವುದೇ ಯೋಜನೆಗೆ, ಅದರ ಜಾರಿಗೆ ಸಿದ್ಧತೆ ಮಾಡಿಕೊಳ್ಳದೆ ಮೊದಲು ಕಲ್ಲುಹಾಕುವ ಪ್ರವೃತ್ತಿ ಹೆಚ್ಚಿದೆ. ಇದು ಬದಲಾಗಬೇಕು.
ಶಂಕುಸ್ಥಾಪನೆಯಾದ ಕಾಲಮಿತಿಯೊಳಗೆ ಯೋಜನೆ ಮುಕ್ತಾಯಗೊಳ್ಳಬೇಕು. ದೊಡ್ಡಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಹೆಚ್ಚಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನಕ್ಕೆ ರಾಜಕಾರಣಿಗಳು, ಗಣ್ಯರ ಗೈರು
ದೊಡ್ಡಬಳ್ಳಾಪುರ: ಇಲ್ಲಿನ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆಯುತ್ತಿರುವ 2 ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಜಕಾರಣಿಗಳು ಮತ್ತು ಗಣ್ಯರ ಗೈರು ಹಾಜರಿ ಎದ್ದು
ಕಾಣುತ್ತಿತ್ತು.
ಸಮ್ಮೇಳನ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದ ಬಹುತೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಜೊತೆಗೆ ವಿಚಾರ ಮಂಡಿಸುವ ತಜ್ಞರೂ ಕೂಡ ಗೈರಾಗಿದ್ದು, ಸಂಘ-ಸಂಸ್ಥೆಗಳ ನಿರಾಸಕ್ತಿ ಕೂಡ ಪ್ರಮುಖ ಅಂಶಗಳಾಗಿ ಕಂಡುಬಂದವು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಎನ್.ಹನುಮಂತೇಗೌಡ, ಜಿಲ್ಲಾಧಿಕಾರಿ ವಿ.ಶಂಕರ್, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಪುಟ್ಟಣ್ಣ, ರಾಮಚಂದ್ರಗೌಡ, ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ, ತಾ.ಪಂ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಮುನಿಯಪ್ಪ ಸೇರಿದಂತೆ ಮುದ್ರಿಸಲಾಗಿದ್ದ 32 ಪ್ರಮುಖ ಗಣ್ಯರ ಪೈಕಿ ಹಾಜರಿದ್ದವರು ಕೇವಲ 5 ಮಂದಿ ಮಾತ್ರ.
ಅದೇ ರೀತಿ ನಂತರ ನಡೆದ ನೀರಾವರಿ ಮತ್ತು ಕೃಷಿ ಸಂಬಂಧಿತ ಗೋಷ್ಠಿಯಲ್ಲೂ ಕೂಡ ಅಧ್ಯಕ್ಷತೆ ವಹಿಸಬೇಕಿದ್ದ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ, ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಸೇರಿದಂತೆ ಕೆಲ ಮುಖ್ಯ ಅತಿಥಿಗಳೂ ಗೈರು ಹಾಜರಾಗಿದ್ದರು.
ಸಂಘಟನೆಗಳ ನಿರಾಸಕ್ತಿ: ಸಮ್ಮೇಳನ ಪ್ರಕ್ರಿಯೆಗಳಲ್ಲಿ ಇಲ್ಲಿನ ಕೆಲ ಪ್ರಮುಖ ಸಂಘ-ಸಂಸ್ಥೆಗಳ ಗಣ್ಯರೂ ಭಾಗವಹಿಸದೆ ಇದ್ದದ್ದು ಕೆಲ ಚರ್ಚೆಗಳಿಗೆ ಕಾರಣವಾಯಿತು. ಪ್ರಮುಖ ಸಂಘಟನೆಗಳ ನಿರಾಸಕ್ತಿ, ಪ್ರಚಾರದ ಕೊರತೆಯಿಂದಾಗಿ ಸಮ್ಮೇಳನದ ಪ್ರಕ್ರಿಯೆ ನಿರೀಕ್ಷೆಯಷ್ಟು ಉತ್ಸಾಹದಿಂದ ಕೂಡಿರಲಿಲ್ಲ. ಅತ್ತ ಎತ್ತಿನಹೊಳೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿಗರ ದಂಡು ದೊಡ್ಡಬಳ್ಳಾಪುರದಿಂದ ಹೋಗಿತ್ತು. ಮತ್ತೊಂದೆಡೆ ಜಿಲ್ಲಾ ಕೇಂದ್ರ ಹೋರಾಟದಲ್ಲಿ ಹಲವರು ಭಾಗಿಯಾಗಿದ್ದರು. ಇವೆಲ್ಲವೂ ಕೂಡ ಸಮ್ಮೇಳನದ ಮೇಲೆ ಪರಿಣಾಮ ಬೀರಿರಬಹುದು ಎಂಬ ವಿಶ್ಲೇಷಣೆ ಕೂಡ ಕೇಳಿ ಬಂತು.
ದಿನೇ ದಿನೇ ಇಂಗ್ಲಿಷಿನ ಎದುರಲ್ಲಿ ಕನ್ನಡ ಸೊರಗುತ್ತಿದೆ. ಕನ್ನಡಿಗರ ಉದಾರತೆಯೇ ಇದಕ್ಕೆ ಕಾರಣ. ಇಂಗ್ಲಿಷ್ ಬೇಕು ನಿಜ, ಆದರೆ ಎಲ್ಲಿ ಬೇಕು, ಎಷ್ಟು ಬೇಕು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಎಲ್ಲೆಲ್ಲೂ ಬೇಕು-ಸದಾ ಬೇಕು ಎಂಬ ಅಜ್ಞಾನ ಬೆಳೆಸಿಕೊಂಡಿರುವುದು ದುರಂತ. ಹೃದಯಕ್ಕೆ ಹತ್ತಿರವಾದ ಭಾವನೆಗಳು ಹುಟ್ಟುವುದು ಕನ್ನಡದಲ್ಲೇ ಹೊರತು ಇಂಗ್ಲಿಷಿನಲ್ಲಿ ಅಲ್ಲ.
-ಡಾ.ಎ.ಓ.ಆವಲಮೂರ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

