ನಾಡೋಜರ ಸಾವಯವ ತೋಟದಲ್ಲಿ ಕೃಷಿ ಪಾಠ
ದೊಡ್ಡಬಳ್ಳಾಪುರ: ನಾಡಿನ ಹೆಸರಾಂತ ಸಾವಯವ ಕೃಷಿ ತಜ್ಞ, ನಾಡೋಜ ಡಾ.ನಾರಾಯಣರೆಡ್ಡಿ ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಕುರಿತು ದಿನಪೂರ್ತಿ ತರಬೇತಿ, ಮಾಹಿತಿ, ಪ್ರಾತ್ಯಕ್ಷಿಕೆ ನೀಡಿದರು. ನೆಲದ ಸಂಸ್ಕೃತಿ, ಕೃಷಿ ಚಿಂತನೆಗಳು, ಮಾದರಿ ಕೃಷಿಕರಾಗುವ ಕುರಿತು ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾಹಿತಿ ನೀಡಿದರು.
ದೇಶಕ್ಕೆ ಬೇಕಾಗಿರುವ ಕೃಷಿ ವಿಜ್ಞಾನ ಎಂತಹುದು ನಾವು ಎಂತಹದನ್ನು ಅವಲಂಭಿಸಿದ್ದೇವೆ, ಇದರಿಂದ ಏನೆಲ್ಲ ವೈಪರೀತ್ಯ ಮತ್ತು ವಿನಾಶ ನೋಡುತ್ತಿದ್ದೇವೆ ಎಂಬುದರ ಕುರಿತು ವಿಚಾರ ಮಂಥನ ನಡೆಸಿದರು. ದೇಶದ ಅನನ್ಯ ಪ್ರಾಕೃತಿಕ ಸಂಪನ್ಮೂಲಗಳು, ಅವುಗಳ ಲಭ್ಯತೆ, ಬಳಕೆ, ಕೊರತೆ, ಇಲ್ಲಿ ಬೀಳುವ ಮಳೆಯ ಪ್ರಮಾಣ, ಅದರಲ್ಲಿ ಬಳಕೆಯಾಗುತ್ತಿರುವ ಮತ್ತು ಪೋಲಾಗುತ್ತಿರುವ ನೀರಿನ ಪ್ರಮಾಣ ಎಲ್ಲವನ್ನೂ ಅವಲೋಕಿಸಬೇಕು ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಟ್ಟ ನಾರಾಯಣರೆಡ್ಡಿ, ಕೃಷಿ ವಿಜ್ಞಾನಿಗಳ ಹೊಣೆಗಾರಿಕೆ ಕುರಿತೂ ವಿಮರ್ಶಿಸಿದರು.
ಮೈಗಳ್ಳರ ನಾಡು: ಜನಸಂಖ್ಯೆಗೆ ಅನುಗುಣವಾಗಿ ಆಹಾರೋತ್ಪಾದನೆ ಮಾಡುವ ಭರದಲ್ಲಿ ರಾಸಾಯನಿಕಗಳ ಬಳಕೆ ಮಾಡಿ ಹೈಬ್ರಿಡ್ ಬೆಳೆ ಬೆಳೆಯುವುದೇ ಉತ್ತಮ ಮಾರ್ಗ ಎಂದು ನಂಬಿಸಿದ್ದಾರೆ. ಅದು ಅಪ್ಪಟ ಸುಳ್ಳು. ಮೈಗಳ್ಳತನ ಬಿಟ್ಟು ಇರುವಷ್ಟು ಭೂಮಿಯಲ್ಲೇ ಸರಿಯಾದ ಪರಿಸರಸ್ನೇಹಿ ಕ್ರಮದಲ್ಲಿ ಬೇಸಾಯ ಮಾಡಿದರೆ ದೇಶದ ಆಹಾರ ಸಮಸ್ಯೆ ಬಗೆಹರಿದು ಇತರ ದೇಶಗಳಿಗೂ ರಫ್ತು ಮಾಡುವಷ್ಟು ಸ್ವಾವಲಂಬನೆ ಸಾಧ್ಯ.
ಆದರೆ ನಮ್ಮ ದೌರ್ಭಾಗ್ಯವೆಂದರೆ ಇತರ ರಾಜ್ಯಗಳಿಂದ ಅಕ್ಕಿ ಆಮದು ಮಾಡಿಕೊಂಡು ಅನ್ನಭಾಗ್ಯ ಕೊಡುವಂತಾಗಿದ್ದೇವೆ. ಓಟಿಗಾಗಿ ಮಾಡುವ ಅನ್ನಭಾಗ್ಯ ವಿಷದಭಾಗ್ಯ ಎಂದೇ ಹೇಳಬೇಕು. ಸರ್ಕಾರಗಳು ಲಾಭದಾಯಕ ಕಂಪನಿಗಳಾಗಿ ಪರಿವರ್ತನೆ ಆಗುತ್ತಿವೆ. ಜನರನ್ನು ಸೋಮಾರಿಗಳನ್ನಾಗಿಸುತ್ತಿದೆ ಎಂದು ಕಿಡಿಕಾರಿದರು.
ನೀರಿನ ಅವೈಜ್ಞಾನಿಕ ಬಳಕೆ: 2020ರ ಹೊತ್ತಿಗೆ ಜಾಗತಿಕವಾಗಿ ನೀರಿನ ಅಭಾವ ಬಿಗಡಾಯಿಸುತ್ತದೆ ಎಂಬ ಮಾಹಿತಿ ಇದೆ. ಸಂಪನ್ಮೂಲದ ವೈಜ್ಞಾನಿಕ ಬಳಕೆಯಾದರೆ ಯಾವ ಅಭಾವವೂ ಸೃಷ್ಟಿಯಾಗದು. ತಮ್ಮ ತೋಟದ 4 ಎಕರೆ ಜಾಗದಲ್ಲಿ 750ಕ್ಕೂ ಹೆಚ್ಚು ಮರಗಿಡಗಳಿವೆ. ಇದರಿಂದಾಗಿ ಭೂಮಿಯೊಳಗೆ 500 ಅಡಿಗಳಿಗೆ ನೀರು ಲಭ್ಯವಿದೆ. ಪಕ್ಕದ ತೋಟದಲ್ಲಿ 1500 ಅಡಿಗಳಿಗೂ ಹೆಚ್ಚು ಕೊರೆದರೂ ನೀರು ಸಿಕ್ಕಿಲ್ಲ. ಆಧುನಿಕ ಕೃಷಿ ಪದ್ಧತಿಗಳೂ ಕೂಡ ನೀರಿನ ಮೂಲಗಳ ನಾಶಕ್ಕೆ ಕಾರಣವಾಗುತ್ತಿವೆ. ಮಿತಿಮೀರಿದ ರಾಸಾಯನಿಕ ಗೊಬ್ಬರಗಳ ಬಳಕೆ ಅಪಾಯಕಾರಿ. ಇದರಿಂದ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ಮಣ್ಣಿನಲ್ಲಿ ಸಾಯುತ್ತವೆ. ಭೂತಾಯಿ ಬಂಜೆಯಾಗುತ್ತಾಳೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ದಿಡೀರನೇ ಸಾಹುಕಾರರಾಗಲು ಹೋಗಿ ಭೂಮಿಯ ಅನನ್ಯತೆಯನ್ನು ನಾಶ ಮಾಡುತ್ತಿದ್ದೇವೆ. ಕೃಷಿಯಿಂದ ವಿಮುಖರಾಗುವ ಬದಲು ನೆಮ್ಮದಿಯ ಬದುಕಿಗಾಗಿ ಯುವಕರು ಕೃಷಿಯನ್ನು ಅಲವಂಬಿಸಬೇಕಿದೆ. ಸಹಜ ಕೃಷಿಯ ಮೂಲಕ ಎಂಬತ್ತರಲ್ಲೂ ಸಹಜ ಚುರುಕು ನನ್ನಲ್ಲಿದೆ. ಇದೇ ಇತರರಿಗೆ ಮಾದರಿ ಎನ್ನುವ ಮೂಲಕ ಗಮನ ಸೆಳೆದರು.
ಕಿವಿಮಾತು: ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುವುದನ್ನು ಅವರು ಮರೆಯಲಿಲ್ಲ. ಮೋಸದ ರಾಜಕಾರಣ ದೂರವಿಡಿ. ಬರುವ ಚುನಾವಣೆಯಲ್ಲಿ ಪ್ರಾಮಾಣಿಕರನ್ನು ಗೆಲ್ಲಿಸಿ. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ. ನೆಲದ ಸಂಸ್ಕೃತಿಯ ವಾರಸುದಾರಿಕೆ ಹೊಂದುವ ಮಹತ್ವದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿ ಎಂದು ಮಾರ್ಗದರ್ಶನ ಮಾಡಿದರು. ಶ್ರೀನಿವಾಸಪುರದ ರೈತ ಹನುಮಂತಪ್ಪ, ಹಣಬೆಯ ಉಗ್ರೇಗೌಡ, ಕೆಂಪಣ್ಣ, ಸರೋಜಮ್ಮ, ಸಾಯಣ್ಣ, ಎನ್ಎಸ್ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಡಾ.ಬಿ.ನರಸಿಂಹಮೂರ್ತಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
-ಕೆ.ಆರ್.ರವಿಕಿರಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

