ಕಳಪೆ ಕಾಮಗಾರಿಯಾದರೆ ಬ್ಲ್ಯಾಕ್ ಪಟ್ಟಿಗೆ ಗುತ್ತಿಗೆದಾರರು: ಶಾಸಕ
ದೇವನಹಳ್ಳಿ: ಪಟ್ಟಣದಲ್ಲಿ 72 ಲಕ್ಷ ರು. ವೆಚ್ಚದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 50 ವಿದ್ಯಾರ್ಥಿಗಳಿಗಾಗಿ ವಾಜಪೇಯಿ ವಸತಿ ಶಾಲೆಯ ಉದ್ಘಾಟನಾ ಸಮಾರಂಭ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ನಡೆಯಿತು.
ಶಾಸಕ ಪಿಳ್ಳಮುನಿಶಾಮಪ್ಪ ಸಮಾರಂಭ ಉದ್ಘಾಟಿಸಿ ಈ ವಸತಿ ಶಾಲೆಯಲ್ಲಿ ಹಿಂದುಳಿದ ಹಾಗೂ ಇತರ ಬಡವರ ವರ್ಗದ ಮಕ್ಕಳು ಸೇರಬಹುದಾಗಿದೆ. ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳು ಯಾವುದೇ ಉದ್ಯಮಗಳಲ್ಲಿ ಸೇವೆ ಸಲ್ಲಿಸಲು ನಿಷ್ಠಾವಂತರಾಗಿರುತ್ತಾರೆ ಎಂದರು. ಕಳೆದ 25 ವರ್ಷಗಳಿಂದ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇದರ ಸದುಪಯೋಗವಾಗಲು ಅಧಿಕಾರಿಗಳ ಕರ್ತವ್ಯ ಮುಖ್ಯವಾಗಿರುತ್ತದೆ. ತಾಲೂಕಿನಲ್ಲಿ ಬಾಬು ಜಗಜೀವನರಾಂ ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಈಗಾಗಲೇ ಎರಡು ಕೋಟಿ ರು. ಬಿಡುಗಡೆಯಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ತಾಲೂಕಿನಲ್ಲಿ ನಡೆಯುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಒಂದು ವೇಳೆ ಕಾಮಗಾರಿ ಕಳಪೆಯಾದರೆ ಬ್ಲಾಕ್ ಪಟ್ಟಿಗೆ ಅಂತಹ ಗುತ್ತಿಗೆದಾರರನ್ನು ಸೇರಿಸಲಾಗುವುದು ಎಂದು ಶಾಸಕರು ತಿಳಿಸಿದರು. ತಾಲೂಕಿನ ಅಭಿವೃದ್ಧಿಕಾರ್ಯಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಶಾಸಕರನ್ನು ಅಭಿನಂದಿಸಿ ಬಹು ವರ್ಷಗಳ ವಸತಿ ಶಾಲೆಯ ಕನಸು ನನಸಾಗಿ ಮಾಡಿದ್ದಾರೆ ಎಂದು ಸಮಾಜ ಸೇವಕ ಗುರಪ್ಪ ತಿಳಿಸಿ ವಸತಿ ಶಾಲೆಯ ಸೌಲಭ್ಯವನ್ನು ಎಲ್ಲ ವರ್ಗದವರು ಬಳಸಿಕೊಲ್ಳಬೇಕು ಎಂದು ತಿಳಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಅಭಿನಂದಿಸಿದರು. ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ ದೇವನಹಳ್ಳಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ 7 ಕೋಟಿ ವೆಚ್ಚದ ಅಂಬೇಡ್ಕರ್ ಹಾಗೂ ವಾಲ್ಮೀಕಿ ಮತ್ತು ಬಾಬು ಜಗಜೀವನರಾಂ ಭವನಗಳು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಅವು ಸರ್ಕಾರದ ಕಟ್ಟಡಗಳಾಗಿದ್ದು ಎಲ್ಲ ಜಾತಿಯವರು ಉಪಯೋಗಿಸಿ ಕೊಳ್ಳಬಹುದಾಗಿದೆ ಎಂದು ನುಡಿದರು.
ತಾಪಂ ಅಧ್ಯಕ್ಷೆ ರಾಧಿಕಾ ತ್ಯಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಗಾಯಿತ್ರಿ, ನರಸಿಂಹಮೂರ್ತಿ, ಶಶಿಕುಮಾರ್, ಕುಮಾರ್, ಬೇಕರಿ ಮಂಜುನಾಥ್, ಗೋಪಾಲಕೃಷ್ಣ, ವಕೀಲ ಡಿ.ಸಿ.ನಾರಾಯಣಸ್ವಾಮಿ, ಬುಳ್ಳಹಳ್ಳಿ ರಾಜಪ್ಪ, ಬೂದಿಗೆರೆ ಪಾಪಣ್ಣ ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಟಿ.ಆರ್.ಮಂಜುನಾಥ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

